ಭಾರತ ದೇಶದ ಸಿನಿಮಾ ರಂಗದಲ್ಲಿ ಹತ್ತಾರು ಭಾಷೆಗಳಲ್ಲಿ ನೂರಾರು ಹಿನ್ನೆಲೆ ಗಾಯಕರು ಸಾವಿರಾರು ಚಿತ್ರಗೀತೆಗಳನ್ನು ಹಾಡುವ ಮೂಲಕ ಲಕ್ಷಾಂತರ ಜನರ ತನುಮನ ಗೆದ್ದು ಅತ್ಯಂತ ಜನಪ್ರಿಯ ಗಾಯಕರೆನಿಸಿದ್ದಾರೆ. ಇವರ ಪೈಕಿ ದಕ್ಷಿಣ ಭಾರತದ ಹಿನ್ನೆಲೆ ಗಾಯಕರಾದ ಶಿರ್ಗಾಳಿಗೋವಿಂದರಾಜ್ ಘಂಟಸಾಲ ಟಿ.ಎಂ.ಸೌಂದರರಾಜನ್ ಪಿ.ಬಿ.ಶ್ರೀನಿವಾಸ್ ಕೆ.ಜೆ.ಯೇಸುದಾಸ್ ಎಸ್.ಪಿ. ಬಾಲಸುಬ್ರಮಣ್ಯಂ ಎಂ.ಬಾಲಮುರಳಿಕೃಷ್ಣ ಪಂಡಿತ್‌ಭೀಮಸೇನಜೋಷಿ ಮುಂತಾದ ಖ್ಯಾತನಾಮರು ಅಗ್ರಪಂಕ್ತಿಯಲ್ಲಿದ್ದು ಸಂಗೀತ-ಗಾಯನ ಲೋಕದ ಮೈಲಿಗಲ್ಲುಗಳಾದರು. ಈ ಗುಂಪಿನಲ್ಲಿ ತುಸು ವಿಶೇಷ ಎನಿಸುವ ಒಬ್ಬರು ಶಾಸ್ತ್ರೀಯವಾಗಿ ಸಂಗೀತ ವಿದ್ಯಾಭ್ಯಾಸ ಮಾಡದೆಲೆ ಕೇವಲ ಬಾತ್‌ರೂಂ ಸಿಂಗರ್ ಆಗಿದ್ದು ಕಾಲಕ್ರಮೇಣ ಪ್ರಖ್ಯಾತ ಹಿನ್ನೆಲೆಗಾಯಕರಾಗಿ ವಿಶ್ವದಾಖಲೆ ನಿರ್ಮಿಸಿ ಭಾರತೀಯ ಚಲನಚಿತ್ರ ರಂಗದ ಸುವರ್ಣ ಪುಟಗಳ ಇತಿಹಾಸ ಪುಸ್ತಕವನ್ನು ಸೇರಿದ ಇವರೇ ಗಾನಗಂಧರ್ವ ಎಸ್.ಪಿ.ಬಾಲಸುಬ್ರಮಣ್ಯಂ!

೪ನೇ ಜೂನ್ ೧೯೪೬ರಂದು ಆಂಧ್ರ ಪ್ರದೇಶದ ನೆಲ್ಲೂರಿನಲ್ಲಿ ಜನಿಸಿದ ಇವರ ಮೂಲ ಹೆಸರು ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಮಣ್ಯಂ! ಈತ ಕನ್ನಡಕ್ಕೂ ಕಂಠ ನೀಡುವ ಮೂಲಕ ತಮ್ಮ ಜೀವನವನ್ನು ಗಾನಕಲ್ಪವೃಕ್ಷ ಮಾಡಿಕೊಂಡರು. ಮೂಲತಃ ತೆಲುಗಿನ ಗಾನಗಂಧರ್ವರಾದ ಎಸ್.ಪಿ.ಬಿ. ತಮ್ಮ ಮಾತೃಭಾಷೆಯ ನಂತರ ಅತಿಹೆಚ್ಚು ಇಷ್ಟಪಟ್ಟ ಭಾಷೆಯೆ ಕನ್ನಡ! ಕನ್ನಡ ಹಿಂದಿ ಮರಾಠಿ ತೆಲುಗು ತಮಿಳು ಮಲಯಾಳಂ ತುಳು ಕೊಂಕಣಿ ಕೊಡವ ಗುಜರಾತಿ ಬಂಗಾಳಿ ಇಂಗ್ಲಿಷ್ ಮುಂತಾದ ಹದಿನಾರು ಭಾಷೆಗಳ ೫೦ ಸಾವಿರಕ್ಕು ಮಿಕ್ಕು ಚಿತ್ರಗೀತೆ ಭಕ್ತಿಗೀತೆ ಭಾವಗೀತೆ ಜಾನಪದಗೀತೆ ಜನಪ್ರಿಯಗೀತೆ ಮುಂತಾದ ಪ್ರಾಕಾರಗಳಲ್ಲಿ ಹಾಡುವ ಮೂಲಕ ’ಗಿನ್ನಿಸ್’ ಪ್ರಪಂಚ ದಾಖಲೆಯನ್ನು ಸೃಷ್ಟಿಸಿದ್ದರು.

