ಕೆ.ಆರ್.ಪೇಟೆ: ತಾಲೂಕಿನ ಶೀಳನೆರೆ, ಬಲ್ಲೇನಹಳ್ಳಿ, ಕಾಶಿಮುರುಕನಹಳ್ಳಿ ಗ್ರಾಮಗಳಲ್ಲಿ ಅತೀ ಹೆಚ್ಚಿನ ಕೋವಿಡ್ ಸೋಂಕಿತರು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೂರೂ ಗ್ರಾಮಗಳನ್ನು ತಹಸೀಲ್ದಾರ್ ಎಂ.ಶಿವಮೂರ್ತಿ ಅವರ ನೇತೃತ್ವದಲ್ಲಿ ಸೀಲ್‌ಡೌನ್ ಮಾಡಿ ಸೋಂಕಿತರಿಗೆ ಹೋಂ ಐಷೋಲೇಷನ್‌ಗೆ ಅವಕಾಶ ನೀಡದೇ ಸೋಂಕಿತ ೩೮ಮಂದಿಯನ್ನು ಕೋವಿಡ್ ಕೇರ್ ಸೆಂಟರ್‌ಗೆ ಸ್ಥಳಾಂತರಿಸಲಾಗಿದೆ.
ಶೀಳನೆರೆ ಮತ್ತು ಬಲ್ಲೇನಹಳ್ಳಿ ಗ್ರಾಮದಲ್ಲಿ ರ‍್ಯಾಪಿಡ್ ಕೋವಿಡ್ ಪರೀಕ್ಷೆ ನಡೆಸಿದಾಗ ತಲಾ ಹದಿನೈದು ಮತ್ತು ಕಾಶಿಮುರುಕನಹಳ್ಳಿ ಗ್ರಾಮದಲ್ಲಿ ಎಂಟು ಸೋಂಕಿತರು ಪತ್ತೆಯಾಗಿದ್ದು ಇವರೆಲ್ಲರೂ ಕೋವಿಡ್ ಕೇರ್ ಸೆಂಟರ್‌ಗೆ ಬರಲು ಒಪ್ಪದೇ ಮನೆಯಲ್ಲಿಯೇ ಹೋಂ ಐಷೋಲೇಷನ್‌ನಲ್ಲಿ ಇರುವುದಾಗಿ ಹಠ ಹಿಡಿದಿದ್ದರು. ತಹಶೀಲ್ದಾರ್ ಎಂ.ಶಿವಮೂರ್ತಿ ತಾಲೂಕು ಆರೋಗ್ಯಾಧಿಕಾರಿ ಡಾ.ಮಧುಸೂದನ್, ಬಲ್ಲೇನಹಳ್ಳಿ ಗ್ರಾ.ಪಂ ಅಧ್ಯಕ್ಷೆ ಚೇತನಾಬೋರೇಗೌಡ, ಉಪಾಧ್ಯಕ್ಷ ನಂದೀಶ್ ಮತ್ತು ಶೀಳನೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಾಯತ್ರಿಸಿದ್ದೇಶ್, ಬೂಕನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಿವಾಸಗೌಡ, ಶೀಳನೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆನಂದ್ ಅವರುಗಳು ಗ್ರಾಮಗಳಿಗೆ ತೆರಳಿ ಕೋವಿಡ್ ಕೇರ್ ಸೆಂಟರ್‌ನಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತೂ ಊಟೋಪಚಾರ ಸಿಗುತ್ತಿರುವ ಬಗ್ಗೆ ಮಾಹಿತಿ ನೀಡುವ ಮೂಲಕ ಸೋಂಕಿತರ ಮನವೊಲಿಸಿ ಹೊಸಹೊಳಲು ಚಿಕ್ಕಕೆರೆ ಬಳಿ ಇರುವ ಬಿಸಿಎಂ ವಸತಿ ನಿಲಯದಲ್ಲಿ ಸ್ಥಾಪಿಸಿರುವ ಕೋವಿಡ್ ಹೆಲ್ತ್‌ಕೇರ್ ಸೆಂಟರ್‌ಗೆ ಎಲ್ಲಾ ಮೂವತ್ತೆಂಟು ಮಂದಿ ಕೋರೋನಾ ಸೋಂಕಿತರನ್ನು ಸ್ಥಳಾಂತರಿಸಿದರು.
