ಮಂಡ್ಯ: ಕೊರೋನಾ ಒಂದೆಡೆ ಜೀವ ತೆಗೆಯುತ್ತಿದ್ದರೆ ಮತ್ತೊಂದೆಡೆ ಬಡವರ, ನಿರ್ಗತಿಕರ ಜೀವನವನ್ನೇ ಮೂರಾಬಟ್ಟೆ ಮಾಡಿದ್ದು, ತಿನ್ನಲು ಅನ್ನ ಆಹಾರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಇದಕ್ಕೆ ಪಾಂಡವಪುರ ತಾಲೂಕಿನ ಶಿಕಾರಿಪುರದ ಹಕ್ಕಿಪಿಕ್ಕಿ ಜನಾಂಗದ ಬದುಕು ಸಾಕ್ಷಿಯಾಗಿದೆ.

ಇವತ್ತೋ ನಾಳೆಯೋ ಬಿದ್ದು ಹೋಗುವಂತಿರುವ ಗುಡಿಸಲುಗಳು, ಅದರೊಳಗೆ ಹಾವು, ಚೇಳು ಯಾವಾಗ ಬರುತ್ತೋ ಎಂಬ ಭಯ, ಅದರಾಚೆಗೆ ಮಾಡಲು ಕೆಲಸವಿಲ್ಲ, ವ್ಯಾಪಾರಕ್ಕೆ ಅವಕಾಶವಿಲ್ಲ ಹೀಗಾಗಿ ಇಲ್ಲಿನವರು ಸಂಪಾದನೆಯಿಲ್ಲದೆ ಗಂಜಿ ಕುಡಿದು ಸೊಪ್ಪು ತಿಂದು ಬದುಕು ಸಾಗಿಸುವಂತಾಗಿದೆ. ಶಿಕಾರಿಪುರದಲ್ಲಿ ಸುಮಾರು ಎಪ್ಪತ್ತು ಹಕ್ಕಿಪಿಕ್ಕಿ ಕುಟುಂಬಗಳು ಕಳೆದ ನಲುವತ್ತು ವರ್ಷಗಳಿಂದ ವಾಸಿಸುತ್ತಿವೆ. ಈ ಪೈಕಿ 37ಮಂದಿಗೆ ಹಕ್ಕುಪತ್ರವನ್ನು ನೀಡಲಾಗಿದ್ದು, ಉಳಿದ 22 ಮಂದಿಗೆ ಹಕ್ಕು ಪತ್ರ ಸಿದ್ಧವಿದ್ದು, ಜಿಲ್ಲಾಧಿಕಾರಿಯ ಬಳಿ ಇದೆಯಂತೆ ಆದರೆ ಅದು ಗ್ರಾಮಪಂಚಾಯಿತಿಯನ್ನು ಸೇರಿಲ್ಲವಂತೆ. ಇನ್ನು ಉಳಿದ 43ಮಂದಿಗೆ ಹಕ್ಕು ಪತ್ರ ಬರಬೇಕಿದೆ ಎಂದು ಹೇಳಲಾಗುತ್ತಿದೆ. ಅದು ಆಚೆಗಿರಲಿ.ಇನ್ನು ಇಲ್ಲಿರುವ ಬಹುತೇಕ ಕುಟುಂಬಗಳು ಸೂರಿಲ್ಲದೆ ಗುಡಿಸಲಲ್ಲಿ ವಾಸಿಸುತ್ತಿದ್ದು ಆ ಗುಡಿಸಲು ಕೂಡ ಮಳೆ ಗಾಳಿಗೆ ಬಿದ್ದು ಹೋಗುವಂತಿದೆ. ಹೀಗೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಇವರು ಬದುಕುವುದಕ್ಕಾಗಿ ಊರೂರು ತಿರುಗಿ ಪ್ಲಾಸ್ಟಿಕ್ ಹೂಗಳನ್ನು ಮಾರುತ್ತಾರೆ. ಆದರೆ ಲಾಕ್ ಡೌನ್ ಆಗಿರುವ ಕಾರಣ ಮನೆಯಿಂದ ಹೊರಗೆ ಹೋಗುವಂತಿಲ್ಲ. ಜತೆಗೆ ಪ್ಲಾಸ್ಟಿಕ್ ಹೂವುಗಳನ್ನು ಖರೀದಿಸುವವರು ಇಲ್ಲವಾಗಿರುವುದರಿಂದ ಹಣ ಸಂಪಾದನೆಯಿಲ್ಲದೆ ತುತ್ತು ಅನ್ನಕ್ಕೂ ತಾತ್ವಾರ ಬಂದಿದೆ.