ಎಸ್.ಪಿ.ಬಾಲುರವರು ತಮ್ಮ ೨೧ನೇ ವಯಸ್ಸಲ್ಲಿ ಅವರ ಸಂಬಂಧಿಕರಾಗಿದ್ದ ಖ್ಯಾತ ಸಂಗೀತ ನಿರ್ದೇಶಕ ಎಂ.ರಂಗರಾವ್ ರವರ ಶಿಫ಼ಾರಸ್ಸಿಂದ ನಕ್ಕರೆಅದೇಸ್ವರ್ಗ ಕನ್ನಡ ಸಿನಿಮಾ ಮೂಲಕ ಚಿತ್ರಲೋಕಕ್ಕೆ ಗಾಯಕರಾಗಿ ೧೯೬೭ರಲ್ಲಿ ಎಂಟ್ರಿ ಕೊಟ್ಟರು. ನಂತರ ರಾಜ್‌ಕುಮಾರ್ ಅಭಿನಯದ ಗಾಂಧಿನಗರ-೧೯೬೮, ಚೂರಿಚಿಕ್ಕಣ್ಣ-೧೯೬೯ ಕನ್ನಡ ಫಿಲಂಸ್ ಮೂಲಕ ಕನ್ನಡ ಚಿತ್ರಗೀತೆ ಹಿನ್ನೆಲೆ ಗಾಯನ ಯಾತ್ರೆಯನ್ನು ಪ್ರಾರಂಭಿಸಿದರು. ೧೯೭೦ರಲ್ಲಿ ಸಿಐಡಿರಾಜಣ್ಣ ಚಿತ್ರದ ಇಲ್ಲಿಆಡುವ ಮಾತುಕನ್ನಡ….. ಮತ್ತು ಪಿ.ಬಿ.ಶ್ರೀನಿವಾಸ್ ಎಸ್.ಜಾನಕಿ ಜತೆಗೂಡಿ ಹಾಡಿದ ನನ್ನಲ್ಲೇನೋಹೊಸಭಾವನೆ ಎಂಬ ಎರಡು ಚಿತ್ರಗೀತೆಗಳನ್ನು ಹಾಡುವ ಮುಖೇನ ಜನಪ್ರಿಯ ಹಿನ್ನೆಲೆ ಗಾಯಕರ ಸಾಲಿಗೆ ಸೇರಿ ಕೋಟ್ಯಾಂತರ ಕನ್ನಡಿಗರ ತನು ಮನ ಧನ ಗೆದ್ದು ರಾರಾಜಿಸಿದರು!

