ನಿಸ್ಸಂಕರ ಸಾವಿತ್ರಿ ೧೯೩೫ನೇ ಡಿಸೆಂಬರ್ ೬ರಂದು ಬ್ರಿಟಿಷ್ ಇಂಡಿಯಾದ ಮದ್ರಾಸ್ ಪ್ರಾವಿನ್ಸ್ [ಇಂದಿನ ಆಂಧ್ರ ಪ್ರದೇಶ] ಪುಟ್ಟ ಗ್ರಾಮ ಚಿರ್ರವೂರು ಎಂಬ ಹಳ್ಳಿಯಲ್ಲಿ ಜನಿಸಿದರು. ಶ್ರೀ ನಿಸ್ಸಂಕರರಾವ್ ಗುರುವಯ್ಯ ಮತ್ತು ಶ್ರೀಮತಿ ಸುಭದ್ರಮ್ಮ ಎಂಬ ಮಧ್ಯಮ ವರ್ಗ ಕೃಷಿ ಕಾಯಕದ ಕಾಪು ರೈತ ಕುಟುಂಬದ ದಂಪತಿಗೆ ಜನಿಸಿದ ಒಟ್ಟು ೩ಗಂಡು ೩ಹೆಣ್ಣು ಆರು ಮಕ್ಕಳಲ್ಲಿ ಇವರೂಒಬ್ಬರು. ಉನ್ನತ ಶಿಕ್ಷಣ ಪಡೆದು ಪದವೀಧರೆ ಆಗಬೇಕೆಂದಿದ್ದ ಇವರ ಆಕಾಂಕ್ಷೆಯು ಕಾರಣಾಂತರದಿಂದ ಈಡೇರಲಿಲ್ಲ. ಆದರೆ ಸಾಕಷ್ಟು ವಿದ್ಯಾಭ್ಯಾಸ ಪಡೆದಿದ್ದ ಈಕೆಯ ಬಾಲ್ಯ ಜೀವನದಲ್ಲಿ ತೋರಿದ ಪಠ್ಯ-ಪಠ್ಯೇತರ ಚಟುವಟಿಕಾ ಟ್ಯಾಲೆಂಟ್ ನಿಂದಾಗಿ ಎಲ್ಲರ ಪ್ರೀತಿ ಮಮತೆ ವಿಶ್ವಾಸ ಹಾಗೂ ಮೆಚ್ಚುಗೆ ಪಡೆದಿದ್ದರು.

