ಮೈಸೂರು: ಮೈಸೂರಿನಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮತ್ತು ಶಾಸಕ ಸಾ.ರಾ.ಮಹೇಶ್ ಅವರ ನಡುವಿನ ವಾಗ್ಯುಗ್ಧ ಇನ್ನೂ ಮುಗಿದಂತೆ ಕಾಣುತ್ತಿಲ್ಲ.

ಇದೀಗ ಮತ್ತೆ ಅವರ ವಿರುದ್ಧ ಗುಡುಗಿರುವ ಶಾಸಕ ಸಾ,ರಾ.ಮಹೇಶ್ ಅವರು, ತಮ್ಮ ಕರ್ತವ್ಯಲೋಪವನ್ನು ಮುಚ್ಚಿಟ್ಟುಕೊಳ್ಳುವ ಉದ್ದೇಶದಿಂದ ನನ್ನ ಮೇಲೆ ಒತ್ತುವರಿ ಆರೋಪ ಮಾಡಿದ್ದು, ರೋಹಿಣಿ ಸಿಂಧೂರಿ ಅವರಿಗೆ ಮನಸಾಕ್ಷಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.  28 ದಿನಕ್ಕೆ ದಲಿತ ಅಧಿಕಾರಿಯೊಬ್ಬರನ್ನು ತಮ್ಮ ಪ್ರಭಾವ ಬಳಸಿ ವರ್ಗಾಯಿಸಿಕೊಂಡಿದ್ದ ಬಗ್ಗೆ ವಿರೋಧಿಸಿದ್ದೆ. ಅವರ ಕರ್ತವ್ಯಲೋಪ, ಸಾರ್ವಜನಿಕ ಹಣ ದುರುಪಯೋಗ ಹಾಗೂ ಕಾನೂನು ದುರುಪಯೋಗದ ಬಗ್ಗೆ ಹೇಳಿದ್ದೆ. ಕೋವಿಡ್ ಸಂದರ್ಭದಲ್ಲಿ ಸಾವಿನ ಲೆಕ್ಕವನ್ನೂ ಮುಚ್ಚಿಡುತ್ತಿದ್ದಾರೆಂದು ಹೇಳಿದ್ದರಿಂದ ನನ್ನನ್ನೂ ಗುರಿಯಾಗಿಸಿಕೊಂಡು ಅಪಾದನೆ ಮಾಡಿದ್ದಾರೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು ಹೇಳಿದರು.

2018ರ ಸರ್ಕಾರಿ ನಿಯಮದ ಪ್ರಕಾರ ಕೆರೆ ಪ್ರದೇಶದಿಂದ 30ಮೀಟರ್ ವ್ಯಾಪ್ತಿಯಲ್ಲಿ ಮಾತ್ರ ನಿವೇಶನ ನಿರ್ಮಿಸಬಾರದು ಎಂಬ ನಿಯಮವಿದೆ. ಸುಪ್ರಿಂ ಕೋರ್ಟ್ ಆದೇಶದಲ್ಲಿಯೂ ಇದೇ ಇದೆ. ಜಿಲ್ಲಾಧಿಕಾರಿ ರೋಹಿಣಿಯವರು ನನ್ನ ಮೇಲೆ ಅಪಾದನೆ ಮಾಡುವ ದೃಷ್ಟಿಯಿಂದ ತಾವು ವರ್ಗಾವಣೆಗೊಳ್ಳುವ ಹಿಂದಿನ ಎರಡು ದಿನ ನೇರವಾಗಿ ಲಿಂಗಾಬುದಿ ಕೆರೆ ಸಮೀಪದಲ್ಲಿ 70 ಮೀಟರ್ ದೂರದಲ್ಲಿರುವ ನಮ್ಮ ಜಾಗದ ಪ್ಲಾನ್ ಅನ್ನು ಕಾನೂನು ಬಾಹಿರವಾಗಿ ರದ್ದು ಮಾಡಿದ್ದಾರೆ. ಸದರಿ ಆದೇಶ ಹೊರಡಿಸಿ ಮಾಧ್ಯಮಗಳಿಗೆ ಬಿಡುಗಡೆ ಮಾಡುವ ಮೂಲಕ ತಮ್ಮ ಕರ್ತವ್ಯ ಲೋಪದ ಆರೋಪ ಮುಚ್ಚಿಟ್ಟುಕೊಳ್ಳಲು ಮುಂದಾಗಿದ್ದಾರೆ. ಆದರೆ, ಈ ರೀತಿ ಆದೇಶಿಸುವುದಕ್ಕೂ ಮುನ್ನ ಠಪಾಲು ಆದೇಶ ಹಾಗೂ ಅಪಾರ ಜಿಲ್ಲಾಧಿಕಾರಿಗಳ ಮೂಲಕ ಆದೇಶ ಬರಬೇಕಿದ್ದು, ಅದಾವುದು ಇಲ್ಲದೆ ನೇರವಾಗಿ ಆದೇಶ ಹೊರಡಿಸಿದ್ದು, ಈ ಬಗ್ಗೆ ಮುಂದೆಯೂ ತನಿಖೆ ನಡೆಸುವಂತೆ ಕೋರಲಾಗುವುದು ಎಂದು ತಿಳಿಸಿದರು.

