ಎಂ.ವಿ.ರಾಜಮ್ಮನವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಕಂದನಹಳ್ಳಿಯಲ್ಲಿ ಮಧ್ಯಮ ವರ್ಗದ ರೈತ ಕುಟುಂಬದ ದಂಪತಿಗಳ ಏಕೈಕ ಪುತ್ರಿಯಾಗಿ ೨೬ನೇ ಜನವರಿ ೧೯೨೩ರಂದು ಜನಿಸಿದರು. ಬೆಂಗಳೂರಿನ ಆರ್ಯ ಬಾಲಿಕಾ ಶಾಲೆಯಲ್ಲಿ ೮ನೇ ತರಗತಿಯಲ್ಲಿ ಓದುತ್ತಿರುವಾಗ ಬಣ್ಣದ ಬದುಕಿಗೆ ಬೆರಗಾಗಿ ಚಂದ್ರಕಲಾ ಥಿಯೇಟರ್‌ಗೆ ಎಂಟ್ರಿ ಕೊಟ್ಟರು. ಮೂರ್ನಾಲ್ಕು ನಾಟಕ ಕಂಪನಿಗಳಲ್ಲಿ ಜನಪ್ರಿಯ ನಟಿ ಆಗಿದ್ದ ರಾಜಮ್ಮನವರು ತಮ್ಮ ೧೨ನೇ ವಯಸ್ಸಿನಲ್ಲೇ ಹಲವಾರು ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಗಣ್ಯಾತಿಗಣ್ಯರಿಂದ, ರಾಜಮಹಾರಾಜರಿಂದ ಹಾಗೂ ಬ್ರಿಟಿಷ್ ಅಧಿಕಾರಿಗಳಿಂದ ಶಹಬ್ಬಾಸ್‌ಗಿರಿ ಪಡೆದರು. ಅನೇಕ ಶ್ರೀಮಂತರೂ ಸಾಹುಕಾರರೂ ಜಮೀನ್ದಾರರೂ ಪಟೇಲ ಶ್ಯಾನುಭೋಗ ಆದಿಯಾಗಿ ನಗರದ-ನಾಡಿನ ಅನೇಕ ಪ್ರಮುಖರು ಇವರ ಅಭಿನಯದ ಮೋಡಿಗೆ ತಲೆದೂಗುತ್ತಿದ್ದರು. ಆಪೈಕಿ ಕೆಲವರಂತೂ ಇವರನ್ನು ವಿವಾಹ ವಾಗಲು ತುದಿಗಾಲಲ್ಲಿ ನಿಂತಿದ್ದರು?! ಈಪರಿಯ ಸೊಬಗಿನಲ್ಲಿದ್ದ ಸುಂದರ ಚೆಲುವೆ, ಸೌಮ್ಯಗುಣದ ಅಭಿನೇತ್ರಿ ಆಗಿದ್ದರು, ಎಮ್.ವಿ.ರಾಜಮ್ಮ!

ನಾಟಕ ಮತ್ತು ಚಲನಚಿತ್ರ ಎರಡೂ ರಂಗದಲ್ಲಿ ಹೆಸರು ಗಳಿಸಿದ್ದ ಜನಪ್ರಿಯ ಮಹಾನ್ ಚಿತ್ರೋದ್ಯಮಿ ಬಿ.ಆರ್.ಪಂತುಲು ಅವರ ಪರಿಚಯ ಅನಿರೀಕ್ಷಿತವಾಗಿ ಆಯಿತು. ಅಂದಿನ ಕಾಲದ ಕೆಲವೇ ನಟ-ನಿರ್ಮಾಪಕ-ನಿರ್ದೇಶಕರಲ್ಲಿ ಅಗ್ರಗಣ್ಯರಾದ ಆಂಧ್ರ ಮೂಲದ ತೆಲುಗು-ಕನ್ನಡಿಗ ಬಿ.ಆರ್.ಪಂತುಲು ಕರ್ನಾಟಕದ ಗಡಿನಾಡು ಕೋಲಾರ ಜಿಲ್ಲೆಯ ಗ್ರಾಮವೊಂದರಲ್ಲಿ ಜನಿಸಿದ್ದರು. ಬಿಆರ್.ಪಂತುಲು-ಎಂವಿ.