ಬೆಂಗಳೂರು: ರಾಜ್ಯದಲ್ಲಿ ಲಾಕ್‍ಡೌನ್ ಜಾರಿಗೊಳಿಸಿದ ಪರಿಣಾಮವಾಗಿ ಅಸಂಘಟಿತ ಕಾರ್ಮಿಕರಾದ ಅಗಸರು, ಕ್ಷೌರಿಕರು, ಗೃಹ ಕಾರ್ಮಿಕರು, ದರ್ಜಿಗಳು, ಮೆಕಾನಿಕ್, ಚಿಂದಿ ಆಯುವವರು, ಹಮಾಲರು, ಅಕ್ಕಸಾಲಿಗರು, ಕಮ್ಮಾರರು, ಕುಂಬಾರರು ಹಾಗೂ ಭಟ್ಟಿ ಕಾರ್ಮಿಕರು ಸಂಕಷ್ಟದಲ್ಲಿದ್ದು ಅವರಿಗೆ ಒಂದು ಬಾರಿಯ ಪರಿಹಾರವಾಗಿ ಎರಡು ಸಾವಿರ ರೂ.ಗಳ ನೆರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

ಈ ವರ್ಗಗಳ 18 ರಿಂದ 65 ವಯೋಮಾನದ ಬಿಪಿಎಲ್ ಕುಟುಂಬದ ಓರ್ವ ಫಲಾನುಭವಿ ಮಾತ್ರ ನೆರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಅವರು ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಯನ್ನು ಹೊಂದಿರಬೇಕು. ನಿಗದಿತ ವೃತ್ತಿ ನಿರ್ವಹಿಸುತ್ತಿರುವ ಕುರಿತು ಬಿಬಿಎಂಪಿ ವ್ಯಾಪ್ತಿಯ ವಾರ್ಡ್‍ಗಳ ಮಟ್ಟದಲ್ಲಿ ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಹಿರಿಯ ಆರೋಗ್ಯ ಅಧಿಕಾರಿಗಳು, ಆರೋಗ್ಯ ನಿರೀಕ್ಷಕರು, ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯ ಕಂದಾಯ ಅಧಿಕಾರಿ ಅಥವಾ ಕಂದಾಯ ನಿರೀಕ್ಷಕರು, ತಾಲ್ಲೂಕು ಮಟ್ಟದಲ್ಲಿ ಕಂದಾಯ ಇಲಾಖೆಯ ತಹಶೀಲ್ದಾರರು, ಉಪ ತಹಶೀಲ್ದಾರರು, ಕಂದಾಯ ಅಧಿಕಾರಿಗಳು, ಕಂದಾಯ ನಿರೀಕ್ಷಕರು, ಕಾರ್ಮಿಕ ಇಲಾಖೆಯ ಸಹಾಯಕ ಕಾರ್ಮಿಕ ಆಯುಕ್ತರು, ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ನಿರೀಕ್ಷಕರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಥವಾ ಕಾರ್ಯದರ್ಶಿ, ಹಮಾಲಿ ವೃತ್ತಿಯಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಮೇಲ್ಕಂಡ ಅಧಿಕಾರಿಗಳು ಅಥವಾ ತಾವು ಕೆಲಸ ನಿರ್ವಹಿಸುತ್ತಿರುವ ಇಲಾಖೆ, ಮಂಡಳಿ, ನಿಗಮದ ಅಧಿಕೃತ ಅಧಿಕಾರಿಗಳಿಂದ ಉದ್ಯೋಗ ದೃಢೀಕರಣ ಪ್ರಮಾಣ ಪತ್ರ ಪಡೆದು ಇತ್ತೀಚಿನ ಭಾವಚಿತ್ರದೊಂದಿಗೆ   https://sevesindhu.karnataka.gov.in/ ಪೋರ್ಟಲ್‍ನಲ್ಲಿ ಜು. 31 ರೊಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಅರ್ಜಿ ಸಲ್ಲಿಸಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೇವಾ ಕೇಂದ್ರಗಳು, ವಾರ್ಡ್ ಮಟ್ಟದ ಸೇವಾ ಕೇಂದ್ರಗಳು, ಸಾಮಾನ್ಯ ಸೇವಾ ಕೇಂದ್ರಗಳು (csc),  ಕಾರ್ಮಿಕ ಅಧಿಕಾರಿಗಳ ಕಚೇರಿಯನ್ನು ಭೇಟಿ ಮಾಡಿ ಮಾರ್ಗದರ್ಶನ ಹಾಗೂ ನೆರವನ್ನು ಪಡೆಯಬಹುದು. ಅರ್ಜಿದಾರರು ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಆಧಾರ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ನೆರವನ್ನು ಜಮೆ ಮಾಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ ಸಂಖ್ಯೆ: 155214 ನ್ನು ಅಥವಾ ಸೇವಾ ಸಿಂಧು ಸಂಸ್ಥೆಯ ದೂರವಾಣಿ ಸಂಖ್ಯೆ: 8088304855, 6361799796, 9380204364, 9380206704 ಸಂಖ್ಯೆಗಳಿಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6ಗಂಟೆಯ ಅವಧಿಯಲ್ಲಿ (ರಜಾ ದಿನಗಳನ್ನು ಹೊರತುಪಡಿಸಿ) ಸಂಪರ್ಕಿಸಬಹುದಾಗಿದೆ.

By admin