ಮೈಸೂರು: ವಾರದಲ್ಲಿ ಸೋಮವಾರ ಮತ್ತು ಗುರುವಾರ ಬೆಳಗ್ಗೆ ಆರು ಗಂಟೆಯಿಂದ ಮಧ್ಯಾಹ್ನದವರೆಗೆ ಹನ್ನೆರಡು ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಮಯ ನಿಗದಿ ಮಾಡಿದ್ದು ಅದರಂತೆ ಇಂದು ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಜನ ಕೋವಿಡ್ ನಿಯಮ ಮರೆತು ಖರೀದಿಗೆ ಮುಗಿಬಿದ್ದದ್ದು ನಗರದಲ್ಲಿ ಕಂಡು ಬಂದಿತು.

ಜೂನ್ 7ನೇ ತಾರೀಕಿನ ತನಕ ಸಂಪೂರ್ಣ ಲಾಕ್ ಡೌನ್ ಗೆ ಜಿಲ್ಲಾಡಳಿತ ಆದೇಶ ನೀಡಿದೆ. ಹಾಗಾಗಿ ನಗರದಲ್ಲಿ ವಾರದಲ್ಲಿ ಎರಡು ದಿನ ಹೊರತು ಪಡಿಸಿ ಉಳಿದ ದಿನಗಳಲ್ಲಿ ಸಂಪೂರ್ಣ ಲಾಕ್ ಡೌನ್  ಮಾಡಲಾಗುತ್ತಿದ್ದು, ವಾರದ ಮೊದಲ ದಿನವಾದ ಸೋಮವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ದರಿಂದ ನಗರದಾದ್ಯಂತ ಕೋವಿಡ್ ನಿಯಮ ಮಾಯವಾಗಿತ್ತು.

ನಗರದಾದ್ಯಂತ ಎಲ್ಲಿ ನೋಡಿದರಲ್ಲಿ ಜನ ಜಾತ್ರೆ ನೆರೆದಿತ್ತು. ಕೋವಿಡ್ ಭೀತಿಯನ್ನು ಮರೆತು ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಮುಗಿ ಬೀಳುತ್ತಿದ್ದ ದೃಶ್ಯ ಕಂಡು ಬಂದಿತು. ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ ಹೀಗೆ ಎಲ್ಲಿ ನೋಡಿದರೂ ಜನರೇ ಕಂಡು ಬರುತ್ತಿದ್ದರು. ಜತೆಗೆ ಕೆಲಸವಿಲ್ಲದಿದ್ದರೂ ವಾಹನಗಳಲ್ಲಿ ಅಡ್ಡಾಡುವವರಿಗೂ ಕೊರತೆ ಇರಲಿಲ್ಲ. ಜತೆಗೆ ಯಾರೂ ಕೂಡ ಕೋವಿಡ್ ನಿಯಮವನ್ನು ಪಾಲಿಸಿದ್ದು ಕಂಡು ಬರಲಿಲ್ಲ.

ಇದನ್ನು ಗಮನಿಸಿದರೆ ಕೊರೊನಾ ಸೋಂಕು ನಿಯಂತ್ರಣಕ್ಕಿಂತ ಹರಡುವುದೇ ಹೆಚ್ಚು ಎಂಬಂತೆ ಭಾಸವಾಗುತ್ತಿದೆ. ನಗರಕ್ಕೊಂದು ಸುತ್ತು ಹೊಡೆದರೆ  ನಗರದ ದೇವರಾಜ ಮಾರುಕಟ್ಟೆ, ಶಿವರಾಂ ಪೇಟೆ, ಸಂತೇಪೇಟೆ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ನಂಜುಮಳಿಗೆ ಸೇರಿದಂತೆ ಹಲವು ಕಡೆಗಳಲ್ಲಿ ಹಬ್ಬದ ದಿನಗಳಲ್ಲಿ ಖರೀದಿಯ ಭರಾಟೆಯನ್ನೇ ಹೋಲುವಂತಿತ್ತು.

ಕೊರೊನಾ ಹರಡುವುದನ್ನು ತಡೆಯ ಬೇಕಾದರೆ ಸಾಮಾಜಿಕ ಅಂತರ, ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ಬಳಕೆಯಷ್ಟೆ ರಾಮಬಾಣವಾಗಿದ್ದು, ಹೀಗಾಗಿಯೇ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದೆ. ಜತೆಗೆ ಲಾಕ್ ಡೌನ್ ಸಮಯದಲ್ಲಿ ಹಾಲಿನ ಬೂತ್, ವೈದ್ಯಕೀಯ ಸೇವೆ, ಹಾಪ್ ಕಾಮ್ಸ್ ಗೆ ಒಳಪಡುವ ಹಣ್ಣು-ತರಕಾರಿ ಅಂಗಡಿಗಳು, ನ್ಯಾಯಬೆಲೆ ಅಂಗಡಿಗಳಿಗೆ ಅವಕಾಶವಿದೆ. ಆದರೆ ಇದೆಲ್ಲವನ್ನು ಮರೆತು ಖರೀದಿಗೆ ಮುಗಿಬಿದ್ದಿದ್ದು ಭಯಹುಟ್ಟಿಸುವಂತಿತ್ತು. ಇನ್ನಾದರೂ ಕೊರೊನಾ ವಿಚಾರದಲ್ಲಿ ಜನ ಜಾಗ್ರತೆ ವಹಿಸಲಿ ಇಲ್ಲದಿದ್ದರೆ ಕೊರೊನಾ ನಿಯಂತ್ರಣ ಅಸಾಧ್ಯ ಎಂಬುದನ್ನು ಮರೆಯಬಾರದು.

 

By admin