ರಾಜಮ್ಮ ಪರಸ್ಪರ ಪ್ರೇಮಿಸಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ದಂಪತಿಗಳಾದರು. ೧೯೪೪ರಲ್ಲಿ ಮದುವೆಯಾದ ನಂತರ ಎಂ.ವಿ.ರಾಜಮ್ಮನವರು ಎರಡು ಮಕ್ಕಳಿಗೆ ಜನ್ಮ ನೀಡಿ, ಮಗಳಿಗೆ ವಿಜಯಲಕ್ಷ್ಮಿ ಎಂದೂ ಮಗನಿಗೆ ರವಿಶಂಕರ್ ಎಂದೂ ನಾಮಕರಣ ಮಾಡಿದರು. ಕಾಲಕ್ರಮೇಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ, ಕಲೆಗಳ ತವರೂರು, ಇವರ ಪದ್ಮಿನಿ ಪಿಕ್ಚರ್ಸ್ ಸಿನಿಮಾ ನಿರ್ಮಾಣ ಸಂಸ್ಥೆಗೆ ಎಲ್ಲ ರೀತಿ ಅನುಕೂಲ ವಾಗಿದ್ದ ಪ್ರತಿಷ್ಠಿತ ಪ್ರೀಮಿಯರ್ ಸ್ಟುಡಿಯೊ ನೆಲೆಸಿದ್ದ ಹಾಗು ರಾಜಮ್ಮನವರಿಗೆ ಪ್ರಿಯವೂ ಎನಿಸಿದ್ದ ಮೈಸೂರು ನಗರದಲ್ಲಿ ಮನೆ ಮಾಡಿಕೊಂಡು ಬಹುಕಾಲ ವಾಸವಿದ್ದರು.
ಎಂ.ವಿ.ರಾಜಮ್ಮನವರು ಅಭಿನಯಿಸಿದ ಪ್ರಪ್ರಥಮ ಸಿನಿಮಾ ೧೯೩೬ರಲ್ಲಿ ತೆರೆಕಂಡ ಸಂಸಾರನೌಕ ಕನ್ನಡ ಫಿಲಂ. ಆಗ ಇವರಿಗೆ ಕೇವಲ ೧೩ವರ್ಷ ವಯಸ್ಸು. ಇವರು ವಿವಿಧ ಭಾಷೆಗಳಲ್ಲಿ ನಟಿಸಿದ ಒಟ್ಟು ಚಿತ್ರಗಳ ಸಂಖ್ಯೆ ೩೦೦ಮೀರಿದರೂ ಕನ್ನಡದಲ್ಲಿ ಅಭಿನಯಿಸಿದ ಚಲನಚಿತ್ರಗಳು ೧೭೫ಮಾತ್ರ. ಅವುಗಳಲ್ಲಿ ಪ್ರಮುಖವಾದವು ಸತಿಶಕ್ತಿ, ಸ್ಕೂಲ್‌ಮಾಸ್ಟರ್, ಕಿತ್ತೂರುಚೆನ್ನಮ್ಮ, ಮಕ್ಕಳರಾಜ್ಯ, ಶ್ರೀಕೃಷ್ಣದೇವರಾಯ, ತಾಯಿದೇವರು, ಜಗಮೆಚ್ಚಿದಮಗ ತ್ರಿಮೂರ್ತಿ ಬಂಗಾರದಪಂಜರ ದಾರಿತಪ್ಪಿದಮಗ ಸಂಪತ್ತಿಗೆಸವಾಲ್ ಮುಂತಾದವು. ಇವರ ಶ್ರೇಷ್ಠ ಅಭಿನಯಕ್ಕೆ ’ಕಲಾದೀವಿಗೆ’ ’ನಿರ್ಮಾಪಕಿರತ್ನ’ ಬಿರುದು ಸೇರಿದಂತೆ ಅನೇಕ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ಉತ್ತಮ ಪೋಷಕನಟಿ ಪಾತ್ರಕ್ಕೆ ೧೨ ರಾಷ್ಟ್ರ ಪ್ರಶಸ್ತಿ, ೩೮ ರಾಜ್ಯ ಪ್ರಶಸ್ತಿಗಳ ಜತೆಗೆ ಭಾರತದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಯೂ ದೊರಕಿದೆ. ರಾಜಮ್ಮನವರ ಶಿಫ಼ಾರಸ್ಸು, ಸಹಾಯದಿಂದಾಗಿ ಇವರದೇ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ಚಿತ್ರಗಳ ಮೂಲಕ ವೈ.ಆರ್.ಸ್ವಾಮಿ, ಎಸ್‌ಆರ್.ಪುಟ್ಟಣ್ಣಕಣಗಾಲ್, ಕಣಗಾಲ್‌ಪ್ರಭಾಕರ್‌ಶಾಸ್ತ್ರಿ, ಷಣ್ಮುಗಂ, ಆರ್.ಎನ್.ಜಯಗೋಪಾಲ್, ಟಿ.ಜಿ.ಲಿಂಗಪ್ಪ, ರಾಜ್‌ಕುಮಾರ್, ನರಸಿಂಹರಾಜು, ಉದಯಕುಮಾರ್, ಸತ್ಯ, ಬಾಲಕೃಷ್ಣ, ಡಿಕ್ಕಿಮಾಧವರಾವ್, ಅಶ್ವಥ್, ಮುಂತಾದ ನಟರು. ಕಲ್ಪನಾ, ಜಯಂತಿ, ಭಾರತಿ, ವಾಣಿಶ್ರೀ, ಶೈಲಶ್ರೀ ಮುಂತಾದ ನಟಿಯರು ಚಲನಚಿತ್ರ ರಂಗದಲ್ಲಿ ಭದ್ರವಾಗಿ ತಳ ಊರಿ ಸಿನಿಲೋಕದಲ್ಲಿ ನೆಲೆ ಕಂಡುಕೊಂಡರು, ದೇಶದಾದ್ಯಂತ ಖ್ಯಾತರಾದರು.
ಎಂ.ವಿ.ರಾಜಮ್ಮ, ಕನ್ನಡ ಚಲನಚಿತ್ರ ರಂಗದ ಪ್ರಪ್ರಥಮ ಮಹಿಳಾ ನಿರ್ಮಾಪಕಿ. ಪದ್ಮಿನಿ ಪಿಕ್ಚರ್ಸ್ ಬ್ಯಾನರ್‌ನಡಿಯಲ್ಲಿ ೨೫ಕ್ಕೂ ಹೆಚ್ಚು ಕನ್ನಡ ಚಿತ್ರಗಳು ಸೇರಿದಂತೆ ಭಾರತದ ಇನ್ನಿತರ ಭಾಷೆಗಳ ಸುಮಾರು ೫೮ ಚಿತ್ರಗಳನ್ನು ನಿರ್ಮಾಣ ಮಾಡಿದ ಇತಿಹಾಸವಿದೆ. ಸಾಕ್ಷಾತ್ ಮಹಾಲಕ್ಷ್ಮಿ ಕಳೆಯುಳ್ಳ ಮಂದಸ್ಮಿತ ಬೊಗಸೆಕಂಗಳ ಎಂ.ವಿ.ರಾಜಮ್ಮನವರು ತಮ್ಮ ಸಿನಿಮಾ ಜೀವನದ ಪ್ರಾರಂಭದಲ್ಲಿ ರಾಜ್‌ಕುಮಾರ್ ಎಂ.ಜಿ.ರಾಮಚಂದ್ರನ್ ಎನ್.ಟಿ.ರಾಮರಾವ್ ಶಿವಾಜಿಗಣೇಶನ್ ಅವರಂತಹ ಹಲವಾರು ಖ್ಯಾತ ಹೀರೋಗಳ ಜತೆಗೆ ಹೀರೋಯಿನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸದಾ ಮುಗುಳ್ನಗೆ ಮುಖಾರವಿಂದ ಉಳ್ಳ ರಾಜಮ್ಮನವರು ತಮ್ಮ ಸಮಕಾಲೀನ ನಟಿಯರಾದ ಅಂಜಲಿ ದೇವಿಕಾ ಸಾವಿತ್ರಿ ಸಂಧ್ಯಾ ಪ್ರತಿಮಾದೇವಿ ಜಮುನಾ ಸಾಹುಕಾರ್‌ಜಾನಕಿ ಕೃಷ್ಣಕುಮಾರಿ ಬಿ.