ಮೂಕೀ-ಟಾಕೀ ಯುಗದ ಪ್ರಖ್ಯಾತ ಅಭಿನೇತ್ರಿ ಲಕ್ಷ್ಮೀಬಾಯಿ ೧೫ನೇ ಜೂನ್ ೧೯೧೮ರಂದು ಬೆಂಗಳೂರಿನ ಹೊಸೂರು-ಮತ್ತಿಕೆರೆ ಸಮೀಪ ವಾಸವಿದ್ದ ಮಧ್ಯಮ ವರ್ಗದ ಪೌರೋಹಿತ್ಯ ಕುಟುಂಬದಲ್ಲಿ ಜನಿಸಿದರು. ಪ್ರಾಥಮಿಕ ಶಾಲೆಯಲ್ಲಿ ಕಲಿಯುವಾಗಲೇ ಸಂಗೀತ-ನೃತ್ಯಕಲೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ೧೯೩೦ರ ದಶಕದಲ್ಲಿ ಹುಟ್ಟಿಕೊಂಡ ಕನ್ನಡದ ಮೂಕಿ ಚಲನಚಿತ್ರಗಳ ನಿರ್ಮಾಣ ಕಾಲದಲ್ಲಿ ಇದ್ದವರು ಬೆರಳೆಣಿಕೆಯಷ್ಟು ಮಾತ್ರ ಹೀರೋಯಿನ್! ಸ್ತ್ರೀ ಪಾತ್ರಕ್ಕೆ ಮಹಿಳೆಯರು ದೊರಕುತ್ತಲೇ ಇರಲಿಲ್ಲ. ಆಗ ಮುಂಚೂಣಿಯಲ್ಲಿದ್ದ ಕಲಾವಿದೆಯರಲ್ಲಿ ಇವರೂ ಸಹ ಅಗ್ರಸ್ತಾನದಲ್ಲಿ ಇದ್ದರು. ಸುಮಾರು ಇಪ್ಪತ್ತು ಮೂಕಿ ಚಿತ್ರಗಳಲ್ಲಿ ಮತ್ತು ಹತ್ತಾರು ನಾಟಕದಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಕನ್ನಡದ ಪ್ರಥಮ ಸಿನಿಮ ಸತಿಸುಲೋಚನ ಚಿತ್ರದ ಹೀರೋಯಿನ್ ಆಗುವ ಸಂದರ್ಭದಲ್ಲಿ ಕೈಗೆಬಂದ ತುತ್ತು ಬಾಯಿಗಿಲ್ಲದಂತಾಗಿ ನತದೃಷ್ಟೆ ನಾಯಕನಟಿ ಎನಿಸಿಕೊಂಡರು. ಅಭಿನಯ ಕ್ಷೇತ್ರದಲ್ಲಿ ನಟಿಯರಿಗೆ ಅಭಾವವಿದ್ದ ಕ್ಷಾಮದಕಾಲ. ಹಾಗಾಗಿ, ನಾಟಕಗಳಲ್ಲಿ ಶೇ.೯೫%ರಷ್ಟು ಸ್ತ್ರೀ ಪಾತ್ರವನ್ನು ಪುರುಷ ಕಲಾವಿದರೇ ನಿರ್ವಹಿಸುತ್ತಿದ್ದರು!
ಒಂದು ಉತ್ತಮ ಉದಾಹರಣೆ:- ಒಮ್ಮೆ ನಾಟಕವೊಂದರಲ್ಲಿ ನಟ ಸುಬ್ಬಯ್ಯನಾಯ್ಡು ಸುದೇಷ್ಣೆ ಪಾತ್ರದಲ್ಲಿ ನಟಿಸುವಾಗ ಆ ಊರಿನ ಗಣ್ಯ/ಶ್ರೀಮಂತನೊಬ್ಬ ಇವರ ಮೇಲೆ ಮೋಹಗೊಂಡು ಗಾಂಧರ್ವ ವಿವಾಹ ಮಾಡಿಕೊಳ್ಳಲು ಹಪ ಹಪಿಸಿದನಂತೆ! ಪಾಪ! ಆ ಶ್ರೀಮಂತನಿಗೆ ನಂತರ ತಿಳಿಯಿತು, ತಾನು ವರಿಸಲು ಹೋದದ್ದು ಅವಳಲ್ಲ/ಅವನು ಎಂಬ ಸತ್ಯ! ಕಡೆಗೆ ಆತ ಎದ್ನೋಬಿದ್ನೋ ಎಂದು ಓಟ ಕಿತ್ತನೆಂಬ ಘಟನೆ ಇವತ್ತಿಗೂ ಮರೆಯಲಾರದ ಒಂದು ಹಾಸ್ಯ ಪ್ರಹಸನ! ಯಾವುದೆ ಕ್ಯಾರೆಕ್ಟರ್‌ಇರಲಿ ಅಸಡ್ಡೆ ತೋರದೆ ಮತ್ತು ಕೀಳರಿಮೆ ಅಸಹಕಾರ ಇಲ್ಲದಂತೆ ತಮ್ಮ ಪಾಲಿಗೆ ಬಂದದ್ದು ಪಂಚಾಮೃತವೆಂದು ಸ್ವೀಕರಿಸಿ ಕರ್ತವ್ಯ ನಿರ್ವಹಿಸಿದರೆ ಉತ್ತಮ ಪ್ರತಿಫಲ ದೊರಕುವುದು ನಿಶ್ಚಿತ. ಈ ನಂಬಿಕೆಯನ್ನೆ ಸಿದ್ಧಾಂತ ಆಗಿಸಿಕೊಂಡ ಮಹಾನ್ ಕಲಾವಿದೆ ಲಕ್ಷ್ಮಿಬಾಯಿ. ನಿರ್ಮಾಪಕ-ನಿರ್ದೇಶಕ ಮೊದಲ್ಗೊಂಡು ಇಡೀ ತಂಡಕ್ಕೆ ಮಾತ್ರವಲ್ಲದೆ ಹಣಕೊಟ್ಟು ಬಯಾಸ್ಕೋಪ್ ನೋಡುತ್ತಿದ್ದ ಪ್ರೇಕ್ಷಕ ವರ್ಗಕ್ಕೂ ನ್ಯಾಯ ದೊರಕಿಸಿ ಕೊಡುತ್ತಿದ್ದ ದಿಟವಾದ ನಟಿ! ಎಂಥ ಸಂದರ್ಭದ ಯಾವುದೆ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿ ’ಸೈ’ಎನಿಸಿಕೊಂಡ ದಿಟ್ಟ ಕಲಾವಿದೆ. ಕನ್ನಡ-ತೆಲುಗು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಶಿಖರವೇರಿದ್ದ ಲಕ್ಷ್ಮೀಬಾಯಿ ಅಂದಿನ ಖ್ಯಾತನಟ ಸುಬ್ಬಯ್ಯನಾಯ್ಡು ಅವರನ್ನು ವಿವಾಹವಾಗಿ ಹೊಸ ಇತಿಹಾಸ ಬರೆದರು!
ಲಕ್ಷ್ಮೀಬಾಯಿ ನಟಿಸಿದ ಮೂಕಿ-ಟಾಕೀ ಚಿತ್ರಗಳು:-
ಮೂಕೀ ಚಿತ್ರಗಳು[ಸೈಲೆಂಟ್ ಫಿಲಂಸ್]:-ಡೊಮಿಂಗೊ, ಹಿಸ್‌ಲವ್‌ಅಫೇರ್, ಭೂತರಾಜ್ಯ. ಮತ್ತು
ಟಾಕೀ ಚಿತ್ರಗಳು:-ಹರಿಮಾಯ. ಸತಿಸುಲೋಚನ, ಸದಾರಮೆ, ವಸಂತಸೇನಾ, ಭಕ್ತಪ್ರಹ್ಲಾದ, ಜೀವನನಾಟಕ ಸತ್ಯಹರಿಶ್ಚಂದ್ರ, ಹೇಮರೆಡ್ಡಿಮಲ್ಲಮ್ಮ, ಮಹಾತ್ಮಕಬೀರ್, ಭಕ್ತರಾಮದಾಸ, ಗೋರಾಕುಂಬಾರ, ಶ್ರೀಕೃಷ್ಣಸುಧಾಮ, ಮುಟ್ಟಿದ್ದೆಲ್ಲಾಚಿನ್ನ, ಸಂಗೊಳ್ಳಿರಾಯಣ್ಣ, ಸರ್ವಮಂಗಳ, ಪಾಪಪುಣ್ಯ, ಮಾಡಿಮಡಿದವರು, ಮಾಯಾಬಜಾರ್[ತೆ], ಬರ್ತೃಹರಿ[ತ], ಲವಂಗಿ[ತ], ಸ್ವರ್ಗಸೀಮಾ[ತೆ], ತ್ಯಾಗಯ್ಯ[ತೆ], ಬ್ರಹ್ಮರಥಂ[ತೆ], ಗುಲೇಬಾಕಾವಲಿ[ತೆ] ಸಿನಿಮಾಗಳು ಅಮೋಘ ಪ್ರದರ್ಶನ ಕಂಡವು. ತಮ್ಮ ಇಳಿವಯಸ್ಸಿನಲ್ಲಿ ಹಿರಿಯ ನಟಿ ಲಕ್ಷ್ಮೀಬಾಯಿ ನಟಿಸಿದ ಕಟ್ಟಕಡೆಯ ಕನ್ನಡ ಫಿಲಂ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ’ಚೋಮನದುಡಿ’!

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು-೫೬೦೦೭೨