ಸರಗೂರು: ಮಹಿಳೆ, ಮಕ್ಕಳ ಕಲ್ಯಾಣಾಭಿವೃದ್ಧಿಗಾಗಿ ಸಿಗುವ ನಾನಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು.
ಪಟ್ಟಣದ 4ನೇ ವಾರ್ಡ್‍ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 2015-16ನೇ ಸಾಲಿನ ನಬಾರ್ಡ್ ಆರ್‍ಐಡಿಎಫ್ ಯೋಜನೆಯಡಿ 9.17 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿಗೆ ಶಿಶು, ಬಾಣಂತಿಯರ ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಕಡ್ಡಾಯವಾಗಿ ಪಡೆಯಬೇಕು. ಇದರಿಂದ ಮಕ್ಕಳಲ್ಲಿನ ಅಪೌಷ್ಠಿಕತೆ ದೂರವಾಗಲಿದೆ. ಇದಲ್ಲದೆ ಗರ್ಭೀಣಿಯರು, ಬಾಣಂತಿಯರ ಆರೋಗ್ಯವೂ ವೃದ್ಧಿಯಾಗಲಿದೆ ಎಂದು ಅವರು ಹೇಳಿದರು.
ಕೋವಿಡ್ ಸಂದರ್ಭದಲ್ಲಿ ಮಕ್ಕಳು, ಬಾಣಂತಿಯರು, ಗರ್ಭೀಣಿಯರು ಸೇರಿದಂತೆ ಶ್ರೀ ಸಾಮಾನ್ಯನಿಗೆ ರಕ್ಷಣೆಗಾಗಿ ಶಕ್ತಿಮೀರಿ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿರುವುದಕ್ಕೆ ಅಭಿನಂದನೆಗಳು. ನೂತನ ಕಟ್ಟಡಕ್ಕೆ ಮೂಲ ಸೌಲಭ್ಯ ಒದಗಿಸಲು ಇಲಾಖಾಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ತಾಲೂಕು ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಇಲಾಖಾಧಿಕಾರಿ ಆಶಾ ಮಾತನಾಡಿ, ಬಾಣಂತಿಯರು, ಗರ್ಭೀಣಿಯರ ಶ್ರೇಯಸ್ಸಿಗಾಗಿ ಸೀಮಾಂತ, ಮಾತೃವಂದನಾ ಸೇರಿದಂತೆ ಹತ್ತು-ಹಲವು ಕಾರ್ಯಕ್ರಮಗಳನ್ನು ಕೇಂದ್ರ, ರಾಜ್ಯ ಸರಕಾರದ ಸಹಯೋಗದಲ್ಲಿ ಹಮ್ಮಿಕೊಳ್ಳುತ್ತಾ ಬರಲಾಗಿದೆ ಎಂದು ಹೇಳಿದರು.
ಮೇಲ್ವಿಚಾರಕಿ ರಜಿತಾ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೀಣಾ, ಸುಬ್ರಹ್ಮಣ್ಯ, ಮುಖಂಡರಾದ ಕೃಷ್ಣ, ಭೀಮಯ್ಯ, ಎಸ್.ಎಲ್.ರಾಜಣ್ಣ, ಜ್ಯೋತಿ, ಮಂಜುಳಾ, ಜಲೀಲ್, ಆಶಾ ಕಾರ್ಯಕರ್ತೆ ಸುಮ ಸೇರಿದಂತೆ ಗ್ರಾಮಸ್ಥರು, ಆಶಾ ಕಾರ್ಯಕರ್ತೆಯರು ಇನ್ನಿತರರು ಹಾಜರಿದ್ದರು.