ಸರೋಜಾದೇವಿ ಮುಂತಾದವರೊಡನೆ ಸ್ನೇಹದಿಂದಿರುತ್ತಿದ್ದರು. ಆದರೆ ಹೆಚ್ಚು ಸಲುಗೆಯಿಂದ ಇದ್ದುದು ಕನ್ನಡದ ಮತ್ತೊಬ್ಬ ಮೇರು ನಟಿಯಾದ ಪಂಡರಿಬಾಯಿ ಅವರೊಡನೆ ಮಾತ್ರ. ಇದಕ್ಕೆ ಎಂ.ವಿ.ರಾಜಮ್ಮನವರು ಕೊಡುತ್ತಿದ್ದ ಕಾರಣ ವಿಶಿಷ್ಟವಾದ್ದು:- ಪಂಡ್ರೀಬಾಯಿ ಮತ್ತು ನಾನು ಸಮಾನ ಮನಸ್ಕರಷ್ಟೆ ಅಲ್ಲ, ಹೆಚ್ಚೂಕಮ್ಮಿ ಸಮಾನ ವಯಸ್ಕರು ಹೌದು. ಯಾವಾಗಲೂ ನಾವಿಬ್ಬರು ಪರಸ್ಪರ ಪ್ರೀತಿಸುತ್ತೇವೆ, ಗೌರವಿಸುತ್ತೇವೆ. ಯಾವುದೇ ಕಾರಣವಿರಲಿ ನಾವು ಒಬ್ಬರನ್ನೊಬ್ಬರು ಎಂದೂ ಏನನ್ನೂ ಬಿಟ್ಟುಕೊಟ್ಟವರಲ್ಲ, ನನ್ನಭಿಪ್ರಾಯದಲ್ಲಿ ನನ್ನ ಓರಗೆಯವರಲ್ಲಿ ಪಂಡರಿಬಾಯಿ ಓರ್ವ ಸುಗುಣವಂತ ಮಹಾನ್‌ಕಲಾವಿದೆ. ಇವರನ್ನು ಹೊರತುಪಡಿಸಿ ನನಗೆ ಪ್ರಿಯವಾದ ಸಹೋದ್ಯೋಗಿ ಗೆಳತಿಯರೆಂದರೆ ಹರಿಣಿ, ಬಿ.ಸರೋಜಾದೇವಿ ಹಾಗೂ ಸಂಧ್ಯಾ [ಜಯಲಲಿತಾಳತಾಯಿ] ಎಂಬುದಾಗಿ ಹಲವಾರು ಬಾರಿ ಸಾರ್ವಜನಿಕವಾಗಿ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು?! ಇವರ ಗರಡಿಯಲ್ಲಿ ತಯಾರಾದ ಪ್ರಮುಖ ಶಿಷ್ಯರಲ್ಲಿ ಮೊದಲಿಗರು ಖ್ಯಾತ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್?! ರಾಜಮ್ಮನವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆ ನಿರ್ಮಾಣದ ೨೫ನೇ ಹಾಗೂ ಕಟ್ಟಕಡೆಯ ಸಿನಿಮಾ ಕಾಲೇಜುರಂಗ ೧೯೭೬ರಲ್ಲಿ ತೆರೆಕಂಡ ಕನ್ನಡ ಫಿಲಂ. ಈ ಚಿತ್ರದ ನಿರ್ಮಾಪಕ ಈಕೆಯ ಪುತ್ರ ಬಿ.ಆರ್.ರವಿಶಂಕರ್, ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್!
