ಮಂಡ್ಯ: ಕೋವಿಡ್-19  ಸಂಕಷ್ಟದ ಸಮಯದಲ್ಲಿ ಜಿಲ್ಲಾ  ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಂಗೇಗೌಡರವರ ನೇತೃತ್ವದಲ್ಲಿ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಆಹಾರ ಕಿಟ್ ವಿತರಣೆ ಮಾಡಿ ಹಲವು ಕುಟುಂಬಗಳಿಗೆ ಆಸರೆಯಾಗಿದ್ದಾರೆ.

ಬಹಳಷ್ಟು ಜನರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಹಲವು ಸರ್ಕಾರಿ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ಕೂಡ ಸಹಾಯ ಮಾಡುವ ಮನಸ್ಸು ಹೊಂದಿದ್ದು ಅದರಂತೆ ಸಮಾಜದಲ್ಲಿ ನೊಂದವರ ಸೇವೆ ಮಾಡುವ ಇಲಾಖೆಯೆಂದೇ ಹೆಸರಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ನೌಕರರು ಈ ಸೇವೆ ಮಾಡಲು ಮಂಡ್ಯ ಜಿಲ್ಲೆಯಲ್ಲಿ ಮುಂದೆ ಬಂದಿದ್ದಾರೆ.

ಈ ಸೇವಾ ಕಾರ್ಯಕ್ಕೆ ಮೊದಲು ಕೆಲ ನೌಕರರು ಧನಸಹಾಯ ಮಾಡಿದ್ದಾರೆ, ಅದನ್ನು ಕಂಡ ಇತರರು ಕೂಡ ಹಣ ನೀಡಲು ಮುಂದಾಗಿದ್ದು ಇದರಿಂದ ಸುಮಾರು 4 ಲಕ್ಷ ಹಣ ಸಂಗ್ರಹವಾಗಿದೆ. ಮಂಡ್ಯ ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳು ಸ್ವ ಇಚ್ಛೆಯಿಂದ ನೀಡಿದ ಸುಮಾರು 4 ಲಕ್ಷ ದಾನದ ಹಣದಿಂದ  ಈ ಕೋವಿಡ್ ಸಂಕಷ್ಟದ ಸಮಯದಲ್ಲಿ ಕೆಲಸವಿಲ್ಲದೆ ಆದಾಯ ಕಡಿಮೆಯಾಗಿರುವ ನೊಂದ ವರ್ಗಗಳಾದ ಅಲೆಮಾರಿ ಜನರು, ಕಾಡಿನಂಚಿನ ಬುಡಕಟ್ಟು ಜನಾಂಗದವರು, ಮ್ಯಾನುವಲ್ ಸ್ಕ್ಯಾವೆಂಜರ್ ಗಳು, ಸಫಾಯಿ ಕರ್ಮಚಾರಿಗಳು,ಜೀತವಿಮುಕ್ತರು ಮುಂತಾದ ಅಶಕ್ತ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲು ಇದು ಸಹಕಾರಿಯಾಗಿದೆ.

ಈಗಾಗಲೇ ಜಿಲ್ಲೆಯಾದ್ಯಂತ ಸುಮಾರು 900 ಪ.ಜಾತಿಯ ಅಲೆಮಾರಿ ಬುಡಕಟ್ಟು, ಮ್ಯಾನುವಲ್ ಸ್ಕ್ಯಾವೆಂಜರ್ ,ಸಫಾಯಿ ಕರ್ಮಚಾರಿ, ಜೀತವಿಮುಕ್ತರು ಇತ್ಯಾದಿ ಕುಟುಂಬಗಳನ್ನು ಅತ್ಯಂತ ಅಗತ್ಯವಾದ ಕುಟುಂಬಗಳೆಂದು ಪಟ್ಟಿ ಮಾಡಿದ್ದು ಅವರಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ನೇತೃತ್ವದಲ್ಲಿ ಅಜೀಂ ಪ್ರೇಮ್ ಜೀ, ಇಸ್ಕಾನ್ ಫೌಂಡೇಷನ್ ಗಳಿಂದ ಸಂಗ್ರಹಿಸಿದ ಆಹಾರ ಕಿಟ್ ಗಳನ್ನು ಎಲ್ಲಾ ತಾಲ್ಲೂಕುಗಳಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಈ ವರ್ಗದ ಜನರಿಗೆ ಆಯಾ ತಾಲೂಕಿನ ಶಾಸಕರ ಮಾರ್ಗದರ್ಶನದಲ್ಲಿ ಆಹಾರ ಕಿಟ್ ಹಂಚುವ ಕೆಲಸ ಮಾಡುತ್ತಿದ್ದಾರೆ.

ಈ ರೀತಿಯಲ್ಲಿ ಹಂಚಿ ಇನ್ನೂ ಬಾಕಿ ಉಳಿದುಕೊಂಡಿರುವ ಕುಟುಂಬಗಳಿಗೆ ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ ಹಣದಲ್ಲಿ ಕಿಟ್ ನೀಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ನೌಕರರು ಹಾಗೂ ಇತರೆ ದಾನಿಗಳಿಂದ ಸಂಗ್ರಹಿಸಿದ   ಹಣದಿಂದ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ, ಬಲ್ಲೇನಹಳ್ಳಿ ಹಾಗೂ ಸಬ್ಬನಕುಪ್ಪೆ, ಮಹದೇವಪುರ ಗ್ರಾಮಗಳ 50 ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಗಿದೆ.

By admin