-ಚಿದ್ರೂಪ ಅಂತಃಕರಣ

ನಾಗರಾಜು ತಲಕಾಡು ವಿರಚಿತ ವಾಸ್ತವಿಕ ಪ್ರಜ್ಞೆಯ “ಬುದ್ಧಭಾರತ ಕಾವ್ಯ”ವನ್ನು ಬಿ.ಎಂ.ಶ್ರೀ. ಸಭಾಂಗಣ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಾನಸಗಂಗೋತ್ರಿ ಮೈಸೂರು ಇಲ್ಲಿ ಬಿಡುಗಡೆಗೊಳಿಸಲಾಯಿತು. ಕಾವ್ಯವನ್ನು ಬಿಡುಗೊಡೆ ಗೊಳಿಸಿದ ಪ್ರೊ. ಎಚ್. ಎಸ್. ಉಮೇಶ್ ಅವರು ಕಾವ್ಯದ ವಿವೇಚನೆಯನ್ನು ಈ ಬಗೆಯಾಗಿ ವಿಸ್ತರಿಸಿದರು; “ಕಾವ್ಯದಲ್ಲಿ ಗೌತಮ ಬುದ್ಧನನ್ನು ಮುಂದಿಡುವುದಕ್ಕೂ ಮುನ್ನ ಬುದ್ಧ ತತ್ವವನ್ನು ಮುಂದಿಟ್ಟಿದ್ದಾರೆ ಅಥವಾ ಗೌತಮ ಬುದ್ಧನ ಕಥೆಯನ್ನು ಹೇಳುವುದಿಲ್ಲ ಬದಲಿಗೆ ಬುದ್ಧನ ಪ್ರಭಾವವನ್ನು ಕವಿ ನಾಗರಾಜು ತಲಕಾಡು ಅವರು ಹೇಳಿದ್ದಾರೆ‌. ಜತೆಗೆ ಭೀಮ ಇಲ್ಲಿ ಬುದ್ಧನಾಗುತ್ತಾನೆ ಮತ್ತು ದ್ರೌಪದಿ ಬಿಕ್ಕುಣಿ ಆಗುತ್ತಾಳೆ” ಎಂದು ಕಾವ್ಯದ ಒಳವನ್ನು ತೆರೆದಿಟ್ಟರು. 

ಕಾವ್ಯ ನಿರ್ವಚನ ಮಾಡಿದ ಪ್ರೊ. ಎನ್.ಕೆ. ಲೋಲಾಕ್ಷಿ ಅವರು “ಬುದ್ಧಭಾರತ ಕಾವ್ಯ”ವು ಅನಾಥ ಕಥನವಿದು. ದೇಶದ ಎಷ್ಟೋ ಅನಾಥ ಬಂಧುಗಳ ಧ್ವನಿಯಾಗಿ ಕವಿ ನಾಗರಾಜು ತಲಕಾಡು ವಿರಚಿಸಿದ್ದಾರೆ. ಗುಡಿಸಿಲಿನಲ್ಲಿ ಅರಳಿದ ಗುಲಾಬಿಯಾಗಿ, ಹಸಿವಿನಿಂದ ನರಳುವ ಸನ್ನಿವೇಶಗಳ ರೂಪವಾಗಿ ಈ ಕಾವ್ಯ ಬಂದಿದೆ ಎನ್ನುವ ಮೂಲಕ ಕಾವ್ಯದ ತಿರುಳುಗಳಿಗೆ ಈ ಬಗೆಯಾಗಿ ಶೀರ್ಷಿಕೆಗಳನ್ನು ಕೊಟ್ಟರು. 

ಗೌರವ ಉಪಸ್ಥಿತಿಯಲ್ಲಿದ್ದ ಪ್ರೊ. ಎಂ. ನಂಜಯ್ಯ ಹೊಂಗನೂರು ಅವರು ಮಾತನಾಡಿ; ಕಾವ್ಯದಲ್ಲಿ ಶಾಂತಿ ಘೋಷಣೆಯನ್ನು ಗುರುತಿಸಿದ್ದು ಈ ಬಗೆಯಾಗಿ; ನೆಲ ಮೂಲದ ಚಿಂತನೆಗಳ ಆಗರವಾಗಿ ಮೂಡಿದ ಈ ಕಾವ್ಯ ಪ್ರಭುತ್ವದ ನೆಲವನ್ನು ಜರಿದು ಪ್ರಜಾಪ್ರಭುತ್ವದ ಗಂಧವನ್ನು ಪಸರಿಸಿದೆ. ಸಾಂಕೇತಿಕವಾಗಿ ಪುರಾಣ ಪಾತ್ರಗಳನ್ನು ಆಯ್ದುಕೊಂಡಿದ್ದರೂ ಸಂವಿಧಾನದ ಆಶಯಗಳು ಕಾವ್ಯದಲ್ಲಿ ಬಿತ್ತಿವೆ ಈ ಮೂಲಕ ಸಮ ಸಮಾಜ ನಿರ್ಮಾಣ, ಶಾಂತಿ ನಿರ್ಮಾಣ ಎಂದರು. ಕೃತಿ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ *ಪ್ರೊ. ವಿಜಯಕುಮಾರಿ ಎಸ್ ಕರಿಕಲ್* ಅವರು ಮಾತನಾಡಿ;  ಕಾವ್ಯದ ರೀತಿಯು ದಲಿತ ನಡೆಯ ಭಿನ್ನ ಮತ್ತು ಆಶಾದಾಯಕ ಚಿಹ್ನೆ ಹಾಗೂ ಈ ಕಾವ್ಯವು ಬದ್ಧ ವೈರಿಗಳ ಮನಸ್ಸನ್ನು ಬದಲಾಯಿಸುತ್ತದೆ ಎಂದರು. 

