ಚಾಮರಾಜನಗರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಡಾ|| ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ರೆಡ್‌ಕ್ರಾಸ್ ಸಂಸ್ಥೆ ಸಹಯೋಗದೊಂದಿಗೆ ತಾಲೂಕಿನ ಹರವೆ ಹೋಬಳಿಯ ಕುಮಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಬುಧವಾರ ಸ್ವಾಮಿ ವಿವೇಕಾನಂದರ ೧೫೯ನೇ ಜನ್ಮದಿನ ಹಾಗೂ ಯುವ ಸಪ್ತಾಹ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅನಿತಾ ಅವರು ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಅವರು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಯುವ ಜನತೆ ಜೀವನದಲ್ಲಿ ಅಳವಡಿಸಿಕೊಂಡು ಅವರ ಭವ್ಯಭಾರತದ ನಿರ್ಮಾಣದ ಕನಸನ್ನು ಈಡೇರಿಸಬೇಕು. ಯುವ ಜನರು ಸದಾ ಸಕಾರಾತ್ಮಕ ಚಿಂತನೆಗಳನ್ನು ಹೊಂದಬೇಕು ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಎಂ. ಶ್ರೀಧರ್ ಅವರು ಮಾತನಾಡಿ ಸ್ವಾಮಿ ವಿವೇಕಾನಂದರು ಕಣಕಣದಲ್ಲೂ ಸಹ ಭಾರತದ ಬಗ್ಗೆ ಅಭಿಮಾನವನ್ನು ತುಂಬಿಕೊಂಡಿದ್ದ ಮಹಾಚೇತನ. ಯುವ ಜನತೆಯಿಂದ ಸಧೃಡ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂಬ ಸಂದೇಶದೊಂದಿಗೆ ಯುವಜನರನ್ನು ಹುರಿದುಂಬಿಸಿದ್ದರು ಎಂದು ತಿಳಿಸಿದರು.
ಏಳಿ ಎದ್ದೇಳಿ, ಗುರಿಮುಟ್ಟುವ ತನಕ ನಿಲ್ಲದಿರಿ ಎಂಬ ಸಂದೇಶ ಸಾರಿದ ವಿವೇಕಾನಂದರು ಯುವ ಜನತೆಗೆ ಆದರ್ಶ ಪ್ರಾಯವಾದ ಮಾರ್ಗದರ್ಶನ ಸಲಹೆ ಮಾಡಿದ್ದಾರೆ ಎಂದು ಶ್ರೀಧರ್ ಅವರು ತಿಳಿಸಿದರು.
ಡಾ|| ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನೋಡಲ್ ಅಧಿಕಾರಿ ಡಾ. ಮಹೇಶ್, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಈಶ್ವರ, ಕುಮಚಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಂಜುಳ ಹಾಗೂ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.