ಭರತ ದೇಶದ ಸ್ವಾತಂತ್ರ್ಯದ ಹೋರಾಟದ ದಿನಗಳು ಸುಮ್ಮನೆ ಯಾವುದೋ ಒಂದು ತೆರನಾದ ಯುದ್ಧದ ಉಗ್ರರೂಪವಾಗಿರಲಿಲ್ಲ.ನಾವು ಭಾರತೀಯರು ನಮಗೆ ನಮ್ಮದೇ ಆದ ಸಾಂಸ್ಕೃತಿಕ ನೆಲೆಗಟ್ಟಿದೆ.ನಾಗರಿಕತೆಯ ವ್ಯವಸ್ಥಿತ ಭವ್ಯತೆ ಇದೆ.ಮಾನವೀಯ ನೆಲೆಗಳ ಆಗರವಾಗಿದೆ.ಇನ್ನೂ ಹಲವು ಮಹತ್ವದ ರೂಪಗಳು ನಮ್ಮ ಭಾರತೀಯರ ಬದುಕನ್ನು ಸುತ್ತುವರೆದು.ಪ್ರಪಂಚದಲ್ಲೇ ವಿಶಿಷ್ಠ ವೈಶಿಷ್ಟ್ಯ ದೇಶವನ್ನಾಗಿಸಿದೆ.ಭರತ ದೇಶದ ಸ್ವಾತಂತ್ರ್ಯದಲ್ಲಿ ಪಾಲ್ಗೊಂಡಿರುವ ವ್ಯಕ್ತಿ ಮಹೋನ್ನತರು ಸಾಮಾನ್ಯ ಜನರು.ಸಾಮನ್ಯರಲ್ಲಿ ಅಸಮಾನ್ಯ ಪ್ರೌಢಿಮೆ ಇದ್ದುದ್ದು ಅನನ್ಯವಾದದ್ದು.ಎಷ್ಟೋ ಈ ಸಾಮಾನ್ಯರೆನಿಸಿದ ಅಸಮಾನ್ಯರು ಪ್ರಾದೇಶಿಕತೆಯಲ್ಲೇ ಉಳಿದು ಜಾನಪದ ನಾಯಕರಾಗಿ ಹೋಗಿದ್ದಾರೆ.ದೇಶದ ಸ್ವಾತಂತ್ರ್ಯ ಹೋರಾಟಗಾರರ ಪ್ರಮುಖರ ಪಟ್ಟಿಯಲ್ಲಿ ವಂಚಿತರಾಗಿದ್ದಾರೆ. ಲಕ್ಷಲಕ್ಷೋಪದಿಯಲ್ಲಿ ಈ ರೀತಿಯ ವ್ಯಕ್ತಿ ಘಟನೆಗಳು ಇತಿಹಾಸದ ಪುಟಗಳಲ್ಲಿ ಅವಿತುಹೋಗಿದೆ.ಅವರೆಲ್ಲರಿಗೂ ಗೌರವ ಸಮರ್ಪಣೆ ನಮ್ಮ ಹಕ್ಕು ಮತ್ತು ಕರ್ತವ್ಯ.ಅವರೆಲ್ಲರೀಗೂ ಭರತ ನಾಡಿನ ಸಮಸ್ತ ಜನತೆಯ ಶಿರನಮನಗಳು.ಇಂದು ಸಿಂಧೂರ ಲಕ್ಷ್ಮಣರ 132 ನೇ ಜಯಂತೋತ್ಸವ ಇವರನ್ನು ಇವರ ಶೌರ್ಯ ಪ್ರತೀಕ ಆದರ್ಶಗಳನ್ನು ನೆನೆದು ಮೈಗೂಡಿಸಿಕೊಳ್ಳುವುದು ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಸಲ್ಲಿಸುವ ಗೌರವ.ಸಿಂಧೂರ ಲಕ್ಷ್ಮಣರು ೧೮೯೮ ರಲ್ಲಿ ಈಗಿನ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಸಿಂಧೂರ್ ಗ್ರಾಮದಲ್ಲಿ ಸಾಬಣ್ಣ ಮತ್ತು ನರಸವ್ವ ದಂಪತಿಗಳಿಗೆ ಜನಿಸಿದರು.