ಕಾವ್ಯ ಸಂವಾದವು ಏರ್ಪಟ್ಟು ಡಾ. ಎಚ್.ಎಲ್. ಶೈಲಾ ಅವರು ಸಂವಾದ ತಜ್ಞರಾಗಿ ಕಾವ್ಯವನ್ನು ಅಂತರಂಗದಿಂದ ಆಚೆ ಬರುವ ಕನಸುಗಳೋಪಾದಿಯಲ್ಲಿ ಇದು ಆಧುನಿಕ ಭಾರತದ ಕ್ಲಾಸಿಕ್ ಕೃತಿ ಎಂದರು. ವ್ಯಕ್ತಿ ಕೇಂದ್ರಿತ, ಯುದ್ಧ ಕೇಂದ್ರಿತ, ನಿರಂಕುಶಕೇಂದ್ರಿತಗಳನ್ನು ಯುಗಪ್ರಜ್ಞೆಗೆ ಅನುಗುಣವಾಗಿ ಪಲ್ಲಟಗೊಳಿಸಿ ಯುದ್ಧ ಮಾರ್ಗದಿಂದ ಬುದ್ಧ ಮಾರ್ಗದೆಡೆಗೆ ಸಾಗಿನಿಂತ ಈ ಕಾವ್ಯ ಋಣಾತ್ಮಕದಿಂದ ಧನಾತ್ಮಕದೆಡೆಗೆ ಸೆಳೆಯುವಂತದ್ದೇ ಇದರ ಅಂತರ್ ಪ್ರಜ್ಞೆ ಎಂದರು. *ಡಾ ಎಂ. ಬಿ. ರವಿ* ಅವರು ಸಂವಾದವನ್ನು ಮುಂದುವರೆಸಿ ಕಾವ್ಯವನ್ನು ಕುರಿತಂತೆ ಖಂಡಕಾವ್ಯ ಇಂಡೋ ಆರ್ಯನ್ ಲ್ಯಾಂಗ್ವೇಜ್’ನಲ್ಲಿದೆ ಆದರೆ ದ್ರವಿಡಿಯನ್ ಲಾಂಗ್ವೇಜ್’ನಲ್ಲಿ ಇದು ವಿರಳ. ಆದರೆ ಖಂಡಕಾವ್ಯ ಮಾದರಿಯಲ್ಲೇ ಅಖಂಡವಾದ ವಸ್ತುವಿಷಯವನ್ನಿಟ್ಟುಕೊಂಡು ಎಡಬಲ ಎರಡನ್ನೂ ಎಡಮುರಿ ಕಟ್ಟಿದ ಕಾವ್ಯ  “ಬುದ್ಧಭಾರತ ಕಾವ್ಯ” ಎಂದರು.

ಪ್ರಾಸಪ್ರಿಯರಾದ  ಡಾ. ಬಿ. ವೆಂಕಟರಾಮಣ್ಣ ಅವರು ಕಾವ್ಯ ಸಂವಾದದಲ್ಲಿ ಮಹತ್ತರವಾದುದನ್ನೇ ನಮೂದಿಸಿ ಹೇಳಿದರು. ಈ ಬುದ್ಧಭಾರತ ಕಾವ್ಯ ದಲಿತ ಪ್ರಜ್ಞೆಯಿಂದ ಬಂದಿದುದಲ್ಲ ಎಡಬಲದ ಪ್ರಜ್ಞೆಯಿಂದ ಬಂದಿದುದಲ್ಲ; ಇದು ಕಲಿತ ಪ್ರಜ್ಞೆಯಿಂದ, ನುರಿತ ಪ್ರಜ್ಞೆಯಿಂದ ಬಂದಿರುವಂತಹ ಕಾವ್ಯ ಹಾಗಾಗಿ ಇನ್ನುಮುಂದೆ ಈ ಕಲಿತ ಪ್ರಜ್ಞೆ ಉಳ್ಳವರು ಸಮಸಮಾಜವನ್ನು ನಿರ್ಮಾಣಮಾಡಲಿದ್ದಾರೆ. ಆ ಬಗೆಯ ತುಡಿತದಲ್ಲಿ ಈ ಬುದ್ಧಭಾರತ ಕಾವ್ಯ ಮುಂದಾಗಿ ತೋರುತ್ತದೆ ಎಂದರು. ಡಾ. ಗೌರೀಶ್ ಅವರು ಬುದ್ಧಭಾರತ ಕಾವ್ಯದಲ್ಲಿನ ಸರಳ ಭಾಷೆಯ ಬಗ್ಗೆ ಮೆಚ್ಚಿಕೊಂಡು ಜನಪದ ನುಡಿಗಳು ಕಾವ್ಯದಲ್ಲಿ ಮೇಳೈಸಿರುವುದರಿಂದ ಇದನ್ನು ಓದಿದ ಪ್ರತಿಯೊಬ್ಬರಿಗೂ ಇದು ನಮ್ಮ ಕಾವ್ಯ ಎನಿಸುವುದಂತೂ ಸತ್ಯ ಎಂದರು. ಡಾ. ಪ್ರಸನ್ನ ಕುಮಾರ್ ಅವರು ಕಾವ್ಯ ಸಂವಾದದಲ್ಲಿ ಕಾವ್ಯದ ಒಳಹೊರಗನ್ನು ಹಳೆಗನ್ನಡ ಕೃತಿಗಳ ಪದ್ಯಗಳ ಮೂಲಕ ಕಾವ್ಯದ ಸತ್ವವನ್ನು ತಿಳಿಸುತ್ತ ಅನನ್ಯ ಸತ್ವಕ್ಕೆ ಈ ಆಧುನಿಕ ಕಾವ್ಯವಾದ  ಬುದ್ಧಭಾರತ ಕಾವ್ಯ ಭವ್ಯತೆ ಕಂಡಿದೆ ಎಂದರು.

