ಮೈಸೂರು: ಮೈಸೂರು ನಗರ ಜಿಲ್ಲಾ ಪ್ರಚಾರ ಸಮಿತಿಯು ವಿದ್ಯುತ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮತ್ತು ಕೊರೊನಾ 3ನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿರುವುದರಿಂದ ಪ್ರತ್ಯೇಕ ಆಸ್ಪತ್ರೆ ತೆರೆಯುವಂತೆ ಮತ್ತು ಎರಡು ತಿಂಗಳ ವಸತಿ ವಿದ್ಯುತ್ ಬಿಲ್ ಮನ್ನಾ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುವ ಮೂಲಕ ನಗರದಲ್ಲಿ ಅಂಚೆ ಚಳುವಳಿ ನಡೆಸಿತು.
ಸೋಮವಾರ ಬೆಳಿಗ್ಗೆ 11-30ಕ್ಕೆ ಮುಖ್ಯಮಂತ್ರಿಗೆ ಪತ್ರ ಬರೆದು ನಗರದ ಕಾಡ ಕಚೇರಿಯಲ್ಲಿರುವ ಅಂಚೆ ಡಬ್ಬಕ್ಕೆ ಮಕ್ಕಳಾದ ತನ್ಮ್ಯ, ಯಶಸ್ವಿ, ಹೃತ್ವಿಕ್ ಹಾಕುವ ಮೂಲಕ ಅಂಚೆ ಚಳುವಳಿಗೆ ಚಾಲನೆ ನೀಡಲಾಯಿತು. ಇದೇ ವೇಳೆ ತಳ್ಳು ಗಾಡಿ ಮತ್ತು ರಸ್ತೆ ಬದಿ ವ್ಯಾಪಾರಿಗಳು ಕೂಡ ಪತ್ರಗಳನ್ನು ಅಂಚೆ ಡಬ್ಬಕ್ಕೆ ಹಾಕುವ ಮೂಲಕ ಸಾಥ್ ನೀಡಿದರು.
ಪ್ರಭಾರ ಮಹಾಪೌರ ಅನ್ವರ್ ಬೇಗ್, ಡಿಸಿಸಿ ಅಧ್ಯಕ್ಷರಾದ ಆರ್ ಮೂರ್ತಿ ಅವರ ಸಹಕಾರದೊಂದಿಗೆ ನಡೆದ ಅಂಚೆ ಚಳುವಳಿಯಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಕೆ. ಅಶೋಕ, ಪ್ರಚಾರ ಸಮಿತಿಯ ಚೌಹಳ್ಳಿ ಪುಟ್ಟಸ್ವಾಮಿ, ಲೋಕನಾಥ್ ಗೌಡ, ಕುಮಾರ್ ಗೌಡ, ಸಂಜಯ್ ಗೌಡ, ಜಯರಾಮ ಚಕ್ಕಡಿ, ಫಿಲಂ ಮಂಜು, ರಾಕೇಶ್ ಶ್ರೀನಿವಾಸ್, ಕಸ್ತೂರಿ ಚಂದ್ರು, ದಯಾನಂದ, ಮುಂತಾದವರು ಇದ್ದರು.
ಕೋವಿಡ್-19, 3ನೇ ಅಲೆಯು ಮಕ್ಕಳ ಮೇಲೆ ಅಗಾಧ ಪರಿಣಾಮ ಬೀರುತ್ತಿದ್ದು ಸಾವಿನ ಪ್ರಮಾಣ ಹೆಚ್ಚುತ್ತಿದ್ದು ಚಿಕಿತ್ಸೆಗಾಗಿ ಪ್ರತ್ಯೇಕ ಆಸ್ಪತ್ರೆ ತೆರೆದು, ಮಕ್ಕಳಿಗೆ ವ್ಯಾಕ್ಸಿನ್ ನೀಡಲು ತುರ್ತು ಕ್ರಮ ಕೈಗೊಳ್ಳುವುದು, ಕೋವಿಡ್-19 ಲಾಕ್‌ಡೌನ್‌ನಿಂದ ಸಾರ್ವಜನಿಕರು ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೆ ಗುರಿಯಾಗಿದ್ದು 2 ತಿಂಗಳ ವಸತಿ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲು ಕ್ರಮವಹಿಸುವುದು, ತೈಲ ಹಾಗೂ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು ನಾಗರಿಕರ ಬದುಕು ತುಂಬಾ ಶೋಚನೀಯ ಸ್ಥಿತಿಗೆ ತಲುಪಿದೆ.
ಕೊರೊನಾ ಅಲೆಗಿಂತಲೂ ಭೀಕರವಾಗಿ ಸರ್ಕಾರದ ತೆರಿಗೆ ಅಲೆಗಳೇ ಜನರನ್ನು ಕಾಡುತ್ತಿದೆ. ದೇಶದ ನಾಗರಿಕರಿಗೆ ಉಚಿತ ಲಸಿಕೆ ಒದಗಿಸಲು ಹಣವಿನಿಯೋಗಿಸುವ ಬದಲು, ಅದರ ಜಾಹಿರಾತಿಗೆ ಹೆಚ್ಚು ಹಣ ವಿನಿಯೋಗಿಸಿ, ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡಿ ಉಚಿತ ಲಸಿಕೆ ಎಲ್ಲರಿಗೂ ಲಭಿಸುವಂತೆ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. 2012ರಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯುಪಿಎ ಸರ್ಕಾರ ದೇಶದಲ್ಲಿ ಒಂದೇ ದಿನ 12 ಕೋಟಿಗೂ ಅಧಿಕ ಮಕ್ಕಳಿಗೆ ಯಾವುದೇ ನೋಂದಣಿ, ಪ್ರಚಾರ, ನೂಕುನುಗ್ಗಲು ಇಲ್ಲದೆ ಉಚಿತ ಪೋಲಿಯೋ ವ್ಯಾಕ್ಸಿನ್ ನೀಡುವ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿತ್ತು. ಇದರಂತೆ ಪ್ರಸ್ತುತ ಆಡಳಿತ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಕ್ರಮ ಕೈಗೊಂಡು ಮಕ್ಕಳಿಗೆ ಮತ್ತು ವಯಸ್ಕರಿಗೆ ಲಸಿಕೆ ಒದಗಿಸಿಕೊಟ್ಟು ನಂತರ ಪ್ರಚಾರ ಪಡೆದುಕೊಳ್ಳಲಿ ಎಂದು ಪತ್ರದ ಬರೆದು ಆಗ್ರಹಿಸಲಾಗಿದೆ.