ಗುಂಡ್ಲುಪೇಟೆ: ಕೇಂದ್ರದ ಬಿಜೆಪಿ ಸರ್ಕಾರ ನಿರಂತರವಾಗಿ ಎನ್ಐಎ ಇತರ ತನಿಖಾ ಸಂಸ್ಥೆಗಳನ್ನು ಜನಪರ ಹೋರಾಟಗಾರರ ವಿರುದ್ಧ ನಿರಂತರ ದುರ್ಬಳಕೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಎಸ್ಡಿಪಿಐ ತಾಲ್ಲೂಕು ಘಟಕವು ಪಟ್ಟಣದ ಟಿಪ್ಪು ವೃತ್ತದ ಬಳಿ ಪ್ರತಿಭಟನೆ ನಡೆಸಿತು.

ಪುರಸಭೆ ಸದಸ್ಯ ರಾಜಗೋಪಾಲ್ ಮಾತನಾಡಿ, ಬೆಂಗಳೂರಿನ ಡಿ.ಜೆ ಹಳ್ಳಿ ಹಾಗೂ ಕೆ.ಜೆ ಹಳ್ಳಿಯಲ್ಲಿ ನಡೆದ ಪ್ರವಾದಿ ನಿಂದನೆ ವಿರುದ್ಧ ನಡೆದ ಹಿಂಸಾಚಾರದ ತನಿಖೆಯನ್ನು ರಾಜ್ಯ ಪೊಲೀಸ್ ನಂತರದಲ್ಲಿ ರಾಷ್ಟ್ರೀಯ ತನಿಖಾ ದಳವು ಸಹ ತನಿಖೆ ಮಾಡುತ್ತಿವೆ. ಈಗಾಗಲೇ ಸಾವಿರಾರು ಜನರ ವಿಚಾರಣೆಯನ್ನು ನಡೆಸಲಾಗಿದೆ ಎಂದರು.

ಎಸ್.ಡಿ.ಪಿ.ಐ ಕಾರ್ಯಕರ್ತರು ನಿರಂತರವಾಗಿ ಎನ್.ಐ.ಎ ಕಛೇರಿಗೆ ಭೇಟಿ ನೀಡಿ ತನಿಖಾಧಿಕಾರಿಗಳಿಗೆ ವಿಚಾರಣೆಯಲ್ಲಿ ಸಂಪೂರ್ಣ ಸಹಕಾರ ನೀಡಿರುತ್ತಾರೆ. ಕೆಲವರ ಮೊಬೈಲ್ ಪರಿಶೀಲನೆ ನಡೆಸಿಯೂ, ಯಾವುದೇ ಸಾಕ್ಷಿಗಳು ಸಿಕ್ಕಿರುವುದಿಲ್ಲ. ಪಕ್ಷದ ಕಛೇರಿಗಳಿಗೂ ದಾಳಿ ಮಾಡಲಾಗಿತ್ತು. ಎಲ್ಲಾ ಆಯಾಮಗಳಲ್ಲೂ ಈ ಗಲಭೆಯಲ್ಲಿ ಎಸ್.ಡಿ.ಪಿ.ಐನ ಯಾವುದೇ ಪಾತ್ರವಿಲ್ಲ ಎಂದು ಕಂಡು ಬಂದಿರುತ್ತದೆ. ಆದರೂ ಸಹ ಕೇಂದ್ರ ಬಿ.ಜೆ.ಪಿ ನಾಯಕರ ನಿರ್ದೇಶನ ಮೇರೆಗೆ ಎಸ್.ಡಿ.ಪಿ.ಐ ಪಕ್ಷವನ್ನು ಸಿಲುಕಿಸುವ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ದ ಕಿಡಿಕಾರಿದರು.

ಕೇಂದ್ರ ಬಿ.ಜೆ.ಪಿ ಸರ್ಕಾರವು ಭೀಮಾ ಕೊರೆಗಾಂವ್ ಪ್ರತಿಭಟನೆ, ದೆಹಲಿ ಗಲಭೆ, ರೈತ ಹಾಗೂ ಕಾರ್ಮಿಕ ಹೋರಾಟ ಮತ್ತು ಕೆ.ಜೆ ಹಳ್ಳಿ ಹಾಗೂ ಡಿ.ಜೆ ಹಳ್ಳಿ ಹಿಂಸಾಚಾರದ ಹೆಸರಲ್ಲಿ ನಿರಂತರವಾಗಿ ಸಾಮಾಜಿಕ ಹೋರಾಟಗಾರರನ್ನು, ಮುಸ್ಲಿಮರನ್ನು ಸುಳ್ಳು ಕೇಸುಗಳ ಮೂಲಕ ಬಂಧಿಸುವುದು ನಿಲ್ಲಿಸಬೇಕು. ಈ ಘಟನೆಗಳ ನೈಜ ಅಪರಾಧಿಗಳಾದ ಬಿಜೆಪಿ ಮತ್ತು ಸಂಘ ಪರಿವಾರದ ತಪ್ಪಿತಸ್ಥರನ್ನು ರಕ್ಷಣೆ ಮಾಡದೇ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಸೈಯದ್ ಅಕ್ರಮ್, ಕಾರ್ಯದರ್ಶಿ ನದ್ವಿಸಾಬ್, ಸದಸ್ಯರಾದ ಇಮ್ರಾನ್, ರಿಜ್ವಾನ್, ಮುಬಾರಕ್, ರೆಹಮತ್ ಇತರರು ಹಾಜರಿದ್ದರು.

ವರದಿ: ಬಸವರಾಜು ಎಸ್ ಹಂಗಳ

By admin