ಹ್ಯಾಂಡ್ಸಮ್‌ಸ್ಟಾರ್ ಜೈಜಗದೀಶ್
೨೯ನೇ ಜೂನ್ ೧೯೫೪ರಂದು ಮೈಸೂರು ನಗರದಲ್ಲಿ ಜನಿಸಿದರು. ಎಂ.ಡಿ.ಟಿ.ಡಿ.ಬಿ.ಕಾಲೇಜು ಮೂಲಕ ಮೈಸೂರು ವಿಶ್ವವಿದ್ಯಾನಿಲಯದ ಪದವಿ ಪಡೆದರು. ಶಾಲಾ ಕಾಲೇಜು ದಿನಗಳಿಂದಲೂ ನಾಟಕ-ಸಿನಿಮಾ ಹುಚ್ಚು ಅಂಟಿಸಿಕೊಂಡಿದ್ದರು. ವಿದ್ಯಾರ್ಥಿ ಜೀವನದಲ್ಲಿ ಅಭಿನಯ ಕಲೆಯನ್ನು ಹವ್ಯಾಸವನ್ನಾಗಿಸಿ ಹಲವಾರು ಬಾರಿ ಬಣ್ಣ ಹಚ್ಚಿಕೊಂಡಿದ್ದರು. ಅಂತರ-ಶಾಲಾ-ಕಾಲೇಜು ಪಠ್ಯೇತರ ಚಟುವಟಿಕೆ ಸ್ಫರ್ಧೆ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೆಲವು ಪ್ರಶಸ್ತಿ ಮತ್ತು ಬಹುಮಾನಗಳನ್ನು ಗಳಿಸಿದ್ದರು. ಆದರೆ ಮುಂದೊಂದಿನ ಚಂದನವನದಲ್ಲಿ ಸಿನಿಮ ಹೀರೋ ಆಗುತ್ತೇನೆಂಬ ಆಸೆ ಅಥವಾ ಭರವಸೆ ಇಟ್ಟುಕೊಂಡಿರಲಿಲ್ಲ. ದ.ಭಾರತದ ಖ್ಯಾತ ನಿರ್ದೇಶಕ ಎಸ್.ಆರ್.ಪುಟ್ಟಣ್ಣಕಣಗಾಲ್ ಗರಡಿಯಿಂದ ಪರಿಚಯಗೊಂಡ ನವನಟರಲ್ಲಿ ಅಗ್ರಗಣ್ಯ ಜೈಜಗದೀಶ್. ಪುಟ್ಟಣ್ಣನವರ ಕೋಪತಾಪದ ವಾಚಾಮಗೋಚರ ಅಷ್ಟೋತ್ತರಕ್ಕೆ ಸಿಲುಕದೆ ಗೆದ್ದುಬಂದು ಅವರಿಂದಲೆ ಭೇಷ್ ಎನಿಸಿಕೊಂಡ ಉದಯೋನ್ಮುಖ ಕಲಾವಿದ!

೧೯೭೬ರಲ್ಲಿ ತೆರೆಕಂಡ ಫ಼ಲಿತಾಂಶ ಫ಼ಿಲಂ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಸ್ಫುರದ್ರೂಪಿ ಯುವಕ ಕಾಲಕ್ರಮೇಣ ದ.ಭಾರತದ ‘ಹ್ಯಾಂಡ್ಸಂ ಸ್ಟಾರ್’ ಬಿರುದು ಪಡೆದು ೫ಭಾಷೆಗಳಲ್ಲಿ ಪ್ರತಿಭೆ ಪ್ರದರ್ಶಿಸಿದರು. ಪಡುವಾರಳ್ಳಿಪಾಂಡವರು, ಬಂಧನ, ಬೆಂಕಿಯಲ್ಲಿಅರಳಿದಹೂವು, ಗಾಳಿಮಾತು, ಸಿಡಿದೆದ್ದಗಂಡು, ಧೈರ್ಯಂ ಮುಂತಾದ ಅನೇಕ ಚಿತ್ರಗಳಲ್ಲಿ ಸ್ವಚ್ಚ ಅಭಿನಯ ನೀಡಿದ ಅಚ್ಚ ಕನ್ನಡದ ನಟ. ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ನಂತರ ಖ್ಯಾತ ಹಿರಿಯ ತಾರಾದಂಪತಿ ಶ್ರೀಮತಿ ಪ್ರತಿಮಾದೇವಿ-ಶ್ರೀಶಂಕರ್‌ಸಿಂಗ್‌ಪುತ್ರಿ; ನಿರ್ಮಾಪಕ-ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್‌ಬಾಬು ಅವರ ಸೋದರಿ ನಟಿ ವಿಜಯಲಕ್ಷ್ಮಿಸಿಂಗ್‌ರವರನ್ನು ವಿವಾಹವಾಗಿ ಸ್ಯಾಂಡಲ್‌ವುಡ್ನ ರೀಲ್ ಲೋಕದ ರಿಯಲ್ ದಂಪತಿ ಪಟ್ಟಿಗೆ ಸೇರ್ಪಡೆಯಾದರು
