ಗುಂಡ್ಲುಪೇಟೆ: ಸರ್ಕಾರವು 2025ಕ್ಕೆ ಕ್ಷಯರೋಗ ನಿರ್ಮೂಲನೆ ಗುರಿ ಹೊಂದಿರುವ ಕಾರಣ ಲಕ್ಷಣ ಕಂಡು ಬಂದವರು ಕೂಡಲೇ ತಪಾಸಣೆಗೆ ಒಳಪಟ್ಟು ಸೂಕ್ತ ಚಿಕಿತ್ಸೆ ಪಡೆಯಬೇಕೆಂದು ತಾಲೂಕು ಆರೋಗ್ಯಾಧಿಕಾರಿ ಡಾ.ರವಿಕುಮಾರ್ ತಿಳಿಸಿದರು.

ಪಟ್ಟಣ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ, ಕ್ಷಯ ರೋಗ ಘಟಕ ವತಿಯಿಂದ ಆಯೋಜನೆ ಮಾಡಲಾಗಿದ್ದ ‘ವಿಶ್ವ ಕ್ಷಯರೋಗ ದಿನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಶೇ.20ಕ್ಕಿಂತ ಕಡಿಮೆ ಕ್ಷಯರೋಗ ಪೀಡಿತರಿರುವ ಕಾರಣ ಸರ್ಕಾರ ಜಿಲ್ಲೆಗೆ ಕಂಚಿನ ಪದಕ ಘೋಷಣೆ ಮಾಡಿದೆ ಎಂದರು.
ಯಾವುದೇ ವ್ಯಕ್ತಿಗೆ ಕ್ಷಯರೋಗವಿದ್ದರೆ ಪತ್ತೆ ಹಚ್ಚಿ ಕೂಡಲೇ ಚಿಕಿತ್ಸೆ ಕೊಡಬೇಕು. ಇಲ್ಲದಿದ್ದರೆ ಬೇಗನೇ ಸಾವು ಸಂಭವಿಸುತ್ತದೆ. ವರ್ಷದಲ್ಲಿ ಕ್ಷಯರೋಗ ಸೋಂಕಿತರು 18 ಮಂದಿಗೆ ಹರಡಲಿದ್ದಾರೆ. ಆದ್ದರಿಂದ ಇತರರಿಗೆ ಹರಡುವುದು ಮತ್ತು ಮರಣ ಪ್ರಮಾಣ ತಡೆಯಲು ಚಿಕಿತ್ಸೆ ಪಡೆಯಬೇಕು. 20ರಿಮಧ 55 ವರ್ಷದವರಿಗೆ ಇದು ಕಾಣಿಸಿಕೊಳ್ಳಲಿದ್ದು, ಒಮ್ಮೆ ತಗುಲಿದೆ ಗುಣಮುಖರಾಗುವವರೆಗೂ ಅರ್ಧಕ್ಕೆ ನಿಲ್ಲಿಸದೆ ಚಿಕಿತ್ಸೆ ಪಡೆಯಬೇಕು. ಇದರಿಂದ ಮಾತ್ರ ಕ್ಷಯರೋಗ ನಿರ್ಮೂಲನೆ ಸಾಧ್ಯ ಎಂದರು.
ಭಾರತದಲ್ಲಿ ಬಡತನ ಹಸಿವು, ಅಪೌಷ್ಠಿಕ ಕೊರತೆ ಇರುವ ಕಾರಣ ದೇಶದಲ್ಲಿ ಹೆಚ್ಚು ಕ್ಷಯರೋಗ ಕಾಯಿಲೆ ಇದೆ. ಆದ್ದರಿಂದ ಲಕ್ಷಣ ಖಂಡು ಬಂದ ಕೂಡಲೇ ತಪಾಸಣೆಗೆ ಒಳಪಟ್ಟರೆ ಬೇಗ ಗುಣಮುಖರಾಗಬಹುದು. ಸರ್ಕಾರವೂ ಸಹ ರೋಗ ಪೀಡಿತರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ. ಇದರ ಸದುಪಯೋಗ ಪಡೆದುಕೊಂಡು ರೋಗ ತಡೆಗೆ ಸಾರ್ವಜನಿಕರು ಸಹಕಾರ ನೀಡಬೇಕೆಂದು ಕೋರಿದರು.

ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಮಾತನಾಡಿ, ಜನರು ಭಯದಿಂದ ಕಾಯಿಲೆಗಳ ತಪಾಸಣೆಗೆ ಮುಂದಾಗುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳು ಹೆಚ್ಚೆಚ್ಚು ಆಗಬೇಕು. ಸೂಕ್ತ ಚಿಕಿತ್ಸೆ ಪಡೆದರೆ ಯಾವುದೇ ಕಾಯಿಲೆಯನ್ನು ಮೊಳಕೆಯಲ್ಲಿಯೇ ಚಿವುಟಬಹುದು. ಸರ್ಕಾರಗಳು ಸಹ ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ಬಜೆಟ್‍ನಲ್ಲಿ ಹೆಚ್ಚಿನ ಹಣ ಮೀಸಲಿರುಸುತ್ತಿದೆ. ಜನರನ್ನು ಬೆಚ್ಚಿಬೀಳಿಸಿದ್ದ ಕೊರೊನಾವನ್ನು ನಾವೂ ಈಗಾಗಲೇ ಗೆದ್ದಿದ್ದೆವೆ. ಅದರಂತೆ ಕ್ಷಯರೋಗ ನಿರ್ಮೂಲನೆ ಕಡೆಗೆ ಹೆಜ್ಜೆ ಹಾಕೋಣ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ಷಯರೋಗ ನಿರ್ಮೂಲನೆ ಕುರಿತು ಏರ್ಪಡಿಸಿದ್ದ ಜಾಗೃತಿ ಜಾಥಾಕ್ಕೆ ಪುರಸಭಾ ಅಧ್ಯಕ್ಷ ಪಿ.ಗಿರೀಶ್ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಜಾಥಾವು ಪಟ್ಟಣದ ಪ್ರಮುಖ ಬೀದಿ ಹಾಗು ಹೆದ್ದಾರಿಯಲ್ಲಿ ಸಂಚರಿಸಿ ಕ್ಷಯರೋಗ ನಿರ್ಮೂಲನೆ ಕುರಿತು ಅರಿವು ಮೂಡಿಸಿದರು. ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಸಿ.ಜಿ.ರವಿಶಂಕರ್, ತಾಪಂ ಇಓ ಶ್ರೀಕಂಠರಾಜೇ ಅರಸ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಚಲುವರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡೇಗೌಡ, ಪುರಸಭಾ ಉಪಾಧ್ಯಕ್ಷೆ ದೀಪಿಕಾ ಅಶ್ವಿನ್, ಸದಸ್ಯರಾದ ಅಣ್ಣಯ್ಯಸ್ವಾಮಿ, ನಾಗೇಶ್, ಮಹದೇವಮ್ಮ, ಶ್ರೀನಿವಾಸ ಕಣ್ಣಪ್ಪ, ಪುರಸಭೆ ಮುಖ್ಯಾಧಿಕಾರಿ ಹೇಮಂತ್ ರಾಜ್, ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಂಜುನಾಥ್, ವೈದ್ಯರಾದ ಡಾ.ಸಂದ್ಯಾ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕರ್ತೆಯರು ಇದ್ದರು.
ವರದಿ: ಬಸವರಾಜು ಎಸ್.ಹಂಗಳ