ಅನಿರೀಕ್ಷಿತವಾಗಿ ಸಾವಿತ್ರಿಯವರಿಗೆ ಅನ್ಯರಿಂದ ಖ್ಯಾತ ತೆಲುಗು ಚಿತ್ರ ನಿರ್ಮಾಪಕರೊಬ್ಬರ ಪರಿಚಯವಾಯಿತು. ದಿಢೀರನೆ ಇವರ ಪಾಲಿಗೆ ತಾನಾಗೆ ಒದಗಿಬಂದ ಡ್ಯಾನ್ಸರ್ ಪಾತ್ರವನ್ನು ೧೯೫೧ರಲ್ಲಿ ತೆರೆಕಂಡ ಪಾತಾಳಭೈರವಿ (ತೆಲುಗು-ತಮಿಳು) ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಅದೇವರ್ಷ ಬಿಡುಗಡೆಯಾದ ಇವರು ಮುಖ್ಯ ಪಾತ್ರದಲ್ಲಿ ನಟಿಸಿದ್ದ ಮೊಟ್ಟಮೊದಲ ತೆಲುಗು ಫಿಲಂ ’ರೂಪವತಿ’ ಚಿತ್ರವು ಸಹ ಇವರಿಗೆ ಹೆಚ್ಚಿನ ಜನಪ್ರಿಯತೆ ತಂದುಕೊಟ್ಟಿತು. ಕಾಲಕ್ರಮೇಣ ತಮ್ಮ ಕನಸು ಮನಸಲ್ಲು ಊಹಿಸದಷ್ಟು ಎತ್ತರಕ್ಕೆ ತಲುಪಿದ ಸಾವಿತ್ರಿ ಅತ್ಯಂತ ಕಡಿಮೆ ಕಾಲಘಟ್ಟದಲ್ಲಿ ದ.ಭಾರತ ಚಿತ್ರರಂಗದಲ್ಲಿ ಬೆಳೆದು ತಳವೂರಿದರು. ಮಾತ್ರವಲ್ಲ ಇಡೀ ದೇಶದಲ್ಲೆ ತಮ್ಮದೆ ಆದ ವಿಶಿಷ್ಟ ವಿಭಿನ್ನ ಛಾಪು ಮೂಡಿಸಿದರು. ನಟಿ-ಹಿನ್ನೆಲೆಗಾಯಕಿ-ನಿರ್ಮಾಪಕಿ-ನಿರ್ದೇಶಕಿ ಆಗಿ ಬಹುಮುಖ ಪ್ರತಿಭೆ ತೋರ್ಪಡಿಸಿ ಖ್ಯಾತ ಚಿತ್ರೋದ್ಯಮಿ ಎಂದೆನಿಸಿದರು. ತಮ್ಮ ಜೀವನದಲ್ಲಿ ಗೆಲುವಿಗಿಂತ ಸೋಲನ್ನೆ ಹೆಚ್ಚು ಕಂಡುಂಡ ಇವರು ಹೊರಗಿನವರಿಂದಲೂ ಒಳಗಿನವರಿಂದಲೂ ಒದಗಿದ ಪ್ರತಿಯೊಂದು ಕಷ್ಟ ನಷ್ಟ ನೋವು ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿದರು. ಹೊಗಳಿಕೆ ತೆಗಳಿಕೆ ಟೀಕೆ ಟಿಪ್ಪಣಿ ಎಲ್ಲವನ್ನು ಸಮತೋಲನ ದೃಷ್ಟಿಕೋನದಿಂದ ಸ್ವಾಗತಿಸಿ ತಮ್ಮ ವೈಯಕ್ತಿಕ ಮತ್ತು ಕಲಾಮಾಧ್ಯಮ ಎರಡೂ ಬದುಕನ್ನು ಧೈರ್ಯದಿಂದ ಎದುರಿಸಿದರು. ಸಹನೆ ಸರಳತೆ ಸಜ್ಜನಿಕೆಯ ಸಾಗರದಂತಿದ್ದ ಧೀರ ಮಹಿಳೆ ಸಾವಿತ್ರಿ ಘೋರ ಕೋಮಾ ಖಾಯಿಲೆಗೆ ತುತ್ತಾಗಿ ೨೬ನೇ ಡಿಸೆಂಬರ್ ೧೯೮೧ ರಂದು ಮದ್ರಾಸಿನಲ್ಲಿ ಸ್ವರ್ಗಸ್ಥರಾದರು.