ಜೈಜಗದೀಶ್ ತಮ್ಮ ಸಿನಿಜೀವನವನ್ನು ನಟನೆಗೆ ಮಾತ್ರ ಸೀಮಿತಗೊಳಿಸದೆ ನಿರ್ಮಾಪಕ-ನಿರ್ದೇಶಕನಾಗಿಯೂ ಕಲಾಸೇವೆ ಮಾಡಿದರು. ಇವರು ತಯಾರಿಸಿದ ಸಿನಿಮಾಗಳಲ್ಲಿ ಮುಖ್ಯ ಉದಾಹರಣೆ ‘ಭೂಮಿತಾಯಿಯ ಚೊಚ್ಚಲಮಗ’. ಈಫ಼ಿಲಂ ಹೊಸಅಲೆ ಸೃಷ್ಟಿಸಿ ಹಲವಾರು ಬಹುಮಾನ-ಪ್ರಶಸ್ತಿ ಪಡೆಯಿತು! ಇವರು ನಿರ್ದೇಶಿಸಿದ ಪ್ರಮುಖ ಚಿತ್ರಗಳಲ್ಲೊಂದು ‘ಮದನ’[೨೦೦೬]ಫ಼ಿಲಂ! ಶ್ರೇಷ್ಠ ನಟ, ಅತ್ಯುತ್ತಮ ಪೋಷಕ ನಟ, ನಿರ್ಮಾಪಕ, ನಿರ್ದೇಶಕ ವಿಭಾಗಗಳಲ್ಲಿ ರಾಜ್ಯ, ರಾಷ್ಟ್ರ ಹಾಗೂ ಫ಼ಿಲಂಫ಼ೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡು ಚಂದನವನದ ಮೈಲುಗಲ್ಲಾಗಿ ಉಳಿಯುತ್ತಾರೆ.

ಸ್ಯಾಂಡಲ್‌ವುಡ್ನ ಬಹುತೇಕ ನಟ-ನಟಿಯರೊಡನೆ ಅಭಿನಯಿಸಿರುವ ಈ ಗಾಂಭೀರ್ಯವಂತ, ಅದ್ಯಾವುದೆ ಪಾತ್ರವಿರಲಿ ‘ಪಾಲಿಗೆ ಬಂದದ್ದು ಪಂಚಾಮೃತ’ ಎಂದು ತಿಳಿದು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಅಪರೂಪದ ಪ್ರತಿಭಾನ್ವಿತ. ಕನ್ನಡ ಹಿಂದಿ ಮರಾಠಿ ತುಳು ಕೊಂಕಣಿ ಕೊಡವ ತಮಿಳು ತೆಲುಗು ಮಲೆಯಾಳಂ ಚಿತ್ರಗಳಲ್ಲಿ ಅಭಿನಯಿಸಿ ‘ಸೈ’ ಎನಿಸಿಕೊಂಡಿದ್ದಾರೆ. ಟ್ರ್ಯಾಜಿಡಿ ಕಾಮಿಡಿ ನೆಗಟಿವ್ ಪಾಸಿಟಿವ್ ರೋಲ್‌ಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ನೈಜಕಲಾವಿದ. ೫೦ವರ್ಷದಿಂದ ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ನಟ ಇವತ್ತಿಗೂ ಹೇಳುವುದು ‘ನಾನಿನ್ನೂ ಕಲಿಯುವುದು ಬಹಳಷ್ಟಿದೆ’. ಸರಳ ಸಜ್ಜನಿಕೆಯ ಜೈಜಗದೀಶ್ ಅಭಿಮಾನಿಗಳಿಂದಲೂ ಬಿರುದು ಬಹುಮಾನ ಪಡೆದಿದ್ದಾರೆ. ಕಿರುತೆರೆಯಲ್ಲೂ ಅಭಿನಯಿಸುತ್ತಿರುವ ಇವರ ಮಕ್ಕಳು ಏನಾದರು ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟದ್ದೇ ಆದರೆ ಕನ್ನಡ ಸಿನಿಲೋಕದ ದಿಗ್ಗಜ ಡಿ.ಶಂಕರ್‌ಸಿಂಗ್ ಪ್ರತಿಮಾದೇವಿ ಕುಟುಂಬದ ಮೂರು ತಲೆಮಾರು ಹೊಸದಾಖಲೆ ಬರೆದಂತಾಗುತ್ತದೆ ಚಂದನವನ ಚರಿತ್ರೆಯಲ್ಲಿ?!
ಜೈಜಗದೀಶ್ ನಟಿಸಿದ ಫ಼ಿಲಂಸ್




