ಸ್ಟೈಲ್‌ಕಿಂಗ್ ರಜನಿಕಾಂತ್
ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಜನಿಸಿ ಬಿ.ಟಿ.ಎಸ್.ಬಸ್ ಕಂಡಕ್ಟರ್ ಹುದ್ದೆಗೆ ಸೇರಿದ ಶಿವಾಜಿರಾವ್‌ರವರ ಮಾತೃ ಭಾಷೆ ಮರಾಠಿ. ಆದರೂ ಪಕ್ಕಾ ಕನ್ನಡಿಗ ಎಂಬುದರಲ್ಲಿ ಸಂದೇಹ ಬೇಡ ಎಂದು ಸ್ವಯಂ ಅವರೇ ಸಾವಿರಾರು ಸಲ ನೂರಾರು ವೇದಿಕೆಗಳಲ್ಲಿ ಜಗಜ್ಜಾಹೀರು ಪಡಿಸಿದ್ದಾರೆ. ಸಿನಿಮಾ ರಂಗದಲ್ಲಿ ಪುನರ್ ನಾಮಕರಣಗೊಂಡ ರಜನಿಕಾಂತ್‌ರಿಗೆ ಎಲ್ಲವನ್ನು ನೀಡಿತು ಕನ್ನಡ ನಾಡು. ಅವರು ಭಾರತೀಯ ಬೆಳ್ಳಿ ತೆರೆಗೆ ಬಂದುದು ಸ್ಯಾಂಡಲ್‌ವುಡ್ ಹೆಬ್ಬಾಗಿಲು ಮೂಲಕ ಎಂಬುದು ೮ ಕೋಟಿ ಕನ್ನಡಿಗರಿಗೆ ಹೆಮ್ಮೆಯ ವಿಷಯ! ದ.ಭಾರತದ ಖ್ಯಾತ ನಿರ್ದೇಶಕ ಎಸ್.ಆರ್.ಪುಟ್ಟಣ್ಣ ಕಣಗಾಲ್‌ರ ’ಕಥಾಸಂಗಮ’ ಚಿತ್ರದ ಮೂಲಕ ೧೯೭೬ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ, ಈ ಮೊದಲೇ ೧೯೭೨ರಲ್ಲಿ ತೆರೆಕಂಡ ’ನಾಗರಹಾವು’ ಸಿನಿಮಾದ ಜಲೀಲ್ ಪಾತ್ರಕ್ಕೆ ಮತ್ತು ಡಾ.ರಾಜ್‌ಕುಮಾರ್ ಅಭಿನಯದ ’ಗಿರಿಕನ್ಯೆ’ ಚಿತ್ರದ ವಿಲನ್ ಕ್ಯಾರೆಕ್ಟರ್‌ಗೆ ಸೆಲೆಕ್ಟ್ ಆಗಿದ್ದರೂ ದುರದೃಷ್ಟವಶಾತ್ ಅಥವ ಇಕ್ಮತ್ತ್‌ನಿಂದಾಗಿ ಕೊನೆ ಘಳಿಗೆಯಲ್ಲಿ ಕೈ ತಪ್ಪಿ ಹೋಗಿದ್ದು ಒಂದು ದೊಡ್ಡ ದುರಂತವೇ ಸರಿ? ಇವರ ಪ್ರತಿಭೆಯನ್ನು ಸರಿಯಾಗಿ ಗುರುತಿಸಿದ ಕಾಲಿವುಡ್ನ ಮತ್ತೊಬ್ಬ ಗಾಡ್‌ಫಾದರ್ ಕೆ. ಬಾಲಚಂದರ್‌ರಿಂದಾಗಿ ಭಾರತದ ಏಕೆ ಇಡೀ ಪ್ರಪಂಚದ ಸೂಪರ್‌ಸ್ಟಾರ್ ಪಟ್ಟಿಗೆ ಸೇರಿಬಿಟ್ಟರು ನಮ್ಮ ಸ್ಟೈಲ್‌ಕಿಂಗ್ ರಜನಿಕಾಂತ್ ಎಂಬುದೆ ಇವತ್ತಿನ ಇತಿಹಾಸ!

