ಬೆಂಗಳೂರು: ಡಾ: ಸಿದ್ಧಲಿಂಗಯ್ಯ ಅವರು ನಮ್ಮ ನಾಡು ಕಂಡ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ದಲಿತರ ನೋವನ್ನು ಸಮರ್ಥಕವಾಗಿ ಅಕ್ಷರ ರೂಪಕ್ಕೆ ಇಳಿಸಿ, ಅವರನ್ನು ಜಾಗೃತಿಗೊಳಿಸಿದವರು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹೇಳಿದರು.
ಬೆಂಗಳೂರಿನ ಕಲಾಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ದಿವಂಗತ ಕವಿ ಚಿಂತಕ ಮತ್ತು ಮಾಜಿ ವಿಧಾನಪರಿಷತ್ ಸದಸ್ಯ ಡಾ. ಸಿದ್ಧಲಿಂಗಯ್ಯ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಡಾ: ಸಿದ್ಧಲಿಂಗಯ್ಯನವರು, ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳನ್ನು,ಅಣ್ಣ ಬಸವಣ್ಣವರ ವಿಚಾರಧಾರೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹೋದ ಎಲ್ಲಾ ಕಡೆ ಸಿದ್ಧಲಿಂಗಯ್ಯನವರು ಮಾತನಾಡುತ್ತಾರೆ ಅಂದರೆ ಎಲ್ಲರೂ ಕಿವಿಕೊಟ್ಟು ಕೇಳುವ ರೀತಿಯಲ್ಲಿ ಅವರ ವಿಚಾರಧಾರೆಗಳನ್ನ ಜನರಿಗೆ ಮನವರಿಕೆ ಮಾಡಿಕೊಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದ ಧೀಮಂತ ವ್ಯಕ್ತಿ ಡಾ:ಸಿದ್ಧಲಿಂಗಯ್ಯನವರು ಎಂದರು.
ಅವರ ನನ್ನ ಸಂಬಂಧ ಬಹಳ ನಿಕಟವಾಗಿದ್ದು, ಬಹಳ ಸಂದರ್ಭಗಳಲ್ಲಿ ಅನೇಕ ರೀತಿಗಳಲ್ಲಿ ಚರ್ಚೆ ಮಾಡಿ ಮಾರ್ಗದರ್ಶನ ಮಾಡುತ್ತಿದ್ದರು. ಅಂತಹ ವ್ಯಕ್ತಿಯನ್ನು ಕಳೆದುಕೊಂಡು ನಮ್ಮ ಕುಟುಂಬದ ಒಬ್ಬ ಸದಸ್ಯರನ್ನು ನಾವು ಕಳೆದುಕೊಂಡಿದ್ದೇವೆ ಎಂಬ ಭಾವನೆ ನನಗೆ ಮಾತ್ರವಲ್ಲ, ಇಲ್ಲಿ ಕುಳಿತಂತ ಎಲ್ಲರಿಗೂ ಇದೆ ಎಂದು ಭಾವಿಸುತ್ತೇನೆ.. ಡಾ. ಸಿದ್ದಲಿಂಗಯ್ಯನವರು ಮಾಡಿದಂತಹ ಕೆಲಸ ಅವರು ಕವನ ರೂಪದಲ್ಲಿ ನಾಡಿಗೆ ಕೊಟ್ಟಂತ ಕೊಡುಗೆ ಭವಿಷ್ಯ: ಜೀವನದುದ್ದಕ್ಕೂ ನಾವು ನೆನಪಿನಲ್ಲಿಡುವಂತ ಕೆಲಸವನ್ನು ಅವರು ಮಾಡಿ ಹೋಗಿದ್ದಾರೆ ಎಂದರು.
ಮೇರುನುಡಿ ಸರಳ ಸಜ್ಜನಿಕೆಯ ಡಾ. ಸಿದ್ಧಲಿಂಗಯ್ಯನವರ ಹಾಸ್ಯ ಪ್ರಜ್ಞೆ ಉಲ್ಲೇಖನಾರ್ಹ ಇಂತಹ ಶ್ರೇಷ್ಠ ಸಾಧಕನ ಮರಣ ನಮ್ಮ ನಾಡಿಗೆ ತುಂಬಲಾರದ ನಷ್ಟವಾಗಿದೆ . ಅವರ ಜೀವಿತಾವಧಿಯ ಕೊನೆಯಲ್ಲಿ ರಚಿಸಿದ ಬೋಧಿವೃಕ್ಷದ ಕೆಳಗೆ ಕವನ ಸಂಕಲನ ಬಿಡುಗಡೆ ಮಾಡುವ ಅವಕಾಶ ದೊರೆತಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ವಸತಿ ಸಚಿವ ವಿ.ಸೋಮಣ್ಣ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಶಾಸಕ ಮುನಿರತ್ನ, ಅವರ ಮಗಳು ಮಾನಸ ಸಿದ್ಧಲಿಂಗಯ್ಯ ಅವರು ಉಪಸ್ಥಿತರಿದ್ದರು.