೧೯೭೫ರಲ್ಲಿ ಶ್ರೀ ವಿ.ಹೆಚ್.ಗೌಡ ಕ.ಸಾ.ಪ ಜಿಲ್ಲಾಧ್ಯಕ್ಷರಾಗಿದ್ದು, ಮೈಸೂರು ಟೌನ್‌ಹಾಲ್‌ನಲ್ಲಿ
ಡಾ.ಹಾ.ಮಾ.ನಾಯಕ್ ಉದ್ಘ್ಹಾಟಿಸಿ, ಪ್ರೊ||ಸಿ.ಪಿ.ಕೆ. ಅಧ್ಯಕ್ಷತೆ ವಹಿಸಿದ್ದ
ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯಲ್ಲಿ ದ್ವಿತೀಯ ಬಹುಮಾನ ಪಡೆದ ಕವಿತೆ.
ಸ್ಥಳದಲ್ಲೇ ಗಾನಕೋಗಿಲೆ ಪಿ.ಕಾಳಿಂಗರಾಯರ ಪುತ್ರ ಪ್ರದೀಪ್ ಇದನ್ನು ಸುಗಮ ಸಂಗೀತದ ಮೂಲಕ ಹಾಡಿ ರಂಜಿಸಿದರು!

ಚಿತ್ರನಟ ಸಂಪತ್‌ಪುತ್ರ [ಸಿಟಿಪವರ್‌ಪ್ರೆಸ್]ಮುಕುಂದ್, ಕನ್ನಡಕ್ರಾಂತಿದಳದ ನ.ನಾಗಲಿಂಗಸ್ವಾಮಿ, ತಾಯೂರುವಿಠಲಮೂರ್ತಿ, ಮೈ.ನಾ.ಗೋಪಾಲಕೃಷ್ಣ, ದೊಡ್ಡಯ್ಯ, ಮುರಳಿ, ಹೆಚ್.ವಿಶ್ವನಾಥ್[ಇಂದಿನ ರಾಜಕಾರಣಿ] ಮುಂತಾದವರು ಉಪಸ್ಥಿತರಿದ್ದರು!!

ಸುಗ್ಗಿ-ಹುಗ್ಗಿ


ಸೂರ್ಯಪಥ ಬದಲಿಕೆಯಂದು ಸುಗ್ಗಿಯ ಆಗಮನ
ಸಂಕ್ರಾಂತಿ ಎಂದೆನ್ನುವ ಹುಗ್ಗಿಯ ಸಂಕ್ರಮಣ ||ಪ||

ನಮ್ಮ ತಾಯಿ ನೀಡುತ್ತಾಳೆ ಜನ್ಮವನ್ನು
ಭೂಮಿ ತಾಯಿ ಕೊಡುತ್ತಾಳೆ ಅನ್ನವನ್ನು
ನಮ್ಮಣ್ಣ ಉತ್ತುಬಿತ್ತು ತೆಗೀತಾನೆ ಬೆಳೆಯನ್ನು
ಬಸವಣ್ಣ ದುಡಿಯುತ್ತಾನೆ ಬೇಸಾಯವನ್ನು
ನಂಬಿ ಕೆಟ್ಟೋರಿಲ್ಲಾ ನಮ್ ನೇಗಿಲನ್ನು
ನಂದಿನಿ ರೈತನ ಕಲ್ಪವೃಕ್ಷ ಕಾಮಧೇನು ||ಪ||

ಹೊಸಭತ್ತ ಬಿಸಿಬೆಲ್ಲ ಬಂದಿದೇ ನಾಡಿಗೆಲ್ಲ
ಕರಿಕಬ್ಬು ಬಿಳಿಎಳ್ಳು ಕೊಡೋಣ ಊರಿಗೆಲ್ಲ
ಹಳ್ಳಿಯಿಂದ ದಿಲ್ಲಿವರ್‍ಗೂ ಹಂಚೋಣ ಎಳ್ಳುಬೆಲ್ಲ
ಎಲ್ಲ್ಲಸೇರಿ ಒಳ್ಳೆಮಾತು ಆಡೋಣ ಹಗಲೆಲ್ಲ
ಬಯಲ್‌ನಾಟಕ ಕೊಯ್ಲುಕುಣಿತ ರಾತ್ರಿಯೆಲ್ಲ
ಬತಾಸುಪೇಣಿ ಸಿಹೀಖಾರ ಜೋರ್‌ಜೋರೆಲ್ಲ ||ಪ||

