ಮೈಸೂರು: ಸಮಾಜದ ನೋವು,ಕಷ್ಟಗಳನ್ನು ಬಹಳ ಹತ್ತಿರದಿಂದ ನೋಡಿರುವ ಡಾ.ಜಿ.ಪರಮೇಶ್ವರ್ ಸರ್ವ ಜನಾಂಗ,ಧರ್ಮಕ್ಕೂ ನ್ಯಾಯ ಒದಗಿಸುವಂತಹ ಪ್ರಣಾಳಿಕೆ ತಯಾರಿಸುವ ವಿಶ್ವಾಸವಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಪ್ರಣಾಳಿಕೆಯ ಅಂಶಗಳು ಜನರ ಮನತಲುಪಲಿದೆ ಎಂದು ಕೆಪಿಸಿಸಿ ವಕ್ತಾರ,ಮೈಲ್ಯಾಕ್ ಮಾಜಿ ಅಧ್ಯಕ್ಷ ಎಚ್.ಎ.ವೆಂಕಟೇಶ್ ಹೇಳಿದರು. ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಾ.ಜಿ.ಪರಮೇಶ್ವರ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳ ಬಳಗದಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.
ಪರಮೇಶ್ವರ್ ಹೆಸರಿನಲ್ಲಿ ಅರ್ಚಕರು ಅರ್ಚನೆ ಮಾಡಿದ ಬಳಿಕ ಹೊರ ಬಂದು ಇಡುಗಾಯಿಗಳನ್ನು ಒಡೆಯಲಾಯಿತು. ಬಳಿಕ ಸಾರ್ವಜನಿಕರಿಗೆ ಸಿಹಿ ವಿತರಿಸಿದ ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಮಾತನಾಡಿ, ಡಾ.ಜಿ.ಪರಮೇಶ್ವರ್ ಅವರು ಅತಿರೇಕವಿಲ್ಲದ, ಸಮತೂಕದ,ಸಮಾನತೆಯ ಸಮಾಜ ನಿರ್ಮಾಣಮಾಡುವ ಕನಸುಗಾರನ ವ್ಯಕ್ತಿತ್ವ ಹೊಂದಿದ್ದಾರೆ. ನೊಂದವರ ಅಂತರಂಗದ ನೋವುಗಳನ್ನು ಅರಿತಿರುವ ಅವರು ಎಲ್ಲರನ್ನೂ ಸಮಾನವಾಗಿ ತಗೆದುಕೊಂಡು ಹೋಗುವ ನಾಯಕತ್ವದ ಗುಣ ಹೊಂದಿದ್ದಾರೆ ಎಂದರು.
ಕಾಂಗ್ರೆಸ್ ಕರ್ನಾಟಕದಲ್ಲಿ ಅಧಿಕಾರ ಹಿಡಿಯುವ ಎಲ್ಲ ರೀತಿಯ ವಾತಾವರಣ ನಿರ್ಮಾಣವಾಗಿದೆ. ಜನಸಾಮಾನ್ಯರಿಂದ ಹೊರ ಬರುತ್ತಿರುವ ಪ್ರತಿಕ್ರಿಯೆ ಮತ್ತು ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವದಲ್ಲಿ ಸೇರಿದ್ದ ಜನಸ್ತೋಮವೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಡಾ.ಜಿ.ಪರಮೇಶ್ವರ್ ಸಚಿವರಾಗಿ, ಉಪಮುಖ್ಯಮಂತ್ರಿಯಾಗಿ,ಎಂಟು ವರ್ಷಗಳ ಕಾಲ ಸುದೀರ್ಘ ಕೆಪಿಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಅವರ ಅನುಭವನ್ನು ಗುರುತಿಸಿ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವುದು ತುಂಬಾ ಅನುಕೂಲವಾಗಿದೆ. ಒಂದು ಪಕ್ಷಕ್ಕೆ ಚುನಾವಣಾ ಪ್ರಣಾಳಿಕೆ ಮುಖ್ಯವಾಗಿದೆ. ಎಲ್ಲ ವರ್ಗಗಳ ಹಿತಕಾಯುವ ಜತೆಗೆ ರಾಜ್ಯದ ಸಮಗ್ರ ಅಭಿವೃದ್ಧಿಗೆ ಪೂರಕವಾಗುವ ಯೋಜನೆಗಳನ್ನು ರೂಪಿಸುವ ವಿಶ್ವಾಸವಿದೆ ಎಂದರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಜನರನ್ನು ಒಡೆದಾಳುವ ಮತ್ತು ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದೆ. ಶಾಂತಿಯಿಂದ ಜನರು ನೆಮ್ಮದಿಯಿಂದ ಬದುಕಲು ಬಿಡುತ್ತಿಲ್ಲ.ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ತೋರದ ಸರ್ಕಾರದ ನಿಲುವಿನಿಂದಾಗಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್,ಡಾ.ಜಿ.ಪರಮೇಶ್ವರ್ ಮೊದಲಾದ ನಾಯಕರ ಸಂಘಟನಾ ಶಕ್ತಿಯ ಫಲವಾಗಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದು, ಬಿಜೆಪಿ ಸರ್ಕಾರ ಶೀಘ್ರದಲ್ಲೇ ತೊಲಗಿ ಸಮಾಜದ ಒಳಿತನ್ನು ಬಯಸುವ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಧರು. ಕಾಂಗ್ರೆಸ್ ಹೈಕಮಾಂಡ್ ಡಾ.ಜಿ.ಪರಮೇಶ್ವರ್ ನಾಯಕತ್ವವನ್ನು ಮೆಚ್ಚಿ ನೇಮಕ ಮಾಡಿದೆ. ಇಂತಹ ವಿವೇಕಪೂರ್ಣ ತೀರ್ಮಾನ ಕೈಗೊಂಡಿದ್ದಕ್ಕಾಗಿ ಹೈಕಮಾಂಡ್‌ಗೆ ಕೃತಜ್ಞತೆ ಸಲ್ಲಿಸುವೆ ಎಂದರು. ಮೈಸೂರು ಜಿಲ್ಲಾ ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗದ ಅಧ್ಯಕ್ಷ ಜಿ.ಮಂಜುನಾಥ್ ಮಾತನಾಡಿ ರಾಷ್ಟ್ರ,ರಾಜ್ಯ ಮಟ್ಟದಲ್ಲಿ ಪರಮೇಶ್ವರ್ ಅವರಿಗೆ ಜನರ ಸೇವೆ ಸಲ್ಲಿಸುವಂತಹ ಸ್ಥಾನಮಾನ ಸಿಗಲೆಂದು ಹಾರೈಸಿದರು. ವಕೀಲ ಕಾಂತರಾಜು, ಮುಖಂಡರಾದ ಮಂಜುನಾಥ್, ತಿಮ್ಮಯ್ಯ, ಸೋಮಶೇಖರ್,ಶಿವಕುಮಾರ್, ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರ ಕೆ.ಮಹೇಶ್ ಇನ್ನಿತರರು ಹಾಜರಿದ್ದರು.