ಕನ್ನಡ ಚಿತ್ರರಂಗದ ಮತ್ತೋರ್ವ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯನವರ ಪುತ್ರ ಕೃಷ್ಣಸುಂದರ ದಿ||ಮುರಳಿ ಮತ್ತು ಖ್ಯಾತ ಖಳ ನಟ ಶಕ್ತಿಪ್ರಸಾದ್ ಪುತ್ರ ಹಾಗೂ ನಟ ರಾಜೇಶ್ ಅಳಿಯ ಅರ್ಜುನ್ ಸರ್ಜಾ ಒಳಗೊಂಡಂತೆ ಮಹಾನ್ ನಟರಾದ ಕೋಕಿಲ ಮೋಹನ್, ಪ್ರಭುದೇವ್, ಮುಂತಾದ ಪ್ರತಿಭಾವಂತರನ್ನು ಸಹ ಸ್ಯಾಂಡಲ್‌ವುಡ್‌ನಿಂದ ಕೈಬಿಟ್ಟರಂತೆ. ಪ್ರಾರಂಭದಲ್ಲಿ ರಜನಿಕಾಂತ್‌ರನ್ನೂ ಅಂಡರ್ ಎಸ್ಟಿಮೇಟ್ ಮಾಡಿದ ಚಂದನವನದ ಕೆಲವು ನಿರ್ಮಾಪಕ ನಿರ್ದೇಶಕರು ಇವರನ್ನು ಕಂಡೊಡನೆ ಸಣ್ಣಪುಟ್ಟ ಮಾತುಗಳಿಂದ ನಿಂದಿಸಿ ನೋಯಿಸಿ ಕರಿಯ ಕುರೂಪಿ ಸಣಕಲ ನಾಲಾಯಕ್ ಎಂದು ಮುಂತಾಗಿ ಹಂಗಿಸುತ್ತಾ ಹೊರತಳ್ಳಿದ್ದು ದೊಡ್ಡ ತಪ್ಪಾಯಿತೇನೋ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಯಿತೇನೋ ಅನಿಸುತ್ತಿಲ್ಲವೆ ಈಗ?! ಕೆ.ಬಾಲಚಂದರ್ ಗರಡಿಯಲ್ಲಿ ಪಳಗಿದ ನಂತರ ಬಹು ಬೇಗನೆ ಕನ್ನಡ, ಹಿಂದಿ, ತೆಲುಗು, ತಮಿಳು, ಇಂಗ್ಲಿಷ್ ಸಿನಿಮಾ ರಂಗಗಳಲ್ಲಿ ಸ್ಟೈಲ್‌ಕಿಂಗ್ ಹೊಸ ಇತಿಹಾಸ ಸೃಷ್ಟಿಸಿದರು! ೬ ಭಾಷೆಯ ಫಿಲಂಸ್ ಗಳಲ್ಲಿ ಅಭಿನಯಿಸಿ ದಕ್ಷಿಣ ಭಾರತದ ನಂ.೧ ಹೀರೊ ಮತ್ತು ಇಂಡಿಯದ ೨ನೆ ಸೂಪರ್‌ಸ್ಟಾರ್ ಎನಿಸಿಕೊಂಡು ೩೫ ವರ್ಷಕಾಲ ಮೆರೆದರು.

