ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್
ದೇಶ – ವಿದೇಶಗಳ, ಒಳರಾಜ್ಯಗಳ ನೆಲ, ಜಲ, ಭಾಷೆ, ರಾಜಕೀಯ ಮತ್ಯಾವುದೇ ವಿವಾದಗಳಲ್ಲಿ ಹೆಚ್ಚಿನ ಉದ್ವಿಗ್ನ ಸ್ಥಿತಿಯು ಉಂಟಾದಾಗ ಅತಿಯಾಗಿ ಬೆಂದು ಬಳಲುವುದು ಗಡಿನಾಡು ಪ್ರದೇಶಗಳಲ್ಲಿನ ಜನರು. ಒಳಗಿನ ಜನರು ವಿವಾದಗಳ ವಿಚಾರಗಳಿಗೆ ದ್ವೇಷ ಕಾರುವುದು, ಪ್ರತಿಭಟಿಸುವುದು, ಗುಂಪುಗಾರಿಕೆಯ ಮೂಲಕ ಆಕ್ರೋಶ ವ್ಯಕ್ತಪಡಿಸುವುದು ಆದಷ್ಟು ರಕ್ಷಣಾತ್ಮಕ ಹೋರಾಟ ಎಂದೇ ಎನಿಸುವುದು. ನಾಡಿನ ಒಳಗರಿಗೆ ಸದಾ ನಿಶ್ಚಿತವಾದ ವರ ಎನ್ನಬಹುದು ಈ ರೀತಿಯ ರಕ್ಷಣಾತ್ಮಕ ಹೋರಾಟ. ಆದರೆ ಗಡಿನಾಡ ಜನರು ಎಂದಿಗೂ ಈ ವಿವಾದಗಳ, ವಿಚಾರಗಳ ಕೆಟ್ಟ ಫಲಾನುಭವಿಗಳೇ ಆಗಿರುತ್ತಾರೆ. ಹೋರಾಟ ಎನ್ನುವುದು ಒಳ್ಳೆಯದೆ, ಅದು ನಮ್ಮ ಬದುಕಿನ ಉಳಿವಿನ ಅಥವಾ ಅಸ್ತಿತ್ವದ ಧರ್ಮ. ಹೋರಾಟವನ್ನು ಬಳಸುವ ರೀತಿಯಲ್ಲಿ ಎಡವಿದರೆ ಅದು ನಮಗೆ ಹೆಚ್ಚಿನದಾಗಿ ಲಾಭಕ್ಕಿಂತ ನಷ್ಟವನ್ನೇ ತಂದೊಡ್ಡಿರುತ್ತದೆ. ಈಗ ಪ್ರಸ್ತುತದ ವಿಚಾರವನ್ನೇ ಮುಂದಿಟ್ಟು ತಿಳಿಸುವುದಾದರೆ; ಮಹಾರಾಷ್ಟ್ರದ ಶಿವಸೇನೆ ಸಂಘಟನೆಯ ಕೆಲ ಪುಡಾರಿಗರು, ಅವಿವೇಕಿಗರು ಕರ್ನಾಟಕದ ಬಾವುಟವನ್ನು ಸುಟ್ಟರು, ತುಳಿದರು, ಬಹುದೊಡ್ಡದಾಗಿಯೇ ಅವಮಾನಿಸಿದರು.