ಇನ್ನೂ ಸಾರಾ ಕನ್ವೆಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಿಸಿದ್ದಾರೆಂದು ಆರೋಪಿಸಿದ್ದಾರೆ. ಆದರೆ, ಈ ಬಗ್ಗೆ ವರದಿ ನೀಡಿರುವ ಪ್ರಾದೇಶಿಕ ಆಯುಕ್ತರು ನಮ್ಮ ಜಾಗ 74, 72, 73 ಮೀಟರ್ ದೂರ ಇರುವುದಾಗಿ ವರದಿ ನೀಡಿದ್ದಾರೆ. ಆ ಮೂಲಕ ನಮ್ಮ ಕಲ್ಯಾಣಮಂಟಪ ನಿರ್ಮಾಣ ಅಕ್ರಮವಲ್ಲ ಎಂಬುದು ಸಾರ್ವಜನಿಕರಿಗೆ ತಿಳಿಯುವಂತಾಗಿದೆ. ಅಲ್ಲದೆ, ನನ್ನ ಕನ್ವೆಷನ್‌ಹಾಲ್ ಇರುವ ಸರ್ವೆ ನಂಬರ್ 113 ಆದರೆ, ರೋಹಿಣಿ ಸಿಂಧೂರಿಯವರು ಸರ್ವೇ ನಂಬರ್ 98 ಅನ್ನು ನನ್ನ ಪತ್ನಿ ಹೆಸರನ್ನು ಹೇಳುತ್ತಿದ್ದಾರೆ. ಅವರು ಮೊದಲು ನನಗೆ ಸಂಬಂಧಿಸಿ ಜಾಗ ಇರುವುದು ಯಾವ ಸರ್ವೇಯಲ್ಲಿ ಎಂಬುದನ್ನು ತಿಳಿದುಕೊಳ್ಳಲಿ ಎಂದು ಕಿಡಿಕಾರಿದರು.

