ಲೇಖನ ಅಭಿವ್ಯಕ್ತಿ:-ಚಿಮಬಿಆರ್ (ಮಂಜುನಾಥ ಬಿ.ಆರ್)

ಕನ್ನಡಿಗರ ಸ್ವಾಭಿಮಾನಕ್ಕೆ ಆಗಾಗ ಕಿಚ್ಚು ಹಚ್ಚಿಸುವ ಕೆಟ್ಟಚಾಳಿ ಅನ್ಯಭಾಷಿಗರ ಹವ್ಯಾಸವಾಗಿದೆ. ಕನ್ನಡಿಗರ ಒಳ್ಳೆಯ ಗುಣಗಳನ್ನು ಸಹಿಸಲಾಗದವರ ಮನಸ್ಥಿತಿಯೇ ಹೀಗೆನ್ನಬಹುದು. ಕನ್ನಡ ನೆಲ, ಜಲ, ಭಾಷೆಗೆ ಇಂದು ಮಾತ್ರ ಅವಮಾನವಾಗುತ್ತಿಲ್ಲ ಬಹಳ ಹಿಂದಿನಿಂದಲೂ ಈ ರೀತಿಯ ಅವಮಾನ ನಿರಂತರವಾಗಿ ಜರುಗುತ್ತಿದೆ. ಯಾವುದಾದರೂ ಒಂದು ರೀತಿಯಲ್ಲಿ ಕನ್ನಡಿಗರನ್ನು ತುಳಿಯುವ ಪ್ರಯತ್ನ ಅನ್ಯರಿಂದ ನಡೆಯುತ್ತಲೇ ಇದೆ. ದೇಶದ ಎಲ್ಲಾ ರಾಜ್ಯಗಳಿಂದ ಕರ್ನಾಟಕದಲ್ಲಿ ಬಂದು ನೆಲೆಸುವ ಭಾರತೀಯರು ಕರುನಾಡಿಗರೆಂದರೆ ಹೋದಲೆಲ್ಲಾ ಕಿಡಿಕಾರುವರು. ಅವರು ಕಿಡಿ ಕಾರಿದಂತೆಲ್ಲಾ ಕನ್ನಡಿಗರು ಹೆಚ್ಚು ಹೆಚ್ಚು ಉರಿದಿದ್ದೇ, ಬೆಳೆದಿದ್ದೇ ಚರಿತ್ರೆಯಾಗಿದೆ. ತಮಿಳುನಾಡು ರಾಜ್ಯ ಕರ್ನಾಟಕದೊಂದಿಗೆ ಜಲವಿವಾದವಿಡಿದು ಹಗ್ಗಜಗ್ಗಾಟಕ್ಕೆ ನಿಂತರೆ, ಮಹಾರಾಷ್ಟ್ರವು ಭೂ-ವಿವಾದವನ್ನಿಡಿದು ಕರ್ನಾಟಕವನ್ನು ಹರಿದು ಹಂಚಲು ಸೆಣಸಾಡುತ್ತಿದೆ. *”ಅಂಬೇಡ್ಕರ್”* ಅವರು ಹೇಳಿದ ಮಾತು ಸತ್ಯ *”ಇತಿಹಾಸವನ್ನು ತಿಳಿಯದೆ ಇತಿಹಾಸವನ್ನು ಸೃಷ್ಟಿಸಲಾಗುವುದಿಲ್ಲ”