ಇನ್ನು ಇವರು ವ್ಯಾಪಾರ ಸೇರಿದಂತೆ ಇನ್ನಿತರ ಖರೀದಿಗಾಗಿ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದು, ಈಗ ಕಂತು ಕಟ್ಟಿ ತೀರಿಸುವುದೇ ಸವಾಲ್ ಆಗಿ ಪರಿಣಮಿಸಿದೆ. ಸಾಲದ ಹಣವನ್ನು ಪಾವತಿಸದ ಕಾರಣ ಸಾಲ ನೀಡಿದ ಸಂಸ್ಥೆಗಳ ಮುಖ್ಯಸ್ಥರು ಬಾಯಿಗೆ ಬಂದಂತೆ ಬೈಯ್ಯುತ್ತಿದ್ದಾರಂತೆ. ಈ ಬಗ್ಗೆ ನೋವು ತೋಡಿಕೊಳ್ಳುವ ಇಲ್ಲಿನವರು ಕಾಡಿಗೆ ಸೌದೆ ತರಲು ಹೋದರೆ ಅರಣ್ಯ ಇಲಾಖೆಯವರು ನಮ್ಮನ್ನು ಗದರಿಸಿ ಓಡಿಸುತ್ತಾರೆ. ಗ್ರಾಮಗಳಿಗೆ ತೆರಳಿ ಭಿಕ್ಷೆ ಬೇಡಿದರೆ ದೊಣ್ಣೆ ತೆಗೆದುಕೊಂಡು ಹೊಡೆದು, ನಿಂದಿಸಿ ಹೊರದಬ್ಬುತ್ತಾರೆ. ವ್ಯಾಪಾರಕ್ಕೆಂದು ಹೋದರೆ ವ್ಯಾಪಾರ ಮಾಡೋರೆ ಇಲ್ಲವಾಗಿದ್ದಾರೆ. ಹೀಗಾದರೆ ನಾವು ಜೀವನ ಮಾಡುವುದು ಹೇಗೆ? ನಮ್ಮನ್ನು ನಂಬಿರುವ ಮಕ್ಕಳ ಹೊಟ್ಟೆ ತುಂಬಿಸುವುದು ಹೇಗೆಂದು ಕೇಳುತ್ತಾ ಕಣ್ಣೀರು ಸುರಿಸುತ್ತಾರೆ.

ಪ್ರತಿ ಬಾರಿಯೂ ಚುನಾವಣೆ ಬಂದಾಗ ಇತ್ತ ಬಂದು ಹಲವು ಭರವಸೆ ನೀಡುವ ಜನಪ್ರತಿನಿಧಿಗಳು ಮತ್ತೆ ಇತ್ತ ಮುಖ ಹಾಕುವುದಿಲ್ಲ. ಅಧಿಕಾರಿಗಳು ನಮ್ಮ ಗ್ರಾಮದತ್ತ ಬರಲು ಹಿಂಜರಿಯುತ್ತಾ ನಮ್ಮನ್ನು ನಾಯಿಗಿಂತ ಕಡೆಯಾಗಿ ಕಾಣುತ್ತಾರೆ. ಸರ್ಕಾರದ ಯಾವುದೇ ಸೌಲಭ್ಯವೂ ನಮಗಿಲ್ಲದಾಗಿದೆ. ಇದರಿಂದ ಜೀವನ ಕಷ್ಟವಾಗಿದೆ. ಕಳೆದ ವರ್ಷ ಲಾಕ್ ಡೌನ್ ವೇಳೆ ಹಲವರು ಆಹಾರದ ಕಿಟ್ ವಿತರಿಸಿದ್ದರು ಹಾಗಾಗಿ ಜೀವನ ಅಷ್ಟೊಂದು ಕಷ್ಟವಾಗಲಿಲ್ಲ. ಆದರೆ ಈ ಬಾರಿ ಜೀವನ ಸಾಗಿಸುವುದು ಕಷ್ಟವಾಗಿದೆ. ಸರ್ಕಾರದಿಂದ ನೀಡುವ ಪಡಿತರ ಒಂದೇ ದಿನದಲ್ಲಿ ಖಾಲಿಯಾಗುವುದರಿಂದ ದಿನಕ್ಕೊಂದು ಹೊತ್ತು ಊಟ ಮಾಡುವಂತಾಗಿದೆ ಎಂದು ನೋವು ತೋಡಿಕೊಳ್ಳುತ್ತಾರೆ ಇಲ್ಲಿನ ಜನ. ಇನ್ನಾದರೂ ಸಂಬಂಧಿಸಿದವರು ಇವರತ್ತ ಗಮನಹರಿಸಿ ಬದುಕುವುದಕ್ಕೆ ಅವಕಾಶ ಮಾಡಿಕೊಟ್ಟರೆ ಈ ಬಾರಿಯ ಲಾಕ್ ಡೌನ್ ನಲ್ಲಿ ಸ್ವಲ್ಪ ಮಟ್ಟಿಗೆ ನೆಮ್ಮದಿಯಾಗಿರಲು ಸಾಧ್ಯವಾಗಬಹುದೇನೋ?

 

 

By admin