ಬೆಂಗಳೂರು: ಬಾಲ ನ್ಯಾಯಾಲಯ (ಮಕ್ಕಳ ಪಾಲೆನೆ ಮತ್ತು ರಕ್ಷಣೆ) ಕಾಯ್ದೆ 2015 ಮತ್ತು ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಮಾದರಿ ನಿಯಮಗಳು 2016 ಹಾಗೂ ದತ್ತು ಅಧಿಸೂಚನೆ 2017ರ ಅಡಿಯಲ್ಲಿ ಮಾತ್ರ ಅನಾಥ, ಪರಿತ್ಯಕ್ತ ಅಥವಾ ಒಪ್ಪಿಸಲ್ಪಟ್ಟ ಮಕ್ಕಳನ್ನು ದತ್ತು ನೀಡಲಾಗುವುದು. ಮಗುವನ್ನು ದತ್ತು ಪಡೆಯಲು ಆಸಕ್ತಿ ಇರುವವರು CARA ವೆಬ್‌ಸೈಟ್  www.cara.nic.in ನಲ್ಲಿ ನೊಂದಾಯಿಸಿಕೊಳ್ಳಬೇಕು.

ಕೋವಿಡ್ – 19 ಕಾರಣದಿಂದಾಗಿ ಮಗು ಅನಾಥವಾಗಿದ್ದರೆ ಮತ್ತು ಮಗುವನ್ನು ನೋಡಿಕೊಳ್ಳಲು ಸಂಬಂಧಿಕರು ಯಾರೂ ಸಿದ್ದರಿಲ್ಲದಿದ್ದರೆ ಅಂತಹ ಮಗುವನ್ನು 24 ಗಂಟೆಗಳ ಒಳಗೆ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಬೇಕು. (ಪ್ರಯಾಣಕ್ಕೆ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ) ನಿಗದಿತ ಕಾರ್ಯ ವಿಧಾನಗಳನ್ನು ಉಲ್ಲಂಘಿಸಿ ಮಗುವನ್ನು ನೇರವಾಗಿ ದತ್ತು ತೆಗೆದುಕೊಳ್ಳುವುದು ಬಾಲ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 80ರಡಿ ಅಪರಾಧವಾಗಿರುತ್ತದೆ. ಇದು ಮೂರು ವರ್ಷಗಳವರೆಗೆ ವಿಸ್ತರಿಸಲ್ಪಡಬಹುದಾದ ಕಾರಗೃಹ ದಂಡನೆ ಅಥವಾ ದಂಡ ಒಂದು ಲಕ್ಷ ರೂಪಾಯಿಗಳ ಜುಲ್ಮಾನೆ ಶಿಕ್ಷೆ ಅಥವಾ ಉಭಯ ಶಿಕ್ಷೆಗಳಿಗೆ ದಂಡನೀಯವಾಗುವುದು. ಯಾವುದೇ ಉದ್ದೇಶಕ್ಕಾಗಿ ಮಗುವನ್ನು ಮಾರಾಟ ಮಾಡುವುದು ಅಥವಾ ಕೊಂಡುಕೊಳ್ಳುವುದು ಸೆಕ್ಷನ್ 81 ಜೆಜೆ ಕಾಯ್ದೆ 2015ರ ಅಡಿಯಲ್ಲಿ ಅಪರಾಧವಾಗಿದೆ ಮತ್ತು ಐದು ವರ್ಷಗಳವರೆಗೆ ವಿಸ್ತರಿಸಬಹುದಾದ ಕಠಿಣ ಕಾರಗೃಹ ಶಿಕ್ಷೆ ಮತ್ತು ರೂ. 1 ಲಕ್ಷ ರೂಪಾಯಿಗಳ ಜುಲ್ಮಾನೆ ದಂಡನೀಯಗಳೆರಡಕ್ಕೂ ದಂಡನೀಯವಾಗುವುದು. ಅಂತಹ ಅಪರಾಧ ಎಸಗಲಾಗಿದೆ ಎಂದು ತಿಳಿದುಬಂದಲ್ಲಿ ತಕ್ಷಣವೇ ಮಕ್ಕಳ ಸಹಾಯವಾಣಿ 1098 ಅಥವಾ ಪೊಲೀಸರಿಗೆ ಕರೆ ಮಾಡುವುದು ಅಗತ್ಯವಾಗಿದೆ.

ಯಾವುದೇ ವ್ಯಕ್ತಿಯು ಮಗುವು ಅನಾಥವಾಗಿದೆ ಅಥವಾ ಪೋಷಕರ ಪೋಷಣೆಯಿಂದ ವಂಚಿತವಾಗಿದೆ ಎಂದು ಕಂಡುಬಂದಲ್ಲಿ ತಕ್ಷಣ ಮಕ್ಕಳ ಸಹಾಯವಾಣಿ 10989 ಅಥವಾ ಪೊಲೀಸರಿಗೆ ಕರೆ ಮಾಡಬಹುದು ಅಥವಾ ಮಗುವನ್ನು ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಬೇಕು. ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ 24 ಗಂಟೆಗಳ ಒಳಗೆ ತಿಳಿಸಬೇಕು. ಮಗುವನ್ನು ರಕ್ಷಣೆ ಮಾಡಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ವಿಫಲವಾದರೆ ಸೆಕ್ಷಣ್ 33 ಮತ್ತು 34 ಜೆಜೆ ಕಾಯ್ದೆ 2015ರ ಅಡಿಯಲ್ಲಿ ಆರು ತಿಂಗಳವರೆಗೆ ಜೈಲು ಶಿಕ್ಷೆ ಅಥವಾ 10ಸಾವಿರ ರೂಪಾಯಿಗಳ ದಂಡ ಅಥವಾ ಎರಡನ್ನೂ ವಿಧಿಸಬಹುದು.

