ಚಾಮರಾಜನಗರ: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ವತಿಯಿಂದ ನಡೆದ ಪರೀಕ್ಷೆಯಲ್ಲಿ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಮಹದೇವಶೆಟ್ಟಿ ಅವರ ಧರ್ಮಪತ್ನಿ ಶೀಲಾ ಅವರು ೪೦೦ ಅಂಕಗಳಿಗೆ ೨೧೪ ಅಂಕಗಳನ್ನು ಪಡೆದು, ಉತ್ತೀರ್ಣರಾಗಿದ್ದು, ಇವರ ಸಾಧನೆಗೆ ಪೂರಕವಾಗಿ ಜಿಲ್ಲಾ ಉಪ್ಪಾರ ಯುವಕರ ಸಂಘದ ವತಿಯಿಂದ ನಗರದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಜಿಲ್ಲಾ ಲೆಕ್ಕಪರಿಶೋಧಕರ ಸಂಘದ ಅಧ್ಯಕ್ಷ ಸಿ.ಎಂ.ವೆಂಕಟೇಶ್ ಮಾತನಾಡಿ, ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ ಪ್ರಯತ್ನ, ಪ್ರಯತ್ನ ಮಾಡಿದರೆ ಎಲ್ಲವು ಸಾಧ್ಯ ಎಂಬುದಕ್ಕೆ ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ಉಪ್ಪಾರ ಸಮುದಾಯದ ಶೀಲಾಮಹದೇವಶೆಟ್ಟಿ ಅವರು ಸಾಕ್ಷಿಯಾಗಿದ್ದು, ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ ಆಫ್ ಇಂಡಿಯಾ ವತಿಯಿಂದ ನಡೆದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಸಮುದಾಯದ ಪ್ರತಿಯೊಬ್ಬರು ಇಂತಹ ಪ್ರಯತ್ನದಲ್ಲಿ ಯಶಸ್ವಿಯಾಗಬೇಕು ಎಂದರು.
ಜಿಲ್ಲಾ ಉಪ್ಪಾರ ಯುವಕರ ಸಂಘದ ಅಧ್ಯಕ್ಷ ಜಯಕುಮಾರ್ ಮಾತನಾಡಿ, ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಹಿಂದುಳಿದಿರುವ ಉಪ್ಪಾರ ಸಮುದಾಯದಲ್ಲಿ ಒಬ್ಬ ಮಹಿಳೆ ಸಾಧನೆಯ ಹಾದಿ ಕ್ರಮಿಸಿರುವುದು ಸಮುದಾಯ ಹೆಮ್ಮೆಪಡುವ ವಿಚಾರ, ಸಮುದಾಯದವರು ತಮ್ಮ ಮಕ್ಕಳಿಗೆ ಶಿಕ್ಷಣಕೊಡಿಸುವ ಮಹತ್ಕಾರ್ಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಸ್.ನಾಗರಾಜು, ಬ್ಯಾಡಮೂಡ್ಲು ಗ್ರಾಮದ ಶೀಲಾಅವರ ಪತಿ ಮಹದೇವಶೆಟ್ಟಿ ಹಾಜರಿದ್ದರು.