ಚಾಮರಾಜನಗರ: ರಷ್ಯಾ ಮತ್ತು ಉಕ್ರೇನ್ ದೇಶಗಳ ನಡುವೆ ಯುದ್ದ ನಡೆಯುವ ಸಂಭವವಿದ್ದು, ಉಕ್ರೇನ್ ದೇಶದಲ್ಲಿ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರೆ ಉದ್ದೇಶಗಳಿಗಾಗಿ ವಾಸವಿರುವ ಚಾಮರಾಜನಗರ ಜಿಲ್ಲೆಗೆ ಸಂಬಂಧಪಟ್ಟ ಭಾರತದ ಪ್ರಜೆಗಳಿದ್ದಲ್ಲಿ ಅವರ ಬಗ್ಗೆ ಮಾಹಿತಿ ಕಲೆ ಹಾಕುವ ಅವಶ್ಯಕತೆಯಿದ್ದು, ಅಂತಹವರ ಮಾಹಿತಿಯನ್ನು ಸಂಬಂಧಿಸಿದವರು ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿರುವ ಜಿಲ್ಲಾ ವಿಪತ್ತು ನಿರ್ವಹಣಾ ಶಾಖೆಯ ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ೧೦೭೭ / ೦೮೨೨೬-೨೨೩೧೬೦ ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮನವಿ ಮಾಡಿದ್ದಾರೆ. 
ಹೆಚ್ಚಿನ ಮಾಹಿತಿಗಾಗಿ url:ukraine.karnataka.tech/stranded ವೆಬ್‌ಸೈಟ್ ವೀಕ್ಷಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾದ ಚಾರುಲತಾ ಸೋಮಲ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. 

ಉಕ್ರೇನ್‌ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಜನರ ಸಂಬಂಧಿತ ಮಾಹಿತಿ ಸಂಗ್ರಹಣೆಗೆ ವೆಬ್ ಪೋರ್ಟಲ್: ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಉಕ್ರೇನ್ ನಲ್ಲಿ ಸಿಲುಕಿರುವ ಕರ್ನಾಟಕ ರಾಜ್ಯದ ಜನರ ಸಂಬಂಧಿತ ಮಾಹಿತಿ ಸಂಗ್ರಹಣೆಗಾಗಿ ವೆಬ್ ಪೋರ್ಟಲ್ http://ukraine.karnataka.techರಚಿಸಿದೆ.

ಮೊಬೈಲ್‌ನಲ್ಲಿಯೂ ವೆಬ್ ಪೋರ್ಟಲ್ ಅನ್ನು ಆಪರೇಟ್ ಮಾಡಬಹುದಾಗಿದೆ. ಉಕ್ರೇನ್‌ನಲ್ಲಿ ಸಿಲುಕಿಕೊಂಡಿರುವ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವವರ ಮೂಲ ಮಾಹಿತಿ, ಸಿಲುಕಿಕೊಂಡಿರುವ ವ್ಯಕ್ತಿಯ ಜೊತೆಗಿನ ಸಂಬಂಧ ಹಾಗೂ ಸಿಲುಕಿಕೊಂಡಿರುವ ವ್ಯಕ್ತಿಗಳ ವಿವರಗಳನ್ನು ನೀಡಬಹುದಾಗಿದೆ. ಭಾರತ ಸರ್ಕಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವೆಬ್‌ಸೈಟ್ ನಿಂದ ಸಂಗ್ರಹಿಸಲಾದ ಸಂಬಂಧಿತ ಮಾಹಿತಿ ಪಡೆಯಬಹುದು. ಭಾರತ ಸರ್ಕಾರ, ಕರ್ನಾಟಕ ಸರ್ಕಾರ ಮತ್ತು ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ, ಸಹಾಯವಾಣಿಯ ಸಂಖ್ಯೆಯ ಸಂಬಂಧಿತ ಸಂಪರ್ಕ ಸಂಖ್ಯೆ ಇ-ಮೇಲ್ ವಿವರಗಳು ಹಾಗೂ ಇತ್ತೀಚಿನ ಸುದ್ದಿಗಳನ್ನು ಒದಗಿಸಲಾಗುತ್ತದೆ.

ಅಪ್ಲಿಕೇಷನ್‌ನಿಂದ ಸಂಗ್ರಹಿಸಲಾದ ಮಾಹಿತಿಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಂಟ್ರೋಲ್ ರೂಂಗೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕಳುಹಿಸಿಕೊಡಲಿದೆ. ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಂಟ್ರೋಲ್ ರೂಂ ಮಾಹಿತಿದಾರರೊಂದಿಗೆ ಮಾತನಾಡಲಿದ್ದು ಇತ್ತೀಚಿನ ಬೆಳವಣಿಗೆಗಳು ಹಾಗೂ ಅಗತ್ಯವಿರುವ ಮಾಹಿತಿಯನ್ನು ಸಂಗ್ರಹಿಸಲಿದೆ ಎಂದು ಚಾಮರಾಜನಗರ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.