ಗುಂಡ್ಲುಪೇಟೆ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಡುವಿಲ್ಲದೆ ಸುರಿಯುತ್ತಿರುವ ಸೊನೆ ಮಳೆಯಿಂದಾಗಿ ಸಾಂಬಾರ್ ಈರುಳ್ಳಿ ಬೆಳೆದಿರುವ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನೆರೆಯ ರಾಜ್ಯವಾದ ತಮಿಳುನಾಡಿನ ನೀಲಗಿರಿ ಮತ್ತು ಕೇರಳದಲ್ಲಿ ಸತತ ಮಳೆಯಾಗುತ್ತಿರುವ ಕಾರಣದಿಂದಾಗಿ ತಾಲೂಕಿನ ಕಾಡಂಚಿನ ಭಾಗದಲ್ಲಿ ಸಹ ದಿನ ಪೂರ್ತಿ ಮೊಡಕವಿದ ವಾತಾವರಣವಿದ್ದು, ಸೊನೆ ಮಳೆಯಾಗುತ್ತಲೇ ಇದೆ. ಇದರಿಂದಾಗಿ ಕಟಾವಿಗೆ ಬಂದಿರುವ ಈರುಳ್ಳಿಯನ್ನು ಕಟಾವು ಮಾಡದೆ ರೈತರು ಕಾಯುತ್ತಿದ್ದಾರೆ.

ಕಳೆದ ಮೂರು ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಈರುಳ್ಳಿ ಈಗಾಗಲೇ ಕಟಾವಿಗೆ ಬಂದಿದೆ. ಆದರೆ ಕಳೆದ 15 ದಿನಗಳಿಂದ ಸೊನೆ ಮಳೆಯಾಗುತ್ತಲೇ ಇದೆ. ಇದರಿಂದ ಇನ್ನೇನು ಕಟಾವಿಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಂತೆ ವಾತಾವರಣ ಬದಲಾಗಿ ಮಳೆಯಾಗುತ್ತಲೇ ಇದೆ. ಎರಡು ವಾರಗಳ ಹಿಂದೆ ಕಟಾವಿಗೆ ಬಂದ ಈರುಳ್ಳಿಗೆ 3800 ರೂ. ಉತ್ತಮ ಬೆಲೆ ಇತ್ತು. ಆದರೆ ಸತತ ಮಳೆಯಿಂದ ಈಗ 2500 ರೂ. ತಲುಪಿದೆ. ಇದರಿಂದ ರೈತರು ಕಂಗಾಲಾಗಿದ್ದು, ಹಾಕಿದ ಬಂಡವಾಳವೂ ಕೈ ಸೇರದಂತಾಗಿದೆ.

ಹಂಗಳ ಗ್ರಾಮದ ಸಿದ್ದಪ್ಪಾಜಿ ಎಂಬುವವರು ಮೂರು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆದಿದ್ದರು. ಕಟಾವಿಗೆ ಬಂದಿರುವುದರಿಂದ ಮಂಗಳವಾರ ಮತ್ತು ಬುಧವಾರ ಕಾಟಾವು ಮಾಡಿ ಇಟ್ಟಿದ್ದರು. ಬುಧವಾರ ಸಂಜೆ ಸುರಿದ ಭಾರಿ ಮಳೆಗೆ ಎಲ್ಲವು ಕೊಚ್ಚಿ ಹೋಗಿದ್ದು, ಸುಮಾರು 6 ಲಕ್ಷ ದಷ್ಟು ನಷ್ಟ ಅನುಭವಿಸಿವಂತಾಗಿದೆ ಎಂದು ಮಾಲೀಕರಾದ ಸಿದ್ದಪ್ಪಾಜಿ ತಿಳಿಸಿದರು.

ಅನೇಕ ರೈತರು ಆಲೂಗಡ್ಡೆ ಬಿತ್ತನೆ ಮಾಡಲು ಭೂಮಿಯನ್ನು ಉಳುಮೆ ಮಾಡಿಕೊಂಡಿದ್ದರು. ಆದರೆ ಸತತವಾದ ಮಳೆಯಿಂದಾಗಿ ಬಿತ್ತನೆ ಮಾಡಲು ಅವಕಾಶ ಆಗಿಲ್ಲ. ಹಾಸನ ಜಿಲ್ಲೆಯ ಭಾಗದಿಂದ ಬಿತ್ತನೆ ಆಲೂಗಡ್ಡೆ ಅನೇಕ ಲೋಡ್‍ಗಳು ತಾಲೂಕಿಗೆ ಬಂದಿದೆ.

ಮಳೆಯಿಂದಾಗಿ ನಷ್ಟ ಅನುಭವಿಸಿರುವ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಹೊಸಹಳ್ಳಿ ಕಾಲೋನಿ ಗ್ರಾಮದ ರೈತ ಶಿವಸ್ವಾಮಿ ಆಗ್ರಹಿಸಿದ್ಧಾರೆ.

ತಾಲೂಕಿನಲ್ಲಿ ರೈತರು ಮುಂಗಾರಿನಲ್ಲಿ ಸುಮಾರು 300 ಹೆಕ್ಟೆರ್‍ನಲ್ಲಿ ಸಾಂಬಾರ್ ಈರುಳ್ಳಿ ಬಿತ್ತನೆ ಮಾಡಿದ್ದರು. ಅನೇಕ ಮಂದಿ ಕಟಾವು ಮಾಡಿ ಮಾರಾಟ ಮಾಡಿದ್ದರು. ಆದರೆ ಇದೀಗ ಸೊನೆ ಮಳೆಯಿಂದ 70ರಿಂದ 80 ಎಕ್ಟರ್‍ನಷ್ಟು ಈರುಳ್ಳಿ ಮಳೆಗೆ ಸಿಲುಕಿ ನಾಶವಾಗಿದೆ.
– ರಾಜು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ.

 

ವರದಿ: ಬಸವರಾಜು ಎಸ್.ಹಂಗಳ

By admin