ಕೃಷ್ಣರಾಜಪೇಟೆ: ತಾಲೂಕಿನ ಮೋದೂರು ಗ್ರಾಮದ ಕೆರೆಯ ನೀರಿನಲ್ಲಿ ಮುಳುಗಿ ಆಕಸ್ಮಿಕವಾಗಿ ಮೃತರಾದ ಇಬ್ಬರು ಯುವಕರ ಮನೆಗಳಿಗೆ ತೆರಳಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಡಾ.ನಾರಾಯಣಗೌಡ ಅವರು ವಯಕ್ತಿಕವಾಗಿ ತಲಾ 25 ಸಾವಿರ ರೂ ಪರಿಹಾರ ಧನ ವಿತರಿಸಿ ಸರ್ಕಾರದ ವತಿಯಿಂದ ವಿಶೇಷ ನೆರವನ್ನು ಕೊಡಿಸಿಕೊಡುವುದಾಗಿ ಭರವಸೆ ನೀಡಿ ಮೃತರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಕಳೆದ ಮೂರು ದಿನಗಳ ಹಿಂದೆ ಮೋದೂರು ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ನಯನಜ ಕ್ಷತ್ರಿಯ ಸಮಾಜಕ್ಕೆ ಸೇರಿದ ರಮೇಶ್ ಅವರ ಪುತ್ರ ಪ್ರದೀಪ(20) ಮತ್ತು ಪರಿಶಿಷ್ಠ ಜಾತಿಗೆ ಸೇರಿದ ರಮೇಶ ಅವರ ಪುತ್ರ ರಾಜು(18) ಅವರು ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿದ್ದರು. ಕ್ಷೇತ್ರದ ಶಾಸಕರೂ ಆಗಿರುವ ಸಚಿವ ನಾರಾಯಣಗೌಡ ಅವರು ಬೆಂಗಳೂರಿನಲ್ಲಿದ್ದ ಕಾರಣ ಮೃತ ಯುವಕರ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಇಂದು ಮೋದೂರು ಗ್ರಾಮಕ್ಕೆ ತೆರಳಿದ ಸಚಿವ ನಾರಾಯಣಗೌಡ ಸುರಿಯುತ್ತಿದ್ದ ಮಳೆಯಲ್ಲಿಯೇ ಮೃತ ಯುವಕರ ಮನೆಗಳಿಗೆ ತೆರಳಿ ಮೃತರ ತಂದೆ-ತಾಯಿಗಳಿಗೆ ಹಾಗೂ ಕುಟುಂಬ ವರ್ಗದವರಿಗೆ ಸಾಂತ್ವನ ಹೇಳಿದರು.

ಸಚಿವರ ಮೋದೂರು ಭೇಟಿ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಜೆ.ವಿಜಯಕುಮಾರ್, ಮೂಡಾ ಅಧ್ಯಕ್ಷ ಕೆ.ಶ್ರೀನಿವಾಸ್, ಸಮಾಜಸೇವಕ ಬೂಕಹಳ್ಳಿಮಂಜು, ಗ್ರಾಮದ ಮುಖಂಡರಾದ ಶ್ರೀಧರಶಾನುಭೋಗ್, ನಾಗರಾಜು, ಹೊಸೂರು ಸ್ವಾಮಿಗೌಡ, ರಾಮಪ್ಪ, ಸಚಿವರ ಆಪ್ತಸಹಾಯಕರಾದ ದಯಾನಂದ, ಕಿಕ್ಕೇರಿಕುಮಾರ್ ಮತ್ತಿತರರು ಇದ್ದರು.

By admin