ಕೋವಿಡ್ -19 ನಿಂದಾಗಿ ಮಕ್ಕಳು ಅನಾತವಾಗಿದ್ದಲ್ಲಿ ಅಂತಹ ಮಕ್ಕಳನ್ನು ನೇರವಾಗಿ ದತ್ತು ಪಡೆಯಬಹುದು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಸಂದೇಶಗಳು ಬಂದರೆ ಅದು ಸುಳ್ಳು ಸುದ್ದಿಯಾಗಿರುತ್ತದೆ ಮತ್ತು ಇಂತಹ ಮಾಹಿತಿಯನ್ನು ಸ್ವೀಕರಿಸಿದ್ದಲ್ಲಿ ತಕ್ಷಣವೇ ಸ್ಥಳೀಯ ಪೊಲೀಸರಿಗೆ ವರದಿ ಮಾಡಿ ಅಥವಾ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಇಂತಹ ಸುಳ್ಳು ಸುದ್ದಿ ಸಂದೇಶಗಳನ್ನು ಸೃಷ್ಟಿಸುವವರು ಮತ್ತು ಸಂದೇಶ ರವಾನೆ ಮಾಡುವವರು ಯಾರೇ ಆಗಿದದರೂ ಅವರಿಗೆ ಅಕ್ರಮ ದತ್ತು ಮತ್ತು ಮಾನವ ಕಳ್ಳ ಸಾಗಾಣಿಕೆಗೆ ಸಹಾಯ ಮಾಡಿದ ಅಪರಾಧಕ್ಕೆ ಕಠಿಣ ಶಿಕ್ಷೆಯಾಗುತ್ತದೆ. ರಾಜ್ಯದ ಮಾಧ್ಯಮಗಳಲ್ಲಿ ಕೋವಿಡ್ -19 ರಿಂದಾಗಿ ಅನಾಥರಾದ ಮಕ್ಕಳನ್ನು ಕುರಿತು ವರದಿಗಳು ಬರುತ್ತಿವೆ. ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ 2015ರ ಸೆಕ್ಷನ್ 74 ಅನ್ವಯ ಈ ರೀತಿಯಾಗಿ ಹೇಳಲಾಗಿರುತ್ತದೆ.

ಪಾಲನೆ ಮತ್ತು ರಕ್ಷಣೆ ಅವಶ್ಯವಿರುವ ಹಾಗೂ ಬಾಧಿತ ಮಕ್ಕಳ ಮಾಹಿತಿಯನ್ನು ಮಾದ್ಯಮಗಳಲ್ಲಿ ಪ್ರಸಾರ ಮಾಡುವುದರಿಂದ ಮಕ್ಕಳಿಗೆ ವಿವಿಧ ತೊಂದರೆ/ ಸಮಸ್ಯೆಗಳು ಉಂಟಾಗಬಹುದಾದರಿಂದ ಸದರಿ ಮಕ್ಕಳ ಮಾಹಿತಿಯನ್ನು ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ಮೇಲಿನಂತೆ ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಯ್ದೆ 2015ರ ಸೆಕ್ಷನ್ 74ನಲ್ಲಿ ನಿಷೇಧಿಸಲಾಗಿದೆ.

ಈ ರೀತಿಯಾಗಿ ಸಂಕಷ್ಟದಲ್ಲಿರುವ ಮಕ್ಕಳು ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಕಾರಣದಿಂದ ಅನಾಥರಂತಹ ಪರಿಸ್ಥತಿಯಲ್ಲಿ ಇದ್ದದ್ದೇ ಆದಲ್ಲಿ, ಆ ಕುರಿತು ತಕ್ಷಣ ಮಕ್ಕಳ ಸಹಾಯವಾಣಿ 1098ಕ್ಕೆ ಮಾಹಿತಿ ನೀಡಬೇಕು. ಮಕ್ಕಳ ಸಹಾಯವಾಣಿ ಸಿಬ್ಬಂದಿ ಮಕ್ಕಳ ಪರಿಸ್ಥಿತಿಯನ್ನು ಆದ್ಯಯನ ಮಾಡಿ ವಿಚಾರವನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಗೂ ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕಕ್ಕೆ ವರದಿ ಮಾಡುತ್ತಾರೆ.

ಪ್ರತಿ ಜಿಲ್ಲೆಯಲ್ಲಿ ಮಕ್ಕಳ ರಕ್ಷಣಾ ಚಟುವಟಿಕೆಗಳನ್ನು ನಿರ್ವಹಿಸುವ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ. ಕೋವಿಡ್- 19 ರಿಂದಾಗಿ ಮಕ್ಕಳು ಅನಾಥರು ಅಥವಾ ಅರೆ ಅನಾಥರಾದಂತಹ ಪರಿಸ್ಥಿತಿಗಳನ್ನು ಜಿಲ್ಲಾಧಿಕಾರಿಗಳ ಮುಂದಾಳತ್ವದಲ್ಲಿ ಅನುಸರಣೆ ಮಾಡಲಾಗುತ್ತಿದೆ.

ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಮಕ್ಕಳು ಸಂಕಷ್ಟದಲ್ಲಿ ಇದ್ದಲ್ಲಿ ಆ ಕುರಿತು ಮಾಹಿತಿ ಇರುವವರು ತಕ್ಷಣ ಮಕ್ಕಳ ಸಹಾಯವಾಣಿ – 1098ಕ್ಕೆ ತಿಳಿಸುವಂತೆ ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯದ ಪ್ರಕಟಣೆ ತಿಳಿಸಿದೆ.

By admin