೧೯೩೬ರಲ್ಲಿ ದಕ್ಷಿಣ ಕನ್ನಡದ ಉಡುಪಿಯಲ್ಲಿ ವಾಸವಿದ್ದ ಸುಸಂಸ್ಕೃತ ಸತ್‌ಸಂಪ್ರದಾಯ ಕುಟುಂಬದ ಶ್ರೀಮತಿ ಭಾರತಿ ಮತ್ತು ಶ್ರೀ ಶ್ರೀನಿವಾಸಉಪಾಧ್ಯ ದಂಪತಿಗೆ ೪ನೇ ಮಗುವಾಗಿ ಜನಿಸಿದರು ಹರಿಣಿ ಎಸ್.ರಾವ್! ಹಾಲುಗಲ್ಲದ ಹಸುಳೆಯಾಗಿದ್ದಾಗಲೆ ಸ್ಪಷ್ಟವಾಗಿ ವೇಗವಾಗಿ ಕನ್ನಡ ಭಾಷೆಯನ್ನು ಹರಳು ಹುರಿದಂತೆ ಮಾತನಾಡಿ ಬಂಧು ಬಳಗ ಮಿತ್ರರು ನೆರೆಹೊರೆ ಮುಂತಾದವರ ತನುಮನ ಗೆದ್ದರು. ೧೯೪೬ರಲ್ಲಿ ೯-೧೦ ವರ್ಷದವಳಿದ್ದಾಗ ಬಾಲನಟಿಯಾಗಿ ’ಶ್ರೀಮುರುಗನ್’ ಮತ್ತು ’ಕನ್ನಿಕಾ’ ತಮಿಳು ಚಿತ್ರಗಳಲ್ಲಿ ನಟಿಸುವಾಗ ಉತ್ತಮ ರೀತಿಯ ತಮಿಳು ಡೈಲಾಗ್ ಡೆಲಿವರಿ ಮಾಡಿ ನಿರ್ಮಾಪಕರಿಂದಲೆ ಒಂದು[ಬೆಳ್ಳಿ]ರೂಪಾಯಿ ಬಹುಮಾನ ಪಡೆದುದು ಗತವೈಭವ. ೧೯೫೧ರಲ್ಲಿ ತೆರೆಕಂಡ ’ಜಗನ್ಮೋಹಿನಿ’ ಕನ್ನಡ ಫಿಲಂ ಮೂಲಕ ತಮ್ಮ ೧೪ನೇ ವಯಸ್ಸಿಗೆ ಹೀರೋಯಿನ್ ಆಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು. ಈಚಿತ್ರವು ಶತದಿನೋತ್ಸವ ಪ್ರದರ್ಶನ ಕಂಡ ಕನ್ನಡದ ಚೊಚ್ಚಲ ಸಿನಿಮ ಎನಿಸಿತು! ಇದಾದ ನಂತರ ಮಲಯಾಳಂ[ಸ್ನೇಹಸೀಮ], ತಮಿಳು[ಪುಣ್ಯವತಿ] ಸೇರಿದಂತೆ ಸತತ ಐದಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಆಕಾಲಕ್ಕೆ ದಕ್ಷಿಣ ಭಾರತದ ಮೋಸ್ಟ್ ಡಿಮಾಂಡೆಡ್/ಬ್ಯುಸಿಯೆಸ್ಟ್ ಯಾಕ್ಟ್ರೆಸ್ ಎನಿಸಿದ್ದು ಇತಿಹಾಸ. ತಮ್ಮ ೨ನೇ ಚಿತ್ರದ ಶೂಟಿಂಗ್ ಪ್ರಾರಂಭ ಆಗುವಷ್ಟರಲ್ಲಿ ಇವರ ಅಭಿಮಾನಿಗಳಿಂದ ಅಂದಿನ ಕಾಲಕ್ಕೆ ಸುಮಾರು ೫೦೦ ಮೆಚ್ಚುಗೆ ಪತ್ರಗಳು ಭಾರತೀಯ ಅಂಚೆ ಇಲಾಖೆ ಮೂಲಕ ಚಿತ್ರೀಕರಣ ಸ್ಥಳಕ್ಕೇ ಆಗಮಿಸಿದ್ದು ನಿತ್ಯನೂತನ ದಾಖಲೆ! ಈ ದಾಖಲೆಯನ್ನು ಸರಿಗಟ್ಟಲು ಅಥವಾ ಮುರಿಯಲು ಇವತ್ತಿನವರೆಗೂ ಆಗಲೇ ಇಲ್ಲ?!
