ಕೃಷ್ಣರಾಜಪೇಟೆ: ಒಂದೆಡೆ ಮನುಷ್ಯನನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವ ಸಲುವಾಗಿ ಹೋರಾಟ ನಡೆಯುತ್ತಿದ್ದರೆ ಮತ್ತೊಂದೆಡೆ ದೇಗುಲಗಳಲ್ಲಿ ಪ್ರಾರ್ಥನೆ, ವಿಶೇಷ ಪೂಜೆಗಳು ಕೂಡ ನಡೆಯುತ್ತಿದ್ದು, ಅದರಂತೆ ಕೊರೋನಾ ಎರಡನೇ ಅಲೆಯ ಭೀತಿಯನ್ನು ಹೋಗಲಾಡಿಸುವಂತೆ ಪ್ರಾರ್ಥಿಸಿ ತಾಲೂಕಿನ ಭೂವರಹನಾಥಸ್ವಾಮಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗಿದೆ.
ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ಸ್ವಾಮೀಜಿ ಅವರು ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವರಹನಾಥಕಲ್ಲಹಳ್ಳಿಯ ಶ್ರೀಲಕ್ಷ್ಮೀ ಸಮೇತನಾದ ಭೂವರಹನಾಥಸ್ವಾಮಿ ದೇವಾಲಯದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀದೇವಿ ಭೂದೇವಿ ಸಮೇತನಾದ ಶ್ರೀ ವೆಂಕಟರಮಣಸ್ವಾಮಿಯ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಉತ್ಸವ ಮೂರ್ತಿಗಳಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ, ಹೋಮ ಹವನ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕೊರೋನಾ ಮಹಾಮಾರಿಯ ಅಟ್ಟಹಾಸವು ಜೋರಾಗಿದೆ. ಕೊರೋನಾ ಎರಡನೇ ಅಲೆಯ ತೀವ್ರತೆಯು ಹೆಚ್ಚಾಗಿರುವುದರಿಂದ ಜನಸಾಮಾನ್ಯರು ಕಡ್ಡಾಯವಾಗಿ ಮಾಸ್ಕನ್ನು ಧರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಜೀವನ ನಡೆಸುವುದು ಅನಿವಾರ್ಯವಾಗಿದೆ. ೧೮ವರ್ಷ ತುಂಬಿರುವ ಪ್ರತಿಯೊಬ್ಬರೂ ಕೋವ್ಯಾಕ್ಸಿನ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸಿಕೊಂಡು ಕೊರೋನಾ ವಿರುದ್ಧ ಸಂಘಟಿತ ಹೋರಾಟ ನಡೆಸಬೇಕು. ವೈಯಕ್ತಿಕ ಸ್ವಚ್ಛತೆಗೆ ಒತ್ತು ನೀಡಿ ಎಚ್ಚರಿಕೆಯಿಂದ ಜೀವನ ನಡೆಸುವುದು ಸೇರಿದಂತೆ ನಮ್ಮ ಆಹಾರ ಪದ್ಧತಿಯೂ ಕೂಡ ಬದಲಾಗಬೇಕಿದೆ. ಕೊರೋನಾ ಸೋಂಕನ್ನು ತಡೆಯುವ ಶುಂಠಿ, ಮೆಣಸು, ನಿಂಬೇಹಣ್ಣು, ಪುದಿನಾ, ಬೆಲ್ಲಗಳಿಂದ ಮಾಡಿರುವ ಕಷಾಯದಂತಹ ಪಾನೀಯ ಹಾಗೂ ಬಿಸಿನೀರನ್ನು ಹೆಚ್ಚಾಗಿ ಸೇವಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ನೂರ್ಕಾಲ ಆರೋಗ್ಯವಂತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಹೇಳಿದರು.