ಮೈಸೂರು : ಮಹಿಳೆಯರ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಕ್ಷೇತ್ರದ ಹಿರಿಯ ಸಲಹಾತಜ್ಞರಾದ ಡಾ. ಮಧುರ ಫಾಟಕ್ ಅವರ ನೇತೃತ್ವದ ತಂಡವು ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾ ತಜ್ಞರಾದ ಡಾ. ಜಯಕಾರ್ತಿಕ್ ವೈ. ಅವರೊಂದಿಗೆ ತೀವ್ರ ರೀತಿಯ ಗರ್ಭಾಶಯದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಹಿಳೆಗೆ ಉನ್ನತಮಟ್ಟದ ಉದರದರ್ಶಕ ಶಸ್ತ್ರಕ್ರಿಯೆಯನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇದು ಮೈಸೂರಿನಲ್ಲಿ ಪ್ರಥಮ ಪ್ರಕರಣವಾಗಿರುವುದಲ್ಲದೆ, ಮೈಸೂರಿನಲ್ಲಿ ಉದರದರ್ಶಕದ ಮೂಲಕ ಮೊದಲ ಬಾರಿಗೆ ನಡೆಸಲಾದ ತಾಂತ್ರಿಕವಾಗಿ ಸವಾಲಿನ ಶಸ್ತ್ರಕ್ರಿಯೆ ಇದಾಗಿದೆ
೫೮ ವರ್ಷ ವಯಸ್ಸಿನ ಶ್ರೀಮತಿ ನಳಿನಿ(ಹೆಸರು ಬದಲಾಯಿಸಲಾಗಿದೆ) ಅವರಿಗೆ ಮುಟ್ಟು ನಿಂತ ೮ ವರ್ಷಗಳ ನಂತರ ರಕ್ತಸ್ರಾವ ಆರಂಭವಾಗಿತ್ತು. ಇದು ಅಪಾಯಕಾರಿ ಮತ್ತು ಎಚ್ಚರಿಕೆ ನೀಡುವಂತಹ ಪರಿಸ್ಥಿತಿ ಆಗಿದ್ದು, ವೈದ್ಯರ ಗಮನದ ಅಗತ್ಯವಿತ್ತು. ಅವರು ಡಾ. ಫಾಟಕ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದರು. ಅವರಿಗೆ ಗರ್ಭಾಶಯದ ಕ್ಯಾನ್ಸರ್ ಇರುವ ಅನುಮಾನ ಬಂದಿದ್ದರಿಂದ ಪರೀಕ್ಷೆಗಾಗಿ ಗರ್ಭಾಶಯದ ಪದರದ ಅಂಗಾಶವನ್ನು ತೆಗೆಯುವ ಹಾಗೂ ಸ್ಕ್ಯಾನ್ ಮಾಡಬೇಕಾದ ಸಲಹೆಯನ್ನು ವೈದ್ಯರು ನೀಡಿದ್ದರು. ಆಕೆಗೆ ತೀವ್ರ ರೀತಿಯ ಗರ್ಭಾಶಯದ ಕ್ಯಾನ್ಸರ್ ಇರುವುದನ್ನು ಫಲಿತಾಂಶಗಳು ದೃಢಪಡಿಸಿದ್ದವು. ಇತರೆ ರೀತಿಯ ಕ್ಯಾನ್ಸರ್‌ಗಳಿಗೆ ಹೋಲಿಸಿದಲ್ಲಿ ಈ ಕ್ಯಾನ್ಸರ್ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಅಲ್ಲದೆ, ಇದು ಹೆಚ್ಚು ವೇಗವಾಗಿ ಹರಡುತ್ತದೆ.
ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಮಹಿಳೆಯರ ಉದರದರ್ಶಕ ಶಸ್ತ್ರಚಿಕಿತ್ಸಾ ತಜ್ಞರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ಕ್ಷೇತ್ರದ ಹಿರಿಯ ಸಲಹಾತಜ್ಞರಾದ ಡಾ. ಮಧುರ ಫಾಟಕ್ ಅವರು ಮಾತನಾಡಿ, “ಮತ್ತಷ್ಟು ಪರೀಕ್ಷೆಗಳ ನಂತರ ಕ್ಯಾನ್ಸರ್ ಗರ್ಭಾಶಯಕ್ಕೆ ಮಾತ್ರ ಸೀಮಿತವಾಗಿತ್ತು ಎಂದು ಖಚಿತವಾಯಿತು. ಇದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಕೀಹೋಲ್ ಶಸ್ತ್ರಚಿಕಿತ್ಸೆ ಮೂಲಕ ಈ ಸಂಪೂರ್ಣ ಕ್ರಮ ಕೈಗೊಳ್ಳಲಾಗಿತ್ತು. ಇದರಲ್ಲಿ ಅಯೋರ್ಟ(ಹೃದಯದಿಂದ ನೇರವಾಗಿ ಬರುವ ರಕ್ತನಾಳ) ಹೊಟ್ಟೆಯ ದೊಡ್ಡ ರಕ್ತನಾಳಗಳ ಸುತ್ತಲಿನ ಹಾಗೂ ಇಲಿಯಾಕ್ ನಾಳಗಳ ಸುತ್ತಲಿನ (ಅಯೋರ್ಟದ ರಕ್ತನಾಳ) ಸುತ್ತಲಿನ ದುಗ್ಧ ಗ್ರಂಥಿಗಳನ್ನು ತೆಗೆದುಹಾಕಲಾಗುತ್ತದೆಯಲ್ಲದೆ, ಗರ್ಭಾಶಯ ಮತ್ತು ಅಂಡಾಶಯಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು ಶಸ್ತ್ರಕ್ರಿಯೆ ನಡೆಸಲಾಯಿತು. ಆಕೆ ಕ್ಷಿಪ್ರಗತಿಯಲ್ಲಿ ಚೇತರಿಕೆ ಕಂಡುಕೊಂಡಿದ್ದು, ಈಗ ಆಗಾಗ್ಗೆ ತಪಾಸಣೆಗಳಿಗೆ ಒಳಗಾಗುತ್ತಿದ್ದಾರೆ” ಎಂದರು.