. ನಮ್ಮ ಕನ್ನಡ ಭೂಮಿಕೆಯ ಚರಿತ್ರೆಯನ್ನು ಅರಿಯದೇ ಈಗಿನ ಕನ್ನಡಿಗರು ಅಷ್ಟೇ!. ಮತ್ತದೇ ಭದ್ರತೆಯ ಚಳವಳಿಯನ್ನು ಗೆಲುವಾಗಿಸಿಕೊಳ್ಳಲು ಅಸಾಧ್ಯ. ಏಕೀ ಮಾತೆಂದರೆ ಬಹಳ ಹಿಂದೆ ಚಳವಳಿಗಳೆಂದರೆ ಅದರ ಸ್ವರೂಪಗಳು ನ್ಯಾಯ, ನಿಷ್ಠೆ, ಕರ್ಮ ಬಲಿದಾನಗಳಿಂದ ಕೂಡಿತ್ತು. ಪ್ರಾಮಾಣಿಕತೆಯ ಬೇಡಿಕೆ, ಹೋರಾಟವಿತ್ತು. ಆದರೆ ಈಗ ಅಧೈರ್ಯ, ನಮ್ಮವರೇ ನಮಗೆ ಬೆನ್ನಿಗೆ ಚೂರಿ ಹಾಕುವ ಗುಣ, ಹಿಂಜರಿಕೆ ಮನೋಭಾವನೆ, ಒಬ್ಬರು ಇನ್ನೊಬ್ಬರಿಗೆ ಕೈಯೊಡ್ಡಿ ನಿಲ್ಲುವ ಗುಣ, ಇನ್ನೂ ಏನೇನೋ ಬೇಡದ ಗುಣಗಳೆಲ್ಲಾ ಪ್ರಸ್ತುತ ತುಂಬಿಹೋಗಿದೆ. ಕೆಲ ಅಧಿಕಾರ ವರ್ಗ ಅಂತೇನಿದೆ ಅದರದ್ದೇ ಹೆಚ್ಚು ಘನ ಪಾಲು ನಾನು ಮೇಲೆ ಹೇಳಿದ ಗುಣಗಳಲ್ಲಿ ಮುಳುಗಿರುವುದು. ಶ್ರೀಸಾಮಾನ್ಯ ಬಂಧುಗಳೇ ಈ ವಿಚಾರದಲ್ಲಿ ಇನ್ನೂ ಹೆಚ್ಚು ಪ್ರಾಮಾಣಿಕ ಬದ್ಧರಾಗಿ ಕನ್ನಡ ತಾಯಿಯ ಸೇವೆ ಮಾಡುತ್ತಿರುವವರು*. ರಾಷ್ಟ್ರಕವಿ ಕುವೆಂಪು ಅವರು ಈ *”ಶ್ರೀಸಾಮಾನ್ಯ” ಎಂಬ ಪದಪ್ರಯೋಗವನ್ನು ಮೊದಲು ಧ್ವನಿ ಮೊಳಗುತ್ತಾರೆ. ಶ್ರೀಸಾಮಾನ್ಯನೇ ಭಗವತ್ ಮಾನ್ಯನು. ಭಗವಂತನಿಗೆ ಯಾರು ಪ್ರಿಯನೆಂದರೆ ಶ್ರೀಸಾಮಾನ್ಯನೇ ಭಗವಂತನಿಗೆ ಪ್ರಿಯನಾದವನು. ಯಾರಿವರು ಶ್ರೀಸಾಮಾನ್ಯರು? ನಮ್ಮ ಆಟೋಚಾಲಕ ಬಂಧುಗಳು, ದಿನಗೂಲಿ ಕಾರ್ಮಿಕರು, ಮಧ್ಯಮ ವರ್ಗ ನಾಗರಿಕರು, ಸಾಹಿತಿಗಳು, ಕನ್ನಡಪರ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು. ಪ್ರಾಮಾಣಿಕ ಪತ್ರಕರ್ತ ಮಿತ್ರರು, ಸರ್ಕಾರಿ ಶಾಲಾ-ಕಾಲೇಜಿನ ಗುರುಹಿರಿಯರು.

ವಿಶ್ವ ಭಾಷೆಗಳ ಲಿಪಿಗಳ ರಾಣಿ ಕಸ್ತೂರಿ ಕನ್ನಡ – Kannada news- suddiDina (ಸುದ್ದಿ  ದಿನ) | kannada Live news | Karnataka news | ಕನ್ನಡ ನ್ಯೂಸ್ | Kannada News  Portal