ಈ ರೀತಿ ದೇಶದ್ರೋಹ ಮಾಡಿದ ಭ್ರಷ್ಟರು ಕ್ಷಮೆಗೆ ಅನರ್ಹರು. ಇವರನ್ನು ಕಾನೂನಾತ್ಮಕವಾಗಿ ಕಠಿಣವಾಗಿ ಶಿಕ್ಷಿಸುವುದೇ ಸರಿ. ಆದರೆ, ಯಾರೋ ತಿಳಿಗೇಡಿಗಳು ಮಾಡಿದ ತಪ್ಪಿಗೆ ಮತ್ಯಾರೋ ಅಮಾಯಕ ತನ್ನ ಜೀವನೋಪಾಯಕ್ಕಾಗಿ ನಾಡಿನ ಒಳಗಡೆ ಬಂದಾಗ ಅವನನ್ನು ಹೀಯಾಳಿಸುವುದು, ಬೆದರಿಸುವುದು ಹೋರಾಟದ ಸ್ವರೂಪವನ್ನು ಈ ರೀತಿ ಸಣ್ಣತನದ ವಿಚಾರಗಳಲ್ಲಿ ತೋರ್ಪಡಿಸುವುದು ಒಳ್ಳೆಯ ಲಕ್ಷಣವಲ್ಲ.ಈಗ, ನಮ್ಮ ಕನ್ನಡಿಗರು ಅಲ್ಲಿಯೂ ಇದ್ದಾರೆ, ಅಲ್ಲಿಯ ತಮಿಳಿಗರೋ, ಮಹಾರಾಷ್ಟ್ರಿಗರೋ ಇಲ್ಲಿಯೂ ಇದ್ದಾರೆ. ಅಲ್ಲಿರುವವರು ಮತ್ತು ಇಲ್ಲಿರುವವರು ತಮ್ಮ ತಮ್ಮ ಬದುಕಿನ ಬವಣೆಗಳನ್ನು ಕಳೆಯಲು ವಲಸೆಹೊಕ್ಕು ನಿಂತಿರುತ್ತಾರೆ. ಆದರೆ ಯಾರೋ ತಿಳಿಗೇಡಿಗಳ ಜಗಳ, ದ್ವೇಷ ಪಾಪ ಈ ಅಮಾಯಕರನ್ನು ಸುಟ್ಟುಹಾಕುತ್ತಿರುತ್ತದೆ. ಈ ರೀತಿ ತಪ್ಪೆಸಗದವರ ವಿರುದ್ಧ ಸೆಣಸಾಡುವುದು ವ್ಯರ್ಥ.

ಇನ್ನೊಂದು ಪ್ರಮುಖ ವಿಷಯವೇನೆಂದರೆ ನಾವು ಹೋರಾಟದ ಹಗ್ಗಜಗ್ಗಾಟದಲ್ಲಿ ಆಗುವ ಅತಿಯಾದ ಅವಮಾನದ ಬಗ್ಗೆ, ನಷ್ಟದ ಬಗ್ಗೆ ಎಚ್ಚರಿಕೆಯಿಂದಿರಬೇಕು ಅವರು ಅಲ್ಲಿ ನಮ್ಮ ಬಾವುಟವನ್ನು ಸುಟ್ಟರು ನಾವು ಇಲ್ಲಿ ಅವರ ಮತ್ಯಾವುದೋ ರಾಜ್ಯ ಚಿಹ್ನೆಯನ್ನು ಅಥವಾ ಸಂಘದ ಸಂಕೇತವನ್ನು ಭಗ್ನಗೊಳಿಸಿ ಪ್ರತಿಕ್ರಿಯಿಸಿದೋ ಎಂದಿಟ್ಟುಕೊಳ್ಳಿ ಮತ್ತೆ ಅವರು ನಮ್ಮ ಕನ್ನಡ ತಾಯಿಯ ಗೌರವಕ್ಕೆ ತುಂಬಾ ವಿಕೃತವಾಗಿ ಅಗೌರವ ಸೂಚಿಸುವ ಪ್ರಯತ್ನವೆಸಗಿರುತ್ತಾರೆ ಹೀಗೆ ಇಬ್ಬರ ಹಗ್ಗಜಗ್ಗಾಟದ ಜಗಳಗಳಲ್ಲಿ ಅತಿಯಾಗಿ ನೋವು ಅವಮಾನಕ್ಕೀಡಾದವರು ಯಾರೆಂದರೆ ಮಧ್ಯಸ್ಥಿಕೆಯಲ್ಲಿದ್ದ ನಾಡು, ನುಡಿ, ಭಾಷೆಯ ಜನನಿ. ಆಕೆಯ ವಸ್ತ್ರ ಅಥವಾ ಧ್ವಜಾ. ಹೀಗೆ ಸೆಣಸಾಡಿ ಭಿನ್ನವಾದವರು ಯಾರು? ನಮ್ಮ ಸ್ವಾತಂತ್ರ್ಯ ವೀರನಾಯಕರ ಶಿಲಾ ಅಥವಾ ಲೋಹದ ಮೂರ್ತಿಗಳು. ಅವರು ಇದ್ದಾಗಲೂ ಅವರಿಗೆ ಪರಕೀಯರಿಂದ ನೋವು ಈಗಲೂ ನಮ್ಮವರಿಂದಲೇ ನೋವು ಅವಮಾನ, ಇದೆಂಥಾ ವಿಪರ್ಯಾಸ.ಪ್ರಮಾದವೆಸಗಿದ ಹೊರನಾಡಿಗರಾದ ಕೆಲ ಮೂಢರು, ಭ್ರಷ್ಟರು, ಸಣ್ಣತನವುಳ್ಳವರು ಯಾರೇ ಈ ರೀತಿಯವರಾಗಿರಲಿ ಅವರು ತೋರುವ ವಿಲಕ್ಷಣ ಬುದ್ಧಿಗಳನ್ನು ನಾವೇಕೆ ತೋರಬೇಕು. ನಮಗೆ, ಯಾರು? ನಾಡು, ನುಡಿ, ಜಲದ ವಿಚಾರವಾಗಿ ಅವಮಾನಿಸಿದ್ದಾರೆ ಎಂದು ಖಚಿತವಾಗಿ ತಿಳಿದಮೇಲೆ, ನೇರವಾಗಿ ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಂಡರೆ ಆಯಿತಲ್ಲ. ಇನ್ನೊಂದು ವಿಚಾರ ವಿಶ್ವಜ್ಞಾನಿ ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನ ಎಲ್ಲದಕ್ಕೂ ಪರಿಹಾರೋಪಾಯವಾಗಿ ರಚನೆಗೊಂಡಿದೆ. ಆದರೆ ಅದನ್ನು ಪಾಲಿಸಲಿರುವ ಅಧಿಕಾರಿಗಳು, ರಾಜಕೀಯ ವ್ಯಕ್ತಿಗಳು ರಣಹೇಡಿತನವನ್ನು ತೋರಿಸುವಂತೆ ಮಾಡಿಕೊಂಡಿರುವ ನಮ್ಮದೇ ಅವ್ಯವಸ್ಥಿತಗಳ ಫಲವಲ್ಲವೇ ಈ ರೀತಿಯ ಬಹುದೊಡ್ಡ ಮಟ್ಟದ ಅವಮಾನ. ಬಸವಣ್ಣನವರು ಸುಮ್ಮನೆ ಹೇಳಿದರೇ? ಅವರು ಹೇಳಿದ ಆ ಮಾತಿಗೇನು ಅರ್ಥವೇ ಇಲ್ಲವೇ! “ಲೋಕದ ಡೊಂಕ ನೀವೇಕೆ ತಿದ್ದುವಿರಿ ನಿಮ್ಮ ನಿಮ್ಮ ಮನವ ನೀವು ಸಂತೈಸಿಕೊಳ್ಳಿರಿ” ಎಂದು. ಇನ್ನು ನಮ್ಮಲ್ಲಿ ಜನಪದರ ಗಾದೆಗಳಿಗೇನು ಕಮ್ಮಿ ಇದೆಯೇ “ಊರಿಗಾಗದ ಪಟೇಲ ಮೇಲೆರಗುವ ಗಿಡುಗ”, “ಹಗೆಮಾತು ಆತುಕೊಂಡ ತುಟಿಬಿಚ್ಚದೆ ಕೂತುಕೊಂಡ”, “ಸಮಯಕ್ಕಿಲ್ಲದ ನೆರವು ಸಾವಿರ ಇದ್ದರೂ ಎರವು” ನೋಡಿ ನಮ್ಮದೇ ಸರ್ಕಾರದ ರಚನೆಗಳಲ್ಲಿ ಬಿಗಿಯಾದ ಮಟ್ಟನ್ನು ಕಾಪಾಡಿಕೊಳ್ಳುವ ಹಕ್ಕು ಪ್ರಜಾಪ್ರಭುತ್ವ ಪ್ರಜೆಗಳಾದ ನಮಗಿರುವ ಬಹುದೊಡ್ಡ ಶಕ್ತಿ ಮತ್ತು ಸ್ವಾತಂತ್ರ್ಯ. ಈ ಶಕ್ತಿ ಮತ್ತು ಸ್ವಾತಂತ್ರ್ಯವನ್ನು ನಮ್ಮ ಸ್ವಾರ್ಥಗಳಿಗಾಗಿ ಮಾರಿಕೊಂಡ ನಾವು ಪರಕೀಯರಿಂದ ಅವಮಾನಕ್ಕೆ ಒಳಗಾಗುವುದು ಸಹಜ. ಅದಕ್ಕಾಗಿಯೇ ಮೊದಲು ನಮ್ಮಲ್ಲಿನ ಅವ್ಯವಸ್ಥಿತಗಳನ್ನು ವ್ಯವಸ್ಥೆಗೊಳಿಸಿಕೊಳ್ಳುವ ನಿಟ್ಟಿನಲ್ಲಿಯೇ ಬಸವಣ್ಣನವರ ಸಮಾಜ ಸುಧಾರಿತ ಧ್ವನಿ ಇರುವುದು.