ಎಂ.ವಿ.ರಾಜಮ್ಮನವರ ಅಭಿಪ್ರಾಯವನ್ನು ಒಪ್ಪಿಕೊಂಡ ಪಂಡರಿಬಾಯಿ ಕೂಡಾ ಅನೇಕ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ರಾಜಮ್ಮನವರ ಮಾತುಗಳನ್ನು ಪುಷ್ಟೀಕರಿಸಿದ್ದರು. ಈ ಇಬ್ಬರು ಲೆಜೆಂಡರಿ ನಟಿಯರ ಮನದಾಳದ ಮುಕ್ತ ಮಾತುಗಳು ಕಾಲಕಳೆದಂತೆ ದಕ್ಷಿಣ ಭಾರತದ ಪಂಚ ಭಾಷೆಯ ಚಿತ್ರರಸಿಕರಲ್ಲಿ ಈ ನಟಿಯರಿಬ್ಬರ ಅಭಿಮಾನಿಗಳು ಹುಟ್ಟಿಕೊಳ್ಳುವಂತಹ ಪರಿಣಾಮ ಬೀರಿತು. ಹಲವಾರು ಬಾರಿ ಪಂಡರಿಬಾಯಿಗೆ ಬಿಡುವಿಲ್ಲದಂತೆ ಒಂದರಮೇಲೊಂದು ಕಾಲ್‌ಶೀಟ್‌ಗೆ ಡಿಮ್ಯಾಂಡ್ ಬಂದವೇಳೆ ಪಂಡರಿಬಾಯಿವರು ನುಡಿದುದು ಹೀಗಿದೆ:- ನನಗಿಂತ ಚೆನ್ನಾಗಿ ರಾಜಮ್ಮನೂ ತಾಯಿ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದಾರೆ, ಸಾಮರ್ಥ್ಯವಿರುವ ಅವರಿಗೂ ಅವಕಾಶ ಕೊಡಿ ಈ ಮಾತುಗಳನ್ನು ಸ್ವಯಂ ಪಂಡರಿಬಾಯವರೇ ಹಲವಾರು ನಿರ್ಮಾಪಕ ನಿರ್ದೇಶಕರಿಗೆ ಉತ್ತಮ ಸಲಹೆ ನೀಡಿ ತಮ್ಮ ಬದಲಿಗೆ ನಟಿಸುವಂಥ ಪರ್ಯಾಯ ಪರಿಹಾರನ್ನು ಸೂಚಿಸುತ್ತಿದ್ದರು, ಅನಿವಾರ್ಯ ಅವಶ್ಯ ಎನಿಸಿದ ಸಂದರ್ಭದಲ್ಲೆಲ್ಲ ಖುದ್ದು ರಾಜಮ್ಮನವರೊಡನೆ ಮಾತುಕತೆಯಾಡಿ ಸೂಕ್ತ ವ್ಯವಸ್ಥೆಯನ್ನು ಸಹ ಮಾಡುತ್ತಿದ್ದರು. ಕಾಲಾಯ ತಸ್ಮೈನಮಃ ಎಂಬಂತೆ ಅನಿರೀಕ್ಷಿತವಾಗಿ ಒಂದಿನ ಎಂ.ವಿ.ರಾಜಮ್ಮನವರು ತೀವ್ರ ಅನಾರೋಗ್ಯದ ನಿಮಿತ್ತ ಮದ್ರಾಸ್(ಚೆನ್ನೈ) ಆಸ್ಪತ್ರೆ ಸೇರಿದವರು, ಶುಶ್ರೂಶೆ ಫಲಕಾರಿಯಾಗದೆ ದಿನಾಂಕ ೨೪.೪.೧೯೯೯ರಂದು ನಿಧನರಾದರು. ಚಂದನವನದ ಚೇತನದಂತಿದ್ದ ಹಿರಿಯ ಕಲಾವಿದೆ ಮೇರುನಟಿ ಎಂ.ವಿ.ರಾಜಮ್ಮನವರು ನೇರನುಡಿಯ ಆದರೆ ಪರೋಪಕಾರ ಮನೋಭಾವದ ದಕ್ಷಿಣ ಭಾರತದ ಶ್ರೇಷ್ಠ ಚಲನಚಿತ್ರ ಉದ್ಯಮಿಯಾಗಿದ್ದ ಧೀರಮಹಿಳೆ. ಎಲ್ಲಕ್ಕೂ ಮಿಗಿಲಾಗಿ ಓರ್ವ ಅಚ್ಚಸ್ವಚ್ಚ ಅಪ್ಪಟ ಕನ್ನಡತಿ. ಮಾನಸಿಕವಾಗಿ ಈಗಲೂ ನಮ್ಮೊಂದಿಗಿರುವ ಎಂ.ವಿ.ರಾಜಮ್ಮನವರನ್ನು ಕನ್ನಡ ಕುಲಕೋಟಿ ಮಾತ್ರವಲ್ಲದೆ ಇಡೀ ದಕ್ಷಿಣ ಭಾರತದ ಚಿತ್ರೋದ್ಯಮಿ, ಕಲಾವಿದ ಹಾಗೂ ಪಾರಿಭಾಷಿಕವರ್ಗದ ಪ್ರತಿಯೊಬ್ಬರು ಸರ್ವ ಕಾಲದಲ್ಲು ಸ್ಮರಿಸುತ್ತಲೆ ಇರುತ್ತಾರೆ!