ತಾವೊಬ್ಬ ಸರ್ಕಾರಿ ನೌಕರಿ ಎಂಬುದನ್ನು ಮರೆತು ಸಂವೇದನಾಶೀಲತೆ ಇಲ್ಲದ ವ್ಯಕ್ತಿ ತಮ್ಮನ್ನು ಕರ್ತವ್ಯ ಲೋಪದಿಂದ ವರ್ಗಾಯಿಸಿಲ್ಲ ಎಂದು ರಾಜ್ಯದ ಜನರ ಎದುರು ಬಿಂಬಿಸಿಕೊಳ್ಳಲು ಸರ್ಕಾರಿ ಆಡಳಿತವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ರಾಜ್ಯದ ಜನ ಇದನ್ನು ಗಮನಿಸಬೇಕು. ನಾನು ಅಂದೇ ಹೇಳಿದ್ದೇ ನನಗೆ ಸಂಬಂಧಿಸಿದ ಜಾಗ ರಾಜ ಕಾಲುವೆ ಮೇಲೆ ನಿರ್ಮಾಣವಾಗಿದ್ದರೆ ನಾನು ರಾಜ್ಯಪಾಲರಿಗೆ ಅದನ್ನು ಬರೆದು ರಾಜಕೀಯ ನಿವೃತ್ತಿ ಪಡೆಯುವುದಾಗಿ ಘೋಷಿಸಿದ್ದೆನು. ಅಂತೆಯೇ ನೀವೂ ಐಎಎಸ್ ಹುದ್ದೆ ತ್ಯಜಿಸುವಿರಾ ಎಂದು ಪ್ರಶ್ನಿಸಿದ್ದೆ. ಆದರೆ, ಈಗ ನಾನು ರಾಜೀನಾಮೆ ಕೇಳುವುದಿಲ್ಲ. ನಿಮಗೆ ಆತ್ಮಸಾಕ್ಷಿ, ಮನಸಾಕ್ಷಿ ಹಾಗೂ ನಿಮ್ಮಲ್ಲೂ ಹೆಣ್ಣಿನ ತಾಯಿ ಹೃದಯ ಇದ್ದರೆ ಮನಸಾಕ್ಷಿ ಕೇಳಿಕೊಳ್ಳಿ. ಇಂತಹ ಅಧಿಕಾರಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ. ಪಟ್ಟಭದ್ರ ಹಿತಾಸಕ್ತಿಗಳ ಬೆಂಬಲ, ಸೋಷಿಯಲ್ ಮೀಡಿಯಾವನ್ನು ಬಳಸಿಕೊಂಡು ಸತ್ಯವನ್ನು ಸುಳ್ಳು ಮಾಡಲು ಹೊರಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನೇಕರು ಕಮ್ ಬ್ಯಾಕ್ ಎನ್ನುತ್ತಿದ್ದಾರೆ. ಆ ತಾಯಿ ಬಂದರೆ ನನಗೇನೂ ಇಲ್ಲ. ಆದರೆ, ರಾಜ್ಯದ ಜನತೆ ನನ್ನ ಮೇಲೆ ಮಾಡಿರುವ ಆರೋಪದಲ್ಲಿನ ಈ ಸತ್ಯವನ್ನು ನೋಡಬೇಕಿದೆ. ಇದು ನೋಡಿದ ಬಳಿಕ ರಾಜ್ಯದ ಜನರೇ ತೀರ್ಮಾನ ಮಾಡಲಿ ಎಂದು ಹೇಳಿದ್ದಾರೆ.

ಸದ್ಯ ಸಾರಾ ಕನ್ವೆಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಿಸಿದ್ದಾರೆಂಬ ಆರೋಪಕ್ಕೆ ಪ್ರಾದೇಶಿಕ ಆಯುಕ್ತರು ನಾಲ್ವರು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಿ ವರದಿ ನೀಡಲು ನಿರ್ದೇಶಿಸಿದ್ದರು. ಸಮಿತಿ ಸಮಗ್ರವಾಗಿ ಪರಿಶೀಲಿಸಿ ಅಧ್ಯಯನ ಮಾಡಿದ ಬಳಿಕ ಸಾರಾ ಕನ್ವೆಂಷನ್ ಹಾಲ್‌ ಅನ್ನು ಯಾವುದೇ ರೀತಿಯ ರಾಜಕಾಲುವೆ ಮೇಲೆ ನಿರ್ಮಿಸಲಾಗಿಲ್ಲ ಎಂದು ವರದಿ ನೀಡುವ ಮೂಲಕ ಕ್ಲೀನ್ ಚಿಟ್ ನೀಡಿದೆ. ಹೀಗಾಗಿ ಈಗ ಶಾಸಕ ಸಾ.ರಾ.ಮಹೇಶ್ ಅವರ ಹೇಳಿಕೆಗೆ ರೋಹಿಣಿ ಸಿಂಧೂರಿ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ.

 

 

By admin