ಮೇರುನಟಿ ಸಾವಿತ್ರಿಯವರು ಡಾ.ರಾಜಕುಮಾರ್, ಜೆಮಿನಿಗಣೇಶನ್, ಶಿವಾಜಿಗಣೇಶನ್, ಎಂಜಿಆರ್, ಎನ್‌ಟಿಆರ್ ಎ.ನಾಗೇಶ್ವರರಾವ್, ಅಶೋಕ್‌ಕುಮಾರ್, ರತನ್‌ಕುಮಾರ್ ಮುಂತಾದ ದಿಗ್ಗಜರೊಡನೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಅಪ್ರತಿಮ ಹೀರೋಯಿನ್! ಕೇವಲ ೧೮ ವರ್ಷ ಅವಧಿಯಲ್ಲಿ ಮೂರು ಭಾಷೆಯ ಒಟ್ಟು ೧೫೦ ಫಿಲಂಸ್ ನಟಿಸಿ ಹೊಸ ದಾಖಲೆ ನಿರ್ಮಿಸಿದ ಕಲಾವಿದೆ. ಬಹುಶಃ ಇನ್ನಷ್ಟು ವರ್ಷ ಬದುಕಿದ್ದಿದ್ದರೆ ಮತ್ತಷ್ಟು ನೂತನ ದಾಖಲೆಗಳನ್ನು ಸೃಷ್ಟಿಸುತ್ತಿದ್ದರೇನೊ! ಬಲ್ಲವರಾರು? ಸಾವಿತ್ರಿಯವರ ಸಾಧನೆ ಮತ್ತು ಯಶಸ್ಸು ಕಂಡು ಅಸೂಯೆಗೊಂಡ ವಿಧಿಯು ಕೇವಲ ೪೫ನೇ ವಯಸ್ಸಿಗೆ ಇವರ ಉಸಿರು ನಿಲ್ಲಿಸಿತ್ತು! ತಮ್ಮ ಅಲ್ಪಾಯುಷ್ಯದಲ್ಲಿ ತಮಗೆ ದೊರೆತ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಂಡ ಸಾವಿತ್ರಿಯು ಕನ್ನಡ ಹಿಂದಿ ತಮಿಳು ತೆಲುಗು ಮಲಯಾಳಂ ಭಾಷೆಯ ಒಟ್ಟು ೨೫೦ಕ್ಕು ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಪಂಚ ಭಾಷಾ ತಾರೆಯರಲ್ಲಿ ಅಗ್ರಸ್ಥಾನ ಪಡೆದಿದ್ದ ಅಪರೂಪದ ಅಭಿನೇತ್ರಿ.

೧೯೫೬ರಲ್ಲಿ ಖ್ಯಾತನಟ ಜೆಮಿನಿಗಣೇಶನ್‌ರನ್ನು ವಿವಾಹವಾದ ಸಾವಿತ್ರಿಗೆ ವಿಜಯಚಾಮುಂಡೇಶ್ವರಿ ಮತ್ತು ಸತೀಶಕುಮಾರ್‌ಗಣೇಶನ್ ಎಂಬ ಮಕ್ಕಳಿದ್ದಾರೆ. ಇಂಥ ಹಿರಿಯನಟಿ ಸಾವಿತ್ರಿಯವರ ಜೀವನಚರಿತ್ರೆ ಅಥವ ಜೀವನಾಧಾರಕತೆ ಕುರಿತು ನಿರ್ಮಾಣಗೊಂಡ ತೆಲುಗು ಭಾಷೆಯ ಮಹಾನಟಿ ಚಿತ್ರವು ಸಹ ೨೦೧೮ರಲ್ಲಿ ತೆರೆಕಂಡು ಕೀರ್ತಿ ಹಾಗೂ ರಾಷ್ಟ್ರ ಪ್ರಶಸ್ತಿ ಗಳಿಸಿತು. ಪ್ರಪಂಚ ಚಿತ್ರರಂಗದ ಚರಿತ್ರೆಯಲ್ಲಿ ಓರ್ವ ನಟಿಯು ನಿಧನರಾದ ೩೭ವರ್ಷದ ಬಳಿಕ ಆಕೆಯ ಬಗ್ಗೆ ಸಿನಿಮಾವೊಂದು ರಿಲೀಸಾಗಿ ಅಪಾರ ಯಶಸ್ಸುಗಳಿಸಿದ್ದು ಅದ್ಭುತ ಸಾಧನೆ! ಇವರು ನಟಿಸಿದ ಕಟ್ಟಕಡೆಯ ಕನ್ನಡ ಫಿಲಂ ’ರವಿಚಂದ್ರ’[೧೯೮೦] ಮತ್ತು ೧೯೮೧ರಲ್ಲಿ ರಿಲೀಸಾದ ’ದೇವುಡುಮಾವಯ್ಯ’ ತೆಲುಗು ಚಿತ್ರ. ದ.ಭಾರತದ ಪ್ರಪ್ರಥಮ ಮಹಿಳಾ ಸೂಪರ್ ಸ್ಟಾರ್ ಬಿರುದಾಂಕಿತ ನಟಿಯಾಗಿ ಸುಮಾರು ೧೮ ವರ್ಷ ಪರ್ಯಂತ ದ.ಭಾರತದಲ್ಲೆ ಅತಿಹೆಚ್ಚು ಸಂಭಾವನೆ ಪಡೆದ ಹೀರೊಯಿನ್ ಮತ್ತು ಭಾರತದಲ್ಲೆ ೩ನೇ ಅತಿಹೆಚ್ಚು ಸಂಭಾವನೆ ಪಡೆದ ನಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು!