ಈ ದಂಪತಿಗಳಿಗೆ ಮಕ್ಕಳಿಲ್ಲದೇ ಗಂಡುಮಗುವನ್ನು ದತ್ತುಪಡೆದಿರುತ್ತಾರೆ ಆ ಮಗುವಿನ ಹೆಸರು ರಾಮ ಆನಂತರ ಹುಟ್ಟಿದ ಸ್ವಂತ ಸಂತಾನವೇ ಈ ಸಿಂಧೂರ ಲಕ್ಷ್ಮಣ.ಇವರಿಬ್ಬರನ್ನು ಅಣ್ಣತಮ್ಮಂದಿರ ಸೂಚ್ಯವಾಗಿ ರಾಮ ಲಕ್ಷ್ಮಣರೆಂದು ಕರೆಯುತ್ತಾರೆ.ಲಕ್ಷ್ಮಣನರು ಬಾಲ್ಯದಲ್ಲಿಯೇ ಅತೀವ ಶಕ್ತಿ ಮತ್ತು ಶೌರ್ಯವುಳ್ಳ ಹುಡುಗ.ತಂದೆಯ ಮರಣ ನಂತರ ಲಕ್ಷ್ಮಣ್ ಅವರಿಗೆ ಸರ್ಕಾರಿ ವಾಲಿಕೇರಿಯ ಕೆಲಸ ಸಿಕ್ಕುತ್ತದೆ.ಲಕ್ಷ್ಮಣರು ಸುರದ್ರೂಪಿ, ಅಜಾನುಭಾಹು ಆಯಕಟ್ಟಿನ ದೇಹವಿನ್ಯಾಸ ಹೊಂದಿದವರು.ಇವರನ್ನು ಮಹಾಭಾರತದ ಭೀಮನಿಗೆ ಹೋಲಿಸಿದ್ದಾರೆ.ಮತ್ತು ಹತ್ತು ಅಡಿ ಎತ್ತರದ ಗೋಡೆ ಅಥವಾ ಕೋಟೆಯನ್ನು ಹತ್ತಿ ಜಿಗಿಯಬಲ್ಲ ಸಾಮರ್ಥ್ಯ ಉಳ್ಳವನಾಗಿದ್ದವನೆಂದು ಜನಪದ ಹಾಡುಗಳಲ್ಲಿ ವರ್ಣಿಸಲಾಗಿದೆ. ಬ್ರಿಟೀಷರ ವಿರುದ್ಧ ಸಮರ ಸಾರುವ ಘಟನೆಗಳಲ್ಲಿ ಸದಾ ಇರುತ್ತಿದ್ದರಿಂದ ಇವರು ತಲೆಮರೆಸಿಕೊಂಡು ವಾಸವಿರುತ್ತಿದ್ದರು.ಇವರನ್ನು ಬೆನ್ನು ಹತ್ತಿದ ಪೋಲಿಸರಿಂದ ತಪ್ಪಿಸಿಕೊಳ್ಳಲು ಓಡುವ ಕುದುರೆಯ ಬೆನ್ನಹತ್ತಿ ಪರಾರಿಯಾಗುತ್ತಿದ್ದ ಎನ್ನುವ ಜನಜನಿತ ಗುಣಗಾನವಿದೆ.೧೯೨೦ ರ ಅಸಹಕಾರ ಚಳುವಳಿಯಲ್ಲಿ ತನ್ನದೇ ಆದ ರೀತಿಯಲ್ಲಿ ಕ್ರಾಂತಿಮಾರ್ಗವಾಗಿ ಬ್ರೀಟೀಷರ ವಿರುದ್ಧ ಬಂಡಾಯ ಹೂಡಿದ ಹೋರಾಟಗಾರ.ಬ್ರಿಟೀಷರ ವಿರುದ್ಧ ಗುಂಪು ಸೃಷ್ಟಿಸಿಕೊಂಡು ಅವರು ಸಂಗ್ರಹಿಸಿದ್ದ ಭಾರತೀಯರ ತೆರಿಗೆಯನ್ನು ಮತ್ತು ಭ್ರಷ್ಟ ಮತ್ತು ನಿರ್ದಯಿ ಶ್ರೀಮಂತರ ಸಂಪತ್ತನ್ನು ಲೂಟಿ ಮಾಡಿ ಅದನ್ನು ಭಾರತೀಯ ಬಡಜನರಿಗೆ ಹಂಚುತ್ತಿದ್ದರು.