ಮೈಸೂರಿನ ಶತಮಾನ ಕಂಡ ಸಾಧ್ವಿ ಪತ್ರಿಕೆಯ ಸಂಪಾದಕರಾದ ಸಿ.ಮಹೇಶ್ವರನ್ (೬೪) ನಮ್ಮನ್ನಗಲಿದ್ದಾರೆ. ಮಂಗಳವಾರ ರಾತ್ರಿ ಚಾಮುಂಡಿಬೆಟ್ಟದ ಕೆಸಿ.ಲೇಔಟ್ ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದರು. ಕೆಲ ದಿನಗಳ ಹಿಂದಷ್ಟೆ ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆ ಮನೆಗೆ ಹಿಂತಿರುಗಿದ್ದರು.

ಮೈಸೂರಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ತಾತಯ್ಯ(ವೆಂಕಟಕೃಷ್ಣಯ್ಯ)  ಅವರು ಪ್ರಾರಂಭಿಸಿದ್ದ ಸಾಧ್ವಿ ಪತ್ರಿಕೆ,  ಸ್ವಾತಂತ್ರ್ಯ ಹೋರಾಟದ ವೇಳೆ ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿತ್ತು. ಪರಿಣಾಮ ನಾಲ್ಕು ಬಾರಿ ಪತ್ರಿಕೆ ಕಚೇರಿ ಮೇಲೆ ದಾಳಿ ಮಾಡಿದ್ದ ಬ್ರಿಟೀಷರು ಪತ್ರಿಕೆಯ ಮುದ್ರಣೋಪಕರಣಗಳನ್ನು ಜಪ್ತಿ ಮಾಡಿದ್ದು ಇತಿಹಾಸ. ರಾಷ್ಟ್ರೀಯತೆಯನ್ನೇ ಮೂಲ ಮಂತ್ರವಾಗಿಸಿಕೊಂಡಿದ್ದ ಸಾಧ್ವಿ ಇಂದಿಗೂ ಅದೇ ಸಿದ್ದಾಂತವನ್ನು ಮುಂದುವರಿಸಿದ್ದು ವಿಶೇಷ. ಸಿ.ಮಹೇಶ್ವರನ್ ಅವರು ಡೆಕನ್ ನ್ಯೂಸ್ ಆಂಗ್ಲ ಪತ್ರಿಕೆಯ ಮೂಲಕ ಪತ್ರಿಕೋದ್ಯಮ ಪ್ರವೇಶಿಸಿ ತದ ನಂತರದಲ್ಲಿ ೧೯೯೫ರಲ್ಲಿ ಸಾದ್ವಿ ಪತ್ರಿಕೆಯ ಮಾಲೀಕತ್ವವನ್ನು ವಹಿಸಿಕೊಂಡು ಬಹಳ ಕಷ್ಟದ ದಿನಗಳಲ್ಲೂ ಎದೆಗುಂದದೆ ಪತ್ರಿಕೆಯನ್ನು ಮುನ್ನಡೆಸಿಕೊಂಡು ಬಂದಿದ್ದರು.

ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕೊಡ ಮಾಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು. ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ಸಾಧ್ವಿ ಬಳಗ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.  ಅಂತ್ಯಕ್ರಿಯೆ ನಾಳೆ ಮಧ್ಯಾಹ್ನ ಚಾಮುಂಡಿಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಲಿದೆ.ಮಹೇಶ್ವರನ್ ನಿಧನಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.