ಮೈಸೂರಿನ ಮದರ್‌ಹುಡ್ ಹಾಸ್ಪಿಟಲ್‌ನ ಹಿರಿಯ ಕ್ಯಾನ್ಸರ್ ಶಸ್ತ್ರಕ್ರಿಯಾ ಸಲಹಾತಜ್ಞರಾದ ಡಾ. ಜಯಕಾರ್ತಿಕ್ ವೈ ಅವರು ಮಾತನಾಡಿ, “ಗರ್ಭಾಶಯದ ಕ್ಯಾನ್ಸರ್‌ಗಳು ಸಾಮಾನ್ಯವಾಗಿ ನಿಧಾನವಾಗಿ ಬೆಳೆಯುವ ಕ್ಯಾನ್ಸರ್‌ಗಳಾಗಿರುತ್ತವೆ. ಆದರೆ, ಇದು ಅಪರೂಪದ ಪ್ರಕರಣವಾಗಿತ್ತು. ಇದು ತೀವ್ರ ತರಹದ ಕ್ಯಾನ್ಸರ್ ಆಗಿತ್ತಲ್ಲದೆ, ಗರ್ಭಾಶಯದ ಅರ್ಧಭಾಗಕ್ಕೆ ಹರಡಿತ್ತು. ಇಂತಹ ಕ್ಯಾನ್ಸರ್‌ಗಳಿಗೆ ಲ್ಯಾಪರೊಸ್ಕೋಪಿಕ್ ಹಿಸ್ಟೆರೆಕ್ಟೋಮಿ ಮೂಲಕ ಚಿಕಿತ್ಸೆ ನೀಡುವುದನ್ನು ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಪ್ಯಾರಾ-ಅರ್ಯೋಟಿಕ್ ಲಿಂಫ್ ನೋಡ್ ಡಿಸೆಕ್ಷನ್ ಕ್ರಮವನ್ನು ಮೈಸೂರಿನಲ್ಲಿ ಮೊದಲ ಬಾರಿಗೆ ನಡೆಸಲಾದ ಪ್ರಕರಣಗಳಲ್ಲಿ ಒಂದಾಗಿದ್ದು, ಇದು ಯಶಸ್ವಿಯಾಗಿದೆ. ಮೂತ್ರಪಿಂಡಗಳು, ಕರುಳುಗಳಿಗೆ ರಕ್ತ ಪೂರೈಸುವ ರಕ್ತನಾಳಗಳು ಮತ್ತು ಬ್ಲಾಡರ್‌ಗೆ ಸಂಪರ್ಕ ಹೊಂದಿರುವ ನರಗಳಂತಹ ಪ್ರಮುಖ ರಚನೆಗಳನ್ನು ಒಳಗೊಂಡಿದ್ದರಿಂದ ಇದು ತಾಂತ್ರಿಕವಾಗಿ ಅತ್ಯಂತ ಸವಾಲಿನ ಕಾರ್ಯವಿಧಾನವಾಗಿತ್ತು. ಏಕೆಂದರೆ, ಇವುಗಳಲ್ಲಿ ಯಾವುದೇ ಭಾಗಗಳಿಗೆ ಹಾನಿವುಂಟಾದರೂ ರೋಗಿಯ ಜೀವದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗಬಹುದಿತ್ತು” ಎಂದರು.
