ಚಾಮರಾಜನಗರ: ಲಾಕ್ ಡೌನ್ ಘೋಷಣೆ ಬಳಿಕ ಹಲವು ರೀತಿಯ ಸಮಸ್ಯೆಗಳು ಎದುರಾಗಿದ್ದು, ಮಹದೇಶ್ವರ ಬೆಟ್ಟದಲ್ಲಿ ದೇವಾಲಯದ ಮುಂದೆ ಭಕ್ತರು ಹಾಕುವ ಭಿಕ್ಷೆಯಿಂದಲೇ ಜೀವನ ನಡೆಸುತ್ತಿದ್ದ ಭಿಕ್ಷುಕರ ಬದುಕು ಇದೀಗ ಮೂರಾಬಟ್ಟೆಯಾಗಿರುವುದರಿಂದ ಅವರನ್ನು ಚಾಮರಾಜನಗರದ ಸ್ಪಂದನ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರದಲ್ಲಿ ಆಸರೆ ನೀಡಿರುವುದು ನೆಮ್ಮದಿ ತಂದಿದೆ.
ಮಲೆಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ದೊಡ್ಡದಿದೆ. ಕೋಟ್ಯಂತರ ರೂ. ಕಾಣಿಕೆ ಇಲ್ಲಿನ ಹುಂಡಿಗೆ ಬೀಳುತ್ತಿದೆ. ಹೀಗಾಗಿ ದೇವಾಲಯದ ಮುಂದೆ ನಿರ್ಗತಿಕರು ಅಂಗವೈಕಲ್ಯ ಹೊಂದಿದವರು, ವೃದ್ಧರು ಕುಳಿತು ಭಕ್ತರು ಹಾಕುವ ಭಿಕ್ಷೆಯಿಂದ ಜೀವನ ಸಾಗಿಸುತ್ತಿದ್ದಾರೆ. ಆದರೆ ಕಳೆದ ಒಂದು ವರ್ಷದಿಂದ ಕೊರೋನಾದಿಂದಾಗಿ ಭಿಕ್ಷುಕರ ಬದುಕು ಅತಂತ್ರವಾಗಿತ್ತು. ಬಹಳಷ್ಟು ಸಂಘ ಸಂಸ್ಥೆಗಳು, ದೇವಾಲಯದ ಪ್ರಾಧಿಕಾರ ಸೇರಿದಂತೆ ಹಲವರು ಕಳೆದ ವರ್ಷ ಆಹಾರ ನೀಡಿದ್ದರು. ನಂತರ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಇದೀಗ ಮತ್ತೆ ಕೊರೋನಾ ಸೋಂಕು ಹೆಚ್ಚುತ್ತಿರುವ ಕಾರಣದಿಂದ ಲಾಕ್ ಡೌನ್ ಮಾಡಲಾಗಿದೆ. ಹೀಗಾಗಿ ಇಲ್ಲಿರುವ ಭಿಕ್ಷುಕರ ಬದುಕು ಅಯೋಮಯವಾಗಿದೆ.


ಇದನ್ನರಿತ ಅಧಿಕಾರಿಗಳು ಸುಮಾರು ಹನ್ನೊಂದು ಮಂದಿ ನಿರ್ಗತಿಕರನ್ನು ಚಾಮರಾಜನಗರದ ಸ್ಪಂದನ ಹಿರಿಯ ನಾಗರಿಕರ ಪುನರ್ವಸತಿ ಕೇಂದ್ರಕ್ಕೆ ಕರೆ ತಂದು ಆಶ್ರಯ ನೀಡಿದ್ದಾರೆ. ಹನ್ನೊಂದು ಮಂದಿ ಪೈಕಿ ಏಳು ಮಂದಿ ಮಹಿಳೆಯರು ಹಾಗೂ ನಾಲ್ವರು ಪುರುಷರು ಇದ್ದಾರೆ. ಇವರೆಲ್ಲರಿಗೂ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ವಿಟಮಿನ್ ಮಾತ್ರೆಗಳನ್ನು ವೈದ್ಯರು ನೀಡಿದ್ದಾರೆ. ಜತೆಗೆ ಮನಶಾಸ್ತ್ರಜ್ಞರು ಕೂಡ ಆಪ್ತ ಸಮಾಲೋಚನೆ ನಡೆಸಿದ್ದು ನಿರ್ಗತಿಕರ ಬದುಕಿನಲ್ಲೊಂದು ಆಶಾ ಕಿರಣ ಮೂಡಿದಂತಾಗಿದೆ.
ಈ ಕುರಿತಂತೆ ಮಾತನಾಡಿದ ಸ್ಪಂದನ ಕೇಂದ್ರದ ಸಂಯೋಜಕಿ ಶ್ವೇತಾ ಅವರು ಲಾಕ್ ಡೌನ್ ನಿಂದಾಗಿ ದೇವಾಲಯವೂ ಬಂದ್ ಆಗಿ ಊಟ ಇಲ್ಲದೆ ಪರದಾಡುತ್ತಿದ್ದವರಿಗೆ ಈಗ ನೆಮ್ಮದಿಯ ಆಶ್ರಯ ನೀಡಿದ್ದೇವೆ. ಇಲ್ಲಿ ಎಲ್ಲರಿಗೂ ಉತ್ತಮ ಊಟ, ವೈದ್ಯಕೀಯ ಸೇವೆ ನೀಡುತ್ತಿರುವುದರಿಂದ ಅವರು ಕೇಂದ್ರದ ಸಿಬ್ಬಂದಿಯಲ್ಲೇ ಮಕ್ಕಳ ಪ್ರೀತಿ ಕಾಣುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಲೆಮಹದೇಶ್ವರ ಬೆಟ್ಟದಿಂದ ಬಂದು ಆಶ್ರಯ ಪಡೆದಿರುವ ಜಯಮ್ಮ ಅವರು ಮಾತನಾಡಿ ನಾನು ಊಟ ಮಾಡಿ ಒಂದು ದಿನವಾಗಿತ್ತು. ಬೀದಿಪಾಲಾಗಿದ್ದ ಜೀವನ ಬೀದಿಯಲ್ಲೇ ಕೊನೆಯಾಗುತ್ತದೆ ಎಂದುಕೊಂಡಿದ್ದೆವು. ಆದರೆ, ಅಧಿಕಾರಿಗಳು ಇಲ್ಲಿಗೆ ಕರೆತಂದಿದ್ದರಿಂದ ನೆಮ್ಮದಿಯಿಂದ ಇದ್ದೇವೆ ಎಂದು ಹೇಳಿದರು. ಒಟ್ಟಾರೆ ಭಿಕ್ಷೆ ಬೇಡಿ ಬದುಕುತ್ತಿದ್ದವರಿಗೂ ಕೊನೆಗೂ ಆಶ್ರಯ ಸಿಕ್ಕಿದ್ದು ಬಾಳಿನ ಕೊನೆಗಾಲದಲ್ಲಿ ನೆಮ್ಮದಿ ಸಿಕ್ಕಿತಲ್ಲ ಎಂಬ ಸಂತಸ ಅವರಲ್ಲಿ ಮನೆ ಮಾಡಿದೆ.

By admin