ಚಾಮರಾಜನಗರ : ಗುರುವಾರದಿಂದ ನಾಲ್ಕು ದಿನ ಚಾಮರಾಜನಗರ ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರುವ ಹಿನ್ನಲೆಯಲ್ಲಿ ಬುಧವಾರ ಬೆಳಗ್ಗೆಯಿಂದಲೇ ಜಿಲ್ಲೆಯ ಪ್ರಮುಖ ವ್ಯಾಪಾರ ಸ್ಥಳಗಳಲ್ಲಿ ಜನ ಸಂದಣಿ ಅಧಿಕವಾಗಿತ್ತು.
ವಿವಿಧ ಕಡೆಗಳಿಂದ ಸಾರ್ವಜನಿಕರು ಪ್ರಮುಖ ವ್ಯಾಪಾರ ವಹಿವಾಟು ಸ್ಥಳಗಳಿಗೆ ಆಗಮಿಸಿ ನಾಲ್ಕು ದಿನಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದರು. ಎಲ್ಲಿ ನೋಡಿದರೂ ಜನವೂ ಜನ, ದ್ವಿಚಕ್ರವಾಹನಗಳಲ್ಲಿ ಬಂದ ಸಾರ್ವಜನಿಕರು ತಮ್ಮ ತಮ್ಮ ಮನೆಗೆ ಬೇಕಾಗುವ ಸಾಮಗ್ರಿಗಳನ್ನು ಖರೀದಿಸುವಲ್ಲಿ ಮುಂದಾಗಿದ್ದರು. ಮಾಸ್ಕ್ ಧರಿಸಿಕೊಂಡು ಸಾಮಾಜಿಕ ಅಂತರ ಇಲ್ಲದೆ ನಾ ಮುಂದು ತಾ ಮುಂದು ಎನ್ನುವಂತೆ ನಿತ್ಯ ಬಳಕೆ ವಸ್ತುಗಳನ್ನು ಖರೀದಿಯಲ್ಲಿ ತೊಡಗಿದ್ದು ಕಂಡು ಬಂದಿತು.
ಚಾಮರಾಜನಗರದ ದೊಡ್ಡ ಅಂಗಡಿ ಬೀಡಿ, ಹಳೇ ತರಕಾರಿ ಮಾರ್ಕೆಟ್ ವೃತ್ತ, ನಗರಸಭೆಯ ಬಳಿ ಜನ ಜಾತ್ರೆಯಂತೆ ಸೇರಿದ್ದರು.
ಚಾಮರಾಜನಗರ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಕೋರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು, ಸಾವಿನ ಸಂಖ್ಯೆಯೂ ಸಹ ಗಣನೀಯವಾಗಿ ಹೆಚ್ಚಾಗುತ್ತಿದೆ. ಇದನ್ನೆಲ್ಲಾ ತಿಳಿದಿದ್ದರೂ ಸಾರ್ವಜನಿಕರು ಮಾತ್ರ ದಿನ ಬಳಕೆ ವಸ್ತುಗಳ ಖರೀದಿಗೆ ಜಾತ್ರೆಯಲ್ಲಿ ಸೇರುವಂತೆ ಸೇರಿದ್ದು ಮಾತ್ರ ವಿಷಾದದ ಸಂಗತಿ.
ಇನ್ನೊಂದೆಡೆ ಲಾಕ್ ಡೌನ್ ಹಿನ್ನಲೆಯಲ್ಲಿ ಮದ್ಯಪ್ರಿಯರು ಮದ್ಯದಂಗಡಿ ಮಂದೆ ಜಮಾಯಿಸಿದ್ದು ಕಂಡು ಬಂತು. ಮುಂದಿನ ನಾಲ್ಕು ದಿನಗಳ ಕಾಲ ಮದ್ಯದಂಗಡಿಗೆ ಬೀಗ ಮುದ್ರೆ ಬೀಳಲಿರುವುದರಿಂದ ಜಿಲ್ಲೆಯ ಮದ್ಯಪ್ರಿಯರು ಮದ್ಯದಂಗಡಿಗೆ ಧಾವಿಸಿ ನಾಲ್ಕು ದಿನಗಳಿಗೆ ತಮಗೆ ಬೇಕಾಗುವ ಮದ್ಯವನ್ನು ಖರೀದಿಸಿದರು.
ಇದೆಲ್ಲದರ ನಡುವೆ ಜಿಲ್ಲೆಯಲ್ಲಿ ಲಾಕ್ ಡೌನ್ ಕಠಿಣ ಗೊಳಿಸುವ ಹಿನ್ನಲೆಯಲ್ಲಿ ಜಿಲ್ಲಾಡಳಿತದೊಂದಿಗೆ ಪೊಲೀಸ್ ಇಲಾಖೆ ಕೈ ಜೋಡಿಸಿದ್ದು, ಜಿಲ್ಲಾಸ್ಪತ್ರೆ ಹಾಗೂ ಕೋವಿಡ್ ಆಸ್ಪತ್ರೆಯ ಕಡೆಯ ರಸ್ತೆಯನ್ನು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೊಂದು ರಸ್ತೆಯನ್ನು ಬಂದ್ ಮಾಡಿದ್ದರಿಂದ ವಾಹನಗಳು ಅತೀ ಹೆಚ್ಚಾಗಿ ಜಿಲ್ಲಾಸ್ಪತ್ರೆ ಮತ್ತು ಕೋವಿಡ್ ಆಸ್ಪತ್ರೆಯ ಮುಂಭಾಗ ಸಂಚಾರ ಮಾಡುತ್ತಿದ್ದವು.
ಚಾಮರಾಜನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿನ ಏಕ ಮುಖ ಸಂಚಾರ ಮಾಡಿದ್ದರಿಂದ ವಾಹನ ಸವಾರರು ತಮ್ಮ ವಾಹನಗಳನ್ನು ಜಿಲ್ಲಾಸ್ಪತ್ರೆ ಮತ್ತು ಕೋವಿಡ್ ಆಸ್ಪತ್ರೆಯ ಮುಂಭಾಗದಲ್ಲೇ ಸಂಚಾರ ಮಾಡುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಇಷ್ಟೆಲ್ಲಾ ಆದರೂ ಸಂಚಾರ ಪೊಲೀಸರು ಮಾತ್ರ ಇತ್ತ ಸುಳಿಯದೆ ಇದ್ದದ್ದು ಕಂಡು ಬಂದಿತು.