ಚಾಮರಾಜನಗರ: ಡಾ. ಬಿ.ಆರ್ ಅಂಬೇಡ್ಕರ್ ರವರು ದೇಶದಲ್ಲಿದ್ದ ಜಾತೀಯತೆ, ಅಸಮಾನತೆ, ಅನಕ್ಷರತೆ ಹಾಗೂ ಶೋಷಣೆಗಳ ನಿರ್ಮೂಲನೆಗೆ ಸಂವಿಧಾನದ ಮೂಲಕ ಸೂಕ್ತ ಚಿಕಿತ್ಸೆ ಪರಿಹಾರ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ರವರು ತಿಳಿಸಿದರು.
ನಗರದ ಜಿಲ್ಲಾಡಳಿತ ಭವನದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರ ೧೩೧ನೇ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಡಾ. ಬಿ.ಆರ್ ಅಂಬೇಡ್ಕರ್ ರವರು ಮಹಾನ್ ಮಾನವತಾವಾದಿಯಾಗಿದ್ದು ಶೋಷಿತ ವರ್ಗದವರ ಆಶಾಕಿರಣ ಹಾಗೂ ಮಹಿಳೆಯರ ಪಾಲಿಗೆ ಸಮಾನತೆಯ ನಂದಾದೀಪವಾಗಿದ್ದಾರೆ. ಸೂರ್ಯ ಭೂಮಿಗೆ ಎಷ್ಟು ಮುಖ್ಯವೋ ಹಾಗೇ ಡಾ. ಬಿ.ಆರ್ ಅಂಬೇಡ್ಕರ್ ರವರು ಭಾರತಕ್ಕೆ ಅಷ್ಟೇ ಮುಖ್ಯವಾಗಿದ್ದಾರೆ. ಸಾವಿರಾರು ವರ್ಷಗಳ ಕಾಲದಿಂದಲೂ ಇದ್ದ ಜಾತೀಯತೆ, ಅಸಮಾನತೆ, ಅನ್ಯಾಯ, ಶೋಷಣೆಗಳಿಗೆ ಸಂವಿಧಾನದಲ್ಲಿ ಕಾನೂನು ರೂಪಿಸುವ ಮೂಲಕ ಚಿಕಿತ್ಸೆ ನೀಡಿದ್ದಾರೆ ಎಂದರು.
ಡಾ. ಬಿ.ಆರ್ ಅಂಬೇಡ್ಕರ್ ರವರು ಕೇವಲ ವ್ಯಕ್ತಿ ಅಷ್ಟೇ ಅಲ್ಲ. ಅವರೊಬ್ಬರು ಮಹಾನ್ ಶಕ್ತಿ, ಇಂತಹ ಶ್ರೇಷ್ಠ ವ್ಯಕ್ತಿಯಾಗಿರುವುದರಿಂದಲೇ ವಿಶ್ವಸಂಸ್ಥೆಯ ವತಿಯಿಂದಲೂ ಅವರ ಜನ್ಮ ದಿನವನ್ನು ಆಚರಿಸಲಾಗುತ್ತದೆ. ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಅತೀ ಹೆಚ್ಚು ಜನರಿಂದ ಹಾಗೂ ಅತೀ ಹೆಚ್ಚು ಸ್ಥಳಗಳಲ್ಲಿ ಜನ್ಮ ದಿನವನ್ನು ಆಚರಿಸಿಕೊಳ್ಳುವ ಏಕೈಕ ವ್ಯಕ್ತಿ ಎಂದರೆ ಡಾ. ಬಿ.ಆರ್ ಅಂಬೇಡ್ಕರ್ ರವರು ಮಾತ್ರ ಎಂದು ಚಾರುಲತ ಸೋಮಲ್ ರವರು ತಿಳಿಸಿದರು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಡಾ. ಕಲ್ಯಾಣಸಿರಿ ಬಂತೇಜಿ ಅವರು ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ರವರ ಚಿಂತನೆಗಳು ಕೇವಲ ಆಚರಣೆಗಷ್ಟೇ ಸೀಮಿತವಾಗದೆ ಅನುಷ್ಠಾನಗೊಳ್ಳಬೇಕು. ಅಂಬೇಡ್ಕರ್ ಅವರ ಸಾರ್ವಕಾಲಿಕ ಚಿಂತನೆಗಳು ಧ್ಯೇಯೋದ್ದೇಶಗಳನ್ನು ಮಂಥನ ಮಾಡಿಕೊಳ್ಳಬೇಕು ಎಂದರು.