ಗ್ರಾಮದಲ್ಲಿ ಹೋಂ ಐಷೋಲೇಷನ್ ಆದರೆ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಸೇರಿದಂತೆ ಯಾವುದೇ ಸೌಲಭ್ಯಗಳನ್ನು ನೀಡಲು ಸಾಧ್ಯವಾಗುವುದಿಲ್ಲ ಅಲ್ಲದೆ, ಸೋಂಕಿತರು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಎಲ್ಲೆಂದರಲ್ಲಿ ಸುತ್ತಾಡುವುದರಿಂದ ಸೋಂಕು ಗ್ರಾಮದಲ್ಲಿ ಇನ್ನೂ ಹೆಚ್ಚು ಹರಡುವುದರಿಂದ ದಯಮಾಡಿ ಎಲ್ಲರೂ ಕೋವಿಡ್ ಆರೋಗ್ಯ ಕೇಂದ್ರಕ್ಕೆ ಬನ್ನಿ, ಉತ್ತಮವಾದ ಗುಣಮಟ್ಟದ ಚಿಕಿತ್ಸೆ ಪಡೆದುಕೊಂಡು ಶೀಘ್ರವೇ ಮನೆಗೆ ವಾಪಸ್ ಬರಬಹುದೆಂದು ತಿಳಿಸಿ ಗ್ರಾಮಗಳಿಂದ ಸ್ಥಳಾಂತರಿಸಲಾಯಿತು.
ಈ ವೇಳೆ ಮಾತನಾಡಿದ ತಹಶೀಲ್ದಾರ್ ಎಂ.ಶಿವಮೂರ್ತಿ ಅವರು, ನಮ್ಮ ಆರೋಗ್ಯವು ನಮ್ಮ ಕೈಯ್ಯಲ್ಲಿಯೇ ಇರುವುದರಿಂದ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಕೊರೋನಾ ಎರಡನೇ ಅಲೆಯ ತೀವ್ರತೆಯು ಹೆಚ್ಚಾಗಿದ್ದು ಕೋವಿಡ್ ಸೋಂಕಿನ ಸರಪಳಿಯನ್ನು ತುಂಡರಿಸಿ ಮಹಾಮಾರಿಯ ಅಟ್ಟಹಾಸವನ್ನು ನಿಯಂತ್ರಿಸಲು ನಾಗರಿಕ ಸಮಾಜದ ಎಲ್ಲರೂ ತಾಲೂಕು ಆಡಳಿತದೊಂದಿಗೆ ಸಹಕರಿಸಬೇಕು. ಮನೆಯಲ್ಲಿದ್ದುಕೊಂಡು ಸುರಕ್ಷತೆಗೆ ಒತ್ತು ನೀಡಬೇಕು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬೂಕನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ರೀನಿವಾಸಗೌಡ, ಶೀಳನೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆನಂದ್, ಬೂಕನಕೆರೆ ಹೋಬಳಿ ರಾಜಸ್ವ ನಿರೀಕ್ಷಕ ರಾಜಮೂರ್ತಿ, ಶೀಳನೆರೆ ಹೋಬಳಿಯ ರಾಜಸ್ವ ನಿರೀಕ್ಷಕ ರಾಮಚಂದ್ರಪ್ಪ, ಮುಖಂಡರಾದ ಬಲ್ಲೇನಹಳ್ಳಿ ರಮೇಶ್, ಶಶಿಧರ್, ರಾಮಚಂದ್ರ, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಇದ್ದರು.