ದಾದಬಾಯಿ ನವರೋಜಿಯವರ ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಮುನ್ಸೂಚನೆಯಾಗಿ ಅರಿತ ಲಕ್ಷ್ಮಣರಿಗೆ ಈ ವಿಧಿಯ ಪರಿ ಭಾರತೀಯರ ಪರವಾಗಿ ಲೂಟಿಗಿಳಿಯಲೇ ಬೇಕಾಯಿತು.ಸಾಮಾನ್ಯ ಜನರು ಇವರ ಸಾಮಜಿಕ ಕಾರ್ಯಕ್ಕೆ ಮತ್ತು ದೇಶ ಪ್ರೇಮಕ್ಕೆ ಮನಸೋತು ಇವರಿಗೆ ಅಡಗು ತಾಣಗಳಲ್ಲಿ ಗೌಪ್ಯವಾಗಿ ಆಶ್ರಯವಿತ್ತು ಊಟ ಇನ್ನಿತರ ಸವಲತ್ತುಗಳನ್ನು ನೀಡುತ್ತಿದ್ದರು.ಬ್ರಿಟೀಷರಿಗೆ ತಲೆನೋವಾಗಿದ್ದ ಲಕ್ಷ್ಮಣರ ಮೇಲೆ ದೂರು ದಾಖಲಾಗಿ ಕಂಡಲ್ಲಿ ಕೊಲ್ಲುವ ಆಜ್ಞೆಯಾಗಿತ್ತು.ಇದೇ ಸಂಧರ್ಭದಲ್ಲಿ ಲಕ್ಷ್ಮಣರು ಈಗಿನ ಬಾಗಲಕೋಟೆ ಜಿಲ್ಲೆಯ ಬೀಳಗಿಯ ಹತ್ತಿರದ ತೆಗ್ಗಿಯ ವೆಂಕಪ್ಪ ಗೌಡರಿಗೂ ಮತ್ತು ಲಕ್ಣ್ಮಣರಿಗೂ ಆತ್ಮೀಯವಾದ ಸ್ನೇಹವಿತ್ತು. ಇದನ್ನು ಅರಿತ ಬ್ರೀಟೀಷರು ವೆಂಕಪ್ಪಗೌಡರಿಗೆ ಪ್ರಾಣಭಯ ಮತ್ತು ಇನ್ನಿತರ ಒಳಸಂಚುಗಳ ಕೆಟ್ಟ ಸಂದಿಗ್ಧತೆಯನ್ನು ಸೃಷ್ಟಿಸಿ ಲಕ್ಷ್ಮಣರ ಸೆರೆಹಿಡಿದು ಹತ್ಯೆಯಾಗಲು ಸಹಾಯ ಮಾಡಬೇಕೆಂದು ಸನ್ನಿವೇಶವನ್ನು ಉದ್ಭವಿಸಿದರು.ಲಕ್ಷ್ಮಣರ ವಿರುದ್ದ ಮುಖನೇರವಾಗಿ ಯುದ್ಧಮಾಡಿ ಹತ್ಯೆಮಾಡುವುದು ಅಷ್ಟು ಸುಲಭವಲ್ಲ ಎಂದು ಅರಿತ ಗೌಡರ ವಾಲಿಕಾರರು ಒಂದು ಸಂಚನ್ನು ಹೂಡಿದರು.೧೯೨೨ ರ ಮಣ್ಣೇತ್ತಿನ ಅಮವಾಸ್ಯೆಯ ದಿನ ಲಕ್ಷ್ಮಣ ಮತ್ತು ಆತನ ಸಂಗಡಿಗರಿಗೆ
ಔತಣ ಕೂಟಕ್ಕೆ ಕರೆದು.ಲಕ್ಷ್ಮಣ ಮತ್ತು ಆತನ ಸಂಗಡಿಗರು ಊಟ ಮಾಡುತ್ತಿದ್ದ ಸಂಧರ್ಭದಲ್ಲಿ ಮರೆಯಲ್ಲಿ ನಿಂತು ಗುಂಡು ಹಾರಿಸಿ ಮೋಸದಿಂದ ಹತ್ಯೆಮಾಡಲಾಯಿತು.