ನಾಟಕ-ಸಿನಿಮ ಕ್ಷೇತ್ರಕ್ಕೆ ಮಡಿವಂತಿಕೆ ಮೈಗೂಡಿದ್ದ ಅಪರ್ವ ಕಾಲವದು. ರಂಗಭೂಮಿ-ಚಿತ್ರರಂಗ ಎರಡಕ್ಕೂ ನಟ-ನಟಿಯರು ದುರ್ಲಭ. ಒಂದುವೇಳೆ ಪುರುಷ ಕಲಾವಿದ ದೊರಕಿದರೂ ಮಹಿಳಾ ಕಲಾವಿದರು ದೊರಕುವುದೆಂದರೆ ತಪಸ್ಸು ಮೂಲಕ ವರ ಪಡೆದಷ್ಟೆ ಕಠಿಣ ಆಗಿತ್ತು! ವಿಶೇಷವಾಗಿ ಕನ್ನಡ ಚಲನಚಿತ್ರಕ್ಕೆ ನಟಿಯರನ್ನು ಹುಡುಕುವ ಕಾರ್ಯವೆಂದರೆ ಖಂಡಿತವಾಗಿ ಬರಡು ಭೂಮಿಯಲ್ಲಿ ಬಾವಿ ತೆಗೆವಷ್ಟೆ ದುಸ್ಸಾಹಸ ಎನಿಸಿತ್ತು. ಆಕಸ್ಮಿಕವಾಗಿ ಯಾರಾದರೊಬ್ಬ ಮಹಿಳೆಯು ನಟಿಸಲು ಮುಂದಾದರೆ ನಿರ್ಮಾಪಕ-ನಿರ್ದೇಶಕರಿಗೆ ಮರಳುಗಾಡಿನಲ್ಲಿ ಓಯಸಿಸ್ ಸಿಕ್ಕಷ್ಟೆ ಸಂತೋಷವಾಗುತ್ತಿತ್ತು, ಇಡೀಚಿತ್ರ ತಂಡಕ್ಕೆ ಆಶ್ಚರ್ಯವಾಗುತ್ತಿತ್ತು! ಅಂಥ ಪರಿಸ್ಥಿತಿಗೆ ಮೂಲಕಾರಣ ಅಂದಿನ ಅ(ಲ್ಪ)ವಿದ್ಯಾವಂತಿಕೆ ಅಮಾಯಕತನ ಅನಾಗರಿಕತೆ ಮುಗ್ಧಮನೋಭಾವ ನಟನಟಿಯರ ಬಗ್ಗೆಇದ್ದ ತಪ್ಪು ತಿಳುವಳಿಕೆ, ಕೀಳರಿಮೆ. ಇವೆಲ್ಲ ಮೂಢನಂಬಿಕೆ ಸರಿಪಡಿಸೋ ವೇಳೆಗೆ, ಕಲೆಯಬೆಲೆ ಮನವರಿಕೆ ಆಗೋವರೆಗೆ ಸಾರ್ವಜನಿಕರು/ಮಹಿಳೆಯರು ನಟನಟಿಯರನ್ನು ಕಂಡಾಗಲೆಲ್ಲ ಮೂಗು ಮುರಿಯುತ್ತ ಕೀಳುಭಾವನೆಯಿಂದ ಕಾಣುತ್ತಿದ್ದರು! ಇಂಥ ಬರಗಾಲದಲ್ಲಿ ದೊರಕಿದ ಮಹಿಳಾಮಾಣಿಕ್ಯವೆ ತ್ರಿಪುರಾಂಬ! ಹಾಗಾಗಿ, ಈಕೆಯನ್ನು ನಟಿಗಿಂತ ಮಿಗಿಲಾದ ’ದೇವರುಕೊಟ್ಟಕಲಾವಿದೆ’ ಎಂದು ಎಲ್ಲರು ಬಹುಕಾಲ ಸ್ಮರಿಸುತಿದ್ದರು!