ಡಾ. ಎಚ್. ಗೌರಮ್ಮ ಅವರು ಹಸ್ತಪ್ರತಿ ಜ್ಞಾನವುಳ್ಳವರಾಗಿದ್ದು ಅಲ್ಲಿ ಸಂಶೋದಿಸಿದ್ದ ಜಿನ ಕಾವ್ಯಗಳು ಬುದ್ಧ ಕಾವ್ಯಗಳ ಸ್ವರೂಪವನ್ನು ಬಲ್ಲವರಾಗಿದ್ದು ಒಂದಷ್ಟು ಆ ಮಾಹಿತಿಗಳನ್ನು ಬುದ್ಧಭಾರತ ಕಾವ್ಯದಲ್ಲಿ ಗುರುತಿಸಿ ಆಧುನಿಕ ಮಟ್ಟದಲ್ಲಿ ಈ ಬುದ್ಧಭಾರತ ನಿಲ್ಲುವ ಮಟ್ಟನ್ನು ತಿಳಿಯಪಡಿಸಿದರು. ಕಾವ್ಯ ಸಂವಾದದ ಅಧ್ಯಕ್ಷತೆ ವಹಿಸಿದ್ದ *ಡಾ. ಎಸ್. ಡಿ. ಶಶಿಕಲಾ* ಅವರು ಕಾವ್ಯದ ತಿರುಳನ್ನು ನಾನಾ ಬಗೆಯಾಗಿ ವಿವರಿಸುತ್ತ ಆ ವಿವರಗಳಿಗೆಲ್ಲಾ ಸಮವಾಗಿ ಒಂದು ವಾಕ್ಯದಲ್ಲಿ ನುಡಿದ ನುಡಿಯೇ ದ. ರಾ‌. ಬೇಂದ್ರೆಯವರ ನಾಕುತಂತಿ ಮತ್ತು ರವೀಂದ್ರನಾಥ ಠಾಗೋರ್ ಅವರ ಗೀತಾಂಜಲಿ ಕೃತಿಗಳಿಗೆ ಸಮಚಿಂತನೆಯಾಗಿ ತೋರುವ ಕಾವ್ಯವಿದು ಎಂದದ್ದು.

ಕಾವ್ಯದ ಕರ್ತೃವಾದ ಶ್ರೀ ನಾಗರಾಜು ತಲಕಾಡು* ಕಾವ್ಯದಲ್ಲಿ ಸರಳತೆಯನ್ನು ಮೆರೆಯುವುದಷ್ಟೇ ಅಲ್ಲ ನಿಜ ನಡೆನುಡಿಯಲ್ಲೂ ಸರಳತೆ ತೋರಿದುದಾಗಿ ಹೇಳಿದ ಮಾತು ಈ ಕಾವ್ಯವು ಎಲ್ಲರ ಸಹಕಾರ ಮತ್ತು ಮಾರ್ಗದರ್ಶನದಿಂದ ಹೊರಬಂದ ಕಾವ್ಯ. ಹಾಗಾಗಿ ಇದು ನನ್ನೊಬ್ಬನ ಕಾವ್ಯವಲ್ಲ ಸಮಷ್ಟಿಕಾವ್ಯ ಎಲ್ಲರ ಕಾವ್ಯ ಎಂದರು.

ಚಿಮಬಿಆರ್ ( ಮಂಜುನಾಥ ಬಿ.ಆರ್)

ಯುವಸಾಹಿತಿ, ಸಂಶೋಧಕ, ವಿಮರ್ಶಕ,

ಎಚ್.ಡಿ. ಕೋಟೆ ಮೈಸೂರು.

ದೂರವಾಣಿ ಸಂಖ್ಯೆ:- 8884684726

Gmail I’d:-manjunathabr709@gmail.com