ಮಿಕ್ಕವರೆಲ್ಲಾ ಅಧಿಕಾರ ವ್ಯಾಪ್ತಿಯಲ್ಲಿ ಬಂಧಿಯಾಗಿರುವ ಮಿಡತೆಗಳು.* ಅಲ್ಲಿಯೂ ನಾಡಿನ ಅಭಿಮಾನವಿರುವ ಕೆಲವರು ಹಲವರ ಮಧ್ಯೆ ಮರೆಯಾಗಿಬಿಟ್ಟಿದ್ದಾರೆ. ಈ ಶ್ರೀಸಾಮಾನ್ಯರ ಕುರಿತು ಅಭಿಮಾನ ವ್ಯಕ್ತಪಡಿಸಲು ಸಾಕಷ್ಟು ಕಾರಣಗಳಿದೆ ಆದರೆ ಒಂದು ಕಾರಣ ಈ ಸಂಧರ್ಭಕ್ಕೆ ಸೂಕ್ತವಾಗಿದೆ. ಒಂದು ವಾರದ ಹಿಂದೆ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಶಿವಸೇನೆ ಸಂಘಟನೆಯವರು ಕರ್ನಾಟಕದ ಬಾವುಟಕ್ಕೆ ಬೆಂಕಿ ಹಚ್ಚಿರುವುದು ಮತ್ತು ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಕಪ್ಪು ಮಸಿ ಬಳಿದು  ತಪ್ಪನ್ನೆಸಗಿರುವ ಸಂಗತಿ ಎಲ್ಲರಿಗೂ ತಿಳಿದ ಹಸಿಯಾದ ಸುದ್ದಿ. ಇದಕ್ಕೆ ಮೊದಲು ಧ್ವನಿ‌ ಎತ್ತಿದವರೇ ನಮ್ಮ ಶ್ರೀಸಾಮಾನ್ಯರು. ಕನ್ನಡನಾಡಿನ ಸಂಘ-ಸಂಸ್ಥೆಗಳು, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಯುವಕರು, ವಿದ್ಯಾರ್ಥಿಗಳು. ಏಕೆ ಇವರು ಮಾತ್ರ ಕನ್ನಡಿಗರು ಮಿಕ್ಕವರೆಲ್ಲಾ ಹೊರನಾಡಿಗರೇ?ಈ ರೀತಿಯ ನೆಲ, ಜಲ, ಭಾಷೆ, ಪ್ರಾದೇಶಿಕ ಸ್ವಾಭಿಮಾನಕ್ಕೆ  ಮಸಿಬಳಿಯುವ ಕೆಲಸ ಮಾಡಿರುವ ಯಾವುದೇ ಸುದ್ದಿ ರಾಜ್ಯದೆಲ್ಲೆಡೆ ಎಲ್ಲೇ ಕಂಡು ಬರಲಿ ಶ್ರೀಸಾಮಾನ್ಯನೇ ಮೊದಲು, ಸರ್ಕಾರ ಕೊನೆಯದಾಗಿ ಕಾಣಿಸಿಕೊಳ್ಳುತ್ತದೆ. ಸರ್ಕಾರವನ್ನು ರಚನೆ ಮಾಡಿರುವುದು, ವಿವಿಧ ಭದ್ರತಾ ವ್ಯವಸ್ಥೆಗಳನ್ನು ರಚನೆ ಮಾಡಿರುವುದು ನಾಡಿನ ಪರವಾಗಿ, ಭಾಷೆಯ ಪರವಾಗಿ, ಜನತೆಯ ಪರವಾಗಿ ರಕ್ಷಣಾತ್ಮಕವಾಗಿ ಕೆಲಸ ನಿರ್ವಹಿಸಲಿ ಎಂದು ಕೇವಲ ಅಧಿಕಾರರೂಢರಾಗಿ ಐಷಾರಾಮಿ ಜೀವನ ನಡೆಸುವುದಕ್ಕಲ್ಲ.

