ತಿ.ನರಸೀಪುರ: ಸರ್ಕಾರದ ನಿಯಮ ಮೀರಿ ಶಾಲಾ ಶುಲ್ಕ ವಸೂಲಾತಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿ ಪೋಷಕರು  ಖಾಸಗಿ ಶಾಲಾ ಮುಖ್ಯ ದ್ವಾರದ ಬಳಿ ಪ್ರತಿಭಟನೆ ನಡೆಸಿದ ಘಟನೆ ತಿ.ನರಸೀಪುರದಲ್ಲಿ ನಡೆದಿದೆ.

ಪಟ್ಟಣದಲ್ಲಿರುವ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಯಾದ ಸೆಂಟ್ ಮೇರಿಸ್ ಶಿಕ್ಷಣ ಸಂಸ್ಥೆ ಬಳಿ ರೈತ ಮುಖಂಡ ಕಿರಗಸೂರು ಶಂಕರ್ ನೇತ್ರತ್ವದಲ್ಲಿ ಜಮಾಯಿಸಿದ ಪೋಷಕರು, ನಿಯಮ ಬಾಹಿರ ಶಾಲಾ ಶುಲ್ಕ ವಸುಲಾತಿಗೆ ಪೋಷಕರ ಮೇಲೆ ಒತ್ತಡ ಹಾಕುತ್ತಿರುವ  ಶಿಕ್ಷಣ ಸಂಸ್ಥೆ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಸಂಸ್ಥೆ ವಿರುದ್ದ ಕ್ರಮಕ್ಕೆ ಒತ್ತಾಯಿಸಿದರು.

ಪ್ರತಿಭಟನೆ ‌ನೇತೃತ್ವ ವಹಿಸಿದ್ದ ಕಿರಗಸೂರು ಶಂಕರ್ ಮಾತನಾಡಿ ಸೆಂಟ್ ಮೇರಿಸ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಸರ್ಕಾರದ  ನಿಯಮಗಳಿಗೆ ವಿರುದ್ದವಾಗಿ ವರ್ತಿಸುತ್ತಿದೆ ಶಿಕ್ಷಣ ಸಚಿವರು ಮಕ್ಕಳ ಶಾಲಾ ದಾಖಲೆ ವಿಚಾರವಾಗಿ ಹೊರಡಿಸಿರುವ ಆದೇಶವನ್ನು  ಗಾಳಿಗೆ ತೂರಿ ಉದ್ದಟತನ ಮೆರೆಯುತ್ತಿರುವುದಲ್ಲದೆ, ಇಚ್ಚಾನುಸಾರ ಶುಲ್ಕ ವಿಧಿಸುವ ಮೂಲಕ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪೋಷಕರನ್ನು ಶೋಷಣೆ ಮಾಡುತ್ತಿದೆ ಎಂದು ಆಪಾದನೆ ಮಾಡಿದರು.

ಶಿಕ್ಷಣ ಸಚಿವರು ಮಕ್ಕಳನ್ನು ಶಾಲೆಗೆ ದಾಖಲು ಮಾಡಿ ಕೊಳ್ಳುವ ಪ್ರಕ್ರಿಯೆಗೆ ಮಾತ್ರ ಅನುಮತಿ ನೀಡಿದ್ದಾರೆಯೇ ಹೊರತು ಯಾವ ತರಗತಿಗೆ ಎಷ್ಟು ಶುಲ್ಕ ತೆಗೆದು ಕೊಳ್ಳಬೇಕು ಎಂದು ಇನ್ನೂ ಆದೇಶ ಹೊರಡಿಸಿಲ್ಲ ಹಾಗೂ ಆನ್ ಲೈನ್ ತರಗತಿ ನಡೆಸಬೇಕಾ ಅಥವಾ ಭೌತಿಕ ತರಗತಿಗಳನ್ನು ನಡೆಸಬೇಕಾ ಎಂಬುದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನೂ ತಿರ್ಮಾನವಾಗಿಲ್ಲ.  ಹೀಗಿದ್ದರೂ ಸೆಂಟ್ ಮೇರಿಸ್ ಶಿಕ್ಷಣ ಸಂಸ್ಥೆ ಸ್ವಯಂ ನಿಯಮಗಳನ್ನು ಹಾಕಿಕೊಂಡು ತಮಗಿಷ್ಟ ಬಂದಂತ್ತೆ ಶುಲ್ಕ ನಿಗದಿ ಮಾಡಿಕೊಂಡು  ವಸೂಲಾತಿಗೆ ಇಳಿದಿರುವುದು ಸರಿಯಾದ ಕ್ರಮವಲ್ಲ ಇದೊಂದು ಪೋಷಕರನ್ನು ಸುಲಿಗೆ ಮಾಡುವ ಕೆಲಸವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕ್ಶೇತ್ರ ಶಿಕ್ಷಣಾಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಸಭೆ ಕರೆದು ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಕಟ್ಟು ನಿಟ್ಟಿನ ಸೂಚನೆ ನೀಡಬೇಕು ಇಲ್ಲದಿದ್ದರೆ ಜಿಲ್ಲಾ ಮಟ್ಟದಲ್ಲಿ ಉಗ್ರ ಪ್ರತಿಭಟನೆ ಮಾಡುವುದರ ಜೊತೆಗೆ ಮೈಸೂರು ಜಿಲ್ಲೆಗೆ ಶಿಕ್ಷಣ ಸಚಿವರು ಬಂದಾಗ ಘೇರಾವ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ ಪ್ರತಿಭಟನಾಕಾರರ ಮನವಿ ಆಲಿಸಿದ ನಂತರ ಮಾತನಾಡಿ ಈ ಕೂಡಲೇ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆ ಕರೆದು ಶುಲ್ಕ ವಿಚಾರವಾಗಿ ಸರ್ಕಾರದ ಮಾರ್ಗಸೂಚಿಯನ್ನು ಪಾಲಿಸುವಂತೆ ಸೂಚನೆ ನೀಡುತ್ತೇನೆ. ಯಾವ ಶಿಕ್ಷಣ ಸಂಸ್ಥೆಯವರು ನಿಯಮ ಪಾಲನೆ ಮಾಡುವುದಿಲ್ಲವೊ? ಅಂತಹ ಶಿಕ್ಷಣ ಸಂಸ್ಥೆ ವಿರುದ್ದ ಕ್ರಮಕ್ಕೆ ಸರ್ಕಾರಕ್ಕೆ ದೂರು ಬರೆಯುತ್ತೇನೆ ಎಂದು ಭರವಸೆ ನೀಡಿದ ಮೇರೆಗೆ ಪ್ರತಿಭಟನಾಕಾರರು ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದರು.

ಈ ಸಂದರ್ಭದಲ್ಲಿ ಮುಖಂಡರಾದ ಕರೋಹಟ್ಟಿ ಕುಮಾರಸ್ವಾಮಿ, ಕಿರಗಸೂರು ಶಂಕರ್, ಸಿದ್ದಲಿಂಗಮೂರ್ತಿ, ಮಲೆಯೂರು ಶಂಕರ್ ಮತ್ತು ಪೋಷಕರು ಹಾಗೂ  ಸಂಘಟನೆಗಳ  ಮುಖಂಡರುಗಳು ಇದ್ದರು.

By admin