ಗಾದೆಗಳು ನಮ್ಮ ದುರ್ಬಲ ಮತ್ತು ಭ್ರಷ್ಟ ನಾಯಕರನ್ನು ನೇರವಾಗಿ ಅಣಕಿಸುತ್ತಿವೆ ಮತ್ತು ಅವರ ವ್ಯಕ್ತಿತ್ವಗಳನ್ನು ಬಣ್ಣಿಸುತ್ತವೆ. ಊರಿಗಾಗದ ಪಟೇಲನನ್ನು ನಾವು ಆಯ್ಕೆಮಾಡಿಕೊಂಡು, ಅವನಿಗೆ ನಮ್ಮ ವಾಕ್ ಸ್ವಾತಂತ್ರ್ಯವನ್ನು ದಾಸ್ಯದಲ್ಲಿರಿಸಿ ಗಿಡುಗನಂತೆ ಕಾಡುವ ಹಾಗೆ ಮಾಡಿಕೊಂಡಿರುವಾಗ ಹಗೆಗೆ ತುಟಿಬಿಚ್ಚದೆ ಕೂತುಕೊಳ್ಳದೇ ಮತ್ತೇನು ಮಾಡುವನು ಪಟೇಲ. ಸಮಯಕ್ಕೆ ನೆರವು ನೀಡದೇ ಇರುವ ಅವನ ಅಧಿಕಾರ ವ್ಯರ್ಥವಲ್ಲವೇ!. ಈ ನಿರರ್ಥಕರ ಸ್ಥಾನದಲ್ಲಿ ಸಾರ್ಥಕ ನೇತಾರರನ್ನು ಹುಟ್ಟುಹಾಕುವುದು ಮತ್ತು ನಾವೇ ಸಮಾಜ ಸಾರ್ಥಕರಾಗಿ ನಿರ್ಮಾಣಗೊಳ್ಳುವುದೇ ಮುಖ್ಯ. ಅದನ್ನು ಬಿಟ್ಟು ತೊಂದರೆಯಾದಾಗ ಗಡಿನಾಡುಗಳಲ್ಲಿ ಸಾವಿರ, ಸಾವಿರ ದಂಡನ್ನು ಎತ್ತುಕಟ್ಟಿಕ್ಕೊಂಡು ಧಾವಿಸಿ ಸಮಸ್ಯೆ ಸದ್ಯದ ಸ್ಥಿತಿಗೆ ಶಾಂತಿಯಾಗುವ ನಿಟ್ಟಿನಲ್ಲಿ ಔಹಾರಿ ಬಿದ್ದರೆ ಎಲ್ಲವೂ ಸರಿಯಾಗುವುದಿಲ್ಲ. ಪ್ರತಿಭಟನೆಯಲ್ಲಿ ಗೆದ್ದು ಮರಳಿದ ನಂತರ ಗಡಿನಾಡಿನಲ್ಲಿರುವ ನಮ್ಮ ಬಂಧುಗಳಿಗೆ ಒಳ್ಳೆಯ ರೀತಿಯಲ್ಲಿ ಒತ್ತಾಸೆ ಏನಾಯ್ತು? ಎಷ್ಟರಮಟ್ಟಿಗೆ ಆಯ್ತು ಎನ್ನುವುದರ ಚಿಂತನೆಯೂ ಮುಖ್ಯ.
ತಕ್ಷಣಕ್ಕೆ ಸುಧಾರಣೆ ಕಂಡು ನಿಟ್ಟುಸಿರು ಬಿಡುವುದರೊಳಗೆಯೇ ಮತ್ತೊಂದು ಪುಡಾರಿಗಳ ತಂಡ ಮತ್ತದೇ ತಮ್ಮ ಕೆಟ್ಟಚಾಳಿಗಳನ್ನು ಒಂದೊಂದಾಗಿ, ನಿಧಾನಗತಿಯಲ್ಲಿ ನಮ್ಮ ಗಡಿನಾಡ ಕನ್ನಡಿಗರ ಮೇಲೆ ತೋರ್ಪಡಿಸುತ್ತಲೇ ಇರುತ್ತಾರೆ. ಈ ರೀತಿಯಲ್ಲಿ ಗಡಿನಾಡಿನಲ್ಲಿರುವ ನಮ್ಮ ಹೆಣ್ಣುಮಕ್ಕಳಿಗೆ ರಕ್ಷಣೆಗಿಂತ ಅಪಾಯವೇ ಹೆಚ್ಚು. ಗಡಿನಾಡಿಗರ ಆರ್ಥಿಕ ಬದುಕಿಗೆ ಬಹುದೊಡ್ಡ ತಿರುಗೇಟು ಬೀಳುವುದಂಥೂ ಖಂಡಿತ. ಸದಾ ವೈಷಮ್ಯದಲ್ಲಿ ನೆಮ್ಮದಿಯುತ ಬದುಕನ್ನು ಸಾಗಿಸುವುದು ಕಷ್ಟ ಮತ್ತು ಅಸಾಧ್ಯ. ಈ ಹಲವಾರು ಅಸಾಧ್ಯಗಳೊಂದಿಗೆ ಬದುಕುವ ನಮ್ಮ ಕರುನಾಡ ಗಡಿನಾಡಿಗರಿಗೆ ಒಳಿತಾಗುವ ನಿಟ್ಟಿನಲ್ಲಿಯೇ ನಾವು ನಮ್ಮಲ್ಲಿನ ಆಡಳಿತ ಸೇವೆಯನ್ನು ಶಕ್ತಿಯುತ ದಾರಿಗೆ ತಂದುಕೊಳ್ಳಬೇಕು. ನಾಡು, ನುಡಿಯ ಕಳಕಳಿಗೆ ಬದ್ಧವಾಗಿರುವಾಗೆ ರಚಿಸಿಕೊಳ್ಳಬೇಕು. ಹೋರಾಟದ ಹಾದಿ ತುಳಿಯಬೇಕು.

