ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ವಳಗೆರೆಮೆಣಸ ಗ್ರಾಮದಲ್ಲಿ ಸುಮಾರು 29 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಎಂ.ಶಿವಮೂರ್ತಿ ನೇತೃತ್ವದಲ್ಲಿ ಗ್ರಾಮವನ್ನು ಸಂಪೂರ್ಣ ಸೀಲ್‌ಡೌನ್ ಮಾಡಿ, ಕಂಟೋನ್ ಮೆಂಟ್ ಜೋನ್ ಎಂದು ಘೋಷಣೆ ಮಾಡಲಾಗಿದೆ.
ಇನ್ಮುಂದೆ ಈ ಗ್ರಾಮದಿಂದ ಜನರು ಹೊರಗಡೆ ಹೋಗುವುದನ್ನು, ಬೇರೆಯವರು ಗ್ರಾಮಕ್ಕೆ ಬರುವುದನ್ನು ನಿಷೇಧಿಸಲಾಗಿದೆಯಲ್ಲದೆ, ಗ್ರಾಮಸ್ಥರು ೨೮ ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿಯೇ ಕ್ವಾರಂಟೈನ್‌ನಲ್ಲಿ ಇದ್ದು ಕೊರೋನಾ ಸೋಂಕನ್ನು ಹೋಗಲಾಡಿಸಲು ಸಹಕಾರ ನೀಡುವಂತೆ ತಹಸೀಲ್ದಾರ್ ಮನವಿ ಮಾಡಿದ್ದಾರೆ.
ಸಕಾರಣವಿಲ್ಲದೇ ಮನೆಯಿಂದ ಯಾರೂ ಹೊರ ಬರಬಾರದು, ಮನೆಯಲ್ಲಿಯೇ ಇದ್ದುಕೊಂಡು ಕೊರೋನಾ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ಸೋಂಕಿತರು ಪತ್ತೆಯಾಗಿರುವ ಮನೆಗಳಲ್ಲಿ ವಾಸಿಸುವ ಅವರ ಸಂಬಂಧಿಗಳು ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ತಿಳಿಸಿದರೆ ಮನೆಗೆ ಬೇಕಾದ ಅಗತ್ಯವಸ್ತುಗಳು ಸೇರಿದಂತೆ ಔಷಧಗಳನ್ನು ಒದಗಿಸಿಕೊಡಲಿದ್ದಾರೆ. ಆದ್ದರಿಂದ ಮಹಾಮಾರಿಯ ಆರ್ಭಟವನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮಸ್ಥರು 28ದಿನಗಳ ಕಾಲ ತಾಲೂಕು ಆಡಳಿತದೊಂದಿಗೆ ಸಂಪೂರ್ಣ ಸಹಕಾರ ನೀಡಿ ಸಹಕರಿಸಬೇಕು, ಹಾಲಿನ ಡೈರಿಗೆ ಹಾಲು ಹಾಕಬಹುದು, ಹೊಲಗದ್ದೆಗಳಿಗೆ ಹೋಗಿ ಕೃಷಿ ಚಟುವಟಿಕೆಗಳನ್ನು ಮಾಡಬಹುದು ಆದರೆ ಗ್ರಾಮದಿಂದ ಹೊರಗಡೆ ಹೋಗುವಂತಿಲ್ಲ. ಒಂದು ವೇಳೆ ಹೊರಗಡೆ ಹೋಗಿರುವುದು ಕಂಡು ಬಂದರೆ ಅಂತಹವರ ವಿರುದ್ಧ ಎಫ್.ಐ.ಆರ್. ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ 29ಮಂದಿ ಕೋವಿಡ್ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಲಾಗಿದ್ದು, ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದವರು, ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು, ಈ ಅವಧಿಯಲ್ಲಿ ಗ್ರಾಮದಲ್ಲಿ ಯಾವುದೇ ವಿವಾಹ ಇನ್ನಿತರ ಕಾರ್ಯಕ್ರಮಗಳನ್ನು ಮಾಡಲು ಅವಕಾಶವಿರುವುದಿಲ್ಲ. ನಿಯಮ ಮೀರಿ ಯಾರಾದರೂ ಅನಗತ್ಯವಾಗಿ ಹೊರಗಡೆ ಓಡಾಟ ಮಾಡಿದರೆ ಸ್ಥಳೀಯ ಆಶಾ, ಅಂಗನವಾಡಿ ಕಾರ್ಯಕರ್ತರ ಗಮನಕ್ಕೆ ತರಬೇಕು ಎಂದು ತಹಸೀಲ್ದಾರ್ ಎಂ.ಶಿವಮೂರ್ತಿ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

By admin