ಚಾಮರಾಜನಗರ: ಕೋವಿಡ್ ನಿಯಂತ್ರಣಕ್ಕಾಗಿ ೧೨ ರಿಂದ ೧೪ ವರ್ಷದ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಹಾಗೂ ೬೦ ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ೩ನೇ ಡೋಸ್ ಲಸಿಕೆ ಅಭಿಯಾನ ಕಾರ್ಯಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಯೂ ಆಗಿರುವ ಕೆ.ಎಂ. ಗಾಯತ್ರಿ ಅವರು ನಗರದಲ್ಲಿಂದು ಚಾಲನೆ ನೀಡಿದರು.
ನಗರದ ಪೇಟೆ ಪ್ರೈಮರಿ ಶಾಲೆಯ ಅವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ೧೨ ರಿಂದ ೧೪ ವರ್ಷದ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿಯೂ ಆಗಿರುವ ಕೆ.ಎಂ. ಗಾಯತ್ರಿ ಅವರು ಕೋವಿಡ್ ವೈರಾಣುವಿನ ಪರಿಣಾಮಕಾರಿ ತಡೆಗಾಗಿ ೧೨ ರಿಂದ ೧೪ ವರ್ಷದ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಹಾಗೂ ೬೦ ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ೩ನೇ ಡೋಸ್ ಲಸಿಕೆ ಅಭಿಯಾನ ಕಾರ್ಯವನ್ನು ದೇಶಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಈ ಪ್ರಯುಕ್ತ ಜಿಲ್ಲೆಯಲ್ಲಿಯೂ ಸಹ ಅಭಿಯಾನಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು.

ಕೊರೊನಾ ಸೋಂಕಿನಿಂದ ಜಿಲ್ಲೆ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಕೋವಿಡ್‌ನಂತಹ ಮಹಾಮಾರಿಯಿಂದ ರಕ್ಷಣೆ ಪಡೆಯಲು ೧೨ ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡುವ ಸಲುವಾಗಿ ಜಿಲ್ಲೆಯಾದ್ಯಂತ ೨೬೬೬೦ ಮಕ್ಕಳನ್ನು ಲಸಿಕೆಗಾಗಿ ಗುರುತಿಸಲಾಗಿದ್ದು, ಲಸಿಕೆಯನ್ನು ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. ನೀಡುವ ಮಕ್ಕಳು ಯಾವುದೇ ಅತಂಕಕ್ಕೆ ಒಳಗಾಗದೇ ಧೈರ್ಯವಾಗಿ ಲಸಿಕೆ ಪಡೆಯಬೇಕು. ಈ ಬಗ್ಗೆ ಶಿಕ್ಷಕರು, ಪೋಷಕರು ಸಹ ಮಕ್ಕಳಲ್ಲಿ ಅರಿವು ಮೂಡಿಸಿ ಅಭಿಯಾನ ಯಶಸ್ವಿಗೆ ಸಹಕರಿಸಬೇಕು ಎಂದು ಕೆ.ಎಂ. ಗಾಯತ್ರಿ ಅವರು ತಿಳಿಸಿದರು.

ನಗರಸಭೆ ಅಧ್ಯಕ್ಷರಾದ ಸಿ.ಎಂ. ಆಶಾ ಅವರು ಮಾತನಾಡಿ ಕೋವಿಡ್‌ನಿಂದ ರಕ್ಷಣೆ ಪಡೆಯಲು ೧೨ ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ಅತ್ಯಾವಶ್ಯಕವಾಗಿದೆ. ಮಕ್ಕಳು ನಿರ್ಭಯರಾಗಿ ಲಸಿಕೆ ಪಡೆಯಬೇಕು. ಹಾಗೆಯೇ ೬೦ ವರ್ಷ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು ಸಹ ಮುನ್ನೆಚ್ಚರಿಕೆಯಾಗಿ ೩ನೇ ಡೋಸ್ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೋವಿಡ್ ಲಸಿಕೆಯಿಂದ ಯಾರು ಸಹ ವಂಚಿತರಾಗಬಾರದು ಎಂದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಅವರು ಸರ್ಕಾರದ ನಿರ್ದೇಶನದನ್ವಯ ೧೨ ರಿಂದ ೧೪ ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡಲಾಗುತ್ತಿದ್ದು, ಚಾಮರಾಜನಗರ ತಾಲೂಕಿನ ೮೯೬೧, ಗುಂಡ್ಲುಪೇಟೆ ೫೭೯೭, ಯಳಂದೂರಿನ ೨೦೩೮, ಕೊಳ್ಳೇಗಾಲ ೪೫೨೬ ಹಾಗೂ ಹನೂರು ತಾಲೂಕಿನ ೫೩೩೮ ಮಕ್ಕಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು ೨೬೬೬೦ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ನಗರಸಭೆ ಪೌರಾಯುಕ್ತರಾದ ಕರಿಬಸವಯ್ಯ, ಜಿಲ್ಲಾ ಸರ್ಜನ್ ಡಾ. ಶ್ರೀನಿವಾಸ್, ಆರ್.ಸಿ.ಎಚ್. ಅಧಿಕಾರಿ ಮಹದೇವು, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನಗರಸಭೆಯ ಪರಿಸರ ಅಭಿಯಂತತರಾದ ಗಿರಿಜ, ಇತರರು ಕಾರ್ಯಕ್ರಮದಲ್ಲಿ ಇದ್ದರು.