ಬುದ್ದ ಎನ್ನುವ ಸುಜ್ಞಾನ ಸಾಗರದಲ್ಲಿ ಸೇರಿರುವ ಭಾರತದ ಏಕೈಕ ಪ್ರಜ್ಞಾವಂತ ಮಹಾನದಿ ಎಂದರೆ ಅದು ಡಾ. ಬಿ.ಆರ್. ಅಂಬೇಡ್ಕರ್ ಅವರು. ನಾವು ನೀವು ಆ ಮಹಾನದಿಗೆ ಉಪನದಿಗಳಾಗಿ ಸುಜ್ಞಾನ ಸಾಗರಕ್ಕೆ ಸೇರಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಚಾಮರಾಜನಗರ ವಿರಕ್ತ ಮಠದ ಚೆನ್ನಬಸವಸ್ವಾಮೀಜಿ ಅವರು ಬುದ್ದ, ಬಸವ, ಅಂಬೇಡ್ಕರ್ ರವರ ಆದರ್ಶ ತತ್ವಗಳನ್ನು ಮೈಗೂಡಿಸಿಕೊಂಡು ಬದುಕಿದರೆ ಸಮಾಜದಲ್ಲಿ ಶಾಂತಿ, ನೆಮ್ಮದಿ ಇರಲಿದೆ. ೧೨ನೇ ಶತಮಾನದಲ್ಲೇ ಶರಣರು, ಬಸವಾದಿಗಳು ಮೌಡ್ಯ, ಜಾತಿ ಮತ್ತು ಲಿಂಗ ಅಸಮಾನತೆಯ ವಿರುದ್ದ ಹೋರಾಡಿದರು. ಅಂಬೇಡ್ಕರ್ ರವರು ಕಾನೂನು ರೂಪದಲ್ಲಿ ನಮಗೆ ಸಂವಿಧಾನವನ್ನು ಕೊಟ್ಟು ಅಸಮಾನತೆಯನ್ನು ಹೋಗಲಾಡಿಸಿದರು. ಶರಣರು, ಬುದ್ದ ಹಾಗೂ ಅಂಬೇಡ್ಕರ್ ರವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗೋಣ, ಸಮಾಜದಲ್ಲಿ ಮೇಲು ಕೀಳು ಎಂಬ ಬೇಧಬಾವ ಮಾಡದೇ ಸಮಾನತೆಯಿಂದ ಬದುಕಿ ಸಮಾಜಮುಖಿ ಕೆಲಸ ಮಾಡುವ ದಿಸೆಯಲ್ಲಿ ನಡೆಯೋಣ ಎಂದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಸರ್ವಕಾಲಿಕ ಚಿಂತನೆಗಳ ಕುರಿತು ವಿಚಾರ ಮಂಡಿಸಿದ ಡಾ. ಜಗದೀಶ್ ಕೊಪ್ಪ ಅವರು ಮಾತನಾಡಿ ಜಗತ್ತಿನಲ್ಲಿ ಮನುಕುಲದ ಬಗ್ಗೆ ಅತ್ಯಂತ ಗಂಭೀರವಾಗಿ ಆಲೋಚಿಸಿದ ಇಬ್ಬರು ಮಹನಿಯರೆಂದರೆ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅಬ್ರಹಾಂ ಲಿಂಕನ್. ಇಡೀ ಬದುಕನ್ನು ಅಧ್ಯಯನಕ್ಕೆ ಮೀಸಲಿಟ್ಟು ದೇಶಕ್ಕೆ ಸಾಮಾಜಿಕ ಪ್ರಜ್ಞೆ ಎಚ್ಚರ ಮೂಡಿಸಿದವರು ಅಂಬೇಡ್ಕರ್ ಅವರು ಎಂದರು.
ಅಂಬೇಡ್ಕರ್ ಅವರ ವಿದ್ವತ್ತು, ಅಧ್ಯಯನಶೀಲತೆ ಬೇರೆಯವರಲ್ಲಿ ಕಾಣಲು ಸಾಧ್ಯವಿಲ್ಲ. ವರ್ತಮಾನದ ಕಾಲಘಟ್ಟದಲ್ಲಿ ಬುದ್ದ, ಬಸವ, ಅಂಬೇಡ್ಕರ್, ಗಾಂಧಿ ಅವರ ವಿಚಾರಧಾರೆಗಳನ್ನು ಕೊಂಡೊಯ್ಯುವ ಅವಶ್ಯಕತೆಯಿದೆ. ದೇಶದ ಪ್ರತಿಯೊಬ್ಬರಿಗೂ ಸವಲತ್ತುಗಳು ತಲುಪಬೇಕು ಎಂಬ ಅಶಯ ಹೊಂದಿದ್ದು, ನಾಗರಿಕ ಹಕ್ಕುಗಳ ಜೊತೆ ಕರ್ತವ್ಯಗಳ ಬಗ್ಗೆಯೂ ಅಂಬೇಡ್ಕರ್ ತಿಳಿಸಿ ಕೊಟ್ಟಿದ್ದಾರೆ ಎಂದು ಡಾ. ಜಗದೀಶ್ ಕೊಪ್ಪ ಅವರು ಹೇಳಿದರು.
