ಬೆಂಗಳೂರು, ನವಂಬರ್- ಆರ್.ಆರ್ ನಗರ ಕ್ಷೇತ್ರಕ್ಕಿಂತ ಶಿರಾ ಕ್ಷೇತ್ರದಲ್ಲಿ ಹೆಚ್ಚು ಮತದಾನವಾಗಿದೆ. ಶಿರಾ ಕ್ಷೇತ್ರದಲ್ಲಿ ಉಪ ಚುನಾವಣೆಯ ಮತದಾನ ಬಿರುಸಿನಿಂದ ನಡೆಯುತ್ತಿದೆ.
ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಪರಿಗಣಿಸಲಾಗಿರುವ ತುಮಕೂರು ಜಿಲ್ಲೆಯ ಶಿರಾ ಹಾಗೂ ಬೆಂಗಳೂರಿನ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಸಕಲ ಸಿದ್ಧತೆ, ಪೊಲೀಸ್ ಬಂದೋಬಸ್ತ್ ನೊಂದಿಗೆ ಇಂದು ಬೆಳಿಗ್ಗೆÉ ಬಿರುಸಿನ ಮತದಾನವಾಯಿತಲ್ಲದೇ, ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪ ಚುನಾವಣೆ ಮತದಾನ ನಡೆಯುತ್ತಿದ್ದು, ಸಚಿವ ಆರ್.ಅಶೋಕ್, ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಸೇರಿ ಹಲವರು ಮತಗಟ್ಟೆಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.
ಇನ್ನು ಶಿರಾ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ಕುಟುಂಬಸ್ಥರೊಂದಿಗೆ ವೋಟಿಂಗ್ ಮಾಡಿದರು. ಹಾಗೆಯೇ ಶಿರಾ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಸಹ ಗಾಂಧಿ ನಗರದ ರಂಗನಾಥ ಕಾಲೇಜಿನ 171ನೇ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಹಾಗೆಯೇ ಶಿರಾ ತಾಲ್ಲೂಕಿನ ಚಿರತೆಹಳ್ಳಿ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಎಂ.ರಾಜೇಶ್‍ಗೌಡ ತಮ್ಮ ಮತ ಚಲಾಯಿಸಿದರು.
ಆರ್.ಆರ್ ನಗರ ಮತ್ತು ಶಿರಾ ಕ್ಷೇತ್ರದ ಉಪಚುನಾವಣಾ ಆಖಾಡ ರಂಗೇರಿದ್ದು ಮತದಾನ ನಡೆಯುತ್ತಿದೆ. ಈ ನಡುವೆ ಹಣ ಹಂಚಿಕೆ ಆರೋಪದ ಮೇಲೆ ಆರ್.ಆರ್ ನಗರ ಕ್ಷೇತ್ರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
ಆರ್.ಆರ್ ನಗರ ಕ್ಷೇತ್ರದ ಸುಮನಹಳ್ಳಿಯ ಮಾತಾಪುರದಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಬಳಿ ಹಣ ಹಂಚಿಕೆ ಮಾಡುತ್ತಿದ್ದಾರೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿ ವಾಗ್ವಾದಕ್ಕಿಳಿದರು. ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಬಿಜೆಪಿ ಕಾರ್ಯಕರ್ತರಿಗೆ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪ್ರಶ್ನಿಸಿದ್ದಾರೆ. ಈ ವೇಳೆ ಎರಡು ಪಕ್ಷಗಳ ನಡುವೆ ವಾಗ್ವಾದ ನಡೆದಿದ್ದು ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ, ಬಿಜೆಪಿ ಕಾರ್ಯಕರ್ತರು ಮತಗಟ್ಟೆಬಳಿ ಹಣ ಹಂಚಿಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಇತ್ತು. ಹೀಗಾಗಿ ಆ ವಿಚಾರವನ್ನ ಪೊಲೀಸರ ಗಮನಕ್ಕೆ ತಂದು ಅಲ್ಲಿ ಟೇಬಲ್ ತೆರವುಗೊಳಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.
ಎರಡು ಕ್ಷೇತ್ರಗಳ ಉಪಚುನಾವಣೆ
ರಾಜ್ಯದ ಪ್ರಮುಖ ರಾಜಕೀಯ ಪಕ್ಷಗಳಿಗೆ ಮಾಡು ಇಲ್ಲವೇ ಮಡಿ ಎಂಬಂತ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಎರಡು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ನಿರ್ಣಾಯಕ ಅಲ್ಲದಿದ್ದರೂ ಅತ್ಯಂತ ಪರಿಣಾಮಕಾರಿ ಪ್ರಭಾವ ಬೀರಲಿದೆ.
ಆಡಳಿತರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರಿಗೆ ಉಪಚುನಾವಣೆ ರಾಜಕೀಯ ಪ್ರತಿಷ್ಠೆ ಪ್ರಶ್ನೆಯಾಗಿದ್ದು ಶತಾಯಗತಾಯ ಈ ಎರಡೂ ಕ್ಷೇತ್ರಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳಲು ಈಗಾಗಲೇ ಸಾಕಷ್ಟು ಬೆವರು ಸುರಿಸಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿದಂತೆ ಅವರ ಸಚಿವ ಸಂಪುಟದ ಹಲವಾರು ಸಹೋದ್ಯೋಗಿಗಳು ಮತ್ತು ಮುಖಂಡರು ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತದಾರರನ್ನು ಒಲಿಸಿಕೊಳ್ಳಲು ಹರಸಾಹಸ ನಡೆಸಿದ್ದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಈ ಎರಡೂ ಕ್ಷೇತ್ರಗಳಲ್ಲಿ ಭೇಟಿ ನೀಡಿ ಶತಾಯಗತಾಯ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದಾರೆ.ಈ ನಡುವೆ ಶಿರಾ ಹಾಗೂ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ನಿನ್ನೆ ತೆರೆಬಿದ್ದಿದೆ. ಶಿರಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಕಣದಲ್ಲಿದ್ದು ಅನುಕಂಪದ ಅಲೆಯಲ್ಲಿ ಗೆದ್ದು ಬರಲು ಎಲ್ಲ ರೀತಿಯ ಕಸರತ್ತು ನಡೆಸಿದರು. ಇತ್ತ ಬಿಜೆಪಿಯಿಂದ ರಾಜೇಶ್‌ಗೌಡ ಅವರನ್ನು ಕಣಕ್ಕಿಳಿಸಿದ್ದು ಶಿರಾ ಕ್ಷೇತ್ರವನ್ನು ಕಾಂಗ್ರೆಸ್ ಹಾಗೂ ಜೆಡಿಎಸ್‌ನಿಂದ ತನ್ನತ್ತ ಸೆಳೆದುಕೊಳ್ಳಲು ಪಕ್ಷದ ನಾಯಕರು ಅವಿರತ ಶ್ರಮ ಹಾಕಿದ್ದಾರೆ.
ಕಾಂಗ್ರೆಸ್ನ ಟಿಬಿ ಜಯಚಂದ್ರ ಈ ಕ್ಷೇತ್ರವನ್ನು ಈ ಹಿಂದೆ ಪ್ರತಿನಿಧಿಸಿದ್ದು ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇನ್ನೊಂದೆಡೆ ಆರ್ ಆರ್ ನಗರ ವಿಧಾನಸಭಾ ಕ್ಷೇತ್ರ ಈ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿ ಇತ್ತು. ಕಾಂಗ್ರೆಸ್ನಿಂದ ಗೆದ್ದಿದ್ದ ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಪಕ್ಷಾಂತರ ಮಾಡಿ ಮರು ಆಯ್ಕೆ ಬಯಸಿದ್ದಾರೆ.
ಕಾಂಗ್ರೆಸ್ ಪಕ್ಷದ ತೆಕ್ಕೆಯಲ್ಲಿದ್ದ ಈ ಕ್ಷೇತ್ರವನ್ನು ಪುನಃ ಪಡೆದುಕೊಳ್ಳಲು ಕುಸುಮ ಅವರನ್ನು ಕಣಕ್ಕಿಳಿಸಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ನಾಯಕರು ಕ್ಷೇತ್ರ ಪ್ರದಕ್ಷಿಣೆ ಮಾಡಿ ಮತದಾರರ ಒಲವು ಗಳಿಸಲು ಪ್ರಯತ್ನಿಸಿದ್ದಾರೆ. ಶಿರಾ ಕ್ಷೇತ್ರದಲ್ಲಿ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರು ತಮ್ಮ ಇಳಿವಯಸ್ಸಿನಲ್ಲೂ ಸಾಕಷ್ಟು ಚುನಾವಣಾ ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡು ಕ್ಷೇತ್ರವನ್ನು ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಹಲವು ಸುತ್ತು ಪ್ರವಾಸಮಾಡಿ ಮತಯಾಚನೆ ಮಾಡಿದ್ದಾರೆ.
ಶಿರಾ ಕ್ಷೇತ್ರದ ಸುತ್ತಮುತ್ತ ಆಂಧ್ರಪ್ರದೇಶ ಹೊಂದಿಕೊಂಡಿರುವುದರಿಂದ ಆಂಧ್ರದ ಗಡಿಭಾಗದಲ್ಲಿ ಪೊಲೀಸರು ಚೆಕ್ಪೋಸ್ಟ್ ಗಳನ್ನು ನಿರ್ಮಿಸಿಕೊಂಡು ಅಕ್ರಮ ಚಟುವಟಿಕೆಗಳಿಗೆ ಆಸ್ಪದ ಇಲ್ಲದಂತೆ ಕಟ್ಟೆಚ್ಚರ ವಹಿಸಿದ್ದಾರೆ.
ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು ಸಂಜೆ 6 ಗಂಟೆಯ ತನಕ ಮತದಾನ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಈ ಮಧ್ಯೆ ಈವರೆಗೆ ಎರಡು ಕ್ಷೇತ್ರಗಳಲ್ಲಿ ಆಗಿರುವ ಮತದಾನ ಪ್ರಮಾಣ ತಿಳಿದು ಬಂದಿದ್ದು, ಶಿರಾ ಕ್ಷೇತ್ರದಲ್ಲಿ ಬೆಳಗ್ಗೆ 11 ಗಂಟೆವರೆಗೆ ಶೇ 23.63ರಷ್ಟು ಮತದಾನ ನಡೆದಿದೆ. ಹಾಗೆಯೇ ಆರ್. ಆರ್. ನಗರ ಕ್ಷೇತ್ರದಲ್ಲಿ ಕೇವಲ 14.44ರಷ್ಟು ಮತದಾನವಾಗಿದೆ.
ಬೆಂಗಳೂರಿನ ಆರ್.ಆರ್ ನಗರ ಮತ್ತು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರಕ್ಕೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಇಂದು ಮೂರು ಪಕ್ಷಗಳ ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಲಿದೆ.

By admin