ಸರ್ಕಾರವೇ ಆಗಲಿ ಅದರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಇತರ ರಕ್ಷಣಾ ಇಲಾಖೆಗಳೇ ಆಗಲಿ ನೀವೂ ಕೂಡ ಕನ್ನಡಿಗರು ಎಂಬುವುದನ್ನು ಮರೆಯದಿರಿ. ಓಟು ಕೇಳುವಾಗ ಎಲ್ಲವೂ ನೆನಪಾಗುವ ಇವರಿಗೆ, ಅಧಿಕಾರಕ್ಕೆ ಮುಂದಾಳಾಗಿ‌ ನಿಲ್ಲುವ ಇವರಿಗೆ ಕನ್ನಡ ಭಾಷೆ, ನೆಲ ಮತ್ತು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ಆಗುವ ಅವಮಾನದಲ್ಲಿ ಮಾತ್ರ ಮರೆವಿನಲ್ಲಿ ಮರೆಯಾಗಿರುತ್ತಾರೆ, ಹಿಂದಾಳಾಗಿ ನಿಲ್ಲುವ ಮನಸ್ಥಿತಿಯನ್ನು ರೂಢಿಸಿಕೊಂಡಿರುತ್ತಾರೆ. ಹಲವಾರು ಒತ್ತಾಯಗಳು ಶ್ರೀಸಾಮಾನ್ಯರಿಂದ ಬಂದಾಗ ಧ್ವನಿ ಎತ್ತುತ್ತಾರೆ. ನಾಚಿಕೆಯಾಗಬೇಕು ಈ ರೀತಿಯಲ್ಲಿ ಹಿಂಜರಿದು ಕಡೆಯಲ್ಲಿ ಬರುವವರಿಗೆ. ಯಾವ ಸಂವಿಧಾನವೂ ಕೂಡ ಹೇಳಿಲ್ಲ ಈ ರೀತಿಯ ವಿಚಾರದಲ್ಲಿ ಮುಂದಾಗಿ ಕಾನೂನಾತ್ಮಕ ಕ್ರಮಕೈಗೊಳ್ಳದೇ ತಟಸ್ಥವಾಗಿರಿ ಎಂದು. ಸಮಾನಧರ್ಮ, ಸಮಾನ ಹಕ್ಕು, ಸಮಾನ ನ್ಯಾಯ, ಎಲ್ಲವೂ ಸಮಾನ ಎನ್ನುವಾಗ ಕನ್ನಡನಾಡಿನ ಗೌರವಕ್ಕೆ, ಸ್ವಾಭಿಮಾನಕ್ಕೆ, ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಯಾರ ಮುಚ್ಚಳಿಕೆಯೂ ಬೇಕಿಲ್ಲ. ಸರ್ಕಾರವೇ ನೇರವಾಗಿ ಕ್ರಮ ಕೈಗೊಳ್ಳಬಹುದು. ಈ ರೀತಿಯದ್ದಕ್ಕೆ ಮುಂದೆ ಬರಬೇಡಿ ಅಧಿಕಾರ ಬಂಧುಗಳೇ, ಯಾರಾದರೂ ದಾರಿಯಲ್ಲಿ ಬಡ ರೈತ, ಕೂಲಿ‌ ಕಾರ್ಮಿಕ, ನಿರುದ್ಯೋಗಿ ಯುವಕ, ಶಿರಕವಚ ಧರಿಸದೇ, ಮೋಟಾರು ಸೈಕಲ್ ಪರವಾನಗಿ‌ ಇಲ್ಲದೇ ಸಂಚಾರ ಮಾಡುತ್ತಿದ್ದಾನೆ ಎಂದ ಕ್ಷಣದಲ್ಲೇ ಶುಲ್ಕ ವಸೂಲಿ ಮಾಡಲು ಮುಂದಾಗಿ ಇದಕ್ಕೆ ಮಾತ್ರ ಯಾವ ಮುಚ್ಚಳಿಕೆಯೂ ಬೇಕಾಗಿಲ್ಲ, ಶಹಭಾಶ್! ನಿಮ್ಮ ಈ ರೀತಿಯ ಮುಂದಾಗುವಿಕೆಗೆ. ಹೋರಾಟ ಅಥವಾ ಚಳವಳಿಗಳು ತೀವ್ರ ಸ್ವರೂಪಕ್ಕೆ ಹೋಗದಂತೆ ತಡೆಯುವಲ್ಲಿ ನಿಮ್ಮ ಪಾತ್ರ ಅಮೂಲ್ಯ ಅದಕ್ಕೆ ನಮ್ಮದೊಂದು ಸಾವಿರ ಶರಣು.

