ಮಡಿಕೇರಿ : ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ನೆರವು, ಪೊಲೀಸ್ ನೆರವು, ಕಾನೂನು ಸಲಹೆ, ಸಮಾಲೋಚನೆ ಸೌಲಭ್ಯ ಒದಗಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ’ಸಖಿ’ ಒನ್ ಸ್ಟಾಪ್ ಸೆಂಟರ್, ಘಟಕವನ್ನು ನಗರದ ಜಿಲ್ಲಾ ಆಸ್ಪತ್ರೆಯ (ಮಹಿಳಾ ಮತ್ತು ಮಕ್ಕಳ ವಿಭಾಗ) ಆವರಣದಲ್ಲಿ ಆರಂಭಿಸಲಾಗಿದೆ.

ಖಾಸಗಿ ಹಾಗೂ ಸಾಮಾಜಿಕ ಸ್ತರಗಳಲ್ಲಿ ಹಿಂಸಾಚಾರ ಪೀಡಿತ ಹೆಣ್ಣು ಮಕ್ಕಳು ಹಾಗೂ ಮಹಿಳೆಯರಿಗೆ ಒಂದೇ ಸೂರಿನಡಿಯಲ್ಲಿ ಸಮಗ್ರ ರೀತಿಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು. ಯಾವುದೇ ರೀತಿಯ ಮಹಿಳೆಯರ ಮೇಲಿನ ದೌರ್ಜನ್ಯ, ಕಿರುಕುಳ ಹಿಂಸಾಚಾರಗಳು, ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ವೈದ್ಯಕೀಯ, ಮಾನಸಿಕ, ಕಾನೂನು ಸಮಾಲೋಚನೆ ಮೊದಲಾದ ಸೇವೆಗಳನ್ನು ನೀಡುವುದು  ’ಸಖಿ’ ಒನ್ ಸ್ಟಾಪ್ ಸೆಂಟರ್ ನ ಉದ್ದೇಶವಾಗಿದೆ.

ಹಿಂಸಾಚಾರಕ್ಕೆ ಒಳಗಾದ ಮಹಿಳೆಗೆ ವೈದ್ಯಕೀಯ ತುರ್ತು ಸೇವೆಗಳ ಅಗತ್ಯವಿದ್ದರೆ ತಕ್ಷಣ ವೈದ್ಯಕೀಯ ಹಾಗೂ ಸಮಾಲೋಚನೆ ನೀಡಲಾಗುವುದು. ಪ್ರಥಮ ವರ್ತಮಾನ ವರದಿ ಬಗ್ಗೆ ಮಾಹಿತಿ ಹಾಗೂ ಸಹಾಯ ಒದಗಿಸಲಾಗುವುದು. ನುರಿತ ಸಮಾಲೋಚನಾಗರರಿಂದ ಸಲಹೆ ಹಾಗೂ ಸಮಾಲೋಚನೆ ನೀಡಲಾಗುವುದು. ಮಹಿಳೆಗೆ ಕಾನೂನಿನ ಅರಿವು ಹಾಗೂ ಸಮಾಲೋಚನಾ ಸೇವೆ ಒದಗಿಸಲಾಗಿಸುವಲ್ಲಿ  ’ಸಖಿ’ ಒನ್ ಸ್ಟಾಪ್ ಸೆಂಟರ್ ಸಹಕರಿಸಲಿದೆ

ಹೆಚ್ಚಿನ ಮಾಹಿತಿಗಾಗಿ ಉಚಿತ ಮಹಿಳಾ ಸಹಾಯವಾಣಿ ಸಂಖ್ಯೆ: 181 ದೂರವಾಣಿ ಸಂಖ್ಯೆ: 08272-225444,  9686280372  ಸಂಪರ್ಕಿಸಬಹುದಾಗಿದೆ.

By admin