ಅಂದಿನಿಂದ ಅಂದಾಜು ೪೦ ವರ್ಷ ಪರ್ಯಂತ ಮತ್ತೆಂದೂ ಹಿಂದಿರುಗಿ ನೋಡದೆ ಸಂಗೀತ ಪರ್ವತವಾಗಿ ಬೆಳೆದರು. ಕಿರುತೆರೆಯ ಎದೆತುಂಬಿ ಹಾಡುವೆನು ಟಿ.ವಿ.ರಿಯಾಲಿಟಿ ಶೋ ಮೂಲಕ ನಾಡು ನುಡಿ ಸಂಸ್ಕೃತಿ ಸಂಗೀತ ಮಾನವೀಯತೆ ಸಾಮಾಜಿಕ ಕಾಳಜಿ ಮುಂತಾದ ಸೋಶಿಯಲ್ ಐಡಿಯಾಲಜಿ ಬಗ್ಗೆ ತಮ್ಮ ಅಂತರಾಳದ ಇಂಗಿತವನ್ನು ವ್ಯಕ್ತಪಡಿಸುವ ಮೂಲಕ ಮತ್ತೊಮ್ಮೆ ಕನ್ನಡ ಕುಲಕೋಟಿಯ ಹೃನ್ಮನ ಗೆದ್ದರು. ಇವರ ಸೋದರಿ ಎಸ್.ಪಿ.ಶೈಲಜಾ ಕೂಡ ಜನಪ್ರಿಯ ಹಿನ್ನೆಲೆಗಾಯಕಿ ಎಂಬುದು ಬಹುಶಃ ಎಲ್ಲರಿಗು ತಿಳಿದಿರದ ಆಶ್ಚರ್ಯಕರ ಸಂಗತಿ. ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪಡೆದ ಎಸ್.ಪಿ.ಬಿ.ರವರ ಏಕಮಾತ್ರ ಪುತ್ರ ಎಸ್.ಪಿ.ಚರಣ್, ನಟ-ಗಾಯಕ-ನಿರ್ಮಾಪಕ-ನಿರ್ದೇಶಕನಾಗಿ ಗುರುತಿಸಿಕೊಂಡರೂ ಸಹ ಯಾವುದೇ ಒಂದು ಕ್ಷೇತ್ರದಲ್ಲು ಸಿದ್ಧಿ ಪ್ರಸಿದ್ಧಿ ಪಡೆಯಲು ಸಾಧ್ಯವಾಗಲಿಲ್ಲ?! ಹಲವಾರು ವಿನೂತನ ವಿಶ್ವ ದಾಖಲೆ ಮಾಡಿದ್ದ ಡಾ.ಎಸ್.ಪಿ.ಬಿ.ರವರು ಕೊರೊನಾ ಮಹಾಮಾರಿ ಪೀಡೆಯ ವಿರುದ್ಧ ಧೀರ್ಘಕಾಲ ಫ಼ೈಟ್ ಕೊಟ್ಟರೂ ಸಹ ಕೊನೆಗೆ ಸೋತು ಶರಣಾಗಿ ದಿನಾಂಕ ೨೫.೯.೨೦೨೦ರಂದು ತಮ್ಮ ೭೫ನೇ ವಯಸ್ಸಲ್ಲಿ ಚೆನ್ನೈನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದರು. ಕೋವಿಡ್-೧೯ಗೆ ಬಲಿಯಾದ ದೇಶದ ಪ್ರಪ್ರಥಮ ಪ್ಲೇಬ್ಯಾಕ್ ಸಿಂಗರ್ ಎನಿಸಿಕೊಂಡು ತಮ್ಮ ಜೀವಿತದ ಕಡೇ ಘಳಿಗೆಯಲ್ಲು ಒಂದು ಅಸಾಮಾನ್ಯ ದಾಖಲೆ ಮಾಡಿ ಹೋದರು! ಡಾ.ಎಸ್.ಪಿ.ಬಾಲಸುಬ್ರಮಣ್ಯಮ್‌ರವರ ನಿಧನದಿಂದ ವಿ[ಶ್ವ]ಗಾನ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಗಿ ಕೋಟ್ಯಾಂತರ ಅಭಿಮಾನಿಗಳಿಗೆ ಭರಿಸಲಾರದ ಕಷ್ಟ ಒದಗಿಬಂತು! ಮಹಾನ್ ಮೇರು ಗಾಯಕ-ನಟ-ನಿರ್ಮಾಪಕ-ಸಂಗೀತನಿರ್ದೇಶಕ-ಕಂಠದಾನ ಕಲಾವಿದ ಹಾಗೂ ಸಾಮಾಜಿಕ ಹಿತಚಿಂತಕ ಡಾ.ಎಸ್.ಪಿ.ಬಿ. ದೈಹಿಕವಾಗಿ ಕಣ್ಮರೆಯಾಗಿದ್ದರೂ ಮಾನಸಿಕವಾಗಿ ಎಂದೆಂದೂ ನಮ್ಮೊಡನೆ ಇದ್ದಾರೆ! ಇವರ ಇಹಲೋಕದ ಅಸ್ತಿತ್ವ ಆಚಂದ್ರಾರ್ಕ ಅಜರಾಮರ!

ಡಾ.ಎಸ್.ಪಿ.ಬಾಲಸುಬ್ರಮಣ್ಯಮ್‌ರಿಗೆ ಲಭಿಸಿದ್ದ ಪ್ರಶಸ್ತಿಗಳು:- ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿ, ತಮಿಳುನಾಡು ಸರ್ಕಾರದ ಶ್ರೇಷ್ಠ ಹಿನ್ನೆಲೆಗಾಯಕ ಪ್ರಶಸ್ತಿ, ಆಂಧ್ರಪ್ರದೇಶ ಸರ್ಕಾರದ ಶ್ರೇಷ್ಠ ಹಿನ್ನೆಲೆಗಾಯಕ ಮತ್ತು ನಂದಿ ಅವಾರ್ಡ್, ಪ್ರತಿಷ್ಠಿತ ಫಿಲಂಫೇರ್ ಅತ್ಯುತ್ತಮ ಹಿನ್ನೆಲೆಗಾಯಕ ಪ್ರಶಸ್ತಿ-೫ಬಾರಿ, ಭಾರತ ಸರ್ಕಾರದ ಶ್ರೇಷ್ಠ ಹಿನ್ನೆಲೆಗಾಯಕ ರಾಷ್ಟ್ರ ಪ್ರಶಸ್ತಿ, ರಾಷ್ಟ್ರಪತಿ ಗಳಿಂದ ಪದ್ಮವಿಭೂಷಣ[ಮರಣೋತ್ತರ], ಪದ್ಮಭೂಷಣ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ.

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು-೫೬೦೦೭೨