ಹೋರಾಟವೆಂದರೆ ಘರ್ಷಣೆ ಮಾತ್ರವಲ್ಲ ಬೌದ್ಧಿಕ ಮಟ್ಟದ ಪ್ರಯತ್ನವೂ ಕೂಡ ಆಗಿದೆ. ಶ್ರೇಷ್ಠ ದಿವ್ಯಪುರುಷ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೋರಾಟಕ್ಕಾಗಿ ಯಾವುದೇ ಬಂದೂಕು, ತುಪಾಕಿ ಹಿಡಿದು ನಿಲ್ಲಲಿಲ್ಲ ಜ್ಞಾನವನ್ನು ತುಂಬಿ ನಿಂತರು. ಸರ್ಕಾರವನ್ನು ಜ್ಞಾನದ ಮೂಲಕ ನೈತಿಕದಂತೆ ಬದಲಾಯಿಸಿದರು, ಸಂವಿಧಾನ ಬರೆದರು. ದುರ್ಬಲರಿಗೆ ಮಾತ್ರವಲ್ಲ ಭಾರತದ ಪ್ರತಿಪ್ರಜೆಗೂ ಹೊರದೇಶಗಳಿಂದ ಆಗುವ ಅಪಾಯಗಳಿಗೆ ಕಠಿಣವಾದ ರಕ್ಷಣಾತ್ಮಕ ಬೇಲಿಯನ್ನು ಹಾಕಿಕೊಟ್ಟರು. ಒಳಗೆ ಯಾರಿಗೂ ನೋವಾಗದಂತೆ ಸಮಾನತೆ ಪ್ರತಿಪಾದಿಸಿ ಜಾತ್ಯತೀತ ರಾಷ್ಟ್ರದ ನಿರ್ಮಾಣಕ್ಕೆ ಮುಂದಾದರು. ಇವರಂತೆ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ಮನಸ್ಥಿತಿ ಮತ್ತು ಅವರ ಪ್ರಯತ್ನದ ನೆನಪು ಅಗತ್ಯ ಅವರನ್ನು ಅನುಸರಿಸುವುದು ಕೂಡ ಅಷ್ಟೇ ಅಗತ್ಯ. ನಮ್ಮ ಹೋರಾಟದ ಪ್ರತಿಕ್ರಿಯೆಗಳಲ್ಲಿ ಕೇವಲ ಸೌಮ್ಯತೆ ಇರಬೇಕು ಎಂದಲ್ಲ; ಎಚ್ಚರಿಕೆ ಮತ್ತು ಬೌದ್ಧಿಕತೆ ಇರಬೇಕು ಎನ್ನುವುದೇ ಈ ಮೇಲಿನ ಆಲೋಚನೆಗಳ ತಿರುಳು.
ಚಿಮಬಿಆರ್ (ಮಂಜುನಾಥ ಬಿ.ಆರ್)
ಯುವಸಾಹಿತಿ, ಸಂಶೋಧಕ, ವಿಮರ್ಶಕ
ಹೆಚ್.ಡಿ.ಕೋಟೆ ಮೈಸೂರು.
ದೂರವಾಣಿ ಸಂಖ್ಯೆ :-8884684726
Gmail I’d:- manjunathabr709@gmail.com