ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಶ್ರೀ ಮಾಯಕಾರ ಗುರುಕುಲ ಸಂಸ್ಥೆ ವತಿಯಿಂದ ಇದೇ ಮೊದಲ ಬಾರಿಗೆ ವಿಶೇಷ “ಯುಗಾದಿ ಕ್ಯಾಲೆಂಡರ್” ಹೊರತರಲಾಗಿದ್ದು, ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಯುಗಾದಿ ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮಾಯಕಾರ ಗುರುಕುಲದ ಸಂಸ್ಥಾಪಕರಾದ ಡಾ. ಮೂಗೂರು ಮಧು ದೀಕ್ಷಿತ್ ಅವರು, ನಮ್ಮ ಸಂಸ್ಥೆಯಿಂದ ಬಿಡುಗಡೆ ಮಾಡಿರುವ ಯುಗಾದಿ ಕ್ಯಾಲೆಂಡರ್ ವಿಶೇಷತೆಯಿಂದ ಕೂಡಿದೆ. ಇದು ಸಂಪೂರ್ಣ ಹಿಂದೂ ಧಾರ್ಮಿಕ ಸನಾತನತೆಯನ್ನು ಹೊಂದಿದೆ. ಚಾಂದ್ರಮಾಸದ ರೀತ್ಯ ಈ ಕ್ಯಾಲೆಂಡರ್ ಪಾಡ್ಯದಿಂದ ಶುರುವಾಗಿ ಅಮಾವಾಸ್ಯೆಯಲ್ಲಿ ಕೊನೆಯಾಗುತ್ತದೆ. ಈ ವಿಶೇಷ ಕ್ಯಾಲೆಂಡರ್‌ನಲ್ಲಿ ನಿತ್ಯ ಪಂಚಾಂಗ, ಹಬ್ಬಗಳು, ಮಳೆ ನಕ್ಷತ್ರ, ನಿತ್ಯ ಒಳ್ಳೆಯ ಸಮಯಗಳನ್ನು ಒಳಗೊಂಡ ಗೌರಿ ಪಂಚಾಂಗದ ಜೊತೆಗೆ ಪ್ರತಿ ಮಾಸದಲ್ಲಿರುವ ಶುಭದಿನಗಳನ್ನು ತಿಳಿಸಲಾಗಿದೆ.

ಎಲ್ಲರಿಗೂ ಅರ್ಥವಾಗುವ ಮತ್ತು ಅನುಕೂಲವಾಗು ರೀತಿಯಲ್ಲಿ ಕ್ಯಾಲೆಂಡರ್ ರಚಿಸಲಾಗಿದೆ. ಹಿಂದೂ ಧರ್ಮವನ್ನ ಉಳಿಸಿ, ಬೆಳೆಸುವ ಉದ್ದೇಶದೊಂದಿಗೆ ಈ ಕ್ಯಾಲೆಂಡರ್ ಬಿಡುಗಡೆ ಮಾಡಲಾಗಿದ್ದು, ಇದೇ ಮೊದಲ ಬಾರಿಗೆ ಈ ರೀತಿಯಾದ ವಿಶೇಷ ಕ್ಯಾಲೆಂಡರ್ ಹೊರ ತರಲಾಗಿದೆ. ಈ ವಿಶೇಷ ಕ್ಯಾಲೆಂಡರ್ ಒಂದಕ್ಕೆ ೩೮ ರೂ. ವೆಚ್ಚವಾಗಲಿದ್ದು, ಸಾರ್ವಜನಿಕರಿಗೆ ಇದನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ. ಅಲ್ಲದೇ ಮುಂದಿನ ದಿನಗಳಲ್ಲಿ ಈ ವಿಶೇಷ ಕ್ಯಾಲೆಂಡರ್ ಅನ್ನು ಮೊಬೈಲ್ ಆಪ್ ಮೂಲಕವೂ ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ಈ ವಿಶೇಷ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಶ್ರೀ ಮಾಯಕಾರ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿಗಳು, ಹಿರಿಯ ಘಟಂ ಕಲಾವಿದರು ಶ್ರೀ ಎಂ.ಬಿ. ರವೀಂದ್ರ ಕುಮಾರ್, ಸಿಗ್ಮಾ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಪ್ರಾಂಶುಪಾಲರಾದ ಶ್ರೀ ಆರ್. ಮಂಜುನಾಥ್, ಮೈಸೂರಿನ ಹಿರಿಯ ಪುರೋಹಿತರುಗಳಾದ ಡಾ. ರವಿಕುಮಾರ್ ಶಾಸ್ತ್ರೀ, ಶ್ರೀ ನಾಗೇಶ್ ಶರ್ಮ, ವಿದ್ವಾನ್ ರುದ್ರೇಶ್ ಶಾಸ್ತ್ರಿ, ಶ್ರೀ ದಿನೇಶ್ ಶಾಸ್ತ್ರೀ, ಶ್ರೀ ಸುತ್ತೂರು ರುದ್ರೇಶ್, ಶ್ರೀ ಓಂಕಾರ್, ಶ್ರೀ ಜೈನ್ ಶ್ರೀ ಬೊಕ್ಕಳ್ಳಿ ಉಮೇಶ್, ಗುಪ್ತ ಪ್ರಿಂಟರ್ಸ್ ಮಾಲೀಕರಾದ ಶ್ರೀ ಗುಪ್ತ, ಒನ್ ಪಾಯಿಂಟ್ ಸಲ್ಯೂಷನ್ ಮುಖ್ಯಸ್ಥರಾದ ಶ್ರೀ ಶ್ರೀಕಾಂತ್ ಹಾಗೂ ಶ್ರೀ ಮಾಯಕಾರ ಗುರುಕುಲ ಸಂಸ್ಥೆಯ ಜೆ.ಇ. ಶಿವಕುಮಾರ್, ಎಸ್. ಸಾಗರ್, ಶರತ್ ಶಾಸ್ತ್ರಿ ಅವರುಗಳು ಉಪಸ್ಥಿತರಿದ್ದರು.