ಮೈಸೂರು: ಮೈಸೂರು ಕೊರೋನಾದಿಂದ ತತ್ತರಿಸುವ ವೇಳೆ ಅದರ ನಿಯಂತ್ರಣಕ್ಕೆ ಮುಂದಾಗುವುದನ್ನು ಅಧಿಕಾರಿಗಳು ಕಿತ್ತಾಟದಲ್ಲಿ ತೊಡಗಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಮೈಸೂರನ್ನು ಉಳಿಸಿ ಎಂದು ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್ ಏಕಾಂಗಿ ಪ್ರತಿಭಟನೆ ನಡೆಸಿದ್ದಾರೆ.
ನಗರದ ಗಾಂಧಿ ಚೌಕದ ಗಾಂಧಿ ಪ್ರತಿಮೆ ಬಳಿ ಏಕಾಂಗಿ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಇಡೀ ವಿಶ್ವವೇ ಮಹಾಮಾರಿ ಕೊರೊನಾದಿಂದ ತತ್ತರಿಸಿ ಹೋಗಿದ್ದು, ನಾಗರಿಕರ ಬದುಕು ಡೋಲಾಯಮಾನವಾಗಿದೆ. ಕೂಲಿ ನಾಲಿ ಮಾಡುವವರ ಪರಿಸ್ಥಿತಿ ಶೋಚನೀಯವಾಗಿದೆ. ಬಡ ಮಧ್ಯಮ ವರ್ಗದ ಜನರ ಮನೆಗಳಲ್ಲಿ ಕೊರೊನಾಗೆ ತುತ್ತಾಗಿ ಆಸ್ಪತ್ರೆಗೆ ಸೇರಿದವರ ಬದುಕು ಹೇಳತೀರದಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ಸೋಂಕಿತರೂ ದಾಖಲಾಗಿ ಎಷ್ಟೋ ಕುಟುಂಬಗಳು ಲಕ್ಷಾಂತರ ರೂ ಹಣ ಕಳೆದುಕೊಂಡು ಮನೆ ಮಠ ಮಾರಿಕೊಂಡು ಬೀದಿಗೆ ಬೀಳುವಂತಾಗಿದೆ.
ಇಷ್ಟೆಲ್ಲ ನೋವುಗಳ ಸರಮಾಲೆಯೇ ನಾಗರಿಕರ ಕೊರಳಿಗೆ ಬಿದ್ದಿರುವಾಗ ಅಧಿಕಾರಿಗಳು, ಜನಪ್ರತಿನಿಧಿಗಳ ಜವಬ್ಧಾರಿ ಅತೀ ಮುಖ್ಯವಾಗಿದೆ. ಆದರೆ ದುರಾದೃಷ್ಠ ಮೈಸೂರು ಜನತೆಯ ಗೋಳು ಕೇಳುವವರಿಲ್ಲದೆ, ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಯಾರನ್ನು ನಂಬದೆ ತಾವೇ ರಕ್ಷಿಸಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ತಾನು ಮೈಸೂರಿನಲ್ಲಿ ಠಿಕಾಣಿ ಹೂಡಿದ್ದೇನೆ. ಜನರ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತೇನೆಂದು ಹೇಳುತ್ತಿದ್ದು, ಅವರಿಗೆ ಸ್ಥಳೀಯ ಶಾಸಕರು, ಸಂಸದರು, ಅಧಿಕಾರಿಗಳ ನಿಯಂತ್ರಣವಿಲ್ಲದಂತಾಗಿದೆ ಎಂದು ಆರೋಪಿಸಿದರಲ್ಲದೆ, ರಾಜಕೀಯ ಜನಪ್ರತಿನಿಧಿಗಳಲ್ಲಿ ಸಹಮತವಿಲ್ಲ, ಅಧಿಕಾರಿಗಳ ನಡುವೆಯೂ ಸಮನ್ವಯತೆ ಇಲ್ಲ. ಒಟ್ಟಾರೆ ಜನಪ್ರತಿನಿಧಿಗಳು, ಅಧಿಕಾರಿಗಳಿಗಳ ನಡುವೆ ಹೊಂದಾಣಿಕೆಯೇ ಇಲ್ಲದಾಗಿದ್ದು, ಇದರಿಂದ ಮೈಸೂರು ಜನತೆಯ ಪಾಡು ಅಧೋಗತಿಗೆ ಬಂದಿದೆ ಎಂದು ದೂರಿದರು.
ಮೈಸೂರಿನ ರಾಜಕಾರಣಕ್ಕೆ ಮತ್ತು ಅಧಿಕಾರಿಗಳ ಸೇವೆಗೆ ಒಳ್ಳೆಯ ಹೆಸರಿದೆ. ಆದರೆ ಇಂತಹ ಅಸಹಾಯಕ ಪರಿಸ್ಥಿತಿ ಎಂದು ಬಂದಿರಲಿಲ್ಲ. ಅಧಿಕಾರಿಗಳನ್ನು ನಿಯಂತ್ರಣದಲ್ಲಿ ಇಡಬೇಕಾದ ಜನಪ್ರತಿನಿಧಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಒಬ್ಬೊಬ್ಬರ ಪರ ವಿರೋಧವಾಗಿ ನಿಂತು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿರುವುದು ಮೈಸೂರು ಜನತೆಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಹೇಳಿದರಲ್ಲದೆ, ಇನ್ನಾದರೂ ವೈಯಕ್ತಿಕ ದ್ವೇಷ,ಅಸೂಯೆಗಳನ್ನು ಬದಿಗೊತ್ತಿ ಕೊರೊನಾ ಸಂಕಷ್ಟದ ಸಮಯದಲ್ಲಿ ಮೈಸೂರನ್ನು ಉಳಿಸಿ ಎಂದು ಆಗ್ರಹಿಸಿದರು.