ಸರಗೂರು: ತಾಲೂಕಿನ ಚೆನ್ನಗುಂಡಿ ಗ್ರಾಮದ ಗಿರಿಜನ ಆಶ್ರಮ ಶಾಲೆಯಲ್ಲಿ ಮೈಸೂರಿನ ರಂಗಯಾನ ಟ್ರಸ್ಟ್‌ನ ಅಧ್ಯಕ್ಷ ವಿಕಾಸ್‌ಗೌಡ ನೇತೃತ್ವದಲ್ಲಿ ೬ನೇ ವರ್ಷದ ಕಾಡಂಚಿನ ಹಾಡಿ ಭಾಗದ ಮಕ್ಕಳಿಗೆ ಹಾಡಿ ಕಿನ್ನರ ಲೋಕ-೨೦೨೨ ರಂಗಶಿಬಿರ ಸಮಾರೋಪಗೊಂಡಿತು.

ಶಿಬಿರದಲ್ಲಿ ಮಕ್ಕಳಿಗೆ ರಂಗಗೀತೆ, ಸಿನಿಮಾ ಪ್ರದರ್ಶನ, ಪ್ರಸಾಧನ ಕಲೆ, ಚಿತ್ರಕಲೆ, ಪೇಪರ್ ಕ್ರಾಫ್ಟ್ ಸೇರಿದಂತೆ ಹಲವು ವಿಚಾರಗಳನ್ನು ಹೇಳಿಕೊಡಲಾಯಿತು. ಇದಲ್ಲದೆ ಗಿರಿಜನ ಮಕ್ಕಳು ಹೆಚ್ಚು ಉತ್ಸಾಹದಿಂದ ಶಿಬಿರದಲ್ಲಿ ಪಾಲ್ಗೊಂಡು ನೃತ್ಯ, ನಾಟಕ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಸಮರೋಪದಲ್ಲಿ ಮಕ್ಕಳು ರಂಗಗೀತೆ ಮತ್ತು ಕುರುಬ ನೃತ್ಯದೊಂದಿಗೆ ಎಸ್.ರಾಮನಾಥ್ ಅವರ ’ಬಿಳಿ ಆನೆ’ ನಾಟಕದ ಪ್ರಾತ್ಯಕ್ಷಿತೆ ನೀಡಿದರು.

ರಂಗಯಾನ ಟ್ರಸ್ಟ್‌ನ ಅಧ್ಯಕ್ಷ ವಿಕಾಸ್‌ಗೌಡ ಮಾತನಾಡಿ, ನಗರಪ್ರದೇಶದಲ್ಲಿನ ಮಕ್ಕಳಿಗೆ ಸಿಗುವ ಸಾಂಸ್ಕೃತಿಕ ಸವಲತ್ತುಗಳು ಗ್ರಾಮೀಣ ಭಾಗದ ಮಕ್ಕಳಿಗೂ ಸಿಗುವಂತಾಗಬೇಕು. ಅದರಲ್ಲೂ ಕಾಡಂಚಿನ ಹಾಡಿ ಭಾಗದ ಮಕ್ಕಳಿಗೂ ತಲುಪಬೇಕು ಎಂಬುದು ಸಂಸ್ಥೆ ಆಶಯ. ಪ್ರತಿ ವರ್ಷದಂತೆ ಈ ಸಾಲಿನಲ್ಲಿಯೂ ಕಾಡಂಚಿನ ಮಕ್ಕಳಿಗೆ ಹಾಡಿ ಕಿನ್ನರ ಲೋಕದಡಿ ಕಾರ್ಯಕ್ರಮ ಮಾಡಿದುದು ತುಂಬಾ ಸಂತಸ ತಂದಿದೆ. ಮಕ್ಕಳು ಕಲೆಯನ್ನು ಎಂದಿಗೂ ಮರೆಯಬಾರದು. ಅದನ್ನು ಉಳಿಸಿ, ಬೆಳೆಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಶಾಲಾ ಎಸ್‌ಡಿಎಂಸಿ ಅಧ್ಯಕ್ಷರು, ಶಾಲಾ ಶಿಕ್ಷಕ ವೃಂದದವರು, ಗ್ರಾಮಸ್ಥರು, ಮಕ್ಕಳು ಹಾಜರಿದ್ದರು.