ಆದರೆ ನಮ್ಮವರು ನಮಗಾಗಿ ಹೋರಾಡುವಾಗ ನಮ್ಮವರೇ ಆದ ನೀವುಗಳು ನಮ್ಮವರನ್ನು ಬಂಧಿಸಿ ಅವಮಾನ ಮಾಡಬೇಡಿ. ನಿಜವಾದ ಅಪರಾಧಿಗಳನ್ನು ಬಹುಬೇಗ ಗುರುತಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ. ಇನ್ಯಾವತ್ತು ಈ ರೀತಿ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ಅಪರಾಧಿಗಳಿಗೆ ತಕ್ಕ ಕಾನೂನಾತ್ಮಕ ಶಿಕ್ಷೆ ನೀಡಿ. ನಿಮ್ಮ ವಿದ್ಯಾರ್ಹತೆಯ ಮಟ್ಟದಲ್ಲಿ ಸಮಾಜಕ್ಕೆ ನೀವು ಸಮಾಜ ಸುಧಾರಕರಾಗಿ ಭೋಧಿಸಬಹುದು ನಿಮ್ಮ ಮಾತಿಗೂ ನಿಮ್ಮ ಜ್ಞಾನಕ್ಕೂ ನಮ್ಮಲ್ಲಿ ಮಾನ್ಯತೆ ಸದಾ ಇರುತ್ತದೆ. ಆದರೆ ನಿಮ್ಮಿಂದ ಈ ರೀತಿಯದ್ದು ಹೆಚ್ಚು ಕನ್ನಡಿಗರ ಪರ ಮೊದಲಾಗಿ ಬರುವುದೇ ಇಲ್ಲ. ಕಡೆಯದಾಗಿ ಬರುವಾಗ ಬೇಸರವಾಗದೇ ಮತ್ತೇನು ಸಂತೋಷವಾಗುತ್ತದೆಯೇ! ಈಗಲಾದರೂ ಬಂದರಲ್ಲ ಎಂದು ಸಮಾಧಾನ ಪಟ್ಟಿಕೊಳ್ಳುವುದಷ್ಟೇ ಎಂದಿಗೂ ನಮ್ಮ ಪಾಲಾಗಿರುತ್ತದೆ.ಇನ್ನಾದರೂ ತಪ್ಪಿತಸ್ಥರು ಯಾರೇ ಇರಲಿ, ನಮ್ಮವರೇ ಆಗಲಿ ಅಥವಾ ಹೊರಗಿನವರೇ ಆಗಲಿ ಕಾನೂನಿನ ಜರೂರು ಕ್ರಮ ಅಗತ್ಯ. ನಾಡು, ನುಡಿ ಎನ್ನುವ ವಿಚಾರದಲ್ಲಂತೂ ಮೊದಲಿಗರಾಗಿ ನಮ್ಮ ಸರ್ಕಾರವಿದ್ದರೆ ನಮ್ಮ ಹೆಮ್ಮೆ. ಶ್ರೀಸಾಮಾನ್ಯನೇ ಕನ್ನಡತಾಯಿಯ ವರಪುತ್ರನಾಗಿರುವುದು ಇಲ್ಲಿಗೆ ಸಾಕು ಅಧಿಕಾರ ಸ್ನೇಹಿಗಳೇ ನಿಮ್ಮದೇ ಹೆಚ್ಚು ಭಾಗವಹಿಸುವಿಕೆ ಹೆಚ್ಚು ಅಗತ್ಯ ಮರೆಯದಿರಿ. ನೀವು‌ ಮರೆತರೂ ಶ್ರೀಸಾಮಾನ್ಯ ಮರೆಯುವುದಿಲ್ಲ ಹಾಗಾಗಿಯೇ ಶ್ರೀಸಾಮಾನ್ಯನೇ ಕನ್ನಡ ತಾಯಿಯ ಮಾನ್ಯನು ನೆನಪಿಡಿ.


*ಚಿಮಬಿಆರ್ (ಮಂಜುನಾಥ ಬಿ.ಆರ್)

ಯುವಸಾಹಿತಿ, ಸಂಶೋಧಕ, ಚಿಂತಕ.

ಹೆಚ್.ಡಿ.ಕೋಟೆ ಮೈಸೂರು.**ದೂರವಾಣಿ ಸಂಖ್ಯೆ:-

8884684726 Gmail I’d:-manjunathabr709@gmail.com*