ಹತನಾದ ವೀರ ತರುಣ ಮತ್ತು ಆತನ ಸಂಗಡಿಗರು ಇಂದಿಗೂ ಮಹಾರಾಷ್ಟ್ರ ಮತ್ತು ಕರ್ನಾಟಕದ ಜನತೆಯ ಬ್ರಿಟೀಷರ ವಿರುದ್ಧದ ಬಂಡಾಯ ನಾಯಕನಾಗಿ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿ ಜನಮಾನಸದಲ್ಲಿ ಅಜರಾಮರರಾಗಿದ್ದಾರೆ.ಸಿಂಧೂರ ಲಕ್ಷ್ಮಣರ ಕುರಿತಾದ ನಾಟಕವು ಎಲ್ಲೆಡೆ ಮನ್ನಣೆಗಳಿಸಿದ್ದು.ಆ ನಾಟಕವನ್ನು ೧೯೭೭ರಲ್ಲಿ “ವೀರ ಸಿಂಧೂರ ಲಕ್ಷ್ಮಣ”ಎಂಬ ಶೀರ್ಷಿಕೆಯನ್ನು ಇಟ್ಟು ಒಂದು ಕನ್ನಡ ಚಲನಚಿತ್ರವನ್ನೂ ಕೂಡ ನಿರ್ಮಿಸಲಾಯಿತು.ಈ ರೀತಿಯ ಬ್ರಿಟೀಷರ ಒಳಸಂಚುಗಳಿಗೆ ಬಲಿಯಾದ ಅದೆಷ್ಟೋ ನಾಯಕರು ಇಂದು ನಮ್ಮ ಅರಿವಿಗೆ ಬರಬೇಕಿದೆ. ನಾವು ಯುದ್ದವನ್ನು ಇತ್ತೀಚಿಗೆ ಶೀಥಲಸಮರವಾಗಿ ಸ್ವೀಕರಿಸಿದ್ದೇವೆ.ನಮ್ಮೊಳಗೆಯೇ ಜಾತಿ ವೈಷಮ್ಯಗಳಲ್ಲಿ ,ಅಧಿಕಾರ ವ್ಯಾಮೋಹಗಳಲ್ಲಿ ಹೆಣ್ಣು ಹೊನ್ನಿನ ಆಸೆಗಳಲ್ಲಿ ನಮ್ಮವರ ಅವನತಿಗೆ ನಾವೇ ನಾಂದಿ ಹಾಡುತ್ತಿದ್ದೇವೆ ಅಂದು ಈ ರೀತಿಯಾಗಿ ಅದೆಷ್ಟೋ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಪ್ರಾಣ ಬಲಿದಾನಗಳ ಮೂಲಕ ನಮಗೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಈ ವಿಧವಾಗಿ ನಾವು ಕೆಟ್ಟು ಬದುಕಲಿ ಎಂದಲ್ಲ.ನಮ್ಮ ಈ ರೀತಿಯ ವ್ಯಾಮೋಹದ ಕ್ರೌರ್ಯದ ಬದುಕು ನಾವು ನಮ್ಮ ಬದುಕಿಗಾಗಿ ಶ್ರಮಿಸಿದ ಪ್ರಾಣತೆತ್ತ ವೀರ ನಾಯಕರಿಗೆ ಸಲ್ಲಿಸುವ ಅಗೌರವವಾಗುತ್ತದೆ. ಹಾಗಾಗಿ ನಾವೆಲ್ಲರೂ ಒಂದೇ.ನಾವೆಲ್ಲರೂ ಭರತಮಾತೆಯ ಪುತ್ರರು.ನಾವೆಲ್ಲರೂ ಸಮಾನರು.ನಾವೆಲ್ಲರೂ ಐಕ್ಯತೆಯಿಂದ ಬದುಕುವುದೇ ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನಾವು ಸಲ್ಲಿಸುವ ಅತ್ಯಂತ ದೊಡ್ಡ ಗೌರವವಾಗಿರುತ್ತದೆ.
ಚಿ.ಮ.ಬಿ.ಆರ್(ಮಂಜುನಾಥ ಬಿ.ಆರ್)