ಸಾವಿತ್ರಿಯವರಿಗೆ ದೊರೆತ ಪ್ರಶಸ್ತಿ-ಬಹುಮಾನ-ಬಿರುದುಗಳು:-

  • ೧೯೫೩ – ಅತ್ಯುತ್ತಮ ನಟಿ ಪ್ರಶಸ್ತಿ : ದೇವದಾಸು ತೆಲುಗು ಚಿತ್ರ
  • ೧೯೫೭ – ಅತ್ಯುತ್ತಮ ನಟಿ ಪ್ರಶಸ್ತಿ : ಮಾಯಾಬಜಾರ್ ತೆಲುಗು ಚಿತ್ರ
  • ೧೯೬೦ – ಅತ್ಯುತ್ತಮ ನಟಿ ಪ್ರಶಸ್ತಿ : ಚಿವರಕು ಮಿಗಿಲೇದಿ ತೆಲುಗು ಚಿತ್ರ
  • ೧೯೬೨ – ಅತ್ಯುತ್ತಮ ನಟಿ ಪ್ರಶಸ್ತಿ : ಆರಾಧನಾ ತೆಲುಗು ಚಿತ್ರ
  • ೧೯೭೦ – ಅತ್ಯುತ್ತಮ ನಟಿ ಪ್ರಶಸ್ತಿ : ಮರೋಪ್ರಪಂಚಂ ತೆಲುಗು ಚಿತ್ರ
  • ೧೯೬೦ – ರಾಷ್ಟ್ರಪತಿಯವರಿಂದ ರಾಷ್ಟ್ರಪ್ರಶಸ್ತಿ : ಚಿವರಕುಮಿಗಿಲೇದಿ
  • ೧೯೬೮ – ನಂದಿ ಪ್ರಶಸ್ತಿ : ಅತ್ಯುತ್ತಮ ಚಿತ್ರ : ಚಿನ್ನಾರಿಪಾಪಲು
  • ೨೦೧೧ – ಭಾರತಸರ್ಕಾರದ ಅಂಚೆಚೀಟಿ ಬಿಡುಗಡೆ
  • ೨೦೧೮ – ಮಹಾನಟಿ – ಜೀವನಚರಿತ್ರೆ ಆಧಾರಿತ ಚಲನಚಿತ್ರ

ಸಾವಿತ್ರಿ ನಟಿಸಿದ ಕನ್ನಡ ಚಿತ್ರಗಳು:-
೧. ಭಕ್ತಮಾರ್ಕಂಡೇಯ, ೨.ಮನಸ್ಸಾಕ್ಷಿ, ೩.ದೇವರುಕೊಟ್ಟವರ, ೪.ತಾಯಿಗೆತಕ್ಕಮಗ,
೫.ಅಶ್ವತ್ಥಾಮ, ೬.ಪ್ರೇಮಪಾಶ, ೭.ಚಂದನದಗೊಂಬೆ ೮.ರವಿಚಂದ್ರ

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨
೪೫೬/೧೩.೫.೨೦೨೩

ಚಂದನವನ ಚರಿತ್ರೆ [ಸ್ಯಾಂಡಲ್‌ವುಡ್ ಸ್ಟೋರಿ]-೭೯(೧೯) ಸಾವಿತ್ರಿ