ಡಾ. ಬಿ.ಆರ್. ಅಂಬೇಡ್ಕರ್ ಅವರ ಮಹಿಳಾ ಪರ ಚಿಂತನೆಗಳು ಕುರಿತು ಮಾತನಾಡಿದ ಮೈಸೂರು ಮಹಾರಾಜ ಕಾಲೇಜಿನ ಜಾನಪದ ವಿಭಾಗದ ಸಹಪ್ರಾಧ್ಯಪಕರಾದ ಡಾ. ವಿಜಯಲಕ್ಷ್ಮಿ ಮನಾಪುರ ಅವರು ಮಹಿಳೆಯರ ಬದುಕಿಗೆ ಹೊಸ ಬೆಳಕು ಮೂಡಿಸುವ ನಿಟ್ಟಿನಲ್ಲಿ ಅಂಬೇಡ್ಕರ್ ಅವರು ಮುನ್ನಡೆ ಇಟ್ಟರು. ಮಹಿಳೆಯರ ಮೇಲಿನ ಶೋಷಣೆ ತಡೆಯಲು ಕಾನೂನಿನಿಂದ ಮಾತ್ರ ಸಾಧ್ಯ ಎಂದು ಅಂಬೇಡ್ಕರ್ ಅವರು ಅರಿತಿದ್ದರು. ಸಂವಿಧಾನತ್ಮಕವಾಗಿ ಮಹಿಳಾ ಪರ ಕಾನೂನುಗಳನ್ನು ರೂಪಿಸಿದರು ಎಂದರು.
ಘನತೆ, ಗೌರವ, ಸ್ವಾಭಿಮಾನದಿಂದ ಮಹಿಳೆ ಬದುಕಲು ಬೇಕಿರುವ ಅನೇಕ ಹಕ್ಕುಗಳನ್ನು ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಸೇರ್ಪಡೆ ಮಾಡಿದರು. ಮಹಿಳಾ ಶಿಕ್ಷಣದಿಂದ ದೇಶದ ಅಭಿವೃದ್ದಿ ಸಾಧ್ಯವಾಗಲಿದೆ. ಸ್ವಾತಂತ್ರ ನಂತರದ ಭಾರತದಲ್ಲಿ ಮಹಿಳಾ ಪರ ಪ್ರಗತಿ ಪರಿವರ್ತನೆಗೆ ಅಂಬೇಡ್ಕರ್ ಅವರೇ ಕಾರಣ. ಅವರ ತತ್ವ ಸಿದ್ದಾಂತ, ಚಿಂತನೆಗಳು ಇಂದಿಗೂ ಜೀವಂತವಾಗಿವೆ. ಅವುಗಳನ್ನ ಪಾಲಿಸಬೇಕಿದೆ ಎಂದು ಡಾ. ವಿಜಯಲಕ್ಷ್ಮಿ ಮನಾಪುರ ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಅವರು ಮಾತನಾಡಿ ದೇಶದ ೧೪೦ ಕೋಟಿ ಜನರಿಗೆ ಸರ್ವಧರ್ಮವಾಗಿ ಇರುವ ಧರ್ಮ ಗ್ರಂಥವೆಂದರೆ ಅದು ಸಂವಿಧಾನ ಮಾತ್ರ. ಜ್ಞಾನ, ಸ್ವಾತಂತ್ರ ಮತ್ತು ಸಾಮಾಜಿಕ ಸಮಾನತೆಯನ್ನು ಕೊಟ್ಟಂತಹ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಸ್ಮರಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಇದೇ ವೇಳೆ ಅಂತರ್ಜಾತಿ ವಿವಾಹವಾಗಿರುವ ದಂಪತಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರೋತ್ಸಾಹ ಧನ ವಿತರಿಸಲಾಯಿತು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಕೆ.ಎಂ. ಗಾಯಿತ್ರಿ, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್. ಸುಂದರ್ ರಾಜ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕರಾದ ಭಾಗೀರಥಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.
