ಮೈಸೂರು: ಈಗಾಗಲೇ ಕೊರೊನಾ ಮಹಾಮಾರಿ ಜನರನ್ನು ಆತಂಕ್ಕಕ್ಕೀಡು ಮಾಡಿದ್ದು, ಒಂದು ಕಡೆ ಜೀವ ಮತ್ತೊಂದು ಕಡೆ ಇದೆರಡರ ನಡುವೆ ಹೋರಾಟ ನಡೆಸುತ್ತಿರುವ ಜನರಿಗೆ ಶಾಸಕ ರಾಮದಾಸ್ ಅವರು ಕೊರೊನಾ ಅರಿವು ಮೂಡಿಸುವುದರೊಂದಿಗೆ ಧೈರ್ಯ‍ ತುಂಬಿದ್ದಾರೆ.

ಬೆಳಿಗ್ಗೆ ಆಲನಹಳ್ಳಿ ಗಣಪತಿ ದೇವಸ್ಥಾನದಿಂದ ಕಾರ್ಯಕ್ರಮ ಆರಂಭಿಸಿದ ಅವರು ಕೆ.ಆರ್.ಕ್ಷೇತ್ರದ  ಪ್ರಮುಖ ಸರ್ಕಲ್ ಗಳಲ್ಲಿ, ಮಾರುಕಟ್ಟೆ ಸ್ಥಳದಲ್ಲಿ ಧ್ವನಿ ವರ್ಧಕದ  ಮೂಲಕ ಮತ್ತು ಕರಪತ್ರಗಳ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಭಯ ಪಡುವ ಅವಶ್ಯಕತೆ ಇಲ್ಲ. ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ ಸರ್ಕಾರದ ಜೊತೆಗೆ ನಾವೂ ಕೂಡ ಜಾಗೃತರಾಗಿರಬೇಕಾದದ್ದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ವಿಶೇಷವಾಗಿ ಕೆ.ಆರ್ ಕ್ಷೇತ್ರದಲ್ಲಿ ಕೋವಿಡ್ ನಿರ್ವಹಣೆಗಾಗಿ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದೇವೆ 2 ಅಂಬ್ಯುಲೆನ್ಸ್ ಗಳನ್ನು ಉಚಿತವಾಗಿ ನಗರಪಾಲಿಕೆಗೆ ನೀಡಿದ್ದೇವೆ. ಹಗಲು ರಾತ್ರಿ ನಮ್ಮ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಪೊಲೀಸರು, ಕೆಲಸ ನಿರ್ವಹಿಸುತ್ತಿದ್ದಾರೆ ಅವರಿಗೆ  ಧನ್ಯವಾದಗಳನ್ನು ನಾವುಗಳು ಅರ್ಪಿಸೋಣ ಎಂದರು.ವ್ಯಾಕ್ಸಿನೇಷನ್ ಡ್ರೈವ್ ಗಳು ಪ್ರಾರಂಭವಾಗಿದೆ ಕೊಂಚ ತೊಂದರೆಯಾದರೂ ಮುಂದಿನ 2 ತಿಂಗಳೊಳಗೆ ಸಾಕಷ್ಟು ಜನರಿಗೆ ವ್ಯಾಕ್ಸಿನ್ ಸಿಕ್ಕೇ ಸಿಗುತ್ತದೆ, ವರ್ಷಾಂತ್ಯದೊಳಗೆ 200 ಕೋಟಿ ಡೋಸ್ ಲಸಿಕೆ ಗಳು ಭಾರತದಲ್ಲಿ ಲಭ್ಯವಿರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಭರವಸೆ ನೀಡಿದೆ. ನಾವು ಕೂಡ 18 ರಿಂದ 44 ವಯಸ್ಸಿನವರಿಗೆ ಬೂತ್ ಮಟ್ಟದಲ್ಲಿ ಲಸಿಕೆ ನೀಡಲು ಯೋಜನೆಗಳನ್ನು ರೂಪಿಸುತ್ತಿರುವುದಾಗಿ ಹೇಳಿದರು.

ಮೈಸೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ, ತಳ್ಳುಗಾಡಿ ವ್ಯಾಪಾರಿಗಳಿಗೆ ಟೌನ್ ಹಾಲ್ ನಲ್ಲಿ ಲಸಿಕೆ ನೀಡಲಾಗುತ್ತಿದೆ. ನಿಮ್ಮ ಆರೋಗ್ಯವೂ ಬಹು ಮುಖ್ಯ ಆದ್ದರಿಂದ ಕೂಡಲೇ ನೀವು  ಲಸಿಕೆ ಪಡೆಯಿರಿ. ಈಗಾಗಲೇ ಸಣ್ಣ ಮಕ್ಕಳು ತಂದೆ ತಾಯಿಯನ್ನು ಕೋವಿಡ್ ನಿಂದ ಕಳೆದುಕೊಂಡಿದ್ದಾರೆ ಅಂತವರಿಗೆ ಪ್ರಧಾನಿ ಮೋದಿಜಿಯವರು “ಮಕ್ಕಳಿಗಾಗಿ PM-Cares” ಎನ್ನುವ ಯೋಜನೆಯನ್ನು ರೂಪಿಸಿದ್ದಾರೆ. ಅಂತಹ ಮಕ್ಕಳಿಗೆ 10 ಲಕ್ಷ ರೂ ಗಳು 18 ವರ್ಷ ತುಂಬಿದ ಮೇಲೆ ಸಿಗಲಿದೆ.  ಯಾರಾದರೂ ತಂದೆ ತಾಯಿಯನ್ನು ಕೋವಿಡ್ ನಿಂದ ಕಳೆದುಕೊಂಡ ಸಣ್ಣ ಮಕ್ಕಳಿದ್ದು  ನಮ್ಮ ಗಮನಕ್ಕೆ ಬಂದಲ್ಲಿ ಖುದ್ದಾಗಿ ತೆರಳಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡಲಿದ್ದೇವೆ ಎಂದರು. ಪ್ರತಿಯೊಬ್ಬರೂ ನಿಮ್ಮ ಸರದಿ ಬಂದಾಗ ಯಾವುದೇ ಭಯವಿಲ್ಲದೆ ಲಸಿಕೆ ಪಡೆಯಿರಿ, ಕೋವಿಡ್ ಮಹಾಮಾರಿಯನ್ನು ಓಡಿಸಲು ಇರುವ ಅಸ್ತ್ರ ಸಾಮಾಜಿಕ ಅಂತರ, ಮಾಸ್ಕ್ , ಶುಚಿತ್ವ ಹಾಗೂ ಲಸಿಕೆ. ಎಲ್ಲರೂ ನಮ್ಮ ಕರ್ತವ್ಯವನ್ನು ಅರಿತುಕೊಂಡು ಈ ಮಹಾಮಾರಿಯನ್ನು ಓಡಿಸೋಣ ಎಂದು ಹೇಳಿದರು.

ಈ ವೇಳೆ ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಆಯಾ ವಾರ್ಡಿನ ನಗರಪಾಲಿಕಾ ಸದಸ್ಯರು, ಬಿಜೆಪಿ ಪದಾಧಿಕಾರಿಗಳು,ಸ್ಥಳೀಯ ಮುಖಂಡರು, ನಗರಪಾಲಿಕಾ ಅಧಿಕಾರಿಗಳು ಇದ್ದರು.

By admin