ಗರಿಗರಿಪಂಚೆ ಮಿರಿಮಿರಿಜುಬ್ಬ ಗೌಡ್ರಿಗಾಯ್ತು
ಮಿಣಮಿಣರೌಕೆ ರೇಷಿಮೆಸೀರೆ ಗೌಡ್ತಿಗಾಯ್ತು
ಕಲಾಪತ್‌ಲಂಗ ಜರಿಕಣದಕುಪ್ಸ ಹೆಣ್ಮಕ್ಳಿಗಾಯ್ತು
ಉಲ್ಲನ್‌ಪ್ಯಾಂಟು ಟರ್ಲಿನ್‌ಶರ್ಟು ಗಂಡೈಕ್ಳಿಗಾಯ್ತು
ತರಾವರಿಬಣ್ಣ ಗೆಜ್ಜೆಗಂಟೆ ಕಿಚ್ಚುಹಾಯ್ಸೊದ್ ನಂದೀಗಾಯ್ತು
ಹಸಿಅವರೆ-ತೊಗರಿ-ಹಲಸಂದೆ-ಕಡಲೆ ತಿಂದದ್ದಾಯ್ತು ||ಪ||

ಕುಮಾರಕವಿ ಬಿ.ಎನ್.ನಟರಾಜ್
[೯೦೩೬೯೭೬೪೭೧]

ದಿ.೧೪.೧.೨೦೦೮ ರಂದು ಮೈಸೂರು ಜಿ.ಕ.ಸಾ.ಪ. ಸಂಕ್ರಾಂತಿ ಕವಿಗೋಷ್ಠಿ ಯಲ್ಲಿ ಬಹುಮಾನ ಪಡೆದ ಕವನ

ಸಂಕ್ರಮಣ


ಆದಿತ್ಯಾದಿ ಅರುಣಂಗೆ ವಂದಿಸೆ ಮುಂಜಾನೆದ್ದು ಮಿಂದು
ಹಾಲುಬೆಲ್ಲ ಕೊಡುವಂಥ ಗೋಮಾತೆ ಬಸವಂಗೆ ಬಣ್ಣಬಳಿದು
ಪೂಜಿಸಿ ಪೊಂಗಲುತಿನಿಸಿ, ನಾವು ಅದರ ಎಂಜಲು ತಿಂದು
ಹೊಟ್ಟೆಕಿಚ್ಚು ಬಿಡೋಣವೆಂದು ಕಿಚ್ಚುಹಾಯಿಸಿ ಮುಸ್ಸಂಜೆಯಂದು
ತರಾವರಿ ಧಾನ್ಯಗಳ ಬೀಜ ತಂದು
ಬಿತ್ತಿ ಗೊಬ್ಬರಹಾಕಿ ಕಳೆಕಡಿದು ಬೆಳೆಬೆಳೆದು
ಕಣಜದಲಿ ರಾಶಿ ಹಾಕಲು ಪ್ರಕೃತಿ ಮುನಿದು
ಪ್ರತಿಫ಼ಲ ನೀಡಿದ್ದು
ಬೆವರು ಸುರಿಸಿ ದುಡಿದ[ವಿಷ ಸೇವಿಸಿ ಮಡಿದ]
ಬಡರೈತಂಗೆ ಇ[ಬ]ರಲಿಲ್ಲ ಕಿಲುಬುಕಾಸಿನ ಸಂಕ್ರಾಂತಿ!
ಮೌನದಲಿ ನೊಗಹೊತ್ತು ಬಗೆಬಗೆಯ ಭುವನಉತ್ತು
ರಕ್ತಹರಿಸಿ ಬೆವರುಸುರಿಸಿ ಬೆಂದುಬಸವಳಿದ
ಮೂಕಬಸವಂಗೆ ಸಿ[ಆ]ಗಲಿಲ್ಲ ನೆಮ್ಮದಿಯ ವಿಶ್ರಾಂತಿ!
ಹಸಿಭತ್ತ ಬಿಸಿಬೆಲ್ಲ ವಿಧವಿಧ ದವಸರಾಶಿ
ಹೊಸಬಟ್ಟೆ ಧರಿಸಿದ ಹೆಂಗೆಳೆಯರ ಸಮೃದ್ಧಿಖುಷಿ

ನಾಮುಂದು ತಾಮುಂದು ಎಂದು ಚೆನ್ನಿ-ಚೆಲ್ವಿ ಬೀರಲುಎಳ್ಳು
ಮನೆಯಿಂದ ಮನೆಗೆ ಓಡಾಡುವಾಗ ಚೆಲ್ಲಿದಂತೆ ಬೆಳದಿಂಗಳು
ಸದಾಇರಲಿ ಇದೇರೀತಿ ಸಂಪತ್‌ಭರಿತ ದಿನಗಳು!?

ಕುಮಾರಕವಿ ಬಿ.ಎನ್.ನಟರಾಜ್
[೯೦೩೬೯೭೬೪೭೧]