ಅಂದಿನ ಮೈಸೂರು ರಾಜ್ಯದ ಬೆಂಗಳೂರಲ್ಲಿ ೧೭.೭.೧೯೧೧ ರಂದು ಶ್ರೀಮತಿ ಕನಕಮ್ಮ ಶ್ರೀ ಶಂಕರಶಾಸ್ತ್ರಿ ದಂಪತಿಯ ಒಟ್ಟು ೫ ಹೆಣ್ಣು ಮಕ್ಕಳಲ್ಲಿ ಜೇಷ್ಠಳಾದ ತ್ರಿಪುರಾಂಭ ತನ್ನ ಸೋದರ ಸೋದರಿ ನೆಂಟರಿಷ್ಟರು ಬಂಧುಬಳಗ ನೆರೆಹೊರೆ ಮೊದಲ್ಗೊಂಡು ಎಲ್ಲರ ಅಚ್ಚುಮೆಚ್ಚಿನ ಹುಡುಗಿಯಾಗಿ ಕಿರಿವಯಸ್ಸಿನಲ್ಲೇ ಪ್ರತಿಭಾನ್ವಿತೆ ಎನಿಸಿದ್ದರು. ಪುರಾಣ ಶಾಸ್ತ್ರ ಸಂಗೀತ ನೃತ್ಯ ವೇದ ಆಗಮ ಸಾಹಿತ್ಯ ಮುಂತಾದ ವಿವಿಧ ಕಲೆಗಳಲ್ಲಿ ಪಾಂಡಿತ್ಯ ಪಡೆದಿದ್ದ ತಂದೆಯ ಮಾರ್ಗದರ್ಶನ ಪ್ರೋತ್ಸಾಹದಿಂದ ಉತ್ತಮ ಕಲಾಶಿಲ್ಪವಾದರು. ತಂದೆಯಿಂದ ಕಲಿಯುವುದರ ಜತೆಗೇ ಆಕಾಲಕ್ಕೆ ಖ್ಯಾತವಿದ್ವಾನ್‌ರಾಗಿದ್ದ ತಿಟ್ಟೆರಾಮಸ್ವಾಮಿಶಾಸ್ತ್ರಿಯವರಿಂದ ಸಂಗೀತ ವಿದ್ಯಾಭ್ಯಾಸ ಮಾಡಿದರು. ಬೇರೆಲ್ಲ ವಿಭಾಗಕ್ಕಿಂತ ಸಂಗೀತ ಕ್ಷೇತ್ರದಲ್ಲಿ ಹೆಚ್ಚು ಆಸಕ್ತ್ತಿಇದ್ದ ತ್ರಿಪುರಾಂಭ ಅದರಲ್ಲಿಯೆ ಪರಿಣಿತರಾದರು. ಸಂಗೀತದ ಜತೆಗೆ ನೃತ್ಯ ವಿದ್ಯಾಭ್ಯಾಸವನ್ನು ಆಸ್ತಾನ ವಿದ್ವಾಂಸರಿಂದ ಪಡೆದರು. ತ್ರಿಪುರಾಂಬ ಬಣ್ಣಿಸುವಂಥ ಸುಂದರಿಯೇನಲ್ಲ ಜತೆಗೆ ಅತ್ಯಂತ ಪ್ರತಿಭಾನ್ವಿತೆಯೂ ಆಗಿರಲಿಲ್ಲ. ಖಂಡಿತ ಅದೃಷ್ಟವಂತೆ ಆಗಿದ್ದರು! ಪ್ರಾಥಮಿಕ, ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಾಗ ಆಗಾಗ್ಗೆ ಬಹಳ ಅಪರೂಪಕ್ಕೆ ಸಂಗೀತ ಮತ್ತು ನೃತ್ಯ ತರಬೇತಿ ದೊರಕುತ್ತಿತ್ತು. ಇವರಿಗೆ ತಮ್ಮ ಕನಸಲ್ಲು ಸಹ ನಟನೆಯ ನೆರಳು ಸುಳಿದಿರಲಿಲ್ಲ. ಆದರೆ ದೈವಸಂಕಲ್ಪ ಎಂಬಂತೆ ನಟಿಸುವ ಭಾಗ್ಯ ದೊರಕಿದ್ದು ಮಾತ್ರ ನೂರಕ್ಕೆ ನೂರು ಅನಿರೀಕ್ಷಿತ, ಅನಿವಾರ್ಯ ಹಾಗೂ ಆಕಸ್ಮಿಕ?!