ಸರಳ, ಸಜ್ಜನಿಕೆ, ದಾನ, ಧರ್ಮ, ಸ್ನೇಹ ವಿಶ್ವಾಸದ ನಡೆ-ನುಡಿಯಿಂದಾಗಿ ಬಾಲಿವುಡ್‌ನ ಅಮಿತಾಭ್‌ಬಚ್ಚನ್‌ರಿಂದ ತ್ರಿವಳಿಖಾನ್ ರವರೆಗೆ ದೇಶದ ಪ್ರತಿಯೊಬ್ಬರಿಂದಲೂ ಮೆಚ್ಚುಗೆ ಪಡೆದ ಕನ್ನಡ ನಟ ಭಾರತದಲ್ಲೆ ಅತಿ ಹೆಚ್ಚು ಬಂಡವಾಳದ ಫಿಲಂ ನಿರ್ಮಾಣ ಮಾಡುವುದರ ಜತೆಜತೆಗೆ ಅತಿ ಹೆಚ್ಚು ಸಂಭಾವನೆಯನ್ನು ಪಡೆದ ಏಕೈಕ ಚತುರ್ಭಾಷಾ ಹೀರೋ ಎಂಬ ದಾಖಲೆಯನ್ನು ಸ್ಥಾಪಿಸಿದರು. ಒಂದು ಕಾಲಕ್ಕೆ ಹಾಲಿವುಡ್ ನಟ ಜಾಕಿ ಚಾನ್ ನಂತರ ಅತಿ ಹೆಚ್ಚು ಸಂಭಾವನೆ ಪಡೆದ ಏಷ್ಯಾ ಖಂಡದ ನಟ ನಮ್ಮ ಸ್ಟೈಲ್‌ಕಿಂಗ್ ರಜನಿ! ಅನೇಕ ಅಂತರ್‌ರಾಷ್ಟ್ರ ಬಹುಮಾನಗಳ ಜತೆಗೆ ರಾಷ್ಟ್ರ ಪ್ರಶಸ್ತಿ, ಫ಼ಿಲಂಫ಼ೇರ್ ಪ್ರಶಸ್ತಿ, ಕರ್ನಾಟಕ, ತಮಿಳುನಾಡು, ಆಂಧ್ರ ರಾಜ್ಯಗಳ ಪ್ರಶಸ್ತಿಗಳನ್ನು ಪಡೆದು ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಬರೆದರು. ಈ ಘಳಿಗೆಗೂ ತಮ್ಮ ಸ್ವಂತದ್ದಾದ ಕನ್ನಡ ನಾಡು, ನುಡಿ, ಜನ ಹಾಗೂ ಬಂಧು ಮಿತ್ರರ ಬಗ್ಗೆ ಅಪಾರ ಒಲವು ಮತ್ತು ಗೌರವ ಇರಿಸಿಕೊಂಡಿದ್ದಾರೆ. ಇವತ್ತಿಗೂ ಬೆಂಗಳೂರಿನಲ್ಲಿರುವ ತಮ್ಮ ಗೆಳೆಯರ ಬಳಗವನ್ನು ಮರೆಯದ ಧೀಮಂತ ಕರ್ನಾಟಕ ಸುಪುತ್ರ?! ಮೇರು ನಟ ಡಾ.ರಾಜ್ ಮತ್ತು ಕುಟುಂಬದವರನ್ನೂ ಎಂದೂ ಎಂದೆಂದೂ ಮರೆಯದ ಮತ್ತು ಸದಾ ಕೊಂಡಾಡುವ ರಜನಿಕಾಂತ್ ಎಲ್ಲಾದರು ಇರು ಹೇಗಾದರು ಇರು ಎಂದೆಂದಿಗು ನೀ ಕನ್ನಡವಾಗಿರು ಕವಿನುಡಿ[ನಾಣ್ಣುಡಿ]ಗೆ ಅನ್ವರ್ಥದ ಕನ್ನಡ ಕಲಾವಿದ! ಇಂಥ ಟಾಪ್ ಟ್ಯಾಲೆಂಟೆಡ್ ಕನ್ನಡ ಕಲಾವಿದನನ್ನು ಅನ್ಯಾಯವಾಗಿ ಕಳೆದುಕೊಂಡೆವೊ ಏನೋ ಎಂದು ಈಗಲೂ ಒಮ್ಮೊಮ್ಮೆ ಚಂದನವನದ ಅಭಿಮಾನಿ ದೇವರುಗಳಿಗೆ ಅನಿಸದೆ ಇರದು?!
