ವಿರಾಜಪೇಟೆಯಲ್ಲಿ ಜನಿಸಿದ ನಾಲ್ಕು ವರ್ಷದ ಗಂಡು ಮಗು ಅಶೋಕ್(ಹೆಸರು ಬದಲಾಯಿಸಲಾಗಿದೆ)ಗೆ ಕಳೆದ ೧೦ ದಿನಗಳಿಂದ ಸೊಂಟದ ಎಡಭಾಗದಲ್ಲಿ ಊತದ ತೊಂದರೆಯೊಂದಿಗೆ ಆಸ್ಪತ್ರೆಗೆ ಕರೆತರಲಾಗಿತ್ತು. ವೈದ್ಯಕೀಯ ಮೌಲ್ಯೀಕರಣದ ನಂತರ ಎಡ ಮೂತ್ರಪಿಂಡದಲ್ಲಿ 12 ಸೆಂ.ಮೀ. ಅಳತೆಯ ದೊಡ್ಡ ಗಾತ್ರದ ಗೆಡ್ಡೆ ಇರುವುದು ಕಂಡುಬಂದಿತ್ತು. ಜೊತೆಗೆ ಅಭಿಧಮನಿಯೊಳಗೆ ಟ್ಯೂಮರ್‌ನ ಥ್ರಾಂಬಸ್ ವಿಸ್ತರಣೆಗೊಂಡಿರುವುದು ಕಂಡು ಬಂದಿದ್ದು.


ವಿಲ್ಮ್ಸ್ ಟ್ಯೂಮರ್ ಇರುವ ಶಂಕೆಯುಂದಿಗೆ ಶಸ್ತ್ರಕ್ರಿಯೆಗಾಗಿ ಅವನನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲಾಗಿತ್ತು. ಮಾಹಿತಿಪೂರ್ಣ ಒಪ್ಪಿಗೆಯ ಜೊತೆಗೆ ಈ ಮಗುವಿಗೆ ಎಡ ರ್‍ಯಾಡಿಕಲ್ ನೆಫ್ರೆಕ್ಟೋಮಿ ಜೊತೆಗೆ ಲಿಂಫಾಡೆನೆಕ್ಟೋಮಿ ಶಸ್ತ್ರಕ್ರಿಯೆಗಳನ್ನು ನಡೆಸಲಾಯಿತು. ಶಸ್ತ್ರಕ್ರಿಯಾ ನಂತರದ ಅವಧಿಯಲ್ಲಿ ಯಾವುದೇ ತೊಂದರೆ ಕಂಡುಬರಲಿಲ್ಲ. ಶಸ್ತ್ರಕ್ರಿಯೆ ನಡೆದು ನಾಲ್ಕು ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.


ವೈದ್ಯಕೀಯ ರೋಗಶಾಸ್ತ್ರ ಪರೀಕ್ಷೆಯಲ್ಲಿ ಈ ಮಗುವಿಗೆ ವಿಲ್ಮ್ಸ್ ಟ್ಯೂಮರ್(ನೆಫ್ರೋಬ್ಲಾಸ್ಟೋಮಾ) ಎಂಬ ಗಡ್ಡೆಯು ಎಡ ಮೂತ್ರಪಿಂಡದಲ್ಲಿ ಇರುವುದು ತಿಳಿದುಬಂದಿತ್ತು. ಈಗ ರೋಗಿಗೆ ಕಿಮೋಥೆರಪಿ ನೀಡಲಾಗುತ್ತಿದೆ. ವಿಲ್ಮ್ಸ್ ಟ್ಯೂಮರ್ ಪ್ರಕರಣಗಳು ಏಷ್ಯಾ ದೇಶಗಳಲ್ಲಿನ ೧೦,೦೦೦ ಮಕ್ಕಳ ಪೈಕಿ ೩-೪ ಮಕ್ಕಳಲ್ಲಿ ಕಂಡುಬರುತ್ತವೆ.ಇದು ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಒಂದಾಗಿದೆ. ಮೈಸೂರಿನಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನೀಡಲಾದ ಮೊದಲ ಪ್ರಕರಣವಾಗಿದೆ.


ಈ ಮಗುವಿನ ನಿರ್ವಹಣೆಯನ್ನು ಪರಿಣತ ವೈದ್ಯರ ತಂಡ ಯಶಸ್ವಿಯಾಗಿ ಕೈಗೊಂಡಿತ್ತು. ಈ ಪರಿಣತರಲ್ಲಿ ಮೂತ್ರರೋಗ ಶಾಸ್ತ್ರ ಸಲಹಾ ತಜ್ಞರಾದ ಡಾ. ಉಮೇಶ್, ಕ್ಯಾನ್ಸರ್ ರೋಗ ಶಸ್ತ್ರಚಿಕಿತ್ಸಾ ಸಲಹಾ ತಜ್ಞರಾದ ಡಾ. ಗಿರೀಶ್ ಎಂ.ಎಸ್., ಕನ್ಸಲ್ಟೆಂಟ್ ಜನರಲ್ ಮತ್ತು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ತಜ್ಞರಾದ ಡಾ ಅರವಿಂದ್ ಆರ್.ಎಂ., ಮಕ್ಕಳ ರೋಗಶಾಸ್ತ್ರ ಶಸ್ತ್ರಚಿಕಿತ್ಸಾ ತಜ್ಞರಾದ ಡಾ. ಅನೂಪ್ ಮತ್ತು ಅರಿವಳಿಕೆ ಶಾಸ್ತ್ರ ಸಲಹಾ ತಜ್ಞರಾದ ಡಾ. ಕೇಶವಮೂರ್ತಿ ಜಿ.ಆರ್. ಹಾಗೂ ಡಾ. ಹರೀಶ್, ಶಸ್ತ್ರಕ್ರಿಯಾ ಕೊಠಡಿಯ ಸಂಪೂರ್ಣ ತಂಡ ದಾದಿಯರು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಸೇರಿದ್ದರು.