ಎಂ.ವಿ.ರಾಜಮ್ಮ ಅಭಿನಯಿಸಿದ ಫಿಲಂಸ್
ಕ್ರ.ಸಂ. ಫಿಲಮ್ ಕ್ರ.ಸಂ. ಫಿಲಮ್
೧ ಸಂಸಾರನೌಕಾ/೧೯೩೬ ೨೨ ಯಯಾತಿ [ತ]
೨ ರಾಧಾರಮಣ ೨೩ ಉತ್ತಮಪುತ್ರನ್ [ತ]
೩ ಮೊದಲತೇದಿ ೨೪ ಜ್ಞಾನಸುಂದರಿ [ತ]
೪ ಶಿವಶರಣೆ ನಂಬೆಕ್ಕ ೨೫ ತಂಗಮಲೈರಹಸ್ಯಂ [ತ]
೫ ರತ್ನಗಿರಿರಹಸ್ಯ ೨೬ ಲೈಲಾಮಜ್ನು [ತ]
೬ ಸ್ಕೂಲ್‌ಮಾಸ್ಟರ್ ೨೭ ಪೆಣ್‌ಮನಂ [ತ]
೭ ಅಬ್ಬಾ ಆ ಹುಡುಗಿ ೨೮ ಜಮೀನ್ದಾರ್ [ತ]
೮ ಮಕ್ಕಳರಾಜ್ಯ ೨೯ ಪಾರಿಜಾತಂ [ತ]
೯ ತಾಯಿಕರುಳು ೩೦ ಕಾರ್‌ಕೋಟ್ಟೈ [ತ]
೧೦ ಗಾಳಿಗೋಪುರ ೩೧ ಭಕ್ತಪ್ರಹ್ಲಾದ [ತೆ]
೧೧ ಸತಿಶಕ್ತಿ ೩೨ ಯೋಗಿವೇಮನ [ತೆ]
೧೨ ಕಿತ್ತೂರುಚೆನ್ನಮ್ಮ ೩೩ ಇದ್ದರುಪಿಲ್ಲಲು [ತೆ]
೧೩ ಎಮ್ಮೆತಮ್ಮಣ್ಣ ೩೪ ಕುಲವಧು
೧೪ ಬೀದಿಬಸವಣ್ಣ ೩೫ ಚಿನ್ನದಗೊಂಬೆ
೧೫ ಗಂಡೊಂದುಹೆಣ್ಣಾರು ೩೬ ಮಾಲತಿಮಾಧವ
೧೬ ಶ್ರೀಕೃಷ್ಣದೇವರಾಯ ೩೭ ಒಂದುಹೆಣ್ಣಿನಕಥೆ
೧೭ ತಾಯಿದೇವರು ೩೮ ಯಾರಸಾಕ್ಷಿ
೧೮ ಜಗಮೆಚ್ಚಿದಮಗ ೩೯ ಶತ್ರು
೧೯ ಬಂಗಾರದಪಂಜರ ೪೦ ಬಿಳಿಗಿರಿಯ ಬನದಲ್ಲಿ
೨೦ ದಾರಿತಪ್ಪಿದಮಗ ೪೧ ಕೂಡಿಬಾಳೋಣ
೨೧ ಸಂಪತ್ತಿಗೆ ಸವಾಲ್ ೪೨ ಬೆಸುಗೆ

ಕುಮಾರಕವಿ ಬಿ.ಎನ್.ನಟರಾಜ
೯೦೩೬೯೭೬೪೭೧
ಬೆಂಗಳೂರು ೫೬೦೦೭೨