ಉದರ ದರ್ಶಕ ಚಿಕಿತ್ಸೆಗಳನ್ನು ಇತ್ತೀಚೆಗೆ ಕ್ಯಾನ್ಸರ್ ಸರ್ಜರಿಗಳಲ್ಲಿ ಉತ್ತಮ ಫಲಿತಾಂಶ ಪಡೆಯಲು ಬಳಸುತ್ತೇವೆ. ಇದರಿಂದ ಶೀಘ್ರಗತಿಯಲ್ಲಿ ಚೇತರಿಸುವುದಲ್ಲದೇ, ಅತ್ಯಂತ ಕಡಿಮೆ ಪ್ರಮಾಣದ ಗಾಯಗಳಿರುತ್ತವೆ. ದೊಡ್ಡ ಪ್ರಮಾಣದ ಸರ್ಜರಿಗಳನ್ನು ಕೀ ಹೋಲ್ ಮೂಲಕ ಮಾಡುವುದು ನಮ್ಮ ಗುರಿಯಾಗಿದೆ ಎಂದು ಡಾ. ಫಾಟಕ್ ಹೇಳಿದರು.
ಡಾ. ಜಯಕಾರ್ತಿಕ್ ಅವರು ಮಾತನಾಡಿ, “ಶಸ್ತ್ರಕ್ರಿಯೆ ತೆರೆದ ರೀತಿಯದ್ದಾಗಿದ್ದಲ್ಲಿ, ಮಹಿಳೆ ಚೇತರಿಸಿಕೊಳ್ಳಲು ದೀರ್ಘಕಾಲ ಬೇಕಾಗಿತ್ತು. ಅಲ್ಲದೆ, ಇದರಿಂದ ಕಿಮೋಥೆರಪಿಯ ಪ್ರಕ್ರಿಯೆಗೆ ಮತ್ತಷ್ಟು ವಿಳಂಬವಾಗುತ್ತಿತ್ತು. ಉನ್ನತ ಉದರದರ್ಶಕ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಬಹಳಷ್ಟು ಸಮಯವನ್ನು ಉಳಿಸಿದ್ದರು. ಶಸ್ತ್ರಕ್ರಿಯೆ ನಂತರ ನಿರ್ಧರಿಸಲಾಗುವ ರೋಗದ ಹಂತವನ್ನು ಆಧರಿಸಿ ಹೆಚ್ಚಿನ ವಿಕಿರಣ ಚಿಕಿತ್ಸೆ ಮತ್ತು ಕಿಮೋಥೆರಪಿಗಳು ಅಗತ್ಯವಾಗಬಹುದು ಎಂದರು.
ಶಸ್ತ್ರಕ್ರಿಯೆಯ ಪರಿಣತಿಯೊಂದಿಗೆ ಉತ್ತಮ ರೀತಿಯಲ್ಲಿ ಸಜ್ಜಾಗಿರುವ ಶಸ್ತ್ರಕ್ರಿಯಾ ಕೊಠಡಿ, ಅನುಭವಿ ಅರಿವಳಿಕಾ ತಜ್ಞರ ತಂಡ, ತೀವ್ರನಿಗಾ ಆರೈಕೆ ಘಟಕಗಳು ಇದ್ದು, ಹಗಲಿರಳೂ ಶಸ್ತ್ರಕ್ರಿಯಾ ನಂತರದ ಚೇತರಿಕೆಯನ್ನು ಬೆಂಬಲಿಸಲು ದಾದಿಯರ ಆರೈಕೆಗಳು ಈ ಪ್ರಕರಣವನ್ನು ನಿರ್ವಹಿಸಲು ಅತ್ಯಗತ್ಯವಾಗಿರುತ್ತವೆ. ಕೀಹೋಲ್ ಶಸ್ತ್ರಚಿಕಿತ್ಸೆ ಈಗ ದೇಹದ ಸಾಧಾರಣ ತೊಂದರೆಗಳಿಗೆ ಚಿಕಿತ್ಸೆ ನೀಡಲು ಅತ್ಯುತ್ತಮ ವಿಧಾನವಾಗಿವೆ. ಜೊತೆಗೆ ಇವು ಕ್ಯಾನ್ಸರ್ ಪ್ರಕರಣಗಳಿಗೆ ಕೂಡ ಸಾಮಾನ್ಯ ಚಿಕಿತ್ಸೆ ಮಾರ್ಗಗಳಾಗಿ ವಿಕಸನ ಹೊಂದುತ್ತಿವೆ. ಇವುಗಳಲ್ಲಿ ಶಸ್ತ್ರಕ್ರಿಯಾ ನಂತರದ ನೋವು ಕನಿಷ್ಠ ಮಟ್ಟದ್ದಾಗಿದ್ದು, ಬೇಗನೇ ಚೇತರಿಕೆ ಕಂಡುಬರುತ್ತದೆ. ರೋಗಿ ಈಗ ಬೇಗನೇ ಚೇತರಿಕೆ ಕಂಡುಕೊಳ್ಳುತ್ತಿದ್ದು, ಕಿಮೋಥೆರಪಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ” ಎಂದು ಹಾಸ್ಪಿಟಲ್‌ನ ಸೌಲಭ್ಯ ನಿರ್ದೇಶಕರಾದ ಸಂದೀಪ್ ಪಟೇಲ್ ಬಿ.ಜೆ. ಅವರು ಹೇಳಿದರು.