೧೯೩೩ರಲ್ಲಿ ರಂಗಭೂಮಿ ಭೀಷ್ಮಾಚಾರ್ಯ ಗುಬ್ಬಿವೀರಣ್ಣನವರ ನಾಟಕ ಕಂಪನಿಯು ಸುವರ್ಣ ಮಹೋತ್ವವವನ್ನು ಆಚರಿಸು ವುದರಲ್ಲಿತ್ತು. ಗುಬ್ಬಿಕಂಪನಿ ೫೦ನೆ ವರ್ಷಾಚರಣೆಗೆಂದು ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ’ಕುರುಕ್ಷೇತ್ರ’ ಪೌರಾಣಿಕ ನಾಟಕ ಬರೆದಿದ್ದರು. ಪಾಂಚಾಲಿ/ದ್ರೌಪದಿ ಪಾತ್ರಕ್ಕೆ ಹೊಸಮುಖ ಹುಡುಕುವ ಹುನ್ನಾರದಲ್ಲಿದ್ದ ಗುಬ್ಬಿವೀರಣ್ಣ ಹೊಸಬರನ್ನು ತಲಾಷು ಮಾಡುವಂತೆ ತಮ್ಮ ಸಹೋದ್ಯೋಗಿ/ಮಿತ್ರರಿಗೆ ಸೂಚಿಸಿದ್ದರು. ಗುಬ್ಬಿಕಂಪನಿಯ ವ್ಯವಸ್ಥಾಪಕರಾಗಿದ್ದ ಎಸ್.ವಿ.ನರಸಿಂಹಮೂರ್ತಿಯು ತ್ರಿಪುರಾಂಬರ ತಂದೆಗೆ ಆಪ್ತಮಿತ್ರರಾಗಿದ್ದರು. ಆಗಾಗ್ಗೆ ಗೆಳೆಯನ ಮನೆಗೆ ಬಂದು ಹೋಗುತ್ತಿದ್ದಾಗ ಅವರ ಮಗಳು ತ್ರಿಪುರಾಂಬ(ಎಲ್.ಎಸ್.ವಿದ್ಯಾರ್ಥಿನಿ) ಇವರ ಕಣ್ಣಿಗೆ ಬಿದ್ದರು. ಆಕ್ಷಣವೇ ಮೂರ್ತಿಯವರಿಗೆ ಗುಬ್ಬಿವೀರಣ್ಣನವರ ಕೋರಿಕೆ ಈಡೇರಬಹುದೆಂಬ ಆಸೆ ಚಿಗುರೊಡೆಯಿತು. ಆದರೆ ದ್ರೌಪದಿ ಪಾತ್ರಕ್ಕೆ ಬೇಕಾದ ಸೌಂದರ್ಯವತಿ ಅಲ್ಲವೆನಿಸಿ ಅವರ ಯೋಚ(ಜ)ನೆ ಢೋಲಾಯಮಾನ ಸ್ಥಿತಿಗೆ ಬಂದಿತ್ತು! ಅಲ್ಲದೆ ನಾಟಕದಲ್ಲಿ ಪಾತ್ರ ಮಾಡುವ ಬಗ್ಗೆ ಚರ್ಚಿಸಲು ಹದಿಹರೆಯದ ಪುಟ್ಟಹುಡುಗಿ ಏನಂದುಕೊಳ್ಳುವಳೋ ಎಂಬ ಚಿಂತೆ ಕಾಡತೊಡಗಿತು. ಸತ್ಕಾರ್ಯಕ್ಕೆ ಅವಕಾಶ ಸಿಕ್ಕಿರುವಾಗ ತಡವೇಕೆಂದು ನಿರ್ಧರಿಸಿದ ಮೂರ್ತಿ, ಧೈರ್ಯದಿಂದಲೆ ತ್ರಿಪುರಾಂಬಳನ್ನು ತಂದೆಎದುರೇ ಕೇಳಿದರು:ಕುರುಕ್ಷೇತ್ರ ನಾಟಕದಲ್ಲಿ ಪಾಂಚಾಲಿ ಪಾತ್ರ ನಿರ್ವಹಿಸುವೆಯೇನಮ್ಮಎಂದು! ಅವಾಕ್ಕಾದ ತಂದೆ-ಮಗಳು ಅಷ್ಟು ಸುಲಭವಾಗಿ ಒಪ್ಪಲಿಲ್ಲ. ಪ್ರಯತ್ನ ಬಿಡದ ಮೂರ್ತಿ ಸುಮಾರು ದಿನಗಳು ಈಕೆಯ ಮನೆಗೆ ಸತತ ಎಡತಾಕಿ ದುಂಬಾಲುಬಿದ್ದು ಅಪ್ಪ-ಮಗಳ ಒಪ್ಪಿಗೆ ಪಡೆವ ಮೂಲಕ ಗುಬ್ಬಿವೀರಣ್ಣನವರಿಗೂ ತಮಗೂ ಗೆಲುವು ತಂದುಕೊಂಡರು! ಆಕಾಲದಲ್ಲಿ ನಾಟಕ ಕಂಪನಿ ಪ್ರೊಪ್ರೈಟರ್-ಮ್ಯಾನೇಜರ್ ನಡುವೆ ಹೊಂದಾಣಿಕೆ-ಹೊಣೆಗಾರಿಕೆ ಸರಿಸಮಾನ ಆಗಿರುತ್ತಿತ್ತು, ಪರಸ್ಪರ ಗೌರವಾದರ ಇರುತ್ತಿತ್ತು ಎಂಬುದಕ್ಕೆ, ಇದಕ್ಕಿಂತ ಉತ್ತಮ ನಿದರ್ಶನ ಬೇಕಿಲ್ಲ!
ರಂಗಭೂಮಿ-ಚಲನಚಿತ್ರರಂಗ ಎರಡ್ರಲ್ಲೂ ಅಭಿನಯಕಲೆ ಜತೆಗೆ ಸಂಗೀತ-ನೃತ್ಯದ ಜ್ಞಾನವುಳ್ಳವರಿಗೆ ಮಹತ್ವಇರುತ್ತಿತ್ತು. ಪ್ರತಿಭೆಗೆ ತಕ್ಕ ಪುರಸ್ಕಾರ ಪ್ರೋತ್ಸಾಹ ದೊರಕುತ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ತ್ರಿಪುರಾಂಬ ಅದಾಗಲೇ ಅವರಲ್ಲಿದ್ದ ಸಂಗೀತ ನೃತ್ಯ ಜ್ಞಾನ ಆಧಾರದ ಮೇಲೆ ಸಹಕಲಾವಿದರ ಸಹಾಯದಿಂದ ಇನ್ನಷ್ಟು ಕಲಿತರು. ಕಂಪನಿ ತಂಡದವರ ಸ್ಫೂರ್ತಿಯಿಂದ ಅಭಿನಯಕಲೆ ಮೈಗೂಡಿಸಿಕೊಂಡು ಬಹುಬೇಗ ಎತ್ತರಕ್ಕೆ ಬೆಳೆದರು! ಇವರ ಜನಪ್ರಿಯತೆ ಎಷ್ಟಿತ್ತೆಂದರೆ, ದ್ರೌಪದಿ ಪಾತ್ರದಲ್ಲಿ ಮೈಮರೆತು ನಟಿಸುವಾಗ, ’ಪಡುಗಡಲ ಎದೆಯೊಡೆದು’ಎಂಬ ಗಾಯನಕ್ಕೆ ನರ್ತಿಸುವಾಗ ಪ್ರೇಕ್ಷಕರು ಮದ್ಯದ ಮದವೇರಿದ ಮಂಗನಂತೆ ಕುಣಿದು ಕುಪ್ಪಳಿಸುತ್ತಿದ್ದರು. ಪ್ರದರ್ಶನದ ನಂತರವೂ ಪಾಂಚಾಲಿಯ ದೃಶ್ಯವನ್ನು ನೆನಪಿಸಿಕೊಂಡು ಮನೆವರೆಗು ಮೆಲುಕುಹಾಕುತ್ತ ಸಾಗುತ್ತಿದ್ದರು! ದ್ರೌಪದಿಪಾತ್ರದಿಂದ ಜನಪ್ರಿಯತೆಯ ತುತ್ತತುದಿಯಲ್ಲಿದ್ದಾಗ ಮತ್ತೊಂದು ಮುಖ್ಯತಿರುವು ದೊರಕಿತು! ಆರ್.ನಾಗೇಂದ್ರರಾವ್-ವೈ.ವಿ.ರಾವ್ ಇಬ್ಬರೂಸೇರಿ ಷಾ ಚಮನ್‌ಲಾಲ್ ದೂಂಗಾಜಿಯನ್ನು ವಾಕ್‌ಚಿತ್ರ ನಿರ್ಮಾಣ ಮಾಡುವಂತೆ ಒಪ್ಪಿಸಿದರು!ವಾಲ್ಮೀಕಿ ರಾಮಾಯಣ ಆಧರಿಸಿ ನರಹರಿಶಾಸ್ತ್ರಿ ಬರೆದಿದ್ದ ಕಥೆಯನ್ನು ಕನ್ನಡದ ಮೊಟ್ಟಮೊದಲ ಟಾಕೀ ಫಿಲಂ ’ಸತಿಸುಲೋಚನ’ ಹೆಸರಿನಲ್ಲಿ ತಯಾರಿಸಲು ತೀರ್ಮಾನಿಸಲಾಯಿತು! ಈಸಾಹಸಕ್ಕೆ ಕೈಜೋಡಿಸಿದವರು ಬೆಳ್ಳಾವೆನರಹರಿಶಾಸ್ತ್ರಿ, ಗುಬ್ಬಿವೀರಣ್ಣ ಹಾಗೂ ಸುಬ್ಬಯ್ಯನಾಯ್ಡು.
ಆರ್.ನಾಗೇಂದ್ರರಾವ್ ನಾಯಕನಟನಾಗಿ, ಲಕ್ಷ್ಮೀಬಾಯಿ ನಾಯಕಿಯಾಗಿ, ಸುಬ್ಬಯ್ಯನಾಯ್ಡು ಉಪನಾಯಕನಾಗಿ ತ್ರಿಪುರಾಂಬ ಉಪನಾಯಕಿಯಾಗಿ ನಟಿಸುವುದೆಂದು ನಿರ್ಧರಿಸ ಲಾಯಿತು. ಮುಹೂರ್ತದಿನ ಗೊತ್ತುಪಡಿಸಬೇಕೆನ್ನುವಾಗ ಇದ್ದಕ್ಕಿದ್ದಂತೆ ನಿರ್ಮಾಪಕ ಚಮನ್‌ಲಾಲ್ ಷಾಕ್ ನೀಡಿ ಹೀರೋಯಿನ್ ಆಗಿ ತ್ರಿಪುರಾಂಬ ಮತ್ತು ಹೀರೋಆಗಿ ಸುಬ್ಬಯ್ಯನಾಯ್ಡು ಹೆಸರನ್ನು ಬಲವಾಗಿ ಸೂಚಿಸಿ ಕಾರಣ ನೀಡಿದ್ದು:- ಅನಿರೀಕ್ಷಿತವಾಗಿ ಕುರುಕ್ಷೇತ್ರ ನಾಟಕ ನೋಡಿದ ಡೂಂಗಾಜಿ, ತ್ರಿಪುರಾಂಬ-ಸುಬ್ಬಯ್ಯನಾಯ್ಡು ಅವರಿಬ್ಬರ ಅಭಿನಯವನ್ನು ಮನಸಾರೆ ಮೆಚ್ಚಿಕೊಂಡಿದ್ದರಂತೆ?! ಆದ್ದರಿಂದ ಸತಿಸುಲೋಚನ ಚಿತ್ರದ ನಾಯಕ-ನಾಯಕಿ ಆಗಿ ತ್ರಿಪುರಾಂಬ-ಸುಬ್ಬಯ್ಯನಾಯ್ಡು ನಟಿಸುವಂತೆ ಅಂತಿಮ ತೀರ್ಮಾನ ತೆಗೆದುಕೊಂಡರು! ಎಲ್ಲೋಇದ್ದ ತ್ರಿಪುರಾಂಬ ಅನಿರೀಕ್ಷಿತವಾಗಿ ಆಶ್ಚರ್ಯಕರವಾಗಿ ಅಂತಿಮಘಳಿಗೆಯಲ್ಲಿ ಸತಿಸುಲೋಚನ ಚಿತ್ರದ ಹೀರೋಯಿನ್ ಆಗಿದ್ದು ಆರ್.ನಾಗೇಂದ್ರರಾವ್ ಮೊದಲ್ಗೊಂಡು ಎಲ್ಲರೂ ಒಲ್ಲದ ಮನಸ್ಸಿಂದಲೇ ಒಪ್ಪಿಕೊಳ್ಳಬೇಕಾದ ಸಂದರ್ಭಒದಗಿತ್ತು. ವಿಪರ್ಯಾಸವೊ ವಿಧಿವಿಲಾಸವೊ ಬಲ್ಲವರಾರು? ಅಂತೂಇಂತು ತ್ರಿಪುರಾಂಭ ಎಂಬ ಅಭಿನೇತ್ರಿ ಯನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ ಗೌರವಕ್ಕೆ ಅವರೆಲ್ಲರೂ ಪಾತ್ರರಾದರು. ಅನಿವಾರ್ಯದ ಕ್ಲಿಷ್ಟ ಪರಿಸ್ಥಿತಿಯಲ್ಲಿ ಚಂದನವನದ ಚೊಚ್ಚಲ ನಾಯಕಿನಟಿಯಾಗಿ ಇತಿಹಾಸ ಸೃಷ್ಟಿಸಿದ ಅದೃಷ್ಟವಂತೆ ತ್ರಿಪುರಾಂಭ! ಎಂಬ ಸತ್ಯವನ್ನು ಅಲ್ಲಗಳೆವಂತಿಲ್ಲ?
ಸತಿಸುಲೋಚನ ಶೂಟಿಂಗ್‌ವೇಳೆ ರೋಚಕ ಘಟನೆ:-
ರಂಗಭೂಮಿಯಲ್ಲಿ ನಟಿಸುವುದಕ್ಕೂ ಚಿತ್ರದಲ್ಲಿ ನಟಿಸುವುದಕ್ಕೂ ಅಜ-ಗಜ ಅಂತರವಿರುತ್ತದೆ ಎಂಬ ಸರಳಜ್ಞಾನ ನಟ-ನಟಿಯರಿಗೆ ಗೊತ್ತಿಲ್ಲದ ಕಾಲವದು. ಚಲನಚಿತ್ರದಲ್ಲಿನ ’ಕ್ಲೋಸಪ್’ ವೇಳೆಯಲ್ಲಿ ನಾಟಕ ಕ್ಷೇತ್ರದಿಂದ ಚಿತ್ರರಂಗಕ್ಕೆ ಆಗಮಿಸುವ ಎಲ್ಲಾ ಪಾತ್ರಧಾರಿಗಳಿಗು ಕ್ಲಿಷ್ಟಕರ ಸನ್ನಿವೇಶ ಎನಿಸಿ ಆ ಪರ್ಟಿಕ್ಯುಲರ್ ಶಾಟ್ ಬಹಳ ತ್ರಾಸಪೂರ್ಣ ಮುಕ್ತಾಯ ಕಾಣುತ್ತದೆ. ಒಂದು ಸಾರಿ ನಡೆದ ’ಯಾಕ್ಷನ್-ಕಟ್’ ಪ್ರಸಂಗ ಹೀಗಿತ್ತು: ಸತೀಸುಲೋಚನ ಪಾತ್ರದ ತ್ರಿಪುರಾಂಬ ತನ್ನ ಪತಿ ಇಂದ್ರಜಿತು ಸಾವಿನ ಸಂದರ್ಭದಲ್ಲಿ ತೀವ್ರ ದುಃಖ ವ್ಯಕ್ತಪಡಿಸಿ ಕಣ್ಣೀರು ಇಡಬೇಕಾಗಿತ್ತು. ಸಿನಿಮಾ ನಿರ್ದೇಶಕರು ಏನೇ ಮಾಡಿದರೂ ತ್ರಿಪುರಾಂಭ ಕಣ್ಣಲ್ಲಿ ಒಂದುಹನಿ ಕಣ್ಣೀರು ಕಾಣಿಸಲೇ ಇಲ್ಲ. ಗ್ಲಿಸರಿನ್ ಉಪಯೋಗಿಸುವ ಪದ್ಧತಿ ಇ(ಗೊತ್ತಿ)ರಲಿಲ್ಲ ವಾದ್ದರಿಂದ ದಿಕ್ಕು ತೋಚದೆ, ಶತಾಯ ಗತಾಯ ಕಣ್ಣೀರು ಬರಿಸಲೇ ಬೇಕೆಂದು ಈರುಳ್ಳಿ ಮತ್ತು ಘಾಟು ಒಣ ಮೆಣ ಸಿನಕಾಯಿ ಪ್ರಯೋಗವೂ ನಡೆಯಿತು. ಆದರೂ ಸಹ ತ್ರಿಪುರಾಂಭಗೆ ಒಂದು ತೊಟ್ಟು ಕಣ್ಣೀರು ಬರಲಿಲ್ಲ, ಅವರ ಮುಖ ಮತ್ತು ಕಣ್ಣುಗಳು ಮಾತ್ರ ಕೆಂಪಾದವು. ಕೊನೆ ಪ್ರಯತ್ನವನ್ನು ಮಾಡಿಬಿಡೋಣವೆಂದು ತ್ರಿಪುರಾಂಭರ ಕಣ್ಣುಗಳಿಗೆ ಖಾರದಪುಡಿ ನೀರನ್ನು ಸಿಂಪಡಿಸಿ ನೂರಕ್ಕೆ ೧೦೦ರಷ್ಟು ಕೃತಕ ಕಣ್ಣೀರನ್ನು ತರಿಸಿ ಆದೃಶ್ಯದ ಚಿತ್ರೀಕರಣವನ್ನು ಆಯಾಸ ಪ್ರಯಾಸಗಳಿಂದ ಮುಗಿಸಲಾಯಿತು! ಚಿತ್ರರಂಗದಲ್ಲಿ ಅಸಹಜ ಎನಿಸುವುದು ನಾಟಕರಂಗದಲ್ಲಿ ಸಹಜವಾಗಿರುತ್ತಿತು ಮತ್ತು ವೈಸ್ ವರ್ಸ, ಎಂಬುದು ತ್ರಿಪುರಾಂಭ ರವರಿಗೆ ಮನದಟ್ಟಾಯಿತು. ಕೊನೆಗೂ ಸತಿ ಸುಲೋಚನ ಚಿತ್ರವು ದಿನಾಂಕ ೩.೩.೧೯೩೪ರಂದು ೧೨ ಪ್ರಿಂಟ್‌ಗಳೊಡನೆ ಹಳೇ ಮೈಸೂರು ರಾಜ್ಯದಾದ್ಯಂತ ೧೨ ಕೇಂದ್ರಗಳಲ್ಲಿ ಬಿಡುಗಡೆಗೊಂಡು ೩ ಕೇಂದ್ರದಲ್ಲಿ ಶತದಿನೋತ್ಸವ ಮತ್ತು ೧ ಕೇಂದ್ರದಲ್ಲಿ ಸಿಲ್ವರ್ ಜ್ಯುಬಿಲಿ ಪ್ರದರ್ಶನ ಕಂಡು ಹೊಸ ಇತಿಹಾಸ ಬರೆಯಿತು.
