ಚಂದ್ರಶೇಖರ್ ೧೯೫೫ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜನಿಸಿದರು. ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ, ವಿದೇಶ ವಿಶ್ವವಿದ್ಯಾನಿಲಯದ ಎಂ.ಟೆಕ್. ಪದವಿ ಪಡೆದರು. ಖ್ಯಾತ ನಿರ್ದೇಶಕ ಎನ್.ಲಕ್ಷ್ಮೀನಾರಾಯಣ್ ಮೂಲಕ ಆರ್. ನಾಗೇಂದ್ರರಾವ್ ನಿರ್ದೇಶನದ ’ನಮ್ಮಮಕ್ಕಳು’ ಚಿತ್ರದಿಂದ ಸ್ಯಾಂಡಲ್ವುಡ್ ಪ್ರವೇಶ. ಖ್ಯಾತ ನಟಿ ಹರಿಣಿ ಈ ಚಿತ್ರದ ನಿರ್ಮಾಪಕಿ. ಅತ್ಯುತ್ತಮ ಬಾಲನಟನಾಗಿ ರಾಷ್ಟ್ರಪ್ರಶಸ್ತಿ-ರಾಜ್ಯಪ್ರಶಸ್ತಿ ಗಳಿಸಿದರು. ಎಸ್.ಎಲ್.ಭೈರಪ್ಪನವರ ಕಾದಂಬರಿ ಆಧಾರಿತ ಕಾರ್ನಾಡ್-ಕಾರಂತ್ ನಿರ್ದೇಶನದ ’ವಂಶವೃಕ್ಷ’ದ ಚೀನೀ ಪಾತ್ರಕ್ಕೆ ಪತ್ರಿಕಾ ಪ್ರಶಂಸೆ, ರಾಷ್ಟ್ರಪ್ರಶಸ್ತಿ, ಅಂತರ್‌ರಾಷ್ಟ್ರೀಯ ಮನ್ನಣೆ ದೊರಕಿತು. ’ಎಡಕಲ್ಲುಗುಡ್ಡದಮೇಲೆ’ ಭಾರತೀಸುತ ಕಾದಂಬರಿ ಆಧಾರಿತ ಪುಟ್ಟಣ್ಣಕಣಗಾಲ್ ನಿರ್ದೇಶನದ ರಾಜ್ಯಪ್ರಶಸ್ತಿ ವಿಜೇತ ಚಿತ್ರದ ನಂಜುಂಡನ ಪಾತ್ರ ಜನಮನ್ನಣೆ ಗಳಿಸಿ ಕೆನಡಾಚಂದ್ರುಗೆ ಟರ್ನಿಂಗ್ ಪಾಯಿಂಟ್ ಆಯಿತು.
೧೯೭೯ರಲ್ಲಿ ತೆರೆಕಂಡ ’ಕಮಲ’ ಫ಼ಿಲಂಗೆ ಛಾಯಾಗ್ರಹಕನಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿ ಶಹಭಾಸ್ಗಿರಿ ಪಡೆದಿದ್ದರು. ಒಂದೆರಡು ಚಿತ್ರಗಳಿಗೆ ಪಾಲುದಾರ/ಸಹನಿರ್ಮಾಪಕರಾಗಿಯೂ ಶ್ಲಾಘನೀಯ ಕೊಡುಗೆ ನೀಡಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಅಧಿಕಾರಿಯಾಗಿ ಹತ್ತಾರುವರ್ಷ ಸೇವೆ ಸಲ್ಲಿಸಬೇಕಾಗಿದ್ದವರು ಚಂದನವನದ ಬಣ್ಣದ ಲೋಕಕ್ಕೆ ಮಾರುಹೋಗಿ ಎಲ್ಲವನ್ನು ಅರ್ಧಕ್ಕೆ ಬಿಟ್ಟು, ೭೦-೮೦-೯೦ರ ದಶಕದಲ್ಲಿ ಸಿಕ್ಕ ಸದವಕಾಶವನ್ನು ಸದುಪಯೋಗ ಪಡಿಸಿಕೊಂಡರು. ಕೇವಲ ಸಂಭಾವನೆಗಾಗಿ ಮಾತ್ರ ನಟಿಸುತ್ತಿರಲಿಲ್ಲ. ೨೦೧೦ರವರೆಗೆ ಉದ್ಯಮ-ಚಿತ್ರೋದ್ಯಮ ಎರಡರಲ್ಲೂ ಸಕ್ರಿಯವಾಗಿ ಭಾಗವಹಿಸಿ ವೃತ್ತಿ-ಪ್ರವೃತ್ತಿ ಸರಿದೂಗಿಸಿಕೊಂಡ ಸಮಚಿತ್ತ ಸ್ವಭಾವದ ಐಶಾರಾಮಿ ಜೀವನದ ಶೋಕಿಲಾಲ. ಬಹುವರ್ಷ ಕಾಲ ಉತ್ತರ ಅಮೆರಿಕದ ಕೆನಡದೇಶದಲ್ಲಿ ನೆಲೆಸಿದ್ದ್ದರಿಂದ ಇವರನ್ನು ಕೆನಡಾಚಂದ್ರು ಎಂದೂ ಕರೆಯಲಾಗುತ್ತಿತ್ತು. ದಿ.೨೮.೧.೨೦೧೮ರಂದು ಹೃದಯಾಘಾತಕ್ಕೆ ಒಳಗಾಗಿ ೬೩ನೇ ವಯಸ್ಸಿನಲ್ಲಿ ಕೆನಡದೇಶದಲ್ಲಿ ನಿಧನರಾದರೂ ಅವರ ನೆನಪು ಮಾತ್ರ ಅಮರ.