ಹರಿಣಿಯವರ ಮೊಟ್ಟಮೊದಲ ಸಿನಿಮಾ ಜಗನ್ಮೋಹಿನಿ ಚಿತ್ರದಲ್ಲಿ ’ಸ್ವಿಮ್‌ಡ್ರೆಸ್’ ತೊಟ್ಟು ’ಸೆನ್ಸಾರ್‌ಬೋರ್ಡ್’ ಕೆಂಗಣ್ಣಿಗೆ ಗುರಿಯಾದ ದೇಶದ ಪ್ರಪ್ರಥಮ ನಟಿ ಎನಿಸಿಕೊಂಡರು! ಇಂಥ ವಿನೂತನ ದಾಖಲೆ ಸೃಷ್ಟಿಸಿದ ಹರಿಣಿ ಒಂದೇದಿನ-ರಾತ್ರಿಯಲ್ಲಿ ದೇಶಾದ್ಯಂತ ಫ಼ೇಮಸ್ ಆದರು! ಧಿಡೀರನೆ ಕೋಟ್ಯಾಂತರ ಭಾರತೀಯರ ನಾಲಗೆಮೇಲೆ ಇವರ ಹೆಸರು/ಪಾತ್ರ ಹರಿದಾಡಿತು! ಇವರ ಮೊಟ್ಟಮೊದಲ ಫ಼ಿಲಂ ಜಗನ್ಮೋಹಿನಿ ಸಿಲ್ವರ್‌ಜ್ಯೂಬಿಲಿ ಆಚರಿಸಿಕೊಂಡು ಇವರ ಶತ್ರುಗಳು ಬಾಯಿಮುಚ್ಚುವಂತೆ ಮಾಡಿತು! ಈ ಚಿತ್ರದ ನಟ-ನಿರ್ಮಾಪಕ-ನಿರ್ದೇಶಕ ಡಿ.ಶಂಕರ್‌ಸಿಂಗ್‌ರವರು ತಮ್ಮ ಪತ್ನಿ ಪ್ರತಿಮಾದೇವಿಯೂ ಸಹ ಇದರಲ್ಲಿ ನಟಿಸುವಂತೆ ನೋಡಿಕೊಂಡಿದ್ದು ಇನ್ನೊಂದು ವಿಶೇಷತೆ! ಈ ಚಿತ್ರವು ೧೯೭೮ರಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಅದೇ ಹೆಸರಿನಲ್ಲಿ ರಿಮೇಕ್ ಆಗಿ ಭರ್ಜರಿ ಸಕ್ಸಸ್ ಕಂಡಿತು! ಈರೀತಿಯಲ್ಲಿ ಹೆಸರುವಾಸಿಯಾಗಿ ಧೂಳೆಬ್ಬಿಸಿದ ಚೊಚ್ಚಲ ಕನ್ನಡ ಫ಼ಿಲಂ ಕೂಡಾ ಇದಾಗಿ ಹಲವಾರು ಹೊಸ ದಾಖಲೆಗಳನ್ನು ಸೃಷ್ಟಿಸಿತು! ಸುಮಾರು ೩೧ ವರ್ಷದ ನಂತರ ೨೦೦೯ರಲ್ಲಿ ಮತ್ತೊಮ್ಮೆ ಸೇಮ್ ಟೈಟಲ್‌ನಿಂದ ಎರಡನೇ ಸಲವೂ ತಮಿಳು ಭಾಷೆಯಲ್ಲಿ ರಿಮೇಕ್‌ಗೊಂಡು ವಿದ್ಯುತ್ ಸಂಚಲನ ಉಂಟುಮಾಡಿದ ಏಕೈಕ ಕನ್ನಡ ಸಿನಿಮಾ! ಒಂದುಕಾಲಕ್ಕೆ ಹತ್ತಾರು ಸಿನಿಮಾದಲ್ಲಿ ಹರಿಣಿ-ರಾಜ್‌ಕುಮಾರ್ ಜೋಡಿಯು ಅತ್ಯಂತ ಯಶಸ್ವಿಯಾಗಿತ್ತು! ಉದಾಹರಣೆಗೆ ’ನಾಂದಿ’. ಈ ಚಿತ್ರದ ಹಾಡೊಂದಹಾಡುವೆ ನೀಕೇಳುಮಗುವೆ ಗೀತೆಯು ಇವತ್ತಿಗೂ ಅತ್ಯಂತ ಜನಪ್ರಿಯವಾಗಿದ್ದು ಆಚಂದ್ರಾರ್ಕ ಅಜರಾಮರ.
ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿದ ಪಂಚಭಾಷೆಯ ಪ್ರಪ್ರಥಮ ಕನ್ನಡ ನಟಿ! ಕನ್ನಡ ಚಿತ್ರರಂಗದ ಇತಿಹಾಸದಲ್ಲೆ ಮೊದಲ ಬಾರಿಗೆ ಅತ್ಯಂತ ಕಿರಿಯ ವಯಸ್ಸಿಗೆ ಹೀರೋಯಿನ್ ಪಟ್ಟ ಗಿಟ್ಟಿಸಿದ ಹರಿಣಿಯು ಭಾರತದ ಖ್ಯಾತ ಚಿತ್ರೋದ್ಯಮ ಜೋಡಿಯಾದ ವಾದಿರಾಜ್-ಜವಹರ್‌ರವರ ಸೋದರಿ. ಅಚ್ಚ ಕನ್ನಡಿಗರಾದ ಈ ಮೂವರು ಒಡಹುಟ್ಟಿದವರು ಒಟ್ಟಿಗೆಸೇರಿ ಸುಮಾರು ೫೦ಕ್ಕೂ ಹೆಚ್ಚು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಭಾಷೆಯ ಸಿನಿಮಾಗಳನ್ನು ವಿಜಯಭಾರತಿ ಮತ್ತು ಶ್ರೀಭಾರತಿಚಿತ್ರ ಸಂಸ್ಥೆಗಳ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ ಬೆಳ್ಳಿತೆರೆಗೆ ಅರ್ಪಿಸಿ ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.