ಅಂದಿನಿಂದ ಮೊದಲ್ಗೊಂಡು ತಾವು ಶೂಟಿಂಗ್ ಷೆಡ್ಯೂಲ್ ಸ್ಥಳಕ್ಕೆ ತಲುಪುವ ಮುನ್ನ ತಮ್ಮ ಮನೆಯಲ್ಲಿ ಹಾಗೂ ಬಿಡುವುಸಿಕ್ಕ ಸ್ಥಳದಲ್ಲೆಲ್ಲ ಆಯಾಯ ಪಾತ್ರದ ರಿಹರ್ಸಲ್ ಮಾಡುವ ಅಭ್ಯಾಸ ಬೆಳೆಸಿಕೊಂಡರು. ಸತತ ಪ್ರಾಕ್ಟೀಸ್‌ನಿಂದ ಪಾತ್ರಗಳ ಪರಕಾಯ ಪ್ರವೇಶ ಮಾಡುವ ಕಲಾವಿದರ ಸಾಲಿಗೆ ಸೇರಿಕೊಂಡರು. ನೂರಾರು ನಾಟಕ ಮತ್ತು ಹತ್ತು ಚಲನಚಿತ್ರಗಳಲ್ಲಿ ಅಭಿನಯಿಸಿ ನಾಟಕ ಸಿನಿಮಾದ ಒಳ-ಹೊರಗಿನ ಬಗ್ಗೆ ಆಳವಾಗಿ ಅರಿತುಕೊಂಡರು. ಕಾಲಕ್ರಮೇಣ ಎರಡೂ ಕ್ಷೇತ್ರಕ್ಕೆ ವಿದಾಯ ಹೇಳುವ ನಿರ್ಧಾರದಿಂದ ೧೯೩೮ರಲ್ಲಿ ತಮಿಳುನಾಡಿನ ಸೇಲಮ್‌ನಲ್ಲಿ ತಬಲಾ ವಿದ್ವಾನ್ ವೇಣುಗೋಪಾಲರನ್ನು ವಿವಾಹವಾಗಿ ಹೊಸಬಾಳಿಗೆ ನಾಂದಿಹಾಡಿ ಗೃಹಿಣಿಯಾದರು! ಆ ನಂತರವೂ ಕರ್ನಾಟಕ ಮತ್ತು ತಮಿಳುನಾಡು ರಾಜ್ಯದಾದ್ಯಂತ ತಮ್ಮ ಪತಿಯ ಸಂಗೀತ ಕಛೇರಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ೧೯೭೯ರಲ್ಲಿ ಚಿಕ್ಕದಾದ ಚೊಕ್ಕವಾದ ಸಾರ್ಥಕ ಅಭಿನಯದ ಬದುಕನ್ನು ಮುಗಿಸಿದರು, ಚಂದನವನದ ಪ್ರಥಮ ವಾಕ್‌ಚಿತ್ರದ ಹೀರೋಯಿನ್!
ತ್ರಿಪುರಾಂಬ ನಟಿಸಿದ ಚಿತ್ರಗಳು
ಕ್ರ.ಸಂ. ಫಿಲಂ ಕ್ರ.ಸಂ. ಫಿಲಂ
೧ ಸತಿ ಸುಲೋಚನ/೧೯೩೪ ೬ ರಾಜಸೂಯ ಯಾಗ/೧೯೩೭
೨ ಭಕ್ತಧ್ರುವ/೧೯೩೪ ೭ ಪುರಂದರದಾಸರು/೧೯೩೭
೩ ಸದಾರಮೆ/೧೯೩೫ ೮ ಕಣ್ಣ [ತಮಿಳು]/೧೯೩೭
೪ ಸಂಸಾರನೌಕಾ/೧೯೩೬ ೯ ಚಕ್ರವರ್ತಿ ತಿರುಮಗಳ್[ತಮಿಳು]/೧೯೩೮
೫ ಚಿರಂಜೀವಿ/೧೯೩೭ ೧೦ ದಾನಶೂರ ಕರ್ಣನ್ [ತಮಿಳು]/೧೯೩೮

ಕುಮಾರಕವಿ ಬಿ.ಎನ್. ನಟರಾಜ್
೯೦೩೬೯೭೬೪೭೧
ಬೆಂಗಳೂರು ೫೬೦೦೭೨