ಚಾಮರಾಜನಗರ: ಶ್ರೀ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ರಾಜ ಗೋಪುರ, ವಿಮಾನ ಗೋಪುರಗಳ ಕಳಶ, ಕುಂಭಾಭಿಷೇಕ ಮಹೋತ್ಸವವು ಜೂನ್ ೪ ರಿಂದ ೬ ರವರೆಗೆ ನಡೆಯಲಿದೆ.
ಶ್ರೀ ಚಂಡಿಕೇಶ್ವರಸ್ವಾಮಿ ವಿಗ್ರಹ ಮತ್ತು ಭಕ್ತ ವಿಗ್ರಹಗಳ ಪ್ರತಿಷ್ಠಾ ಕುಂಭಾಭಿಷೇಕ ಮಹೋತ್ಸವ ಹಾಗೂ ನೂತನ ರಥ ಪ್ರತಿಷ್ಠೆ ಕಾರ್ಯಕ್ರಮಗಳು ಜರುಗಲಿವೆ.
ಜೂನ್ ೪ರಂದು ಪಂಚಮಿ ಪುಷ್ಯ ನಕ್ಷತ್ರ ಸಂಜೆ ೫.೩೦ಕ್ಕೆ ಮೂಲ ದೇವತಾ ಪ್ರಾರ್ಥನೆ ಗಣಪತಿ ಪೂಜೆ ಪುಣ್ಯಾಹ ಪಂಚಗವ್ಯ ಖುತ್ವಿಕ್ ವರುಣ ರಾಕ್ಷೆಘ್ನ ಪೂಜಾ ಹೋಮ ಮತ್ತು ವಾಸ್ತು ಪೂಜೆ ಹೋಮ, ಪರಿಯಘ್ನಕರಣ, ಅಂಕುರಾರ್ಪಣೆ ನಡೆಯಲಿದೆ.
ಜೂನ್ ೫ರಂದು ಷಷ್ಠಿ ಆಶ್ಲೇಷ ನಕ್ಷತ್ರ ಬೆಳಿಗ್ಗೆ ೮.೩೦ ಗಂಟೆಗೆ ಬಿಂಬಶುದ್ದಿ ನೂತನ ವಿಗ್ರಹಗಳ ನೇತ್ರೋನ್ಮಿಲನ, ಜಲಾಧಿವಾಸ, ಕಳಶ ಸ್ಥಾಪನೆ, ಅಗ್ನಿ ಪ್ರತಿಷ್ಠಾಪನೆ, ಮೂಲ ಮಂತ್ರ ಹೋಮ, ರಾತ್ರಿ ದಾನ್ಯಾಧಿವಾಸ, ಶಯ್ಯಾದಿವಾಸ ಅಧಿವಾಸ ಹೋಮಗಳು, ಸ್ಪರ್ಶ ಹೋಮ, ಪೂರ್ವಕ, ಅಷ್ಟಬಂಧನ ಜರುಗಲಿವೆ.
ಜೂನ್ ೬ರಂದು ಸಪ್ತಮಿ ಮಖಾ ನಕ್ಷತ್ರ ಪ್ರಾತಃಕಾಲ ಬೆಳಿಗ್ಗೆ ೬.೩೦ಕ್ಕೆ ಪುಣ್ಯಾಹ, ಕಳಶಾರ್ಚನೆ, ಪ್ರಾಣ ಪ್ರತಿಷ್ಠೆ, ನಾಡಿಸಂಧಾನ, ತತ್ವನ್ಯಾಸ, ಕಳಾನ್ಯಾಸ, ಕಳಾಹೋಮ ಪೂರ್ವಕ ಕಳಾಶ ಆವಾಹನೆ, ಪೂರ್ಣಾಹುತಿ ಕುಂಭ ಉದ್ವಾಸನೆ ನಡೆಯಲಿದೆ. ಬೆಳಿಗ್ಗೆ ೧೦ ರಿಂದ ೧೦.೩೦ ರೊಳಗೆ ಸಲ್ಲುವ ಶುಭ ಕಟಕ ಲಗ್ನದಲ್ಲಿ ಕುಂಭಾಭಿಷೇಕ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