ಪ್ರಸ್ತುತ ಜೀವಂತ ಬದುಕಿರುವ ದ.ಭಾರತದ/ಚಂದನವನದ ಹಿರಿಯ ನಿರ್ಮಾಪಕಿ-ನಿರ್ದೇಶಕಿ-ನಟಿಯರಲ್ಲಿ ಹರಿಣಿಯವರು ಅಗ್ರಗಣ್ಯ ಕನ್ನಡತಿ. ಪದ್ಮಶ್ರೀ ಸೇರಿದಂತೆ ಹಲವು ರಾಷ್ಟ್ರಪ್ರಶಸ್ತಿ, ನಾಲ್ಕು ಬೇರೆಬೇರೆ ರಾಜ್ಯಗಳ ಅತ್ಯುತ್ತಮ ನಟಿ ಪ್ರಶಸ್ತಿ, ಕರ್ನಾಟಕ ರಾಜ್ಯ ಚಲನಚಿತ್ರ ಶ್ರೇಷ್ಠನಟಿ ಪ್ರಶಸ್ತಿ, ಡಾ.ರಾಜಕುಮಾರ್ ಸ್ಮಾರಕ ಪ್ರಶಸ್ತಿ, ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಇನ್ನೂ ಮುಂತಾದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಮಹಾನ್ ಮೇರುನಟಿ ಹರಿಣಿ ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದಂಥ ಹೀರೋಯಿನ್‌ಗಳ ಪೈಕಿಯಲ್ಲೂ ಅಗ್ರಸ್ಥಾನದಲ್ಲಿದ್ದಾರೆ. ಇಂಥ ಅವಿಸ್ಮರಣೀಯ ಅಭಿನಯದ ಚಿರಸ್ಮರಣೀಯ ಅಭಿನೇತ್ರಿಯನ್ನು ಪಡೆದ ಕನ್ನಡಿಗರು ಧನ್ಯರು!
ಹರಿಣಿ ನಟಿಸಿದ ಪ್ರಮುಖ ಕನ್ನಡ ಫಿಲಂಸ್:- ದಲ್ಲಾಳಿ, ಮಂಗಳಗೌರಿ, ಸೌಭಾಗ್ಯಲಕ್ಷ್ಮಿ, ಕನ್ಯಾದಾನ, ರತ್ನಮಂಜರಿ, ಗಂಧರ್ವಕನ್ಯೆ, ವಿಚಿತ್ರಪ್ರಪಂಚ, ಪ್ರಭುಲಿಂಗಲೀಲೆ, ಧರ್ಮವಿಜಯ, ಆಶಾಸುಂದರಿ, ವಿಧಿವಿಲಾಸ, ನಾಗಾರ್ಜುನ, ನಂದಾದೀಪ, ನವಜೀವನ, ಕರುಣೆಯೇಕುಟುಂಬದಕಣ್ಣು, ಆನಂದಬಾಷ್ಪ, ಪತಿವ್ರತ, ಶಿವಗಂಗೆಮಹಾತ್ಮೆ, ಸರ್ವಜ್ಞಮೂರ್ತಿ, ಇದೇಮಹಾಸುದಿನ, ನಾಂದಿ, ಸತಿಸುಕನ್ಯ, ಮಂಗಳಮುಹೂರ್ತ, ಸುಬ್ಬಾಶಾಸ್ತ್ರಿ, ಸೀತಾ, ಮುಂತಾದವು. ೧೯೭೨ರಲ್ಲಿ ವಿವಾಹವಾದ ಹರಿಣಿಯವರು ೧೨ ವರ್ಷಕಾಲ ಸೌದಿ ಅರೇಬಿಯಾದಲ್ಲಿ ವಾಸವಿದ್ದು ನಂತರ ಭಾರತಕ್ಕೆ ಹಿಂದಿರುಗಿ ತಮ್ಮ ಕುಟುಂಬ ಸದಸ್ಯರೊಡನೆ ತುಂಬು ಜೀವನದ ಸಾರ್ಥಕ ಬದುಕು ಸಾಗಿಸುತ್ತ ಈಗಲೂ ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿದ್ದಾರೆ.

ಕುಮಾರಕವಿ ಬಿ.ಎನ್.ನಟರಾಜ್
ಬೆಂಗಳೂರು-೫೬೦೦೭೨
೯೦೩೬೯೭೬೪೭೧