೧೫ನೇ ಜೂನ್ ೧೯೨೪ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಎಸ್.ಕೆ. ಪದ್ಮಾದೇವಿ ಜನಿಸಿದರು. ನಾಟಕ ಮತ್ತು ಸಿನಿಮಾ ರಂಗದಲ್ಲಿ ಸ್ತ್ರೀ ಪಾತ್ರಗಳನ್ನು ಮಹಿಳೆಯರು ಅಭಿನಯಿಸಲು ಅಭಾವವಿದ್ದ ಬರಗಾಲದಲ್ಲಿ ದೊರಕಿದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ತಮ್ಮ ಮನೆಯಲ್ಲಿ ತಾಯಿ ತಂದೆ ಬಂಧು ಬಳಗ ಎಲ್ಲರ ತೀವ್ರ ವಿರೋಧ ಇದ್ದರೂ ಅವರೆಲ್ಲರ ಇಚ್ಚೆ ಸಲಹೆಗಳನ್ನು ತಿರಸ್ಕರಿಸಿ ೧೯೩೦ರಲ್ಲಿ ರಂಗಭೂಮಿ ಮತ್ತು ಮೂಕಿಚಿತ್ರಗಳಲ್ಲಿ ನಟಿಸುವ ಮೂಲಕ ನಾಟಕ-ಸಿನಿಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ಕನ್ನಡ ಅಭಿನಯ ಕಲೆಗೆ ತಮ್ಮನ್ನು ತಾವು ಸಮರ್ಪಿಸಿಕೊಂಡ ಬಹಳ ಧೈರ್ಯವಂತೆ ಎನಿಸಿಕೊಂಡರು! ಹಾಲಲ್ಲು ಬಿದ್ದು ಶಾಶ್ವತಹಲ್ಲು ಹುಟ್ಟದಿರದ ಕೇವಲ ಆರು ವಯಸ್ಸಿನ ಬಾಲಕಿ ಇದ್ದಾಗಲೆ ರಂಗ ಪ್ರವೇಶ ಮಾಡಿ ಅಂದಿನ ಅತಿರಥ ಮಹಾರಥ ಕಲಾವಿದರನ್ನೂ ನಾಟಕ ಕಂಪನಿ ಮಾಲೀಕರನ್ನೂ ಸಿನಿಮ ಉದ್ಯಮಿಗಳನ್ನೂ ದಿಗ್ಭ್ರಾಂತರನ್ನಾಗಿಸಿದ ಚೂಟಿ ಬಾಲನಟಿ!

ಎಸ್.ಕೆ.ಪದ್ಮಾದೇವಿ ಅವರು ಕಾಲಕ್ರಮೇಣ ಪುರುಷ ಪಾತ್ರಗಳನ್ನೂ ಯಶಸ್ವಿಯಾಗಿ ನಿರ್ವಹಿಸಿ ಮೆಚ್ಚುಗೆ ಪಡೆದರಲ್ಲದೆ ಆಗಿನ ಕಾಲದ ಮಹಾರಾಜ ಬ್ರಿಟಿಷ್ ಅಧಿಕಾರಿ ಕಲೆಕ್ಟರ್ ಸಾಹುಕಾರ್ ಜಾಗೀರ್ದಾರ್ ಜಮೀನ್ದಾರ್ ಪಟೇಲ್ ಶ್ಯಾನುಭೋಗ್ ಮೊದಲ್ಗೊಂಡು ಸಾಮಾನ್ಯ ಪ್ರೇಕ್ಷಕ ವರ್ಗದವರೆಗೆ ಪ್ರತಿಯೊಬ್ಬರಿಂದಲು ಶಹಭಾಶ್‌ಗಿರಿ ಪಡೆದಂಥ ಹುಟ್ಟುಕಲಾವಿದೆ! ೨೦ ವರ್ಷ ಅವಧಿಯೊಳಗೆ ಸುಮಾರು ೧೮ ಬಗೆಯ ವಿವಿಧ ಕಥಾ ವಸ್ತುವುಳ್ಳ ೫೦೦ಕ್ಕೂ ಹೆಚ್ಚು ನಾಟಕ ಪ್ರಯೋಗದ ಪ್ರದರ್ಶನಗಳಲ್ಲಿ ರಾಜ್ಯದಾದ್ಯಂತ ಮೊಕ್ಕಾಂ ಹೂಡುವ ನಾಟಕ ಕಂಪನಿಗಳ ಮೂಲಕ ಪಾತ್ರವಹಿಸಿ ನೂತನ ದಾಖಲೆ ನಿರ್ಮಿಸಿದರು. ಇವರಲ್ಲಿದ್ದ ಉತ್ತಮ ಅಭಿನಯ-ನೃತ್ಯ-ಗಾಯನ ಮುಂತಾದ ವಿವಿಧ ಪ್ರತಿಭೆಗಳನ್ನು ಸೂಕ್ಷ್ಮವಾಗಿ ಗಮನಿಸಿದ ಚಲನಚಿತ್ರ ನಿರ್ಮಾಪಕರು ನಿರ್ದೇಶಕರು ಆಶ್ಚರ್ಯಚಕಿತರಾಗಿ ಇವರಿಗೆ ಅಭಿನಯಿಸಲು ಹತ್ತಾರು ಮೂಕಿ-ಟಾಕೀ ಚಿತ್ರಗಳಲ್ಲಿ ಅವಕಾಶ ನೀಡಿದರು. ೧೯೪೫ರ ಒಂದು ಶುಭದಿನ ಪದ್ಮಾದೇವಿಯವರು ಖ್ಯಾತ ರಂಗ ಕಲಾವಿದ, ಗಾಯಕ ಹಾಗೂ ಸಂಗೀತ ವಿದ್ವಾನ್ ಆಗಿದ್ದ ಪದ್ಮನಾಭರಾವ್ ಅವರನ್ನು ವಿವಾಹವಾಗಿ ಮೂವರು ಮಕ್ಕಳ ಮಾತೆಯಾದರು. ಗೃಹಿಣಿ ಆದಮೇಲೆ ೧೯೬೧ ರವರೆಗೆ ಇವರು ಹಲವಾರು ನಾಟಕ-ಸಿನಿಮಾಗಳಲ್ಲಿ ಅಭಿನಯಿಸಿದರು. ಆನಂತರವೂ ಸಹ ಸುಮಾರು ೨೦ವರ್ಷ ಕಾಲ ೧೯೮೦ ರವರೆಗೆ ಆಕಾಶವಾಣಿ ಕಲಾವಿದೆಯಾಗಿ ಸಾರ್ಥಕ ಮತ್ತು ಸಮರ್ಪಕ ಸೇವೆ ಸಲ್ಲಿಸಿ ನೂತನ ದಾಖಲೆ ನಿರ್ಮಿಸಿದರು!

ದಕ್ಷಿಣ ಭಾರತದ ಪ್ರಮುಖ ನಟಿಯರಲ್ಲಿ ಸಕಲ ಕಲಾ ವಲ್ಲಭೆ ಎನಿಸಿದ್ದ ಎಸ್.ಕೆ.ಪದ್ಮಾದೇವಿಯವರ ಕಲಾಸೇವೆ ಗುರುತಿಸಿದ ಮಹಾರಾಜರು ರಾಜ್ಯಪಾಲರು ಗಣ್ಯಾತಿಗಣ್ಯರು ಇವರಿಗೆ ಅನೇಕ ಬಿರುದು ಬಹುಮಾನ ಸನ್ಮಾನ ನೀಡಿ ಪುರಸ್ಕರಿಸಿದರು. ಕರ್ನಾಟಕ ಚಲನಚಿತ್ರ ಅಕ್ಯಾಡೆಮಿಯು ಪ್ರತಿ ವರ್ಷವು ಕನ್ನಡ ಚಲನಚಿತ್ರ ನಟ-ನಟಿಯರ ಜೀವಮಾನ ಸಾಧನೆ ಮತ್ತು ಶ್ರೇಷ್ಠ ಕಲಾವಿದರಿಗೆ ಕೊಡಮಾಡುವ ಪ್ರತಿಷ್ಠಿತ ನಾಟಕ-ಚಲನಚಿತ್ರ ರಂಗದ ಭೀಷ್ಮ, ಖ್ಯಾತ ಹಿರಿಯ ನಟ ಆರ್. ನಾಗೇಂದ್ರರಾವ್ ಸ್ಮರಣಾರ್ಥ ಪ್ರಶಸ್ತಿಯನ್ನು ೨೦೧೬ರಲ್ಲಿ ಮುಡಿಗೇರಿಸಿಕೊಂಡರು. ಮಹಾನ್ ಹಿರಿಯ ನಟಿಯು ತಮ್ಮ ೯೫ ವರ್ಷಗಳ ತುಂಬು ಜೀವನವನ್ನು ಪರಿಪೂರ್ಣವಾಗಿ ಪೂರೈಸಿ ೧೯ನೇ ಸೆಪ್ಟೆಂಬರ್ ೨೦೧೯ರಂದು ಬೆಂಗಳೂರಿನಲ್ಲಿ ಸ್ವರ್ಗಸ್ಥರಾದರು. ಕನ್ನಡ ನಾಟಕ ರಂಗಭೂಮಿಯ ಬಹುಮುಖ ಪ್ರತಿಭಾವಂತೆ ಮೂಕಿ-ಟಾಕೀ ಯುಗದ ಪ್ರಮುಖ ಕಲಾವಿದೆ ಹಾಗೂ ಚಂದನವನ ಚರಿತ್ರೆಯ ಮತ್ತೊಂದು ಚಿನ್ನದ ಕೊಂಡಿ ಕಳಚಿ ಬಿದ್ದ ನಿಮಿತ್ತ ಕನ್ನಡ-ತೆಲುಗು-ತಮಿಳು ಚಲನಚಿತ್ರ ಲೋಕಕ್ಕೆ ತುಂಬಲಾರದ ನಷ್ಟ ಉಂಟಾಯಿತು. ಬೆಳ್ಳೆತೆರೆ-ಕಿರುತೆರೆ-ರಂಗಭೂಮಿ ಕ್ಷೇತ್ರದ ನೂರಾರು ಕಲಾವಿದರಿಗೆ ಭರಿಸಲಾರದ ದುಃಖವೂ ಫಲಿಸಿತು! ಎಸ್.ಕೆ.ಪದ್ಮಾದೇವಿಯಂಥ ಚಿರಸ್ಮರಣೀಯ ನೃತ್ಯಕಲಾವಿದೆ, ಹಿನ್ನೆಲೆಗಾಯಕಿ, ಹಿರಿಯ ಅಭಿನೇತ್ರಿ, ನಿರ್ಮಾಪಕಿ, ನಿರ್ದೇಶಕಿ, ಇತ್ಯಾದಿ, ಇತ್ಯಾದಿ, ವಿಭಾಗದ ಮಹಾನ್ ಪ್ರತಿಭಾ ಪುತ್ಥಳಿಯು ಆಚಂದ್ರಾರ್ಕ ಅಜರಾಮರ!

ಎಸ್.ಕೆ.ಪದ್ಮಾದೇವಿ ನಟಿಸಿದ ಚಿತ್ರಗಳು
ಕ್ರ.ಸಂ. ಫಿಲಂ ಕ್ರ.ಸಂ. ಫಿಲಂ
೧ ಭಕ್ತಧ್ರುವ/೧೯೩೩-೩೪ ೭ ಶ್ರೀಕೃಷ್ಣಸುಧಾಮ/೧೯೪೪
೨ ಸತಿಸುಲೋಚನ/೧೯೩೪ ೮ ಮಹಾನಂದ/೧೯೪೭
೩ ಸದಾರಮೆ/೧೯೩೫ ೯ ಚಂದ್ರಹಾಸ/೧೯೪೭
೪ ಸಂಸಾರನೌಕಾ/೧೯೩೬ ೧೦ ಭಕ್ತಸುಧಾಮ/೧೯೪೭[ತೆಲುಗು]
೫ ಜೀವನ ನಾಟಕ/೧೯೪೨ ೧೧ ಶಿವಶರಣೆ ನಂಬಿಯಕ್ಕ/೧೯೫೫-೫೬
೬ ಗಂಗಾವತಾರಂ/೧೯೪೨ [ತಮಿಳು] ೧೨ ಮಾಲ್ಗುಡಿ ಡೇಸ್-ಟಿ.ವಿ.ಸೀರಿಯಲ್ಸ್ (ಇಂಗ್ಲಿಷ್, ಹಿಂದಿ, ಕನ್ನಡ)೧೯೭೦-೮೦

ಕುಮಾರಕವಿ ಬಿ.ಎನ್.ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